ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ-19: ರುದ್ರ ಕೈಲಾಸ ಸಂಹಿತೆಗಳೇ ಶ್ರೇಷ್ಠ

ಅಕ್ಷರ ಗಾತ್ರ

ಶಿವಪುರಾಣದಲ್ಲಿರುವ ಕೈಲಾಸಸಂಹಿತೆ ಎಂಬುದು ರುದ್ರಸಂಹಿತೆಗಿಂತಲೂ ಅತ್ಯಂತ ಉತ್ಕೃಷ್ಟವಾದುದು. ಅದು ಸರ್ವವೇದಗಳಿಗೂ ಮೂಲವಾದ ಪ್ರಣವದ ಅರ್ಥವನ್ನು ಪ್ರಕಾಶಪಡಿಸುವುದು. ಆದ್ದರಿಂದ ಕೈಲಾಸಸಂಹಿತೆ ಸಾಕ್ಷಾತ್ ಬ್ರಹ್ಮಸ್ವರೂಪವೇ ಆಗಿದೆ. ಪರಮಪವಿತ್ರವಾದ ಕೈಲಾಸಸಂಹಿತೆಯ ಮಹಾತ್ಮೆಯನ್ನು ಸಾಕ್ಷಾತ್ ಪರಮೇಶ್ವರನೊಬ್ಬ ಮಾತ್ರ ಸಂಪೂರ್ಣವಾಗಿ ಬಲ್ಲ. ನನ್ನ ಗುರುವಾದ ವ್ಯಾಸಮಹರ್ಷಿಯು ಅರ್ಧವನ್ನೂ, ನಾನು ಅದರಲ್ಲರ್ಧವನ್ನೂ ಬಲ್ಲೆನು. ಆದುದರಿಂದ ಅದರ ಮಹಾತ್ಮೆಯನ್ನು ಸ್ವಲ್ಪಮಟ್ಟಿಗೆ ನಿಮಗೆ ಹೇಳುವೆನು. ಕೈಲಾಸಸಂಹಿತೆಯನ್ನು ತಿಳಿಯುವವನು ತಕ್ಷಣದಲ್ಲಿಯೇ ಚಿತ್ತಶುದ್ಧಿ ಪಡೆವನು ಎನ್ನುತ್ತಾನೆ, ಸೂತಮುನಿ.

ಶಿವಪುರಾಣದಲ್ಲಿ ರುದ್ರಸಂಹಿತೆ ಮತ್ತು ಕೈಲಾಸಸಂಹಿತೆಗಳಲ್ಲದೆ, ಇನ್ನೂ ಕೆಲ ಸಂಹಿತೆಗಳಿವೆ. ಅವೂ ಸರ್ವ ಇಷ್ಟಾರ್ಥಗಳನ್ನು ಕೊಡುತ್ತವೆ. ಆದರೆ ರುದ್ರ ಮತ್ತು ಕೈಲಾಸಸಂಹಿತೆಗಳು ಪರಮೇಶ್ವರನ ಲೀಲೆಗಳನ್ನೂ ಬ್ರಹ್ಮಜ್ಞಾನವನ್ನೂ ಉಪದೇಶಿಸುವುದರಿಂದ ಈ ಎರಡು ಸಂಹಿತೆಗಳೇ ಉತ್ಕೃಷ್ಟವಾದುವುಗಳು. ಬ್ರಹ್ಮಹತ್ಯೆ ಮತ್ತಿತರ ಮಹಾಪಾತಕಗಳ ಪಾಪನಿವಾರಣೆ ಮಾಡಿಕೊಳ್ಳಲು, ಕೈಲಾಸಸಂಹಿತೆಯನ್ನು ಒಂದು ಮಾಸ ಕಾಲ ಪಠಿಸಿದರೆ ಮುಕ್ತಿಯನ್ನು ಪಡೆಯಬಹುದು. ದುರ್ದಾನ ಪಡೆದವರು, ಮದ್ಯ–ಮಾಂಸಾಹಾರ ಸೇವನೆಮಾಡಿದವರು, ಗುರು-ದೇವಾದಿಗಳನ್ನು ದೂಷಣೆಮಾಡಿದವರು, ಹಲವಾರು ದುಷ್ಕೃತ್ಯಗಳನ್ನು ಮಾಡಿದವರು ಕೈಲಾಸಸಂಹಿತೆಯನ್ನು ಒಂದು ಬಾರಿ ಪಠಿಸುವುದರಿಂದ ತಮ್ಮ ಪಾಪ ತೊಳೆದುಕೊಳ್ಳುವರು. ಶಿವಾಲಯದಲ್ಲಾಗಲಿ, ಬಿಲ್ವವೃಕ್ಷಗಳ ನೆಲೆಯಲ್ಲಾಗಲಿ, ಈ ಸಂಹಿತೆಯನ್ನು ಯಾರು ಪಠಿಸುವನೋ ಅವರು ಬಯಸಿದ ಫಲವನ್ನು ಪಡೆಯುವರು.

ವ್ಯಾಸರು ರಚಿಸಿದ ಸ್ಕಂದಪುರಾಣದಲ್ಲಿ ಬರುವ ಶಿವಪುರಾಣಮಹಾತ್ಮೆಯಲ್ಲಿ ಶಿವಮಹಾಪುರಾಣದಲ್ಲಿದ್ದ ಹನ್ನೆರಡು ಸಂಹಿತೆಗಳು ಹೇಗೆ ವ್ಯಾಸರಿಂದ ಏಳು ಸಂಹಿತೆಗಳಿಗೆ ಸಂಕ್ಷೇಪವಾದವೆಂಬ ವಿವರವೂ ಇದೆ. ಶಿವಮಹಾಪುರಾಣದ ಹಿಂದಿನ ಹನ್ನೆರಡು ಸಂಹಿತೆಗಳಾವುವೆಂದರೆ ವಿದ್ಯೇಶ್ವರ, ರುದ್ರ, ವಿನಾಯಕ, ಉಮಾ, ಮಾತೃ, ಏಕಾದಶ ರುದ್ರ, ಕೈಲಾಸ, ಶತರುದ್ರ, ಕೋಟಿರುದ್ರ, ಸಹಸ್ರ ಕೋಟಿ ರುದ್ರ, ವಾಯವೀಯ ಮತ್ತು ಧರ್ಮಸಂಹಿತೆಗಳು. ಹಿಂದಿನ ವಿದ್ಯೇಶ್ವರಸಂಹಿತೆಯಲ್ಲಿ ಹತ್ತು ಸಹಸ್ರ ಶ್ಲೋಕ ಇದ್ದರೆ, ವಿನಾಯಕ, ಉಮಾ ಮತ್ತು ಮಾತೃಸಂಹಿತೆಗಳಲ್ಲಿ ಎಂಟು ಸಹಸ್ರ ಶ್ಲೋಕಗಳಿದ್ದವು. ಏಕಾದಶರುದ್ರದಲ್ಲಿ ಹದಿಮೂರು ಸಾವಿರ, ಕೈಲಾಸಸಂಹಿತೆಯಲ್ಲಿ ಆರು ಸಹಸ್ರ, ಶತರುದ್ರದಲ್ಲಿ ಮೂರು ಸಹಸ್ರ, ಕೋಟಿರುದ್ರದಲ್ಲಿ ಒಂಬತ್ತು ಸಾವಿರ, ಸಹಸ್ರ ಕೋಟಿರುದ್ರದಲ್ಲಿ ಹನ್ನೊಂದು ಸಾವಿರ, ವಾಯವೀಯದಲ್ಲಿ ನಾಲ್ಕು ಸಾವಿರ, ಧರ್ಮಸಂಹಿತೆಯಲ್ಲಿ ಹನ್ನೆರಡು ಸಾವಿರ ಶ್ಲೋಕಗಳಿದ್ದವು. ಒಟ್ಟಾರೆ ಒಂದು ಲಕ್ಷ ಶ್ಲೋಕಗಳು ಈ ಶಿವಪ್ರೋಕ್ತವಾದ ಪುರಾಣದಲ್ಲಿತ್ತು.

ಆದಿಸೃಷ್ಟಿಯಲ್ಲಿ, ಅಂದರೆ ಶಿವನಿಂದ ನಿರ್ಮಿತವಾದ ಶಿವಪುರಾಣದಲ್ಲಿ ಒಂದು ನೂರು ಕೋಟಿ ಶ್ಲೋಕಗಳಿದ್ದವಂತೆ. ದ್ವಾಪರ ಯುಗದಲ್ಲಿ ವ್ಯಾಸರಿಂದ ಅದು ನಾಲ್ಕು ಲಕ್ಷ ಶ್ಲೋಕಗಳಿಗೆ ಸಂಕ್ಷೇಪವಾಯಿತು. ಈ ನಾಲ್ಕು ಲಕ್ಷ ಶ್ಲೋಕಗಳಿಂದ ಶಿವಪುರಾಣ ಸೇರಿದಂತೆ ಹದಿನೆಂಟು ಪುರಾಣಗಳನ್ನ ವ್ಯಾಸರು ರಚಿಸಿದರು. ಹೀಗಾಗಿ ವೇದಕ್ಕೆ ಸಮಾನವಾದ ಶಿವಪುರಾಣವು ಆಗ ಇಪ್ಪತ್ತುನಾಲ್ಕು ಸಹಸ್ರ ಶ್ಲೋಕಗಳಿಂದ ಕೂಡಿದ, ಏಳು ಸಂಹಿತೆಗಳಾಗಿ ರಚಿಸಲ್ಪಟ್ಟಿತು. ವೇದವ್ಯಾಸರು ಹನ್ನೆರಡು ಸಂಹಿತೆಗಳನ್ನು ಪರಿಷ್ಕರಿಸಿ, ಏಳು ಸಂಹಿತೆಗಳಾಗಿಸಿದ್ದಲ್ಲದೆ, ಒಂದುಲಕ್ಷ ಶ್ಲೋಕಗಳಿದ್ದ ಶಿವಪುರಾಣಗ್ರಂಥವನ್ನು ಇಪ್ಪತ್ತು ನಾಲ್ಕು ಸಾವಿರ ಶ್ಲೋಕಗಳಿಗೆ ಸಂಕ್ಷೇಪಗೊಳಿಸಿದರು. ಒಟ್ಟಾರೆ, ವ್ಯಾಸರು ಬರೆದ ಎಲ್ಲಾ ಹದಿನೆಂಟು ಮಹಾಪುರಾಣಗಳು ಮಹಾಶಿವನಿಂದ ಸೃಷ್ಟಿಯಾದವು. ವ್ಯಾಸರು ಬರೆದ ಹದಿನೆಂಟು ಮಹಾಪುರಾಣಗಳಲ್ಲಿ ಶಿವಮಹಾಪುರಾಣ ನಾಲ್ಕನೆಯ ಪುರಾಣವೆಂದು ಹೇಳಲಾಗಿದೆ.

ವೇದವ್ಯಾಸರಿಂದ ಸಂಕ್ಷೇಪಗೊಂಡ ಶಿವಪುರಾಣದ ಮೊದಲನೆ ಸಂಹಿತೆ ಹೆಸರು ವಿದ್ಯೇಶ್ವರಸಂಹಿತೆ. ಎರಡನೆಯದು ರುದ್ರಸಂಹಿತೆ. ಮೂರನೆಯದು ಶತರುದ್ರಸಂಹಿತೆ. ನಾಲ್ಕನೆಯದು ಕೋಟಿರುದ್ರಸಂಹಿತೆ, ಐದನೆಯದು ಉಮಾಸಂಹಿತೆ, ಆರನೆಯದು ಕೈಲಾಸಂಹಿತೆ, ಏಳನೆಯದು ವಾವೀಯಸಂಹಿತೆ. ಎರಡನೇ ಸಂಹಿತೆಯಾದ ರುದ್ರಸಂಹಿತೆಯಲ್ಲಿ ಸೃಷ್ಟಿಖಂಡ, ಸತಿಖಂಡ, ಪಾರ್ವತಿಖಂಡ, ಕುಮಾರಖಂಡ ಮತ್ತು ಯುದ್ಧಖಂಡ ಎಂಬ ಐದು ಖಂಡಗಳಿವೆ ಎಂದು ಸೂತಮುನಿಯು ಪ್ರಯಾಗದ ಋಷಿಮುನಿಗಳಿಗೆ ಹೇಳುವುದರೊಂದಿಗೆ ಶಿವಮಹಾಪುರಾಣದ ಮೊದಲನೆ ಸಂಹಿತೆಯಾದ ವಿದ್ಯೇಶ್ವರಸಂಹಿತೆಯ ಎರಡನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT