ಗುರುವಾರ , ಆಗಸ್ಟ್ 18, 2022
25 °C

ವೇದವ್ಯಾಸರ ಶಿವಪುರಾಣ ಸಾರ: ವಿರಹಿರಾಮನಿಗೆ ನಮಿಸಿದ ಶಿವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಬ್ರಹ್ಮನು ಸತೀ ಮತ್ತು ಶಿವರ ಚರಿತ್ರೆಯನ್ನು ಮುಂದುವರೆಸುತ್ತಾನೆ.

ಸತೀ–ಶಿವರು ಲೋಕಾಚಾರದಂತೆ ಬಹುಕಾಲ ವಿಹರಿಸಿದ ನಂತರ, ಸತೀದೇವಿಗೆ ಶಂಕರನ ವಿಯೋಗ ಬಂದಿತೆಂದು ಕೆಲವರು ಹೇಳುತ್ತಾರೆ. ಆದರೆ ಸದಾ ಸಂಯುಕ್ತರಾಗಿರುವ ಆದಿದಂಪತಿಗಳಾದ ಶಿವಸತಿಯರಿಗೆ ‘ವಿಯೋಗ’ ಎಂಬ ಶಬ್ದವೇ ಅರ್ಥಹೀನವಾದುದು. ಲೀಲಾಮಾನುಷರೂಪರಾದ ಸತೀಶಿವರು ಕೇವಲ ಲೀಲೆಗಾಗಿಯೇ ತಮ್ಮಲ್ಲಿ ವಿಯೋಗವನ್ನು ಉಂಟುಮಾಡಿಕೊಂಡರೆಂದು ಮಾತ್ರ ಹೇಳಬಹುದಾಗಿದೆ ಎಂದು ಬ್ರಹ್ಮನು ಅಭಿಪ್ರಾಯಪಡುತ್ತಾನೆ.

ಸತೀದೇವಿಯು ದಕ್ಷಬ್ರಹ್ಮನ ಯಾಗದಲ್ಲಿ ತನ್ನ ಪತಿಯಾದ ಶಂಕರನ ನಿಂದೆಯನ್ನು ಕೇಳಲಾರದೆ ದುಃಖದಿಂದ ಅಗ್ನಿಯಲ್ಲಿ ತನ್ನ ಶರೀರವನ್ನು ಬಿಟ್ಟು, ಮುಂದೆ ಆ ಸತಿಯೇ ಹಿಮವಂತನ ಪತ್ನಿಯಲ್ಲಿ ಪಾರ್ವತೀರೂಪದಿಂದ ಜನಿಸಿದಳು. ಸತೀದೇವಿಯಂತೆಯೇ ಪಾರ್ವತಿ ಸಹ ತಪಸ್ಸು ಮಾಡಿ, ಮತ್ತೆ ಶಿವನನ್ನು ವರಿಸಿದಳು ಎಂದು ಹೇಳುತ್ತಾನೆ ಬ್ರಹ್ಮ. ಆಗ ನಾರದಮುನಿ ‘ಓ ತಂದೆಯೇ, ಪ್ರಾಣಪ್ರಿಯಳಾದ ಸತೀದೇವಿ ಯನ್ನು ಶಂಕರನು ಏಕೆ ತ್ಯಜಿಸಿದ? ನಿನ್ನ ಪುತ್ರನಾದ ದಕ್ಷನು ಯಜ್ಞದಲ್ಲಿ ಶಂಕರನನ್ನು ನಿಂದಿಸಲು ಕಾರಣವೇನು? ಸತೀದೇವಿಯಾದರೂ ಆ ಯಾಗಕ್ಕೆ ಹೋಗಿ ತನ್ನ ಶರೀರವನ್ನು ಹೇಗೆ ಬಿಟ್ಟಳು? ಇದೆಲ್ಲವನ್ನು ವಿಸ್ತರಿಸಿ ಹೇಳು’ ಎಂದು ಕೋರುತ್ತಾನೆ.

‘ಎಲೈ ನಾರದ, ಈ ಜಗತ್ತೆಲ್ಲವೂ ಶಿವನ ಲೀಲೆಯಿಂದಾದ ಮಾಯ ಪ್ರಪಂಚ. ಅವನು ಸೃಷ್ಟಿಸಹಜ ವಿಕಾರಗಳಿಲ್ಲದವನು. ಸತೀದೇವಿಯೂ ಅವನ ಸ್ವರೂಪಳಾದ ಆದಿಶಕ್ತಿ. ಶಿವಲೀಲೆಯನ್ನು ಶಿವನ ಹೊರತು ಬೇರಾರು ಪ್ರದರ್ಶಿಸಲಾರರು. ಏಕೆಂದರೆ ಆ ಶಿವನು ಪರಮಾತ್ಮ ಹಾಗೂ ಪರಬ್ರಹ್ಮಸ್ವರೂಪ. ಆ ಪರಮೇಶ್ವರನನ್ನು ನಾನೂ ಸೇರಿದಂತೆ ಹರಿ ಮೊದಲಾದ ದೇವತೆಗಳೂ ಮುನಿಗಳೂ ಸಿದ್ಧರೂ ಮಹಾತ್ಮರಾದ ಸನಕಾದಿಮುನಿಗಳೆಲ್ಲರೂ ಭಜಿಸುವರು. ಆದಿಶೇಷನು ಸದಾ ತನ್ನ ಸಾವಿರ ನಾಲಿಗೆಗಳಿಂದ ಶಿವನ ಯಶಸ್ಸನ್ನು ಗಾಯನ ಮಾಡುವನು. ಇಂತಹ ಅಪಾರ ಮಹಿಮೆಯುಳ್ಳ ಶಿವನ ಲೀಲೆಯಿಂದಲೇ ಜಗತ್ತೆಲ್ಲವೂ ಕಾಣಿಸುತ್ತಿದೆ’ ಎಂದ ಬ್ರಹ್ಮ ಮತ್ತೆ ಶಿವಸತೀಯರ ಕಥೆಯನ್ನ ಹೇಳತೊಡಗುತ್ತಾನೆ.

ಒಮ್ಮೆ ಶಿವನು ನಂದಿಯನ್ನೇರಿ ಸತೀದೇವಿಯೊಡನೆ ಭೂಮಿಯನ್ನು ಸಂಚರಿಸುತ್ತಾ ದಂಡಕಾರಣ್ಯಕ್ಕೆ ಬರುತ್ತಾನೆ. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸತೀದೇವಿಗೆ ತೋರಿಸಿ, ಆನಂದಿಸುತ್ತಿರುವಾಗ ರಾಮ ಕಾಣಿಸುತ್ತಾನೆ. ರಾವಣನ ಮೋಸದಿಂದ ಅಪಹೃತಳಾದ ತನ್ನ ಪತ್ನಿ ಸೀತಾದೇವಿ ಯನ್ನು ಹುಡುಕುತ್ತಾ ಲಕ್ಷ್ಮಣನೊಡನೆ ರಾಮ ಸಂಚರಿಸುತ್ತಿದ್ದ. ಈ ಸಂದರ್ಭದಲ್ಲಿ ರಾಮ ತನ್ನ ಪತ್ನಿ ಸೀತೆಯನ್ನು ಕಾಣದೆ ದುಃಖಿತನಾಗಿ ಪ್ರಲಾಪಿಸುತ್ತಿದ್ದ. ಕಾಡಿನ ಮರ-ಗಿಡ, ಪ್ರಾಣಿ-ಪಕ್ಷಿಗಳನ್ನು ‘ಸೀತೆಯನ್ನು ನೀವು ಕಂಡಿರಾ ಅವಳೆಲ್ಲಿದ್ದಾಳೆ?’ ಎಂದು ಕೇಳುತ್ತಲಿದ್ದ.

ಅಯೋಧ್ಯಾನಗರದ ಸೂರ್ಯವಂಶದ ದಶರಥನೆಂಬ ರಾಜನ ಮಗನಾದ ರಾಮ ತನ್ನ ಪತ್ನಿ ಸೀತೆಯನ್ನು ಕಳೆದುಕೊಂಡು ವಿರಹದಿಂದ ದುಃಖಿತನಾಗಿ ಸಂಚರಿಸುತ್ತಲಿದ್ದ. ಇದನ್ನು ಕಂಡ ಆಪ್ತಕಾಮನಾದ ಶಿವನು, ಸೀತೆಯನ್ನು ಹುಡುಕುತ್ತಾ ಅರಣ್ಯದಲ್ಲಿ ಲಕ್ಷ್ಮಣನೊಡನೆ ಸಂಚರಿಸುತ್ತಿದ್ದ ರಾಮನಿಗೆ ನಮಸ್ಕಾರಮಾಡಿ, ‘ಜಯಶೀಲನಾಗು’ ಎಂದು ಹರಸಿ, ಮರೆಯಾದ. ಇದನ್ನು ನೋಡಿ ಸತೀದೇವಿಯು ತುಂಬಾ ಆಶ್ಚರ್ಯಗೊಂಡು, ಹೀಗೇಕೆ ಮಾಡಿದೆ ಎಂದು ಶಿವನನ್ನು ಪ್ರಶ್ನಿಸಿದಳು.

‘ಓ ಪರಮೇಶ್ವರ, ನೀನು ದೇವದೇವನು, ಪರಬ್ರಹ್ಮಸ್ವರೂಪನು, ಸರ್ವೇಶ್ವರನು. ಇಂತಹ ನಿನ್ನನ್ನು ವಿಷ್ಣು ಬ್ರಹ್ಮ ಮೊದಲಾದ ದೇವತೆಗಳು ಸದಾ ಸೇವಿಸುವರು. ಜನ್ಮ ಮೊದಲಾದ ವಸ್ತುವಿಕಾರವಿಲ್ಲದ ಪರಮಾತ್ಮನಾದ ನಿನ್ನನ್ನೇ ಎಲ್ಲರೂ ನಮಸ್ಕರಿಸಬೇಕು, ಸೇವಿಸಬೇಕು, ಧ್ಯಾನಿಸಬೇಕು. ಅಂತಹ ಮಹಾಮಹಿಮನಾದ ನೀನು, ಕಾಡಿನಲ್ಲಿ ಸಂಚರಿಸು ತ್ತಿರುವ ಇಬ್ಬರು ಪುರುಷರಲ್ಲಿ ಕನ್ನೈದಿಲೆಯಂತೆ ನೀಲವರ್ಣದವನನ್ನು ನೋಡಿ ಸಂತೋಷಗೊಳ್ಳಲು ಕಾರಣವೇನು? ಭಕ್ತನಂತೆ ಅವನಿಗೆ ಏಕೆ ನಮಸ್ಕರಿಸಿದೆ? ಈ ಪುರುಷರೀರ್ವರು ಯಾರು? ಅವರು ಮಹಾವೀರರಿಗೆ ತಕ್ಕಂತೆ ಧನುಸ್ಸನ್ನು ಧರಿಸಿದ್ದಾರೆ. ಆದರೆ ದುಃಖದಿಂದ ಈ ವನದಲ್ಲಿ ಸಂಚರಿಸುತ್ತಿರುವಂತೆ ಕಾಣಿಸುತ್ತಿದೆ. ಇಂಥವರಿಗೆ ಸ್ವಾಮಿ ಯಾದ ನೀನು, ಸೇವಕನಂತೆ ಏಕೆ ನಮಸ್ಕರಿಸಿದೆ’ ಎಂದು ಕೇಳಿದಳು. ಸತೀದೇವಿಯ ಮಾತುಗಳನ್ನು ಕೇಳಿ ಲೀಲಾಮಯನಾದ ಶಿವ ಮಂದಹಾಸವನ್ನು ಸೂಸಿದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು