ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಸಿಷ್ಠ ಹೇಳಿದ ಅನರಣ್ಯನ ಕಥೆ

Last Updated 15 ಅಕ್ಟೋಬರ್ 2022, 19:11 IST
ಅಕ್ಷರ ಗಾತ್ರ

ವಸಿಷ್ಠಮುನಿ ಅನರಣ್ಯ ಚಕ್ರವರ್ತಿಯ ಕಥೆ ಹೇಳುತ್ತಾನೆ: ಅನರಣ್ಯ ಚಕ್ರವರ್ತಿಯು ಇಂದ್ರಸಾವರ್ಣಿ ಎಂಬ ಹದಿನಾಲ್ಕನೆಯ ಮನುವಿನ ವಂಶದಲ್ಲಿ ಜನಿಸಿದವ. ಅವನು ಸಪ್ತದ್ವೀಪಗಳಿಗೂ ರಾಜನಾಗಿದ್ದ. ಮಂಗಲಾರಣ್ಯನಿಂದ ಜನಿಸಿದ ಆತ ಮಹಾಶಿವಭಕ್ತನಾಗಿದ್ದ. ಅವನು ಭೃಗುಮುನಿಯನ್ನು ಪುರೋಹಿತನನ್ನಾಗಿ ಮಾಡಿಕೊಂಡು ನೂರು ಯಾಗಗಳನ್ನು ಮಾಡಿದ. ಈ ಪುಣ್ಯಫಲಕ್ಕಾಗಿ ದೇವತೆಗಳು ಅವನಿಗೆ ಇಂದ್ರಪದವಿ ಕೊಡಲು ಮುಂದಾದರೂ, ಆತ ಸ್ವೀಕರಿಸಲಿಲ್ಲ. ಅನರಣ್ಯರಾಜನಿಗೆ ನೂರು ಗಂಡುಮಕ್ಕಳಿದ್ದರೆ, ಪದ್ಮಾ ಎಂಬ ಒಬ್ಬಳೇ ಮಗಳಿದ್ದಳು. ಐವರು ಹೆಂಡತಿಯರಿದ್ದರು. ಮಗಳು ಪದ್ಮಾ ತಂದೆಯ ಪ್ರೀತಿಯಲ್ಲಿ ಬೆಳೆಯುತ್ತಾ ಯೌವನವತಿಯಾದಳು. ಅವಳಿಗೆ ಒಳ್ಳೆಯ ವರನನ್ನು ಹುಡುಕಲು ತನ್ನ ಗಂಡುಮಕ್ಕಳನ್ನು ಬೇರೆ ದೇಶಗಳಿಗೆ ಕಳುಹಿಸಿದ.

ಒಂದು ದಿನ, ಪಿಪ್ಪಲಾದ ಎಂಬ ಮಹರ್ಷಿ ತಪಸ್ಸು ಮುಗಿದಮೇಲೆ ತನ್ನ ಆಶ್ರಮಕ್ಕೆ ತೆರಳಲು ಉದ್ಯುಕ್ತನಾದ. ಆಗ ಅವನು ಓರ್ವ ಗಂಧರ್ವ ಮತ್ತವನ ಪತ್ನಿಯನ್ನು ಕಂಡ. ಅವರಿಬ್ಬರೂ ಶೃಂಗಾರದಲ್ಲಿ ಮುಳುಗಿದ್ದರು. ಅದನ್ನ ನೋಡಿ ಪಿಪ್ಪಲಾದನಿಗೆ ಕಾಮ ವಿಕಾರವಾಯಿತು; ತಪಸ್ಸಿನಲ್ಲಿ ಆಸಕ್ತಿ ಕಳೆದುಕೊಂಡ. ತಾನೂ ಮದುವೆಯಾಗಬೇಕೆಂದು ಬಯಸಿದ. ಹೀಗಿರಲೊಂದು ದಿನ, ಪಿಪ್ಪಲಾಮುನಿ ಪುಷ್ಪಭದ್ರಾ ನದಿಗೆ ಸ್ನಾನಕ್ಕಾಗಿ ಹೋದ. ಅಲ್ಲಿ ಅನರಣ್ಯನ ಪುತ್ರಿ ಪದ್ಮಾದೇವಿಯನ್ನು ನೋಡಿದ. ಇವಳನ್ನು ಪಡೆಯುವ ಬಗೆ ಹೇಗೆಂದು ಯೋಚಿಸಿದ.ಪತ್ನಿಭಿಕ್ಷೆಗಾಗಿ ಅನರಣ್ಯರಾಜನ ಸಭೆಗೆ ಹೋದ. ‘ಎಲೈ ರಾಜನೆ, ನಿನ್ನ ಪುತ್ರಿಯನ್ನು ನನಗೆ ಮದುವೆಮಾಡಿಕೊಡು. ಇಲ್ಲದಿದ್ದರೆ ನಿನ್ನ ಕುಲವನ್ನೇ ಈ ಕ್ಷಣದಲ್ಲಿ ಭಸ್ಮಮಾಡುವೆ’ ಎಂದ.

ಅನರಣ್ಯರಾಜನಿಗೆ ತುಂಬಾ ದುಃಖವಾಯಿತು. ಮುದುಕನಾದ ಪಿಪ್ಪಲಾದನಿಗೆ ಸೌಂದರ್ಯವತಿಯಾದ ಮಗಳನ್ನು ಕೊಡಲು ಮನಸ್ಸಾಗಲಿಲ್ಲ. ಅನರಣ್ಯರಾಜನ ಪರಿವಾರವೆಲ್ಲವೂ ದುಃಖಸಾಗರದಲ್ಲಿ ಮುಳುಗಿತು. ಈ ಸಮಯದಲ್ಲಿ ಅನರಣ್ಯರಾಜನ ಮಹಾಪ್ರಾಜ್ಞನಾದ ಪುರೋಹಿತ ಬಂದ. ಶಾಸ್ತ್ರ ಮತ್ತು ನೀತಿಯನ್ನೂ ಚೆನ್ನಾಗಿ ಬಲ್ಲ ಆ ಪುರೋಹಿತ ‘ಎಲೈ ರಾಜನೆ, ಇಂದಾಗಲೀ ಇನ್ನೊಂದು ವರ್ಷದ ಮೇಲಾಗಲೀ, ನಿನ್ನ ಕುಮಾರಿಯನ್ನು ಯೋಗ್ಯನಾದ ವರನಿಗೆ ಕೊಡಲೇ ಬೇಕು. ಆದುದರಿಂದ ಈ ಮುನಿಗೆ ಮಗಳನ್ನು ಕೊಟ್ಟು, ನಿನ್ನ ಕುಲಸಂಪತ್ತೆಲ್ಲವನ್ನೂ ರಕ್ಷಿಸಿಕೋ’ ಎಂದು ಸಲಹೆಕೊಟ್ಟ.

ಆಸ್ಥಾನ ಪುರೋಹಿತನ ಸಲಹೆಯಂತೆ ದುಃಖವನ್ನು ಸಹಿಸಿಕೊಂಡು ಮಗಳನ್ನು ಪಿಪ್ಪಲಾದನಿಗೆ ಕೊಟ್ಟು ವಿವಾಹ ಮಾಡಿ, ತನ್ನ ರಾಜ ಸಂಪತ್ತನ್ನು ಉಳಿಸಿಕೊಂಡ. ಮುದುಕನಿಗೆ ಮಗಳನ್ನು ಕೊಟ್ಟು ವಿವಾಹ ಮಾಡಿದೆ – ಎಂಬ ನೋವಿನಿಂದ ಅನರಣ್ಯ ರಾಜ ತಪಸ್ಸುಮಾಡಲು ಅರಣ್ಯಕ್ಕೆ ಹೋದ. ಇತ್ತ ಅವನ ಹೆಂಡತಿ ಪತಿವಿರಹದಿಂದ ಮತ್ತು ಮಗಳ ಶೋಕದಿಂದ ಪ್ರಾಣ ಬಿಟ್ಟಳು. ಕಾಡಿಗೆ ಹೋದ ಅನರಣ್ಯರಾಜ ತಪಸ್ಸು ಮಾಡುತ್ತಾ ಭಕ್ತಿಯಿಂದ ಶಂಕರನನ್ನು ಆರಾಧಿಸಿ, ಶಿವಲೋಕವನ್ನು ಸೇರಿದ. ಅನರಣ್ಯರಾಜನ ಹಿರಿಯ ಮಗ ಕೀರ್ತಿಮಾನ್ ಪಟ್ಟಾಭಿಷಿಕ್ತನಾಗಿ ಪ್ರಜೆಗಳನ್ನು ಮಕ್ಕಳಂತೆ ಕಾಪಾಡುತ್ತಾ ರಾಜ್ಯವಾಳಿದ.

ಹೀಗೆ ಅನರಣ್ಯನ ಕಥೆ ಹೇಳಿದ ವಸಿಷ್ಠ ಮುನಿ, ‘ಹಿಮವಂತ. ಅನರಣ್ಯನಂತೆ ನೀನೂ ನಿನ್ನ ಮಗಳನ್ನು ಶಿವನಿಗೆ ಕೊಟ್ಟು ನಿನ್ನ ಕುಲವನ್ನು ಕಾಪಾಡಿಕೊ’ ಎಂದ.

ಇಲ್ಲಿಗೆ ಶ್ರೀಶಿವಮಹಾಪುರಾಣದ ಪಾರ್ವತೀಖಂಡದಲ್ಲಿ ಮೂವತ್ತನಾಲ್ಕನೆಯ ಅಧ್ಯಾಯ ಮುಗಿಯಿತು. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT