ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಸತಿಗೆ ಪರತತ್ತ್ವ ಹೇಳಿದ ಶಿವ

ಅಕ್ಷರ ಗಾತ್ರ

ಪತಿ ಪರಮೇಶ್ವರನೊಂದಿಗೆ ಸಂಸಾರಸುಖದಲ್ಲಿ ಮುಳುಗಿದ್ದ ಸತೀದೇವಿಗೆ ಕ್ರಮೇಣ ಅನುರಾಗ ಕಡಿಮೆಯಾಗಿ ಅಧ್ಯಾತ್ಮವಿಚಾರದತ್ತ ಅವಳ ಮನಸ್ಸು ಒರಳುತ್ತದೆ. ಹೀಗಿರಲು ಒಂದು ದಿನ ಸತೀದೇವಿಯು ಏಕಾಂತದಲ್ಲಿ ಶಂಕರನಿಗೆ ಕೇಳುತ್ತಾಳೆ: ‘ಓ ಮಹಾದೇವ, ನೀನು ಮಹಾಯೋಗಿಯಾಗಿ ಪರಮಪುರುಷನಾಗಿರುವೆ. ಸತ್ತ್ವರಜಸ್ತಮೋರೂಪವಾದ ಪ್ರಕೃತಿಗಿಂತ ಭಿನ್ನನಾಗಿ ನಿರ್ಗುಣನಾಗಿರುವೆ. ಆದರೂ ಮಾಯೆಯ ನಿಮಿತ್ತದಿಂದ ಸಗುಣಭಾವವನ್ನು ಹೊಂದಿ ಸೃಷ್ಟಿ-ಸ್ಥಿತಿ-ಲಯಗಳನ್ನು ಮಾಡುವ ಈಶ್ವರನಾಗಿರುವೆ. ನನ್ನ ಭಕ್ತಿಗೆ ಅಧೀನನಾಗಿ ನೀನು ಪ್ರೇಮದಿಂದ ನನ್ನ ಪತಿಯಾಗಿರುವೆ. ನನ್ನ ಮನಸ್ಸು ಈಗ ಕಾಮಾಭಿಲಾಷೆಯಿಂದ ತೃಪ್ತವಾಗಿ, ಜಗತತ್ವದತ್ತ ಮನಸ್ಸು ಒರಳಿದೆ. ಇದಕ್ಕಾಗಿ ಯಾವ ವಸ್ತುವನ್ನು ತಿಳಿದರೆ ಜೀವಾತ್ಮಗಳು ಸಂಸಾರಸಾಗರವನ್ನು ದಾಟಬಹುದೋ, ಆ ಸುಖಸ್ವರೂಪವಾದ ಪರತತ್ತ್ವವನ್ನು ತಿಳಿದುಕೊಳ್ಳಲಿಚ್ಛಿಸಿದ್ದೇನೆ. ಯಾವುದನ್ನು ಅನುಷ್ಠಾನಮಾಡಿದರೆ ಜೀವಾತ್ಮಗಳು ಪರವಸ್ತುವನ್ನು ಪಡೆದು, ಮತ್ತೆ ಸಂಸಾರಿಯಾಗುವುದಿಲ್ಲವೋ ಅಂತಹ ಪರತತ್ತ್ವದ ಮುಕ್ತಿಯನ್ನು ನನಗೆ ತಿಳಿಸು’ ಎಂದು ಕೋರುತ್ತಾಳೆ.

ಲೀಲಾವಿಗ್ರಹಧಾರಿಯಾದ ಶಿವನು ಸತೀದೇವಿಗೆ ‘ಎಲೈ ದೇವಿ, ಪರತತ್ತ್ವವನ್ನು ತಿಳಿದ ಜೀವಾತ್ಮರು ಜೀವನ್ಮರಣದ ಸರಪಣಿಯಿಂದ ಮುಕ್ತರಾಗುವರು. ಆ ಪರತತ್ತ್ವವನ್ನು ನಿನಗೆ ಹೇಳುವೆನು ಕೇಳು’ ಎಂದು ಮಹಾಯೋಗಿಯಾದ ಪರಮಶಿವ ಜಗತ್ತಿನ ಪರತತ್ವವನ್ನು ಹೇಳತೊಡಗುತ್ತಾನೆ.

‘ಎಲೈ ಪರಮೇಶ್ವರಿ, ಮೊದಲಿಗೆ ಪರಮಾತ್ಮನನ್ನು ಗುರುಮುಖವಾಗಿ ವೇದಶಾಸ್ತ್ರಗಳಿಂದ ಶ್ರವಣಮಾಡಿ ತಿಳಿದುಕೊಳ್ಳಬೇಕು. ಬಳಿಕ ನಾನೇ ಆ ಪರಮಾತ್ಮವಸ್ತುವೆಂದು ಶುದ್ಧ ಮನಸ್ಸಿನಿಂದ ಚಿಂತಿಸಬೇಕು. ಪರತತ್ತ್ವವನ್ನು ತಿಳಿಯುವುದು ಬಹಳ ಕಷ್ಟ. ನಾನೇ ಆ ಸರ್ವೋತ್ಕೃಷ್ಟವಾದ ಪರಬ್ರಹ್ಮನೆಂದು ತಿಳಿಯುವುದು ಮತ್ತಷ್ಟು ಕಷ್ಟ. ಅಂತಹ ಜ್ಞಾನಿಗಳ ಸಂಖ್ಯೆ ವಿರಳವಾಗಿದೆ. ಶಾಸ್ತ್ರಾದಿಗಳಲ್ಲಿ ಹೇಳಿರುವ ಬ್ರಹ್ಮಸ್ವರೂಪವನ್ನು ಸುಮ್ಮನೆ ಓದಿ ಅರ್ಥಮಾಡಿಕೊಳ್ಳುವುದರಿಂದ ತಿಳಿದಂತಾಗುವುದಿಲ್ಲ. ಮೊದಲು ಶಾಸ್ತ್ರಾಧ್ಯಯನವನ್ನು ಗುರುಮುಖದಿಂದ ಮಾಡಿ, ಅದರ ರಹಸ್ಯಾರ್ಥಗಳನ್ನು ಮನಸ್ಸಿನಲ್ಲಿ ಚೆನ್ನಾಗಿ ವಿಮರ್ಶೆಮಾಡಬೇಕು. ವಿಮರ್ಶೆ ಮಾಡುವ ವಿಷಯವು ಕಾರಣಸಹಿತವಾಗಿಯೂ, ಲೋಕಾನುಭವಕ್ಕೆ ವಿರುದ್ಧವಲ್ಲದೆಯೂ ಇದ್ದರೆ ಮಾತ್ರ ಅದನ್ನು ಅಂಗೀಕರಿಸಬೇಕು. ಸುಮ್ಮನೆ ಮೂಢನಂಬಿಕೆಯಿಂದ ಯಾವುದನ್ನೂ ನಂಬಿ ಮಾಡಬಾರದು.

‘ಎಲೈ ಕಾಳಿ, ಆ ಪರಬ್ರಹ್ಮನಲ್ಲಿ ಭಕ್ತಿಯನ್ನಿರಿಸಿದರೆ ಭೋಗಮುಕ್ತಿಗಳು ಲಭಿಸುವುದು. ಭಕ್ತಿ ಮತ್ತು ಜ್ಞಾನದಲ್ಲಿ ಅನೇಕ ವಿಧಗಳಿವೆ. ಭಕ್ತಿಯಿಂದ ಜ್ಞಾನ ಬರುತ್ತದೆ. ಜ್ಞಾನದಿಂದ ಭಕ್ತಿ ಬರುತ್ತದೆ. ಆದ್ದರಿಂದ ಭಕ್ತಿ ಮತ್ತು ಜ್ಞಾನ ಭಿನ್ನವಲ್ಲ. ಇವೆರಡೂ ಒಂದೇ ಆಗಿವೆ. ಇವುಗಳ ಫಲಗಳು ಸಹ ಒಂದೇ ರೀತಿ ನೀಡುತ್ತವೆ. ಭಕ್ತಿಯುಂಟಾಗದಿದ್ದರೆ ಜ್ಞಾನವು ಬರುವುದೇ ಇಲ್ಲ. ಅಂದರೆ ಜ್ಞಾನಕ್ಕೆ ಭಕ್ತಿಯು ದ್ವಾರವಾಗಿದೆ. ಭಕ್ತಿಯಿಂದ ಜ್ಞಾನವನ್ನು ಪಡೆದು, ಅದರ ಮೂಲಕ ಮುಕ್ತಿಯನ್ನು ಪಡೆಯಬೇಕು.

‘ಎಲೈ ದೇವಿ, ಭಕ್ತಿಯು ಸಗುಣ ಮತ್ತು ನಿರ್ಗುಣ ಎಂದು ಎರಡು ವಿಧವಾಗಿರುವುದು. ಸ್ವಭಾವಜನ್ಯವಾಗಿಯೇ ಉಂಟಾಗುವ ನಿಜವಾದ ಭಕ್ತಿಯು ಶ್ರೇಷ್ಠವಾದುದು. ಪ್ರಾರ್ಥನಾವಿಧಿಯಿಂದ ಪ್ರಯತ್ನಪೂರ್ವಕವಾಗಿ ಉಂಟಾಗುವ ಭಕ್ತಿಯು ಅಷ್ಟು ಶ್ರೇಷ್ಠವಲ್ಲ. ನೈಷ್ಠಿಕೀ ಮತ್ತು ಅನೈಷ್ಠಿಕೀ ಎಂಬ ಎರಡು ವಿಧದ ಭಕ್ತಿಗಳಿವೆ. ಅದರಲ್ಲಿ ನೈಷ್ಠಿಕೀಭಕ್ತಿಯಲ್ಲಿ ಆರು ವಿಧವಿದ್ದರೆ, ಅನೈಷ್ಠಿಕೀಭಕ್ತಿಯಲ್ಲಿ ಒಂದೇ ವಿಧವಿದೆ. ಈ ಎಲ್ಲ ಭಕ್ತಿಗಳನ್ನು ವಿಹಿತಭಕ್ತಿ ಮತ್ತು ಅವಿಹಿತಭಕ್ತಿ ಎಂದು ಅನೇಕ ವಿಧವಾಗಿ ವಿಂಗಡಿಸಲಾಗಿದೆ. ಅವುಗಳ ಸ್ವರೂಪವು ವಿಸ್ತಾರವಾಗಿರುವುದರಿಂದ ಬೇರೆ ಬೇರೆ ಗ್ರಂಥಗಳಲ್ಲಿ ಪ್ರತ್ಯೇಕವಾಗಿ ವರ್ಣಿಸಲಾಗಿದೆ.

‘ಎಲೈ ಪ್ರಿಯೆ. ವಿಹಿತಭಕ್ತಿ ಮತ್ತು ಅವಿಹಿತಭಕ್ತಿಗಳಿಗೆ ಮುನಿಗಳು ಒಂಬತ್ತು ಅಂಗಗಳನ್ನು ಹೇಳಿರುವರು. ಅವುಯಾವುದೆಂದರೆ: ಶ್ರವಣ, ಕೀರ್ತನ, ಸ್ಮರಣ, ಸೇವನ, ದಾಸ್ಯ, ಅರ್ಚನ, ವಂದನ, ಸಖ್ಯ, ಆತ್ಮಾರ್ಪಣೆ. ಇವುಗಳಲ್ಲದೆ, ಭಕ್ತಿಗೆ ಇನ್ನು ಅನೇಕ ಉಪಾಂಗಗಳು ಹೇಳಲ್ಪಟ್ಟಿವೆ. ಈಗ ಆ ಒಂಬತ್ತು ಅಂಗಗಳ ಲಕ್ಷಣಗಳನ್ನು ಬೇರೆ ಬೇರೆಯಾಗಿ ಹೇಳುವೆ. ಭೋಗ ಮತ್ತು ಮುಕ್ತಿ ಸಾಧಕಗಳಾದ ಆ ಲಕ್ಷಣಗಳನ್ನು ಸ್ಥಿರವಾದ ಮನಸ್ಸಿನಿಂದ ಕೇಳು’ ಎಂದು ಮಹಾಶಿವ ಭಕ್ತಿಯ ಅಂಗಗಳ ಸ್ವರೂಪಗಳನ್ನು ಪತ್ನಿ ಸತಿದೇವಿಗೆ ಹೇಳತೊಡಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT