ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ ಭಾಗ 55: ಬ್ರಹ್ಮ ವಿಷ್ಣು ರುದ್ರರೇ ಹಣೆಪಟ್ಟೆಗಳು

Last Updated 27 ಫೆಬ್ರುವರಿ 2022, 20:26 IST
ಅಕ್ಷರ ಗಾತ್ರ

ಈಗ ಸೂತಮುನಿ ಭಸ್ಮಮಾಡುವ ವಿಧಾನವನ್ನು ತಿಳಿಸುತ್ತಾನೆ. ‘ಅಘೋರೇಭ್ಯೋ’ ಎಂಬ ಶಿವಮಂತ್ರದಿಂದ ಬಿಲ್ವವೃಕ್ಷದ ಕಾಷ್ಠವನ್ನು ಸುಡಬೇಕು. ಅದರಿಂದ ಹೊಮ್ಮುವ ಅಗ್ನಿಗೆ ‘ಶಿವಾಗ್ನಿ’ ಎಂದು ಹೆಸರು. ಅದರಿಂದಾದ ಭಸ್ಮವು ಶಿವಾಗ್ನಿ ಭಸ್ಮವೆನಿಸುವುದು. ಹಸುವಿನ ಸಗಣಿ, ಶಮೀ, ಅಶ್ವತ್ಥ, ಮುತ್ತಗ, ಆಲ, ಆರಗ್ವಧ, ಬಿಲ್ವಗಳ ಕಾಷ್ಠವನ್ನು ಶಿವಾಗ್ನಿಯಿಂದ ಸುಡಬೇಕು. ಈ ಭಸ್ಮವೇ ‘ಶಿವಾಗ್ನಿಜಭಸ್ಮ’. ದರ್ಭೆಯಿಂದ ಹೊತ್ತಿಸಿದ ಅಗ್ನಿಯಲ್ಲಿ ಸೌದೆಗಳನ್ನು ‘ಅಘೋರೇಭ್ಯೋ’ ಎಂಬ ಶಿವಮಂತ್ರವನ್ನುಚ್ಚರಿಸಿ ಭಸ್ಮಮಾಡಬೇಕು. ಅದನ್ನು ಚೆನ್ನಾಗಿ ಬಟ್ಟೆಯಿಂದ ಶೋಧಿಸಿ ಹೊಸ ಮಡಕೆಯಲ್ಲಿರಿಸಬೇಕು.

ಭಸ್ಮವೆಂದರೆ ದೀಪ್ತಿ(ಪ್ರಕಾಶ)ವನ್ನುಂಟುಮಾಡುವ, ಜ್ಞಾನವನ್ನುಂಟು ಮಾಡುವ, ಪೂಜಿಸಲರ್ಹವಾದುದು ಎಂದರ್ಥ ಎಂದು ಈಶ್ವರನು ಹೇಳಿರುವನು. ಲೋಕದಲ್ಲಿ ರಾಜನು ತನ್ನ ದೇಶದಲ್ಲಿ ಪ್ರಜೆಗಳಿಂದ ಸಾರವಾದ ಕಂದಾಯವನ್ನು ತೆಗೆದುಕೊಳ್ಳುವಂತೆ, ಮನುಷ್ಯರು ಸಸ್ಯ–ಕಬ್ಬು ಮುಂತಾದುವುಗಳಿಂದ ಸಾರವನ್ನು ತೆಗೆದುಕೊಳ್ಳುವಂತೆ, ಜಠರಾಗ್ನಿಯು ಪಚನಮಾಡಿ ದೇಹವನ್ನು ಪೋಷಿಸಿದಂತೆ, ಪರಮೇಶ್ವರನೂ ಪ್ರಳಯಕಾಲ ದಲ್ಲಿ ಪ್ರಪಂಚವನ್ನು ಸುಟ್ಟು ಭಸ್ಮಸಾರವನ್ನು ಸ್ವೀಕರಿಸುತ್ತಾನೆ. ಹೀಗೆ ತಾನು ಸೃಷ್ಟಿಸಿದ ಜಗತ್ತನ್ನು ತನ್ನೊಳಗೆ ಆವಹಿಸಿಕೊಳ್ಳುವ ಮೂಲಕ ಶಿವ ಬ್ರಹ್ಮಾಂಡರೂಪಿಯಾಗಿದ್ದಾನೆ. ಆಕಾಶದ ಸಾರದಿಂದ ಅವನ ಕೇಶವಾದರೆ, ವಾಯುವಿನ ಸಾರದಿಂದ ಮುಖವಾಯಿತು. ಅಗ್ನಿಯ ಸಾರದಿಂದ ಹೃದಯ, ಜಲಸಾರದಿಂದ ಕಟಿ, ಭೂಮಿ ಸಾರಸ್ವರೂಪದಿಂದ ಮೊಳಕಾಲು ಆಯಿತು. ಬ್ರಹ್ಮ, ವಿಷ್ಣು, ರುದ್ರರ ಸಾರವೇ ತ್ರಿಪುಂಡ್ರ; ಹಣೆಯಲ್ಲಿನ ಮೂರು ಭಸ್ಮದ ಪಟ್ಟೆಗಳು. ತಿಲಕದ ರೂಪದಿಂದ ಲಲಾಟಮಧ್ಯದಲ್ಲಿ ಮಹೇಶ್ವರನಿರುವನು.

ಶಿವನನ್ನು ವಶೀಕರಣಮಾಡಿಕೊಳ್ಳುವವರು ಯಾರೂ ಇಲ್ಲ. ಆದುದರಿಂದಲೇ ಅವನಿಗೆ ಶಿವ(ವಶೀ)ನೆಂದು ಹೆಸರು. ಶಿವಶಬ್ದದ ಮೊದಲ ಅಕ್ಷರ ‘ಶ’ ಎಂದರೆ ಸುಖ-ಆನಂದ ಎಂದರ್ಥ. ‘ಈ’ ಎಂದರೆ ಪುರುಷ ಎಂದರ್ಥ. ‘ವ’ಕಾರಕ್ಕೆ ಶಕ್ತಿ ಮತ್ತು ‘ಆ’ಕಾರಕ್ಕೆ ಅಮೃತ ಎಂದರ್ಥ. ಅಂದರೆ ‘ಶಿವ’ ಎಂಬ ಶಬ್ದವು ಆನಂದರೂಪ ಮತ್ತು ಸುಖಸ್ವರೂಪವಾದ ಪುರುಷ ಪರಮಾತ್ಮ. ಆದುದರಿಂದ ತಾನೂ ಆ ಶಿವಸ್ವರೂಪವೆಂದು (ಸೋಹಂಭಾವೇನ) ಶಿವನನ್ನು ಪೂಜಿಸಬೇಕು. ಪೂಜೆಯ ಕಾಲದಲ್ಲಿ ಭಸ್ಮವನ್ನು ನೀರಿನಿಂದ ಕಲಸಿ ಹಚ್ಚಬೇಕು. ಮಿಕ್ಕಕಾಲದಲ್ಲಿ ಹಾಗೆಯೇ ಹಚ್ಚಬೇಕು. ಹಗಲಲ್ಲಿಯಾಗಲಿ, ರಾತ್ರಿಯಾಗಲಿ, ಸ್ತ್ರೀ-ಪುರುಷರು ಪೂಜೆಯ ಕಾಲದಲ್ಲಿ ನೀರಿನಿಂದ ಭಸ್ಮವನ್ನು ಕಲಸಿ, ಮೂರು ಪುಂಡ್ರಗಳಾಗಿಯೇ ಹಚ್ಚಿಕೊಳ್ಳಬೇಕು. ಭಸ್ಮವನ್ನು ನೀರಿನಿಂದ ಕಲಸಿ ಹಣೆ ಮುಂತಾದ ಕಡೆ ಮೂರು ಪಟ್ಟೆಗಳನ್ನು ಹಚ್ಚಿಕೊಂಡು ಪೂಜೆಮಾಡಿದರೆ, ಶಿವಪೂಜೆಯ ಸಂಪೂರ್ಣಫಲವು ಲಭಿಸುವುದು. ಶಿವಪಂಚಾಕ್ಷರಮಂತ್ರದಿಂದ ಭಸ್ಮವನ್ನು ಧರಿಸಿದವರು ‘ಶಿವಾಶ್ರಮಿ’ ಎಂಬ ಹೆಸರು ಪಡೆವರು. ಪೂಜೆ, ಜಪ ಮೊದಲಾದ ಶಿವನ ವ್ರತಾನುಷ್ಠಾನದಲ್ಲಿ ನಿರತನಾದವರು ಮೃತಾಶೌಚ ಮತ್ತು ಜಾತಾಶೌಚಗಳಲ್ಲಿ ಹಣೆಯ ಮೇಲೆ ಶುಭ್ರವಾದ ಭಸ್ಮವನ್ನೂ, ಮಣ್ಣಿನ ತಿಲಕವನ್ನೂ ಇಡಬೇಕು.

ಶಿವಸ್ವರೂಪನಾದ ಗುರುವು ಶ್ರದ್ಧಾಭಕ್ತಿಯಿಂದಿರುವ ಶಿಷ್ಯರಿಗೆ ಸಾತ್ವಿಕ, ರಾಜಸ, ತಾಮಸಗುಣಗಳನ್ನು ಹೋಗಲಾಡಿಸಿ ಶಿವಸ್ವರೂಪವನ್ನು ಬೋಧಿಸುತ್ತಾನೆ. ಆದುದರಿಂದ ಗುರುವಿನ ಶರೀರವೇ ಗುರುಲಿಂಗವು. ಗುರುವಿನ ಸೇವೆಯೇ ಗುರುಲಿಂಗದ ಪೂಜೆಯು. ಗುರುಪೂಜೆಯೇ ಪರಮಾತ್ಮನಾದ ಶಿವನ ಪೂಜೆಯು. ಗುರು ಹೇಳಿದುದನ್ನು ಶರೀರ, ಮನಸ್ಸು, ವಾಕ್ಕು ಎಂಬ ತ್ರಿಕರಣಗಳಿಂದ ಶುದ್ಧನಾಗಿ ನಿರ್ವಹಿಸುವವನೆ ತ್ರಿಕರಣಶುದ್ಧನಾದ ಶಿಷ್ಯ. ಗುರುವಿನ ಉಚ್ಛಿಷ್ಟವೂ ಶಿವನ ಶೇಷವಾಗಿದೆ. ಶಿವಭಕ್ತರಾದ ಶಿಷ್ಯರು ಗುರು ತಿಂದುಳಿದ ಅನ್ನ-ನೀರನ್ನು ಭಕ್ತಿಯಿಂದ ಸ್ವೀಕರಿಸಬೇಕು.

ಗುರುವಿಗೆ ಶಿಷ್ಯತ್ವವುಳ್ಳವನಾದವನು ಪುತ್ರ ಸದೃಶನಾಗಿರುತ್ತಾನೆ. ಅದು ಹೇಗೆಂದರೆ, ತಂದೆಯಂತೆ ಗುರುವೂ ನಾಲಿಗೆ ಎಂಬ ಲಿಂಗದಿಂದ ಮಂತ್ರವೆಂಬ ರೇತಸ್ಸನ್ನು ಶಿಷ್ಯನ ಕಿವಿ ಎಂಬ ಯೋನಿಯಲ್ಲಿ ನಿಷೇಕಿಸಿರುತ್ತಾನೆ. ಜನಕನಾದ ತಂದೆಯು ಪುತ್ರನನ್ನು ಸಂಸಾರ ಬಂಧದಲ್ಲಿರಿಸಿದರೆ, ಬೋಧಕನಾದ ಗುರು ಜ್ಞಾನ ತುಂಬಿ ಸಂಸಾರಬಂಧದಿಂದ ಮುಕ್ತನನ್ನಾಗಿಸುತ್ತಾನೆ. ಅಂದರೆ ಶಿಷ್ಯನ ಜೀವನ ಉದ್ಧಾರ ಮಾಡುತ್ತಾನೆ. ಇದಕ್ಕಾಗಿ ಶಿಷ್ಯರು ಜ್ಞಾನಗುರುವನ್ನಾಶ್ರಯಿಸಿ ತಮ್ಮ ಅಜ್ಞಾನವನ್ನು ಕಳೆದುಕೊಳ್ಳಬೇಕು. ಅಜ್ಞಾನವನ್ನು ಕಳೆಯಲು ವಿಶೇಷವಾಗಿ ತಿಳಿದಿರುವ ಸಮರ್ಥನಾದ ಆತ್ಮಜ್ಞಾನಗುರುವನ್ನೇ ಆರಿಸಿಕೊಳ್ಳಬೇಕು ಎನ್ನುತ್ತಾನೆ ಸೂತಮುನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT