ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ: ಗಣೇಶನ ಶಿರಚ್ಛೇದ

ಅಕ್ಷರ ಗಾತ್ರ

ನಾರದನ ಮಾತಿನಂತೆ ಶಂಕರ ಬಾಲಕನನ್ನು ಸಂಹರಿಸಲು, ಬ್ರಹ್ಮ ಮತ್ತು ವಿಷ್ಣುವನ್ನು ಕರೆಸಿಕೊಂಡು ಮಂತ್ರಾಲೋಚನೆ ಮಾಡಿದ. ನಂತರ ಒಂದು ದೊಡ್ಡ ದೇವಸೈನ್ಯದೊಂದಿಗೆ ಗಣಪತಿಯಿರುವೆಡೆಗೆ ಹೋದ. ಮಂಗಳಕರನಾದ ವಿಷ್ಣುವು ದೊಡ್ಡದಾದ ಆಯುಧದೊಂದಿಗೆ ಮಹಾಪರಾಕ್ರಮದಿಂದ ಯುದ್ಧಮಾಡಿದ. ವೀರನಾದ ಗಣಪತಿಗೆ, ಪಾರ್ವತಿ ಸೃಷ್ಟಿಸಿದ ಶಕ್ತಿಯರು ಮತ್ತಷ್ಟು ಬಲವನ್ನು ಕೊಟ್ಟರು. ಗಣಪತಿಯ ಏಟನ್ನು ತಾಳಲಾರದೆ ನಿರ್ಬಲರಾದ ದೇವತೆಗಳೆಲ್ಲರೂ ಯುದ್ಧರಂಗದಿಂದ ಹಿಮ್ಮೆಟ್ಟುತ್ತಿದ್ದರು. ಶಿವನೂ ಆ ಬಾಲಕನೊಡನೆ ಬಹಳ ಹೊತ್ತು ಯುದ್ಧಮಾಡಿ ಸುಸ್ತಾದನು. ರಣಭಯಂಕರನಾಗಿ ಕಾದಾಡುತ್ತಿದ್ದ ಗಣಪತಿಯ ಪರಾಕ್ರಮ ನೋಡಿ ಪರಮಾಶ್ಚರ್ಯಪಟ್ಟ. ಎದುರಿಗೆ ನಿಂತು ಯುದ್ಧಮಾಡಿ ಇವನನ್ನು ಸೋಲಿಸುವುದು ಅಸಾಧ್ಯ. ಮೋಸದ ಯುದ್ಧ ಮಾಡದ ಹೊರತು, ಈ ಹುಡುಗನನ್ನು ಜಯಿಸಲಾಗುವುದಿಲ್ಲ ಎಂದು ಶಿವನು ಯೋಚಿಸಿ ಸೈನ್ಯಮಧ್ಯದಲ್ಲಿ ನಿಂತ.

ಶಿವ ಮತ್ತು ವಿಷ್ಣು ಬೆಂಬಲದಿಂದ ದೇವತೆಗಳೆಲ್ಲರೂ ಅತ್ಯುತ್ಸಾಹದಿಂದ ಕಾದಾಡುತ್ತಿದ್ದರು. ಶಕ್ತಿಸ್ವರೂಪಳಾದ ಪಾರ್ವತಿಯ ಪುತ್ರನೂ ವೀರತನದಿಂದ ತನ್ನ ಕೋಲಿನಿಂದಲೇ ವಿಷ್ಣುವಿಗೆ ಮೊದಲು ಪ್ರಹಾರ ಮಾಡಿದ. ಆಗ ವಿಷ್ಣು ಶಿವನಿಗೆ ಹೇಳಿದ ‘ಸ್ವಾಮಿಯೇ, ಮೋಸಮಾಡದೇ ಅವನನ್ನು ಕೊಲ್ಲಲು ಸಾಧ್ಯವಿಲ್ಲ. ನಾನು ಆ ಬಾಲಕನನ್ನು ಮೋಹಗೊಳಿಸಿ ಜಯಿಸುವೆನು’ ಎಂದು ಶಿವನ ಅಪ್ಪಣೆಯನ್ನು ಪಡೆದ. ವಿಷ್ಣು ಆ ರೀತಿ ಶಿವನಿಂದ ಅನುಮತಿ ಪಡೆದುದನ್ನು ನೋಡಿದ ಇಬ್ಬರು ಶಕ್ತಿದೇವತೆಯರೂ ತಮ್ಮ ಶಕ್ತಿಯನ್ನು ಗಣಪತಿಗೆ ಕೊಟ್ಟು ಮರೆಯಾಗಿಹೋದರು. ಗಣಪತಿಯು ಪರಿಘಾಯುಧವನ್ನು ತೆಗೆದುಕೊಂಡು ವಿಷ್ಣುವಿನ ಕಡೆಗೆ ಎಸೆದ. ವಿಷ್ಣುವು ಭಕ್ತವತ್ಸಲನಾದ ಶಿವನನ್ನು ಧ್ಯಾನಿಸುತ್ತಾ ತನ್ನ ಕಡೆಗೆ ಬರುತ್ತಿದ್ದ ಪರಿಘಾಯುಧದ ಏಟಿನಿಂದ ತಪ್ಪಿಸಿಕೊಂಡ. ಆಗ ಮಧ್ಯ ಪ್ರವೇಶಿಸಿದ ಶಂಕರ ನೇರವಾಗಿ ಗಣಪತಿ ವಿರುದ್ಧ ತನ್ನ ತ್ರಿಶೂಲದಿಂದ ಯುದ್ಧಮಾಡಿದ. ಶಿವ ತ್ರಿಶೂಲವನ್ನು ಹಿಡಿದು ತನ್ನ ಕಡೆಗೆ ಬರುತ್ತಿರುವುದನ್ನು ನೋಡಿ ಗಣಪತಿಯು ತನ್ನ ತಾಯಿಯಾದ ಭವಾನಿಯ ಚರಣಕಮಲವನ್ನು ಧ್ಯಾನಿಸುತ್ತಾ ಶಕ್ತ್ಯಾಯುಧದಿಂದ ಶಂಕರನಿಗೆ ಬಲವಾಗಿ ಹೊಡೆದ. ಶಕ್ತ್ಯಾಯುಧದ ಏಟಿನಿಂದ ಶಿವನ ತ್ರಿಶೂಲವು ಕೆಳಗೆ ಬಿದ್ದಿತು. ಇದರಿಂದ ಶಿವ ಕೋಪಗೊಂಡು ತನ್ನ ಪಿನಾಕವೆಂಬ ಪ್ರಸಿದ್ಧವಾದ ಧನುಸ್ಸುನ್ನು ತೆಗೆದುಕೊಂಡ. ಗಣಪತಿ ಆ ಧನುಸ್ಸನ್ನೂ ತನ್ನ ಪರಿಘಾಯುಧದಿಂದ ಕೆಳಕ್ಕೆ ಕೆಡವಿದ. ಇದರಿಂದ ಶಿವನ ಐದು ಕೈಗಳು ಕತ್ತರಿಸಿಹೋದವು. ಮತ್ತೈದು ಕೈಗಳಿಂದ ಮತ್ತೆ ತ್ರಿಶೂಲವನ್ನು ತೆಗೆದುಕೊಂಡ. ಇದೇ ಸಮಯದಲ್ಲಿ ವೀರನಾದ ಗಣಪತಿಯು ದೇವತೆಗಳನ್ನೂ ಗಣಗಳನ್ನೂ ಪರಿಘಾಯುದದಿಂದ ಹೊಡೆದ. ಅವರು ಅದರ ಏಟನ್ನು ತಾಳಲಾರದೆ ದಿಕ್ಕೆಟ್ಟು ಓಡಿದರು.

ವಿಷ್ಣು ಗಣಪತಿಯ ಪರಾಕ್ರಮ ನೋಡಿ ಬೆರಗಾದ. ಗಣಪತಿಯು ಪರಿಘಾಯುಧವನ್ನು ಗಿರ್ರನೆ ತಿರುಗಿಸುತ್ತಾ ವಿಷ್ಣುವಿಗೆ ಬಲವಾಗಿ ಹೊಡೆದಾಗ, ವಿಷ್ಣು ತನ್ನ ಚಕ್ರಾಯುಧದಿಂದ ಪರಿಘಾಯುಧವನ್ನು ಚೂರು ಚೂರು ಮಾಡಿದ. ಚೂರಾದ ಪರಿಘಾಯುಧದಿಂದಲೇ ಗಣಪತಿಯು ವಿಷ್ಣುವಿಗೆ ಹೊಡೆದ. ಅದನ್ನು ತಪ್ಪಿಸಲು ಗರುಡ ಪ್ರಯತ್ನಿಸಿದ್ದು ವ್ಯರ್ಥವಾಯಿತು. ಹೀಗೆ ಮಹಾವೀರರಾದ ವಿಷ್ಣು ಮತ್ತು ಗಣಪತಿ ಇಬ್ಬರೂ ಬಹಳ ಕಾಲದವರೆವಿಗೂ ಯುದ್ಧಮಾಡುತ್ತಿದ್ದರು. ಗಣಪತಿ ಕೋಲಿನಿಂದ ವಿಷ್ಣುವಿಗೆ ಹೊಡೆದಾಗ, ಏಟನ್ನು ತಾಳಲಾರದೇ ವಿಷ್ಣುವು ಭೂಮಿಯಮೇಲೆ ಬಿದ್ದ. ಮತ್ತೆ ವಿಷ್ಣು ಮೇಲಕ್ಕೆದ್ದು ಪುನಃ ಗಣಪತಿಯೊಡನೆ ಯುದ್ಧಮಾಡುತ್ತಿದ್ದ. ಆ ಸಮಯದಲ್ಲಿ ಶಂಕರನು ಕೋಪದಿಂದ ತ್ರಿಶೂಲದಿಂದ ಗಣಪತಿ ತಲೆ ಕತ್ತರಿಸಿದ. ಆಗ ದೇವಸೈನ್ಯ ಮತ್ತು ಶಿವಗಣಗಳು ಸ್ತಬ್ಧವಾಗಿ ನಿಂತವು. ಈ ಸಂದರ್ಭದಲ್ಲಿ ಕಲಹಪ್ರಿಯನಾದ ನಾರದನು ಪಾರ್ವತಿ ಬಳಿ ಬಂದು, ‘ನಿನ್ನ ಮಗ ಗಣೇಶ ಸೋತು, ಮಾನಹೋಗುವ ಪ್ರಸಂಗಬಂದಿರುವುದರಿಂದ ಏನಾದರೂ ಮಾಡಿ ನಿನ್ನ ಗೌರವವನ್ನು ಉಳಿಸಿಕೊಳ್ಳಲೇ ಬೇಕು’ ಎಂದು ಕಿವಿ ಚುಚ್ಚಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT