ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿಗ್ರಹಾರಾಧನೆಯೇ ಶ್ರೇಷ್ಠ

ಭಾಗ 98
ಅಕ್ಷರ ಗಾತ್ರ

ದೇವತೆಗಳೆಲ್ಲರಿಗೂ ಲಿಂಗಗಳನ್ನು ಕೊಟ್ಟು ಅನುಗ್ರಹಿಸಿದ ವಿಷ್ಣು, ನಂತರ ಶಿವನನ್ನು ಅರ್ಚಿಸುವ ಕ್ರಮವನ್ನು ಬ್ರಹ್ಮನಿಗೆ ತಿಳಿಸಿದ. ಅದನ್ನು ಬ್ರಹ್ಮ ದೇವತೆಗಳಿಗೂ ಋಷಿಗಳಿಗೂ ನಾರದನಿಗೂ ವಿವರವಾಗಿ ತಿಳಿಸುತ್ತಾನೆ.

‘ಮನುಷ್ಯಜನ್ಮ ದುರ್ಲಭವಾದುದು. ಅವಯವಗಳೊಂದೂ ವಿಕಾರಹೊಂದದೆ, ಆಚಾರಶೀಲರಾದ ಸುಜನರ ಮನೆಯಲ್ಲಿ ಜನಿಸುವುದು ಹಿಂದಿನ ಜನ್ಮದ ಪುಣ್ಯಫಲ. ತನಗೆ ಯಾವುದು ವಿಹಿತವಾಗಿದೆಯೋ ಆ ಕರ್ಮಗಳನ್ನು ಉಲ್ಲಂಘಿಸಿಬಾರದು. ತನ್ನಲ್ಲಿ ಹಣವಿರುವಷ್ಟು ನೋಡಿಕೊಂಡು ದಾನಾದಿಕ್ರಿಯೆಗಳನ್ನು ಮಾಡಬೇಕು. ಸಾವಿರ ಕರ್ಮಪ್ರಧಾನವಾದ ಯಜ್ಞಗಳಿಗಿಂತಲೂ ತಪೋಯಜ್ಞವು ಮಿಗಿಲಾದುದು. ಸಾವಿರ ತಪೋಯಜ್ಞಗಳಿಗಿಂತಲೂ ಜಪಯಜ್ಞವು ಶ್ರೇಷ್ಠವಾದುದು. ಧ್ಯಾನಯಜ್ಞಕ್ಕಿಂತಲೂ ಉತ್ತಮವಾದುದು ಇನ್ನೊಂದಿಲ್ಲ. ಧ್ಯಾನವು ಜ್ಞಾನಕ್ಕೆ ಸಾಧಕವಾದುದು. ಯೋಗನಿರತನಾದವನು ಧ್ಯಾನದಿಂದ ತನಗಿಷ್ಟವಾದುದನ್ನು ಸಮರಸವಾಗಿ ನೋಡುತ್ತಾನೆ. ಇಂಥ ಧ್ಯಾನಯಜ್ಞನಿರತರಾದವರ ಬಳಿಯಲ್ಲಿ ಶಿವನು ನೆಲೆಸಿರುವನು.

‘ವಿಜ್ಞಾನಶೀಲರಾದವರಿಗೆ ಪ್ರಾಯಶ್ಚಿತ್ತಾದಿ ಪಾಪನಿರ್ಮೂಲನ ಕಾರ್ಯಗಳು ಅವಶ್ಯಕವಿಲ್ಲ. ವಿಚಾರಮಾಡಿ ನೋಡಿದರೆ ಯಾರು ಈ ರೀತಿ ವಿಜ್ಞಾನದಿಂದ ಶುದ್ಧವಾಗಿರುವರೋ ಅವರಿಗೆ ಕರ್ಮಗಳೂ ಸುಖದುಃಖಗಳೂ ಒಂದೂ ಇಲ್ಲ. ಅವರಿಗೆ ಧರ್ಮ-ಅಧರ್ಮಗಳೂ, ಜಪ, ಹೋಮ, ಧ್ಯಾನ, ಯಾವೊಂದೂ ಬೇಕಾಗಿಲ್ಲ. ಅವರು ವಿಜ್ಞಾನಬಲದಿಂದ ಸದಾ ವಿಕಾರರಹಿತರಾಗಿರುತ್ತಾರೆ. ಸರ್ವವ್ಯಾಪಿಯಾದ ಶಿವಲಿಂಗವು ಯೋಗಿಗಳ ಹೃದಯದಲ್ಲೇ ಇದೆಯೆಂದು ತಿಳಿಯಿರಿ.

‘ಲಿಂಗದಲ್ಲಿ ಬಾಹ್ಯ ಮತ್ತು ಆಭ್ಯಂತರವೆಂಬ ಎರಡು ವಿಧವಿದೆ. ಸ್ಥೂಲವಾಗಿ ಕಣ್ಣಿಗೆ ಗೋಚರವಾಗುವುದು ಬಾಹ್ಯವೆನಿಸಿದರೆ, ಬಾಹ್ಯೇಂದ್ರಿಯಗಳಿಗೆ ಗೋಚರಿಸದಿರುವುದು ಆಭ್ಯಂತರವೆನಿಸುವುದು. ಯಾರು ಕರ್ಮಯಜ್ಞನಿರತರೋ, ಯಾರು ಬಾಹ್ಯಲಿಂಗವನ್ನು ಪೂಜಿಸುವರೋ, ಅವರು ಅಜ್ಞಾನಿಗಳ ತಿಳಿವಳಿಕೆಗಾಗಿ ಸ್ಥೂಲಲಿಂಗಾರ್ಚನೆಯಲ್ಲಿ ತೊಡಗಿರುವರೆಂದು ಭಾವಿಸಬೇಕು. ಆಧ್ಯಾತ್ಮಿಕವಾದ, ಅಂದರೆ ಆಭ್ಯಂತರವಾದ ಲಿಂಗವನ್ನು ತಾನು ತಿಳಿದುಕೊಳ್ಳಲಾರದ ಮಾತ್ರಕ್ಕೇ, ಆತನು ಸ್ಥೂಲಲಿಂಗಕ್ಕೂ ಆಭ್ಯಂತರಲಿಂಗಕ್ಕೂ ಭೇದವನ್ನು ಕಲ್ಪಿಸಬಾರದು. ಜ್ಞಾನಿಗಳಾದವರಿಗೆ ಶುದ್ಧವೂ ಅವಿನಾಶಿಯೂ ಆದ ಸೂಕ್ಷ್ಮಲಿಂಗವು ವಿಹಿತವು. ಅಂತಹ ಯೋಗ್ಯತೆಯನ್ನು ಇನ್ನೂ ಪಡೆಯದೆ ಇರುವವರೆಗೆ ಸ್ಥೂಲಲಿಂಗವು ಪ್ರಕಲ್ಪಿತವಾಗಿರುವುದು. ಅಧ್ಯಾತ್ಮಸಾಧಕರಿಗೆ ಆಭ್ಯಂತರಲಿಂಗವು ಭಾವನಾಮಾತ್ರದಿಂದಲೇ ಗೋಚರವಾಗುವುದು.

‘ತತ್ತ್ವಾರ್ಥವನ್ನು ಅರಿಯಬೇಕೆನ್ನುವವನಿಗೆ ವಿಚಾರಕ್ಕಿಂತಲೂ ಬೇರೆ ಮಾರ್ಗ ಯಾವುದೂ ಇಲ್ಲ. ಅವನ ಅಂತರಂಗಲ್ಲಿಯೇ ಕಲಾಸಹಿತನೂ ಕಲಾತೀತನೂ ಆದ ಶಿವನಿರುವನು. ಅಂತಹ ವಿಜ್ಞಾನಿಯು ಪ್ರಪಂಚವೆಲ್ಲವನ್ನೂ ಶಿವನೆಂದು ಭಾವಿಸುವನು. ಅವನಿಗೆ ಜಗತ್ತೇ ಶಿವಸ್ವರೂಪವಾಗಿ ತೋರುವುದು. ಈ ರೀತಿ ಶುದ್ಧಜ್ಞಾನದಿಂದ ನಿಸ್ಸಂಗರಾದವರಿಗೆ ಯಾವ ದೋಷದ ಸಂಪರ್ಕವೂ ಇಲ್ಲ. ಅವರಿಗೆ ವಿಧಿಯಿಲ್ಲ, ವಿಹಿತಾವಿಹಿತವಿಲ್ಲ. ನಿಷಿದ್ಧವಾದುದೂ ಇಲ್ಲ.

‘ನೀರಿನ ಮೇಲಿನ ಕಮಲಕ್ಕೆ ನೀರು ಹೇಗೆ ಅಂಟದೆ ಇರುವುದೋ ಹಾಗೆ ಜ್ಞಾನಿಯಾದವನು ಕರ್ಮಪ್ರಧಾನವಾದ ಗೃಹಸ್ಥನಾಗಿದ್ದರೂ ಕರ್ಮಬಂಧಕ್ಕೆ ಸಿಕ್ಕಲಾರ. ಇಂತಹ ಶುದ್ಧಜ್ಞಾನವು ಯಾರಿಗೆ ಇನ್ನೂ ಹುಟ್ಟದಿರುವುದೋ, ಅವರು ಕರ್ಮಾಚರಣೆಯಿಂದ ಶಿವನನ್ನಾರಾಧಿಸುತ್ತಿರಬೇಕು. ಶಿವನು ವಸ್ತುತಃ ಒಬ್ಬನೇ ಆಗಿದ್ದರೂ, ಸೂರ್ಯನು ನೀರು ತುಂಬಿದ ಅನೇಕ ಪಾತ್ರೆಗಳಲ್ಲಿ ಪ್ರತಿಬಿಂಬಿಸುವಂತೆ, ನಾನಾ ರೂಪವಾಗಿ ತೋರುವನು.

‘ಈ ಜಗತ್ತಿನಲ್ಲಿ ಯಾವುದು ಕಾಣುವುದೋ ಯಾವುದು ಕೇಳಿಬರುವುದೋ ಸದ್ರೂಪವಾಗಿಯೂ ಅಸದ್ರೂಪವಾಗಿಯೂ ಯಾವುದು ತೋರುವುದೋ ಅದೆಲ್ಲವೂ ಪರಬ್ರಹ್ಮಾತ್ಮಕನಾದ ಶಿವನೆಂದೇ ತಿಳಿಯಿರಿ. ಮಣ್ಣಿನಿಂದ ಮಾಡಿದ ವಸ್ತುಗಳು ಬೇರೆ ಬೇರೆಯಾಗಿ ತೋರಿದರೂ ಅದರ ಮೂಲ ಮಣ್ಣೇ ಆಗಿರುವಂತೆ, ಪರಬ್ರಹ್ಮವೂ ಉಪಾಧಿವಶದಿಂದ ಬೇರೆ ಬೇರೆಯಾಗಿ ತೋರಿದರೂ ಪರಮಾತ್ಮನೊಬ್ಬನೆ ಅಂತ ವೇದಾಂತರಹಸ್ಯವನ್ನು ಬಲ್ಲವರು ಹೇಳುವರು.

‘ಸಾಕ್ಷಾತ್ ಪರಮೇಶ್ವರನು ತನ್ನ ಹೃದಯದಲ್ಲೇ ನೆಲೆಸಿರುವ ಎಂದು ಯಾರು ತಿಳಿದಿರುವರೊ, ಅವರು ಸಂಸಾರಿಯೇ ಆಗಿದ್ದರೂ ಅವರಿಗೆ ಈ ಬಾಹ್ಯ ವಿಗ್ರಹಪೂಜಾದಿಗಳು ಬೇಕಿಲ್ಲ. ಯಾರಿಗೆ ಈ ರೀತಿ ಭಾವನೆ ಇಲ್ಲವೋ ಅವರು ವಿಗ್ರಹಪೂಜಾದಿಗಳನ್ನು ಮಾಡಬೇಕು. ಉನ್ನತವಾದ ಸ್ಥಾನವನ್ನು ಪಡೆಯಬೇಕಾದರೆ, ವಿಗ್ರಹಾರಾಧನೆಯು ಶ್ರೇಷ್ಠವಾದ ಸಾಧನವೆಂದು ಹೇಳಲ್ಪಟ್ಟಿದೆ. ಯಾವ ಆಲಂಬನವೂ ಇಲ್ಲದೆ, ಮೇಲಿನ ಹಂತವನ್ನು ಹತ್ತಲು ಸಾಧ್ಯವಿಲ್ಲ. ಗುಣಾತೀತನಾದ ಆ ಪರಬ್ರಹ್ಮನನ್ನು ಹೊಂದಲು ಮನುಷ್ಯರಿಗೆ ಸಗುಣಮೂರ್ತಿಯ ಪ್ರತಿಮೆಯೇ ಆಲಂಬನವೆಂದು ತಿಳಿಯಿರಿ’ ಎಂದು ಬ್ರಹ್ಮನು ದೇವತೆಗಳಿಗೆ ತಿಳಿಸಿದ್ದನ್ನು ನಾರದನಿಗೆ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT