ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ದಕ್ಷ ಬ್ರಹ್ಮನನ್ನು ಶಪಿಸಿದ ನಂದಿ

ಭಾಗ 170
ಅಕ್ಷರ ಗಾತ್ರ

ದಕ್ಷಪ್ರಜಾಪತಿಯ ನಡವಳಿಕೆಯನ್ನ ಕಂಡು ಕುಪಿತನಾದ ನಂದಿಕೇಶ್ವರ ‘ಎಲೈ ದಕ್ಷ, ಶಿವದ್ವೇಷಿಗಳಾದ ನೀವೆಲ್ಲರೂ ವೇದವಾದವನ್ನೇ ಮಾಡುವವರಾದರೂ ವೇದಕ್ಕೆ ವಿಪರೀತವಾದ ಅರ್ಥವನ್ನು ಮಾಡುತ್ತಾ ಇರಿ. ವೈದಿಕನಾಸ್ತಿಕರಾಗಿ ಜನಿಸಿರಿ. ಯಜ್ಞಾದಿಗಳನ್ನು ಮಾಡುತ್ತಾ ಕೇವಲ ಸ್ವರ್ಗದಲ್ಲಿ ಆಸಕ್ತರಾಗಿದ್ದು, ಮುಕ್ತಿಮಾರ್ಗಕ್ಕೆ ಬಾರದೆ, ಕೇವಲ ಕಾಮಪ್ರಧಾನರಾಗಿರಿ. ಕೋಪ, ಲೋಭ, ಮದಗಳುಳ್ಳ ಪಾಪಿಷ್ಠರಾಗಿ ಬದುಕಿ. ಸದಾ ದುರ್ದಾನಗಳನ್ನೇ ತೆಗೆದುಕೊಳ್ಳುತ್ತಾ ದರಿದ್ರರಾಗಿರಿ. ಶಿವನನ್ನು ದ್ವೇಷಿಸುವವರೆಲ್ಲರೂ ದುರಾಚಾರವನ್ನು ಮಾಡುತ್ತಾ ನರಕಕ್ಕೆ ಹೋಗುವರು. ಆ ದುಷ್ಟರಲ್ಲಿ ಕೆಲವರು ಬ್ರಹ್ಮರಾಕ್ಷಸರಾಗುವರು. ಶಿವನು ಸಾಮಾನ್ಯ ದೇವನೆಂದು ತಪ್ಪಾಗಿ ತಿಳಿದು, ಅವನನ್ನು ದ್ವೇಷಿಸುವ ನಿನಗೆ ಎಂದೆಂದಿಗೂ ಪರತತ್ವವು ಗೋಚರಿಸಲಾರದು. ದುಷ್ಟಮತಿಯಾದ ನೀನು ಸದಾ ಮೋಸಧರ್ಮದಲ್ಲಿಯೇ ಇದ್ದು, ಸಂಸಾರದಲ್ಲಿ ವ್ಯಾಪೃತನಾಗಿ ನೀಚವಾದ ಕಾಮಸುಖವನ್ನನುಭವಿಸುತ್ತಾ, ದುಷ್ಟಾಚಾರವುಳ್ಳವನಾಗುವೆ. ನೀನು ವೇದವಾದವನ್ನು ಹೇಳಿದರೂ, ಅದರಿಂದ ಲಭಿಸುವ ನಿತ್ಯಾತ್ಮಾನಂದವನ್ನು ಪಡೆಯಲಾರೆ. ಕೇವಲ ಪಶುವಿನಂತೆ ಗ್ರಾಮ್ಯಸುಖದಲ್ಲಿಯೇ ಪ್ರವರ್ತಿಸುವೆ. ಕೆಲವು ದಿನಗಳಲ್ಲಿಯೇ ಆಡಿನ ಮುಖವುಳ್ಳವನಾಗುವೆ’ ಎಂದು ಅಲ್ಲಿದ್ದ ದಕ್ಷಬ್ರಹ್ಮ ಮತ್ತವನ ಶಿವದ್ವೇಷಿಗಳೆಲ್ಲರನ್ನೂ ಶಪಿಸಿದ.

ನಂದಿಯ ಶಾಪದಿಂದ ಅಲ್ಲಿದ್ದವರು ದುಃಖದಿಂದ ಹಾಹಾಕಾರ ಮಾಡಿದರು. ಆಗ ಬ್ರಹ್ಮ ವಿನಾ ಕಾರಣ ಶಿವಗಣಗಳಿಗೆ ಶಾಪಕೊಟ್ಟಿದ್ದಕ್ಕಾಗಿ ದಕ್ಷನನ್ನು ನಿಂದಿಸಿದ. ಶಿವತತ್ವವನ್ನು ಬಲ್ಲವನಾದ ಬ್ರಹ್ಮ, ಶಿವದ್ವೇಷಿಗಳಾದ ಭೃಗು ಮೊದಲಾದ ಮುನಿಗಳನ್ನೂ ನಿಂದಿಸಿದ. ಆದರೆ ಶಿವನು ಮಂದಹಾಸವನ್ನು ಬೀರುತ್ತಾ ಕುಳಿತಿದ್ದ. ದಕ್ಷನ ಮಾತು ತನ್ನ ಕಿವಿಗೆ ಕೇಳಲೇ ಇಲ್ಲವೇನೋ ಎಂಬಂತೆ ಮಂದಸ್ಮಿತನಾಗಿ, ‘ಎಲೈ ಪ್ರಾಜ್ಞನಾದ ನಂದಿ, ಕೋಪವನ್ನು ಬಿಡು. ದಕ್ಷ ನನ್ನನ್ನು ಶಪಿಸಿದನೆಂಬ ಕಾರಣಕ್ಕಾಗಿ ನೀನು ಕುಪಿತನಾಗಿ ಬ್ರಾಹ್ಮಣರನ್ನೆಲ್ಲಾ ಶಪಿಸಿರುವೆ, ಇದು ಸರಿಯಲ್ಲ. ವೇದಸೂಕ್ತಗಳಲ್ಲಿ ಪರಮಾತ್ಮನು ನೆಲಸಿರುವನು. ಇವನ್ನು ಅಧ್ಯಯನ ಮಾಡಿ ಇವರೆಲ್ಲ ಆತ್ಮವಿತ್ತುಗಳಾಗಿರುವರು. ಇವರನ್ನು ಶಪಿಸಿದರೆ ಆ ವೇದಗಳನ್ನೇ ಶಪಿಸಿದಂತಾಗುವುದು. ಆದ್ದರಿಂದ ನೀನು ಶಪಿಸಿದ್ದು ಸರಿಯಲ್ಲ. ವೇದಗಳನ್ನು ಶಪಿಸಬಾರದು. ವಸ್ತುತಃ ನಾನು ಶಪ್ತನಾಗಿಲ್ಲ. ನನ್ನನ್ನು ಶಪಿಸಲು ಯಾರಿಗೂ ಸಾಧ್ಯವಿಲ್ಲ. ಶಾಂತನಾಗು. ಸನಕ ಮೊದಲಾದ ಮಹಾಮುನಿಗಳಿಗೆ ಉಪದೇಶಿಸುವ ನೀನು ಹೀಗೆ ಕೋಪಗೊಳ್ಳುವುದು ಸರಿಯಲ್ಲ. ನಾನೇ ಯಜ್ಞವು. ಕರ್ಮಗಳೂ ನಾನೇ. ಯಜ್ಞಸಾಧನಗಳೂ ನಾನೇ. ಯಜ್ಞಸ್ವರೂಪಿಯು ನಾನೆ. ನನ್ನ ಹೊರತು ಬೇರೆ ಯಾವುದೂ ಇಲ್ಲ. ಈ ದೇವತೆಗಳು, ಮುನಿಗಳು ಯಾರೆಂದು ತಿಳಿದಿರುವೆ? ಎಲ್ಲವೂ ನಾನೇ ಆಗಿರುವೆ. ನನ್ನ ಹೊರತು ಬೇರೆ ಯಾರೂ ಇಲ್ಲ. ಇದನ್ನು ಅರ್ಥಮಾಡಿಕೊಂಡು, ಕೋಪವನ್ನು ತ್ಯಜಿಸಿ ಸ್ವಸ್ಥನಾಗು. ತತ್ವಜ್ಞಾನದಿಂದ ಚೆನ್ನಾಗಿ ವಿಮರ್ಶಿಸು’ ಎಂದು ಸಮಾಧಾನ ಮಾಡಿದ.

ನಂದಿಯು ಕೋಪವನ್ನು ತ್ಯಜಿಸಿ ಶಾಂತನಾದ. ಶಿವನು ತನ್ನ ಪ್ರೀತಿಪಾತ್ರನಾದ ನಂದಿಕೇಶ್ವರನನ್ನು ಸಮಾಧಾನಗೊಳಿಸಿದ ನಂತರ ತನ್ನ ಗಣಗಳೊಡನೆ ಕೈಲಾಸಕ್ಕೆ ತೆರಳಿದ. ಇತ್ತ ದಕ್ಷಬ್ರಹ್ಮನೂ ಶಿವನ ಮೇಲೆ ಕೋಪಗೊಂಡು ಶಿವನಿಗೆ ದ್ರೋಹ ಮಾಡಬೇಕೆಂಬ ದುರಾಲೋಚನೆಯಲ್ಲಿಯೇ ತೆರಳಿದ. ತನಗೆ ರುದ್ರ ನಮಸ್ಕಾರ ಮಾಡದಿರುವುದನ್ನು ನೆನೆಸಿಕೊಂಡಷ್ಟು ದಕ್ಷಬ್ರಹ್ಮ ಕ್ರೋಧಗೊಳ್ಳುತ್ತಿದ್ದ.

‘ಎಲೈ ನಾರದ, ಮೂರ್ಖನಾದ ದಕ್ಷಪ್ರಜಾಪತಿಗೆ ಮುಂದೆ ಶಿವನಿಂದಾದ ಶಿಕ್ಷೆಯನ್ನು ಹೇಳುವೆನು ಕೇಳು’ ಎಂದು ಬ್ರಹ್ಮ ಹೇಳುವಲ್ಲಿಗೆ ಸತೀಖಂಡದ ಇಪ್ಪತ್ತಾರನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT