ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ: ಭಕ್ತಪರಾಧೀನ ಮಹಾಶಿವ

ಅಕ್ಷರ ಗಾತ್ರ

ಸತಿಗೆ ಮಹಾಶಿವನು ಭಕ್ತಿಯ ಒಂಬತ್ತು ಅಂಗಗಳನ್ನು ತಿಳಿಸುತ್ತಾನೆ. ನಿತ್ಯವೂ ಸ್ಥಿರವಾದ ಮನಸ್ಸಿನಿಂದ ಶಿವಪುರಾಣವನ್ನು ಆದರವಿಟ್ಟು ಕೇಳುವುದು ‘ಶ್ರವಣ’. ಶಿವನನ್ನು ಧ್ಯಾನಿಸುತ್ತಾ, ಅವನ ಅವತಾರಾದಿ ಲೀಲಾವಿಭೂತಿಗಳನ್ನು ನಿತ್ಯವೂ ಪ್ರೀತಿಯಿಂದ ಗಟ್ಟಿಯಾಗಿ ಉಚ್ಚರಿಸುವುದು ‘ಕೀರ್ತನ’. ಶಿವನು ಸದಾ ಎಲ್ಲೆಡೆಯಲ್ಲಿಯೂ ಇರುವನೆಂದು ತಿಳಿದು, ಯಾವ ಭಯವೂ ಇಲ್ಲದೇ ಸ್ಮರಿಸುವುದು ‘ಸ್ಮರಣ’. ಪಂಚಕರ್ಮೇಂದ್ರಿಯಗಳು, ಪಂಚಜ್ಞಾನೇಂದ್ರಿಯಗಳು ಮತ್ತು ಶುದ್ಧ ಮನಸ್ಸಿನಿಂದ ಸದಾ ಶಿವನನ್ನು ಸೇವಿಸುತ್ತಾ, ಅದರಿಂದುಂಟಾಗುವ ಆನಂದಾಮೃತದಿಂದ ಸಂತೋಷಪಡುವುದೇ ‘ದಾಸ್ಯ’. ಈ ದಾಸ್ಯವು ತನಗೆ ಬಹು ಪ್ರಿಯವಾದುದು ಎನ್ನುತ್ತಾನೆ.

ಪರಮಾತ್ಮನಾದ ಶಿವನಿಗೆ ಶಕ್ತಿಗನುಸಾರವಾಗಿ ಪಾದ್ಯ ಮೊದಲಾದ ಷೋಡಶೋಪಚಾರಗಳನ್ನು ಮಾಡುವುದು ‘ಅರ್ಚನ’. ಮಂತ್ರವನ್ನುಚ್ಚರಿಸುತ್ತಾ, ಮನಸ್ಸಿನಲ್ಲಿ ಧ್ಯಾನಿಸುತ್ತಾ, ‘ಉರಸಾ ಶಿರಸಾ ಭಕ್ತ್ಯಾ ಮನಸಾ ವಚಸಾ ತಥಾ | ಪದ್ಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಾಮೋಷ್ಟಾಂಗ ಈರಿತಃ’ ಎಂದು ಹೇಳಿ ಅಷ್ಟಾಂಗಪ್ರಣಾಮಗಳನ್ನು ಮಾಡುವುದು ‘ವಂದನ’. ಒಳ್ಳೆಯದಾಗಲೀ ಕೆಡುಕಾಗಲೀ ಯಾವುದನ್ನು ಈಶ್ವರನು ಮಾಡಿಸುವನೋ ಅವೆಲ್ಲವೂ ನಮಗೆ ಒಳ್ಳೆಯದಕ್ಕಾಗಿಯೇ ಮಂಗಳಕ್ಕಾಗಿಯೇ ಎಂದು ವಿಶ್ವಾಸವಿಡುವುದು ‘ಸಖ್ಯ’. ತನ್ನ ಶರೀರ ಸೇರಿದಂತೆ ಎಲ್ಲವನ್ನೂ ಈಶ್ವರನಿಗೆ ಭಕ್ತಿಯಿಂದ ಅರ್ಪಿಸುವುದೇ ‘ಆತ್ಮಸಮರ್ಪಣ’. ಈ ಒಂಬತ್ತು ಭಕ್ತಿಯ ಅಂಗಗಳು. ತನ್ನನ್ನು ಭಕ್ತಿಯಿಂದ ಒಲಿಸಿಕೊಳ್ಳುವ ಲಕ್ಷಣಗಳು. ಇವುಗಳು ತನಗೆ ಅತಿ ಪ್ರಿಯವಾದುವು ಎನ್ನುತ್ತಾನೆ, ಪರಮಶಿವ.

ಇನ್ನು ಬಿಲ್ವಸೇವೆ ಮುಂತಾದ ಅನೇಕ ಉಪಾಂಗಗಳ ಬಗ್ಗೆ ಬೇರೆ ಬೇರೆ ಗ್ರಂಥಗಳಿಂದ ತಿಳಿದು ಅನುಷ್ಠಾನ ಮಾಡಬೇಕು. ಅಂಗ ಮತ್ತು ಉಪಾಂಗಗಳಿಂದ ಕೂಡಿದ ಶಿವಭಕ್ತಿಯು ಜ್ಞಾನವೈರಾಗ್ಯಗಳನ್ನು ಉಂಟುಮಾಡುತ್ತದೆ. ಆ ಮೂಲಕ ಮುಕ್ತಿಯನ್ನು ಕೊಡುತ್ತದೆ. ಆ ಭಕ್ತಿಯಿಂದ ಸಕಲ ಕರ್ಮಗಳ ಫಲವು ಲಭಿಸುತ್ತದೆ. ಮೂರು ಲೋಕಗಳಲ್ಲಿ ಮತ್ತು ನಾಲ್ಕು ಯುಗಗಳಲ್ಲೂ ಸಹ ಭಕ್ತಿಯಂತಹ ಸುಖಸಾಧನವಾದ ಮಾರ್ಗವು ಇನ್ನೊಂದಿಲ್ಲ. ಅದರಲ್ಲೂ ಕಲಿಯುಗದಲ್ಲಿ ಭಕ್ತಿಯೇ; ಭಗವಂತನ ಸಾಕ್ಷಾತ್ಕಾರವನ್ನುಂಟುಮಾಡುವುದು. ಅದರಂತೆ ಮಿಕ್ಕ ಯುಗಗಳಲ್ಲೂ ಭಕ್ತಿಯು ಫಲವನ್ನು ಕೊಡುವುದು. ಆ ಭಕ್ತಿಗೆ ನಾನು ಯಾವಾಗಲೂ ಅಧೀನನಾಗಿರುವೆ ಎನ್ನುತ್ತಾನೆ ಸತೀವಲ್ಲಭ.

‘ಎಲೈ ಪ್ರಿಯ ಸತೀ, ನಿನ್ನನ್ನು ಪ್ರೀತಿಸುವಷ್ಟೇ, ಭಕ್ತರನ್ನು ಸಹ ಪ್ರೀತಿಸುತ್ತೇನೆ. ನನ್ನ ಭಕ್ತರ ರಕ್ಷಣೆಗೆ ಸದಾ ಸನ್ನದ್ಧನಾಗಿರುತ್ತೇನೆ. ನನ್ನ ಭಕ್ತರನ್ನು ಕೆಣಕುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ನನ್ನ ಭಕ್ತನನ್ನು ಹಿಂಸಿಸಿದ ಯಮನನ್ನೇ ನನ್ನ ಮೂರನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ್ದೇನೆ. ಭಕ್ತನ ರಕ್ಷಣೆಗಾಗಿ ಸೂರ್ಯನ ಮೇಲೇರಿ ಹೋಗಿ ತ್ರಿಶೂಲದಿಂದ ಇರಿದಿದ್ದೇನೆ. ನನ್ನ ಭಕ್ತನಾದ ರಾಮನಿಗಾಗಿಯೇ ರಾವಣನನ್ನು ರಕ್ಷಿಸಲಿಲ್ಲ. ಭಕ್ತನಿಗಾಗಿಯೇ ವ್ಯಾಸಮುನಿಯನ್ನು ನಂದಿಯ ಮೂಲಕ ಕಾಶಿಯಿಂದ ಓಡಿಸಿದೆ. ನಾನು ಸದಾ ಭಕ್ತಿಗೆ ಅಧೀನ’ ಎನ್ನುತ್ತಾನೆ ಶಿವ.

ಶಿವನ ಮಾತು ಕೇಳಿ ಸಂತುಷ್ಟಳಾದ ಸತೀದೇವಿ, ಜೀವಾತ್ಮರನ್ನು ಉದ್ಧರಿಸುವ ಭಕ್ತಿಕಾಂಡದ ಶಾಸ್ತ್ರ, ಯಂತ್ರಶಾಸ್ತ್ರ, ಮಂತ್ರಶಾಸ್ತ್ರ ಮತ್ತು ಅವುಗಳ ಮಹಾತ್ಮೆ ಹಾಗೂ ಇತರೆ ಧರ್ಮಶಾಸ್ತ್ರಗಳನ್ನು ತಿಳಿಸಬೇಕೆಂದು ಮತ್ತೆ ಕೋರುತ್ತಾಳೆ. ಆಗ ಮಹಾಶಿವನು ಮುಕ್ತಿ ಹೊಂದುವ ಭಕ್ತಿ ಮಾರ್ಗಗಳನ್ನ ಹೇಳುತ್ತಾನೆ. ಆಯಾಯಾ ದೇವತೆಗಳ ಯಂತ್ರಶಾಸ್ತ್ರ, ಮಂತ್ರಶಾಸ್ತ್ರ, ಪಂಚಾಯತನ, ಮಹಾತ್ಮೆಗಳನ್ನು ವರ್ಣಿಸಿ, ಧರ್ಮಶಾಸ್ತ್ರ, ಇತಿಹಾಸ, ಭಕ್ತರ ಮಹಾತ್ಮೆ, ರಾಜಧರ್ಮ, ಸುತಧರ್ಮ, ಸ್ತ್ರೀಧರ್ಮವನ್ನಲ್ಲದೆ, ವೈದ್ಯಶಾಸ್ತ್ರ, ಜ್ಯೋತಿಶಾಸ್ತ್ರ, ಸಾಮುದ್ರಿಕಶಾಸ್ತ್ರ ಮುಂತಾದ ಜನರಿಗೆ ಅನುಕೂಲವಾಗುವಂಥ ಅನೇಕ ಶಾಸ್ತ್ರಗಳನ್ನು ಸತೀದೇವಿಗೆ ವಿಸ್ತಾರವಾಗಿ ತಿಳಿಸುತ್ತಾನೆ. ಇದನ್ನು ಕೇಳಿದ ಸತೀದೇವಿ ಧನ್ಯತಾಭಾವದಿಂದ ಪತಿ ಪರಮೇಶ್ವರನಿಗೆ ಪ್ರೀತಿಯಿಂದ ಪ್ರಣಾಮಗಳನ್ನು ಸಲ್ಲಿಸುತ್ತಾಳೆ.

ಹೀಗೆ ಶಿವ–ಸತೀ –ದಾಂಪತ್ಯದ ಕಥೆ ಮತ್ತು ಲೀಲಾವಿನೋದಗಳನ್ನು ನಾರದನಿಗೆ ಹೇಳುತ್ತಾನೆ, ಬ್ರಹ್ಮ. ಮೂರು ಲೋಕಗಳಿಗೂ ಸುಖವನ್ನುಂಟುಮಾಡುವ ಸರ್ವಜ್ಞರು, ಲೋಕೋಪಕಾರಕ್ಕಾಗಿ ಸಗುಣರೂಪವನ್ನು ಧರಿಸಿ ಪರಬ್ರಹ್ಮಸ್ವರೂಪಿಗಳೂ ಆದಂಥ ಸತೀಪರಮೇಶ್ವರರು ಕೈಲಾಸದಲ್ಲಿ, ಹಿಮತ್ಪರ್ವತದಲ್ಲಿ ಸಂತೋಷದಿಂದ ವಿಹರಿಸಿದರು ಎಂಬಲ್ಲಿಗೆ ಸತೀಖಂಡದ ಇಪ್ಪತ್ತಮೂರನೇ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT