ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹಿಮವಂತನಿಗೆ ವಸಿಷ್ಠನ ಉಪದೇಶ

ಭಾಗ 249
Last Updated 13 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಪಾರ್ವತಿಯನ್ನು ಶಿವನಿಗೆ ಕೊಡಲು ಇಚ್ಛಿಸದ ಹಿಮವಂತ ದಂಪತಿಗಳ ಮನವೊಲಿಸಲು ವಸಿಷ್ಠ ಪ್ರಯತ್ನಿಸುತ್ತಾನೆ. ‘ಬುದ್ಧಿವಂತನಾದ ಶತ್ರು ಹೇಳುವ ಮಾತು ಮನೋಹರವಾಗಿರುತ್ತೆ. ಆದರೆ ಅದನ್ನು ನಂಬಿದರೆ ಅಹಿತವಾಗುತ್ತದೆ. ಮಿತ್ರ ಹೇಳುವ ಮಾತು ಮೊದಲಿಗೆ ಒಳ್ಳೆಯದಾಗಿ ಕಾಣದಿದ್ದರೂ, ಕೊನೆಯಲ್ಲಿ ಹಿತವಾಗಿರುತ್ತದೆ’ ಎಂದು ಮನದಟ್ಟು ಮಾಡಿಸುತ್ತಾನೆ.

‘ಎಲೈ ಶೈಲರಾಜ, ಶಂಕರನಲ್ಲಿ ಬ್ರಹ್ಮ ನಿರ್ಮಿಸಿದ ಲೌಕಿಕವಾದ ತುಚ್ಛ ಸಂಪತ್ತುಗಳಾವುವೂ ಇಲ್ಲ. ಆತ್ಮಜ್ಞಾನವೆಂಬ ಸಮುದ್ರದಲ್ಲಿ ಸದಾ ಅವನು ಮುಳುಗಿರುತ್ತಾನೆ. ಹೀಗಾಗಿ ಜ್ಞಾನಸ್ವರೂಪನೂ ಆನಂದಮಯನೂ ಆದ ಈಶ್ವರನಿಗೆ ಬಾಹ್ಯವಸ್ತುಗಳಲ್ಲಿ ಆಸೆಗಳಿಲ್ಲ. ಗೃಹಸ್ಥನಾದವ ತನ್ನ ಪುತ್ರಿಯನ್ನು ಐಶ್ವರ್ಯಗಳುಳ್ಳವನಿಗೆ ಕೊಡುವುದು ಪುಣ್ಯದ ಕೆಲಸ. ದರಿದ್ರನಿಗೆ ಕನ್ಯೆಯನ್ನು ಕೊಡುವುದು ಪಾಪದ ಕೆಲಸ. ಆದರೆ ಶಂಕರ ದರಿದ್ರನಲ್ಲ. ಧನಪತಿಯಾದ ಕುಬೇರನೇ ಅವನ ಸೇವಕನಾಗಿದ್ದಾನೆಂದರೆ, ಶಿವ ಅದೆಷ್ಟು ಶ್ರೀಮಂತ ಅಂತ ಊಹಿಸು. ಬ್ರಹ್ಮಸೃಷ್ಟಿಯ ಈ ಕೃತಕ ಲೋಕದಲ್ಲಿ ಶಿವನೊಬ್ಬನೇ ಶಾಶ್ವತ. ಅವನು ಆದಿ-ಅಂತ್ಯವಿಲ್ಲದ ಚಿರಂಜೀವಿ. ಭ್ರೂಲೀಲೆಯಿಂದ ಶಿವ ಜಗತ್ತನ್ನು ಸೃಷ್ಟಿಸಲೂಬಹುದು, ಸಂಹರಿಸಲೂಬಹುದು. ಅವನೇ ಬ್ರಹ್ಮ, ವಿಷ್ಣು, ರುದ್ರ ಎಂಬ ಮೂರು ರೂಪಗಳನ್ನು ಧರಿಸಿ ಸೃಷ್ಟಿ, ಸ್ಥಿತಿ, ಲಯಗಳನ್ನು ಮಾಡುತ್ತಿದ್ದಾನೆ. ಶಿವನ ಅಂಶದಿಂದಲೇ ತ್ರಿದೇವಿಯರೂ ಜನ್ಮ ತಾಳಿದ್ದಾರೆ. ವಾಕ್ಕಿನ ಅಧಿದೇವತೆಯಾದ ವಾಣಿಯು ಪರಮೇಶ್ವರ ಮುಖದಿಂದ ಜನಿಸಿದರೆ, ಸಕಲೈಶ್ವರ್ಯರೂಪಳಾದ ಲಕ್ಷ್ಮಿಯು ಹೃದಯದಿಂದ ಜನಿಸಿದಳು. ಪರಮೇಶ್ವರಿಯು ಸಮಸ್ತ ದೇವತೆಗಳ ತೇಜಸ್ಸನ್ನೊಳಗೊಂಡವಳು. ಅವಳು ಮಹಿಷಾಸುರಮರ್ದಿನಿಯ ರೂಪದಿಂದ ಆವಿರ್ಭವಿಸಿದವಳು.

‘ಕಾಳಿಯೇ ಮತ್ತೆ ಬೇರೆ ಕಲ್ಪದಲ್ಲಿ ದಕ್ಷನ ಮಗಳಾಗಿ ಜನಿಸಿ, ಸತೀದೇವಿಯಾದಳು. ದಕ್ಷ ಅವಳನ್ನು ಹರನಿಗೆ ಮದುವೆ ಮಾಡಿಕೊಟ್ಟ. ಯಜ್ಞಸಂದರ್ಭದಲ್ಲಿ ತಂದೆ ಆಡಿದ ಪತಿನಿಂದೆಯ ಮಾತನ್ನು ಕೇಳಿ ಸತೀದೇವಿ ಯೋಗದಿಂದ ದೇಹವನ್ನು ತ್ಯಜಿಸಿದಳು. ಅವಳೇ ಈಗ ನಿನ್ನ ಪತ್ನಿಯಾದ ಮೇನಾದೇವಿಯ ಉದರದಲ್ಲಿ ಜನಿಸಿ, ಪಾರ್ವತಿಯಾಗಿರುವಳು. ಎಲೈ ಹಿಮವಂತ, ಕಾಳಿಕಾದೇವಿ ಪ್ರತಿಜನ್ಮದಲ್ಲಿಯೂ ಶಿವನ ಪತ್ನಿಯೇ ಆಗಿರುವಳು. ಸತೀದೇವಿಯ ಅಸ್ಥಿ ಮತ್ತು ಚಿತಾಭಸ್ಮಗಳನ್ನು ಶಂಕರ ಪ್ರೀತಿಯಿಂದ ಸದಾ ಧರಿಸುತ್ತಾನೆ. ನೀನೇ ಸ್ವ ಇಚ್ಛೆಯಿಂದ ನಿನ್ನ ಪುತ್ರಿಯನ್ನು ಶಿವನಿಗೆ ಕೊಡು. ಇಲ್ಲದಿದ್ದರೆ ಅವಳೇ ತಾನಾಗಿ ಹರನ ಬಳಿಗೆ ಹೋಗುತ್ತಾಳೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.

‘ಶಿವನ ಅಪ್ಪಣೆಯಂತೆ ನಾವು ನಿನ್ನ ಬಳಿ ಬಂದಿದ್ದೇವೆ. ನಿಶ್ಚಿಂತನಾಗಿ ಪಾರ್ವತಿಯನ್ನು ರುದ್ರನಿಗೆ ಕೊಡು. ಅದರಿಂದ ನಿನಗೆ ಒಳ್ಳೆಯದಾಗುವುದು. ಈಶ್ವರಸಂಕಲ್ಪ ಎಂದಿಗೂ ಸುಳ್ಳಾಗುವುದಿಲ್ಲ. ದೇವೇಂದ್ರನೊಡನೆ ಎಲ್ಲ ಪರ್ವತಗಳ ರೆಕ್ಕೆಗಳನ್ನು ಲೀಲೆಯಿಂದ ಕತ್ತರಿಸಿದವನು. ಪಾರ್ವತಿಯು ಮೇರುಶಿಖರವನ್ನು ಲೀಲೆಯಿಂದಲೇ ಭೇದಿಸಿದವಳು. ಒಂದೇ ವಸ್ತುವಿನಿಂದ ಸಕಲೈಶ್ವರ್ಯಗಳೂ ನಾಶವಾಗುತ್ತವೆ ಎಂದು ಅನಾದಿಯಿಂದ ಗಾದೆಯೇ ಇದೆ. ಇದಕ್ಕೆ ಅನರಣ್ಯ ಎಂಬ ಚಕ್ರವರ್ತಿಯ ವೃತ್ತಾಂತವೇ ಸಾಕ್ಷಿ’ ಎಂದ ವಸಿಷ್ಠ.

ವಸಿಷ್ಠಮುನಿ ಹೇಳಿದ ಮಾತನ್ನು ಕೇಳಿ ಹಿಮವಂತ, ‘ಅನರಣ್ಯರಾಜ ಯಾರು? ಯಾವ ವಂಶದವನು? ಅನರಣ್ಯನ ವೃತ್ತಾಂತವೇನು?’ ಎಂದು ಕೇಳಿದ.

ಇಲ್ಲಿಗೆ ಪಾರ್ವತೀಖಂಡದಲ್ಲಿ ಮೂವತ್ತಮೂರನೆಯ ಅಧ್ಯಾಯ ಮುಗಿಯುತ್ತದೆ.⇒l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT