ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಸದಾಚಾರದಿಂದ ಜೀವನೋದ್ಧಾರ

ಭಾಗ 39
Last Updated 7 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಋಷಿಗಳು ‘ಓ ಸೂತಮುನಿ! ಪುಣ್ಯಲೋಕಗಳನ್ನು ಜಯಿಸುವಂತಹ ಸದಾಚಾರಗಳು ಯಾವುವು? ಧರ್ಮ ಮತ್ತು ಅಧರ್ಮ ಸ್ವರೂಪಗಳಾದ ಸ್ವರ್ಗ ಮತ್ತು ನರಕಗಳನ್ನುಂ ಉಂಟುಮಾಡುವಂತಹ ಆಚಾರಗಳಾವುವು?’ ಎಂದು ಕೇಳಿದಾಗ ಸೂತಮುನಿ ಹೀಗೆ ಹೇಳುತ್ತಾನೆ.

ಪ್ರಾತಃಕಾಲದಲ್ಲಿ ಹಾಸಿಗೆಯಿಂದ ಏಳುವಾಗ, ಪೂರ್ವ, ಆಗ್ನೇಯ, ದಕ್ಷಿಣ, ನೈಋತ್ಯ, ಪಶ್ಚಿಮ, ವಾಯವ್ಯ, ಉತ್ತರ, ಈಶಾನ್ಯ ಎಂಬ ಎಂಟು ದಿಕ್ಕುಗಳಲ್ಲಿ ಅಭಿಮುಖವಾಗಿ ಎದ್ದರೆ ಕ್ರಮವಾಗಿ ಆಯುಸ್ಸು, ದ್ವೇಷ, ಮರಣ, ಪಾಪ, ಭಾಗ್ಯ, ರೋಗ, ಪುಷ್ಟಿ, ಶಕ್ತಿ ಎಂಬ ಫಲಗಳು ಉಂಟಾಗುವುದು. ಎಲ್ಲ ಪುರುಷರೂ ಉಷಃಕಾಲದಲ್ಲಿ ಪೂರ್ವಾಭಿಮುಖವಾಗಿ ಎದ್ದುನಿಂತು ದೇವತೆಗಳನ್ನು ಧ್ಯಾನಿಸಿ, ಧರ್ಮ-ಅರ್ಥಗಳನ್ನು ಚಿಂತಿಸಬೇಕು. ರಾತ್ರಿಯ ಕೊನೆಯ ಯಾಮಕ್ಕೆ ಉಷಃಕಾಲವೆಂದು ಹೆಸರು. ಆ ಯಾಮದ ಅರ್ಧಭಾಗಕ್ಕೆ ಸಂಧಿಯೆಂದು ಹೆಸರು. ಆ ಸಂಧಿಕಾಲದಲ್ಲೆದ್ದು ಜಲಬಾಧೆ ಮತ್ತು ಮಲಬಾಧೆಗಳನ್ನು ತೀರಿಸಬೇಕು. ದೇಹಬಾಧೆಗಾಗಿ ಮನೆಯಿಂದ ದೂರಪ್ರದೇಶಕ್ಕೆ ಹೋಗಬೇಕು. ಶಿರಸ್ಸನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಉತ್ತರ ದಿಕ್ಕಿಗೆದುರಾಗಿ ಕುಳಿತುಕೊಳ್ಳಬೇಕು. ತೊಂದರೆ ಇದ್ದರೆ ಮಿಕ್ಕ ಯಾವುದಾದರೂ ದಿಕ್ಕಿಗೆ ಎದುರಾಗಿ ಕುಳಿತುಕೊಳ್ಳಬಹುದು. ಮಲವನ್ನು (ಅಮೇದ್ಯವನ್ನು) ವಿಸರ್ಜನೆಮಾಡಿ ಎದ್ದಮೇಲೆ ತಿರುಗಿ ಆ ಮಲವನ್ನು ನೋಡಬಾರದು. ತಂಬಿಗೆಯಿಂದ ಪೃಷ್ಠಶೌಚವನ್ನು (ಶುದ್ಧಿಯನ್ನು) ಮಾಡಬೇಕು. ಜಲಾಶಯದ ನೀರಿನಲ್ಲಿಯೇ ತೊಳೆಯಬಾರದು. ನೀರಿನ ಹೊರಪ್ರದೇಶದ ಬಯಲಲ್ಲಿ ತೊಳೆಯಬೇಕು.

ಯಾವುದಾದರೂ ಎಲೆಯಿಂದ ಅಥವಾ ಕಡ್ಡಿಯಿಂದ ನೀರಿನ ಹೊರಗೆ ನಿಂತು ಹಲ್ಲುಗಳನ್ನುಜ್ಜಬೇಕು, ತರ್ಜನೀ ಅಂದರೆ, ಎರಡನೆಯ ಬೆರಳಿನಿಂದ ಹಲ್ಲನ್ನು ಉಜ್ಜಬಾರದು. ಅಶಕ್ತನಾದವನು, ಕಂಠಪರ್ಯಂತವಾಗಲೀ, ಸೊಂಟದ ಪರ್ಯಂತವಾಗಲೀ ಸ್ನಾನಮಾಡಬಹುದು. ಅದಕ್ಕೂ ಶಕ್ತಿಯಿಲ್ಲದವರು, ಮೊಳಕಾಲುಗಳ ಪರ್ಯಂತ ಜಲವನ್ನು ಪ್ರೋಕ್ಷಿಸಿಕೊಂಡು, ಮಂತ್ರಸ್ನಾನವನ್ನು ಮಾಡಬೇಕು. ತೀರ್ಥಜಲದಿಂದ ದೇವಋಷಿಪಿತೃಗಳಿಗೆ ತರ್ಪಣವನ್ನು ಮಾಡಬೇಕು. ಒಗೆದು ಮಡಿಯಾಗಿರುವ ಬಟ್ಟೆಯನ್ನು, ಪಂಚಕಚ್ಚೆಯನ್ನು ಹಾಕಿ ಉಟ್ಟುಕೊಳ್ಳಬೇಕು. ನದಿಗಳಲ್ಲಿ ಸ್ನಾನಮಾಡಿದ ಬಟ್ಟೆಯನ್ನು ತೊಳೆಯಬಾರದು. ಸ್ನಾನವಾದ ಮೇಲೆ ಬಾವಿ, ಕೊಳ, ಮನೆಗಳಲ್ಲಿ ಬಟ್ಟೆಯನ್ನು ಒಗೆಯಬೇಕು. ನದಿಗಳನ್ನು ಶುದ್ಧವಾಗಿಟ್ಟುಕೊಳ್ಳುವುದರಿಂದ ಪಿತೃಗಳು ತೃಪ್ತರಾಗುವರು.

ಜಾಬಾಲೋಪನಿಷತ್ತಿನಲ್ಲಿ ಹೇಳಿರುವ ಮಂತ್ರದಿಂದ ಭಸ್ಮವನ್ನು ಮೂರು ಪಟ್ಟೆಯಾಗಿ ಹಣೆಯಲ್ಲಿ ಹಚ್ಚಬೇಕು. ಇದಕ್ಕೆ ವಿಪರೀತವಾಗಿ ಆಚರಿಸಿದರೆ ಜಲದಲ್ಲಿ ಮರಣವೂ, ಮರಣದ ನಂತರ ನರಕವೂ ಪ್ರಾಪ್ತಿಯಾಗುವುದು. ‘ಅಪೋಹಿಷ್ಠಾ’ ಎಂಬ ಮಂತ್ರದಿಂದ ಶಿರಸ್ಸಿನಲ್ಲಿ ಜಲವನ್ನು ಪ್ರೋಕ್ಷಿಸಿಕೊಳ್ಳಬೇಕು. ‘ಯಸ್ಯಕ್ಷಯಾಯ ಜಿನ್ವಥ‘ ಎಂಬ ಮಂತ್ರದಿಂದ ಕಾಲಿನಲ್ಲಿ ಸಂಧಿಗಳನ್ನು ಪ್ರೋಕ್ಷಿಸಬೇಕು. ಪಾದ, ಶಿರಸ್ಸು, ಹೃದಯ; ನಂತರ ಶಿರಸ್ಸು, ಹೃದಯ, ಪಾದ; ನಂತರ ಹೃದಯ, ಪಾದ, ಶಿರಸ್ಸು, ಹೀಗೆ ಕ್ರಮವಾಗಿ ಮೂರು ಬಾರಿ ಪ್ರೋಕ್ಷಿಸಬೇಕು. ಇದಕ್ಕೆ ಮಂತ್ರಸ್ನಾನವೆಂದು ಹೆಸರು.

ಸಾಮಾನ್ಯವಾದ ಅಶುದ್ಧಿ ವಸ್ತುಸ್ವರ್ಶ, ಅನಾರೋಗ್ಯ, ರಾಜಭಯ ಮತ್ತು ರಾಜ್ಯಭಯ, ಅನಿರೀಕ್ಷಿತ ಪ್ರಯಾಣಕಾಲಗಳಲ್ಲಿ ವಿಧಿವತ್ತಾಗಿ ಸ್ನಾನಮಾಡಲು ಕಾಲಾವಕಾಶವಿಲ್ಲದಿರುವಾಗ ಮಂತ್ರಸ್ನಾನವನ್ನು ಮಾಡಬಹುದು. ಪ್ರಾತಃಕಾಲದಲ್ಲಿ ‘ಸೂರ್ಯಶ್ಚ ಮಾಮನ್ಯುಶ್ಚ’ ಎಂಬ ಸೂರ್ಯಾನುವಾಕದಿಂದ, ಸಾಯಂಕಾಲದಲ್ಲಿ ‘ಅಗ್ನಿಶ್ಚ ಮಾಮನ್ಯುಶ್ಚ‘ ಎಂಬ ಅಗ್ನ್ಯನುವಾಕದಿಂದ ಜಲಪ್ರಾಶನೆ ಮಾಡಿ, ಪುನಃ ’ಅಪೋಹಿಷ್ಠಾ‘ ಎಂಬ ಮಂತ್ರದಿಂದ ಪ್ರೋಕ್ಷಣೆ ಮಾಡಿಕೊಳ್ಳಬೇಕು. ಜಪವಾದ ಮೇಲೆ, ಗಾಯತ್ರೀಮಂತ್ರದಿಂದ ಮೂರು ಬಾರಿ ಪೂರ್ವಾಭಿಮುಖವಾಗಿ ನಿಂತು, ಊರ್ಧ್ವಮುಖವಾಗಿ ನೀರನ್ನು ಎರಚಬೇಕು. ಮಧ್ಯದಲ್ಲಿ ಗಾಯತ್ರೀಮಂತ್ರದಿಂದಲೇ ಸೂರ್ಯನಿಗೆ ಒಂದು ಅರ್ಘ್ಯವನ್ನು ಕೊಡಬೇಕು.

ಬಳಿಕ ಸಾಯಂಕಾಲದಲ್ಲಿ ಪಶ್ಚಿಮದಿಕ್ಕಿಗೆ ಎದುರಾಗಿ ನಿಂತು ಭೂಮಿಯಲ್ಲಿ ಕೆಳಮುಖವಾಗಿ ಅರ್ಘ್ಯವನ್ನು ಕೊಡಬೇಕು. ಪ್ರಾತಃಕಾಲದಲ್ಲಿ ಮೇಲು ಮುಖವಾಗಿಯೂ ಮಧ್ಯಾಹ್ನದಲ್ಲಿ ಬೆರಳುಗಳಿಂದಲೂ ಅರ್ಘ್ಯವನ್ನು ಕೊಡಬೇಕು. ಬೆರಳುಗಳ ರಂಧ್ರದಿಂದ ಸೂರ್ಯಬಿಂಬವನ್ನು ನೋಡಬೇಕು. ತಾನೇ ತನ್ನ ಪ್ರದಕ್ಷಿಣವನ್ನು ಮಾಡಿ ಬಳಿಕ ಶುದ್ಧಾಚಮನವನ್ನು ಮಾಡಬೇಕು. ಸಂಧ್ಯಾಕಾಲದಲ್ಲಿ ನಿತ್ಯವೂ ನೂರು ಬಾರಿ ಗಾಯತ್ರೀಜಪವನ್ನು ಮಾಡಬೇಕು. ಹತ್ತು ದಿನಗಳವರೆಗೆ ಸಂಧ್ಯಾವಂದನೆಯನ್ನು ಮಾಡದಿದ್ದರೆ ಅದಕ್ಕೆ ಪ್ರಾಯಶ್ಚಿತ್ತವಾಗಿ ಪಕ್ಷಗಾಯತ್ರೀಜಪವನ್ನು ಮಾಡಬೇಕು. ಇದೂ ಮಾಡದಿದ್ದರೆ, ಒಂದು ತಿಂಗಳು ಸಂಧ್ಯಾವಂದನೆ ಮಾಡಬೇಕು. ಇದೂ ಆಗದಿದ್ದರೆ, ಮತ್ತೆ ಉಪನಯನವನ್ನೇ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT