ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣದ ಕುಮಾರಖಂಡಸಾರ–20: ಸಿದ್ಧಿ-ಬುದ್ಧಿಯೊಂದಿಗೆ ಗಣೇಶನ ಮದುವೆ

ಅಕ್ಷರ ಗಾತ್ರ

ವಿಶ್ವರೂಪ ಅಥವಾ ವಿಶ್ವಕರ್ಮನೆಂಬ ಬ್ರಹ್ಮನಿಗೆ ಸಿದ್ಧಿ ಮತ್ತು ಬುದ್ಧಿ ಎಂಬ ಇಬ್ಬರು ಸರ್ವಾಂಗ ಸುಂದರಿಯರಾದ ಹೆಣ್ಣುಮಕ್ಕಳು ಇದ್ದರು. ವಿಶ್ವಕರ್ಮಬ್ರಹ್ಮನೂ ತನ್ನ ಮಕ್ಕಳನ್ನು ಗಣೇಶನಿಗೆ ಕೊಟ್ಟು ವಿವಾಹವನ್ನು ಮಾಡಿ ಪಾರ್ವತೀಪರಮೇಶ್ವರರೊಂದಿಗೆ ಸಂತೋಷಪಟ್ಟ. ಕೆಲವು ಕಾಲಾನಂತರ ಗಣಪತಿಗೆ ಇಬ್ಬರು ದಿವ್ಯಾಕಾರವುಳ್ಳ ಪುತ್ರರು ಹುಟ್ಟಿದರು. ಸಿದ್ಧಿ ಎಂಬುವಳಲ್ಲಿ ‘ಕ್ಷೇಮ’ ಎಂಬ ಪುತ್ರ, ಬುದ್ಧಿಯಲ್ಲಿ ‘ಲಾಭ’ ಎಂಬ ಪುತ್ರ ಹುಟ್ಟಿದರು. ಇಬ್ಬರು ಪುತ್ರರತ್ನಗಳೊಂದಿಗೆ ಗಣಪತಿಯು ಸುಖವನ್ನನುಭವಿಸುತ್ತಿರುವಾಗ ಶಿವನ ಮತ್ತೊಬ್ಬ ಮಗನಾದ ಷಣ್ಮುಖ ಪೃಥ್ವಿಯನ್ನೂ ಪ್ರದಕ್ಷಿಣೆಮಾಡಿ ಬಂದ.

ಆ ಸಮಯದಲ್ಲಿ ಕಲಹಪ್ರಿಯನಾದ ನಾರದನು ಷಣ್ಮುಖನನ್ನು ಭೇಟಿಯಾಗಿ ಚಾಡಿ ಹೇಳಿದ. ‘ಎಲೈ ಷಣ್ಮುಖನೇ, ನಿನ್ನ ಮಾತಾಪಿತೃಗಳಾದ ಪಾರ್ವತೀಪರಮೇಶ್ವರರು ನಿನ್ನ ವಿಷಯದಲ್ಲಿ ನಡೆದುಕೊಂಡಿರುವುದು, ಲೋಕದಲ್ಲಿ ಬೇರೆ ಯಾರೂ ತಮ್ಮ ಮಕ್ಕಳ ವಿಷಯದಲ್ಲಿ ನಡೆಯಲಾರರು. ಯಾವುದೋ ನೆಪ ಮಾಡಿ ನಿನ್ನನ್ನು ಮನೆಯಿಂದ ಕಳುಹಿಸಿ, ಗಣಪತಿಯನ್ನು ಮನೆಯಲ್ಲಿಯೇ ಇರಿಸಿಕೊಂಡು ಅವನಿಗೆ ವಿವಾಹವನ್ನೂ ಮಾಡಿದ್ದಾರೆ. ಆ ಗಣಪತಿಯು ವಿಶ್ವಕರ್ಮಬ್ರಹ್ಮನ ಇಬ್ಬರು ಹೆಣ್ಣುಮಕ್ಕಳನ್ನು ಮದುವೆಮಾಡಿಕೊಂಡು ಸುಖವಾಗಿದ್ದಾನೆ. ಇಬ್ಬರು ಮಕ್ಕಳನ್ನು ಪಡೆದು ಆನಂದ ಪಡುತ್ತಿದ್ದಾನೆ. ಆದರೆ ನೀನು ತಾಯಿತಂದೆಗಳ ಮಾತಿನಂತೆ ಭೂಮಿಯನ್ನೂ ಸುತ್ತಿ ಕಷ್ಟಪಟ್ಟೆ. ನಿನ್ನ ತಾಯಿತಂದೆಯರು ನಿನಗೆ ಮಾಡಿರುವ ಮೋಸವು ಯೋಗ್ಯವಲ್ಲ. ಅವರ ಮುಖವನ್ನು ಕೂಡ ನೋಡಬಾರದು’ ಎಂದು ಕಿವಿ ಚುಚ್ಚಿದ.

ನಾರದನ ಮಾತು ಕೇಳಿ ಸ್ಕಂದನಿಗೆ ಅತ್ಯಂತ ಕೋಪಬಂತು. ಮಾತಾಪಿತೃಗಳಿಗೆ ‘ನಾನು ಕ್ರೌಂಚಪರ್ವತಕ್ಕೆ ಹೋಗುತ್ತಿದ್ದೇನೆ’ ಎಂದ. ‘ಏಕೆ ಮಗು ಹೋಗುವೆ? ನೀನಿಲ್ಲೆ ಇರು’ ಎಂದು ಪಾರ್ವತೀಪರಮೇಶ್ವರರು ಹೇಳಿದಾಗ, ಷಣ್ಮುಖನು ‘ತಾಯಿತಂದೆಗಳಾದ ನೀವೇ ನನ್ನಲ್ಲಿ ಕಪಟವಾದ ಪ್ರೀತಿಯನ್ನು ತೋರಿಸುತ್ತಿದ್ದೀರ. ನಾನು ಒಂದು ಕ್ಷಣವೂ ಇಲ್ಲಿ ನಿಲ್ಲಲಾರೆ’ ಎಂದು ಷಣ್ಮುಖನು ಕ್ರೌಂಚಪರ್ವತಕ್ಕೆ ಹೊರಟುಹೋದ. ಅವನು ಈಗಲೂ ಅಲ್ಲೆ ನೆಲೆಸಿರುವನು. ಅವನ ದರ್ಶನವನ್ನು ಮಾಡಿದರೆ ಪಾಪವೆಲ್ಲವೂ ನಾಶವಾಗುವುದು. ಅವನ ನಾಮಸ್ಮರಣೆಯಿಂದ ಶ್ರೇಷ್ಠವಾದ ಬ್ರಹ್ಮಚರ್ಯವನ್ನು ಹೊಂದಬಹುದು. ಕಾರ್ತೀಕಮಾಸದಲ್ಲಿ ದೇವತೆಗಳೂ ಋಷಿಗಳೂ ಅವನ ದರ್ಶನಮಾಡಲು ಕ್ರೌಂಚಪರ್ವತಕ್ಕೆ ಹೋಗುವರು. ಕಾರ್ತೀಕಮಾಸದಲ್ಲಿ ಕೃತ್ತಿಕಾನಕ್ಷತ್ರವು ಸೇರಿದ ಪೂರ್ಣಿಮೆಯಲ್ಲಿ ಯಾರು ಕಾರ್ತೀಕೆಯನ ದರ್ಶನವನ್ನು ಮಾಡುವರೋ, ಅವರ ಪಾಪಗಳೆಲ್ಲವೂ ನಾಶವಾಗಿ, ತಮಗಿಷ್ಟವಾದ ಫಲವನ್ನು ಪಡೆವರು.

ಸ್ಕಂದ ತಮ್ಮನ್ನು ಬಿಟ್ಟು ದೂರ ಹೋಗಿದ್ದರಿಂದ ಪಾರ್ವತಿಗೆ ತುಂಬಾ ದುಃಖವಾಯಿತು. ಆಗ ಪತಿ ಪರಮೇಶ್ವರನಲ್ಲಿ ‘ಸ್ಕಂದನನ್ನು ನೋಡಲು ಹೋಗೋಣ’ ಎಂದು ಬೇಡಿಕೊಂಡಳು. ಈಶ್ವರನು ಪಾರ್ವತಿಯೊಡನೆ ಕ್ರೌಂಚಪರ್ವತಕ್ಕೆ ಬಂದಾಗ, ಕುಮಾರನು ಆ ಸ್ಥಳವನ್ನು ಬಿಟ್ಟು ಬೇರೆ ಕಡೆಗೆ ಹೋಗಲು ಸಿದ್ಧನಾದ. ದೇವತೆಗಳೂ ಮುನಿಗಳೂ ಎಷ್ಟೇ ಪ್ರಾರ್ಥನೆ ಮಾಡಿದರೂ ಕೇಳದೆ, ಕ್ರೌಂಚಪರ್ವತವನ್ನು ಬಿಟ್ಟು ಮೂರು ಯೋಜನದ ದೂರಕ್ಕೆ ಹೊರಟು ಹೋದ. ಆದರೂ ಪುತ್ರಪ್ರೇಮದಿಂದ ಪಾರ್ವತೀಪರಮೇಶ್ವರರು ಪ್ರತಿ ಪರ್ವಕಾಲಗಳಲ್ಲಿಯೂ ಕುಮಾರನ ದರ್ಶನಕ್ಕಾಗಿ ಅವನಿರುವ ಸ್ಥಾನಕ್ಕೆ ಹೋಗುವರು. ಶಂಕರನು ಅಮಾವ್ಯಾಸ್ಯೆಯ ದಿನವೂ, ಗಿರಿಜೆಯು ಪೂರ್ಣಿಮೆಯ ದಿನವೂ, ಕುಮಾರನನ್ನು ನೋಡಲು ತಪ್ಪದೆ ಹೋಗುವರು. ಈಶ್ವರನು ತನ್ನ ಅಂಶದಿಂದ ಮಲ್ಲಿಕಾರ್ಜುನನೆಂಬ ಜ್ಯೋತಿರ್ಲಿಂಗಸ್ವರೂಪನಾಗಿ ಆ ಕ್ರೌಂಚಪರ್ವತದಲ್ಲಿ ನೆಲೆಸಿರುವನು.

ಶಿವಪುತ್ರರಾದ ಕುಮಾರ ಮತ್ತು ಗಣಪತಿಯ ಪರಮಪವಿತ್ರವಾದ ಕಥೆಯನ್ನು ಕೇಳಿದವರ ಪಾಪಗಳೆಲ್ಲಾ ನಾಶವಾಗುವುದು; ತಮಗಿಷ್ಟವಾದುದನ್ನೆಲ್ಲವನ್ನೂ ಪಡೆಯುವರು; ಮಂಗಳಕರವಾದ ಜೀವನ ನಡೆಸಿ, ಶಿವೈಕ್ಯವನ್ನು ಹೊಂದುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT