ಮಂಗಳವಾರ, ಡಿಸೆಂಬರ್ 6, 2022
21 °C

ವೇದವ್ಯಾಸರ ಶಿವಪುರಾಣಸಾರ: ನಾರದನ ನಿಂದಿಸಿದ ಮೇನಾದೇವಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಮೇನಾದೇವಿ ಕೆಲಕಾಲದ ನಂತರ ಎಚ್ಚೆತ್ತಳು. ತಿರಸ್ಕಾರಭಾವದಿಂದ ತನ್ನ ಮಕ್ಕಳನ್ನು ನೋಡಿದಳು. ಮುಖ್ಯವಾಗಿ ಪಾರ್ವತಿಯನ್ನೂ ಚೆನ್ನಾಗಿ ಬೈದಳು. ದುಃಖದಿಂದ ಪ್ರಲಾಪಿಸಿದಳು. ಮಗಳು ಪಾರ್ವತೀ ವಿಕಾರರೂಪದ ಶಿವನನ್ನು ಮದುವೆಯಾಗಲು ನಾರದನೇ ಕಾರಣ ಎಂದು ದೂಷಿಸಿದಳು.

‘ಎಲೈ ನಾರದ, ನೀನು ಮೋಸಗಾರ. ತಿಳಿವಳಿಕೆಯಿಲ್ಲದ ನಮ್ಮನ್ನು ಮೋಸಗೊಳಿಸಿರುವೆ. ನಿನ್ನ ಕಪಟವಾದ ಮಾತುಗಳನ್ನು ನಂಬಿ ನನ್ನ ಮಗಳು ಯಾವ ಮುನಿಗಳೂ ಮಾಡಲು ಅಸಾಧ್ಯವಾದ ಘೋರತಪಸ್ಸಾಚರಿಸಿದಳು. ಆದರೆ ಆ ತಪಸ್ಸಿಗೆ ಇಂತಹ ವಿಕಾರನಾದ ಗಂಡ ಸಿಗಬೇಕೇ’ ಎಂದು ಗೋಳಾಡಿದ ಮೇನಾದೇವಿಯ ಕೋಪ ಸಪ್ತರ್ಷಿಗಳ ಕಡೆ ತಿರುಗಿತು.

‘ಶಿವನಿಗೆ ಪಾರ್ವತಿಯನ್ನು ಧಾರೆ ಎರೆದುಕೊಡುವಂತೆ ನನ್ನನ್ನು ಮರಳುಗೊಳಿಸಿದ ಆ ಸಪ್ತರ್ಷಿಗಳು ಎಲ್ಲಿ ಹೋದರು? ನನಗೆ ಮಾಡಿರುವ ದ್ರೋಹಕ್ಕಾಗಿ ಅವರ ಗಡ್ಡವನ್ನು ಕಿತ್ತುಬಿಸಾಡುತ್ತೇನೆ. ಮಹಾತಪಸ್ವಿನಿ ಎನಿಸಿಕೊಂಡ ಅರುಂಧತಿ ಸಹ ಮಹಾ ಮೋಸಗಾತಿ. ಅವಳು ಕೈಗೆ ಸಿಕ್ಕರೆ ಸರಿಯಾಗಿ ಶಿಕ್ಷಿಸುತ್ತೇನೆ’ ಎಂದು ಅಬ್ಬರಿಸಿದಳು.

ಇಂತಹ ಮೋಸಗಾರರಿಂದ ತನ್ನ ಸರ್ವಸ್ವವೂ ಹಾಳಾಯಿತು ಎಂದು ಪ್ರಲಾಪಿಸುತ್ತಿದ್ದ ಮೇನಾದೇವಿಯನ್ನು ಸಮಾಧಾನಿಸಲು ಬಂದ ಪಾರ್ವತಿಯನ್ನು ನೋಡಿ ಮತ್ತಷ್ಟು ಸಿಡಿಮಿಡಿಗೊಂಡಳು. ‘ನನಗೆ ಇಷ್ಟವಿಲ್ಲದ ಕಾರ್ಯವನ್ನು ಏಕೆ ಮಾಡಿದೆ? ಬುದ್ಧಿಹೀನಳಾಗಿ ವಿಕಾರರೂಪದ ಗಂಡನನ್ನು ಪಡೆಯಲು ವರ್ಷಗಟ್ಟಲೇ ತಪಸ್ಸು ಮಾಡಿದೆಯಲ್ಲ. ಚಿನ್ನವನ್ನು ಕೊಟ್ಟು ನೀನು ಗಾಜನ್ನು ಪಡೆದುಕೊಂಡಂಥ ಶತಮೂರ್ಖಳಾಗಿರುವೆ. ಚಂದನವನ್ನು ಬಿಟ್ಟು ಕೆಸರನ್ನು ಮೈಗೆ ಬಳಿದುಕೊಂಡಿರುವೆ. ಹಂಸವನ್ನು ಹಿಡಿಯಲು ಹೋಗಿ ಕಾಗೆಯನ್ನು ಹಿಡಿದಿರುವೆ. ಹತ್ತಿರ ಸಿಗುವಂತಹ ಪವಿತ್ರಜಲವನ್ನು ಬಿಟ್ಟು ದೂರದಲ್ಲಿನ ಕೊಚ್ಚೆಯ ನೀರನ್ನು ಕುಡಿದಿರುವೆ. ಸೂರ್ಯನನ್ನು ಬಿಟ್ಟು, ದೀಪದ ಹುಳವನ್ನು ಹಿಡಿದುಕೊಂಡಿರುವೆ. ಅಕ್ಕಿಯನ್ನು ಬಿಟ್ಟು ನೀನು ಹೊಟ್ಟನ್ನು ಭಕ್ಷಿಸುತ್ತಿರುವೆ. ತುಪ್ಪವನ್ನು ಬಿಟ್ಟು ಹರಳೆಣ್ಣೆಯನ್ನು ಕುಡಿದಿರುವೆ. ಸಿಂಹವನ್ನು ಬಿಟ್ಟು ನರಿಯನ್ನು ಸೇವಿಸಿರುವೆ. ಪವಿತ್ರವಾದ ಯಜ್ಞಭಸ್ಮವನ್ನು ಬಿಟ್ಟು, ನೀನು ಅಪವಿತ್ರವಾದ ಸ್ಮಶಾನದ ಬೂದಿಯನ್ನು ಸ್ವೀಕರಿಸಿರುವೆ. ನೀನು ಬುದ್ಧಿಯಿಲ್ಲದೇ ಶಿವನನ್ನು ಕುರಿತು ತಪಸ್ಸು ಮಾಡಿದೆ. ನಿನಗೆ ಎಂತಹ ಸುಂದರರೂಪವಿದ್ದರೇನು ಪ್ರಯೋಜನ? ನಿನಗೆ ಬಂಗಾರ ಯಾವುದು, ಕಾಗೆ ಬಂಗಾರ ಯಾವುದೆಂಬುದನ್ನು ತಿಳಿಯದಷ್ಟು ದಡ್ಡಳಾಗಿರುವೆ. ನೀನು ಮಾಡಿದ ಕಾರ್ಯ, ಅದನ್ನು ಮಾಡುವಂತೆ ಉಪದೇಶಮಾಡಿದ ದುಷ್ಟರು, ನಿನಗೆ ಈ ಕೆಟ್ಟ ಕೆಲಸದಲ್ಲಿ ನೆರವಾದ ನಿನ್ನ ಸಖಿಯರೂ ಬಹುನಿಂದ್ಯರು. ನಾರದ, ನಿನಗೂ ನಿನ್ನ ಬುದ್ಧಿಗೂ ಧಿಕ್ಕಾರವಿರಲಿ. ನಿನ್ನ ಕುಲಕ್ಕೂ ಕಾರ್ಯಕ್ಕೂ ಧಿಕ್ಕಾರ. ಕೆಟ್ಟ ಬುದ್ಧಿಯನ್ನು ಉಪದೇಶಿಸಿದ ಸಪ್ತರ್ಷಿಗಳಿಗೂ ಧಿಕ್ಕಾರ. ನನ್ನ ಮನೆಗೆ ಬೆಂಕಿಯನ್ನು ನೀವು ಹತ್ತಿಸಿರುವಿರಿ. ನೀವೆಲ್ಲರೂ ಸೇರಿ ಏನನ್ನು ಸಾಧಿಸಿರುವಿರಿ? ನಮ್ಮ ಕುಲವನ್ನೇ ಹಾಳುಮಾಡಿದಿರಿ. ಇದರಿಂದ ನನ್ನ ಮರಣವಾಗುವುದು ನಿಶ್ಚಿತ. ನಾನು ಬಂಜೆಯಾಗಿದ್ದರೂ ಚೆನ್ನಾಗಿತ್ತು. ನನ್ನ ಗರ್ಭವಾದರೂ ಆಗಲೇ ಬಿದ್ದು ಹೋಗಬೇಕಿತ್ತು. ಆಗಲೇ ನಾನು ಸತ್ತಿದ್ದರೆ ಚೆನ್ನಾಗಿತ್ತು. ಅಯ್ಯೋ! ನನ್ನ ಜೀವನವೇ ಹಾಳಾಯಿತಲ್ಲಾ!’ ಎಂದು ಪ್ರಲಾಪಿಸುತ್ತಾ, ಮೇನಾದೇವಿ ಮತ್ತೆ ಮೂರ್ಛೆಗೊಂಡು ನೆಲಕ್ಕೆ ದೊಪ್ಪನೆ ಬಿದ್ದಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು