ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ-261 | ಶಿವನ ಸಮಾಧಾನಿಸಿದ ನಾರದ

Last Updated 28 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ನಾರದನ ಅವಸ್ಥೆ ನೋಡಿ ವಿಷ್ಣು, ಬ್ರಹ್ಮ, ಇಂದ್ರ ಮೊದಲಾದವರು ಏನಾಯಿತು ಎಂದು ಪ್ರಶ್ನಿಸಿದರು.ವಿವಾಹಮಂಟಪದಲ್ಲಿ ನಮ್ಮೆಲ್ಲರ ಪ್ರತಿಮೆಯನ್ನು ವಿಶ್ವಕರ್ಮ ನಿರ್ಮಿಸಿದ್ದಾನೆ. ಅವೆಲ್ಲಾ ಜೀವಂತವಿರುವಂತೆ ಕಾಣುತ್ತದೆ. ಅದನ್ನು ನೋಡಿ ನಾನು ನಿಜವೆಂದು ಭ್ರಮಿಸಿದ್ದೆ. ಅದರಲ್ಲೂ ವಿಶೇಷವಾಗಿ ದೇವತೆಗಳನ್ನು ಮೋಹಗೊಳಿಸುವುದಕ್ಕಾಗಿ ಚಿತ್ರರೂಪದ ಮಾಯೆಯನ್ನು ವಿಶ್ವಕರ್ಮ ನಿರ್ಮಿಸಿದ್ದಾನೆ – ಎಂದಾಗ ದೇವೇಂದ್ರ ಭಯಭೀತನಾದ.

ಹರಿಯ ಬಳಿ ಬಂದ ಇಂದ್ರ, ‘ಓ ಲಕ್ಷ್ಮೀಪತಿಯೇ, ವಿಶ್ವಕರ್ಮ ನನ್ನನ್ನು ಹಿಂಸಿಸಬೇಕೆಂದು ಉದ್ದೇಶಿಸಿರುವಂತಿದೆ. ಏಕೆಂದರೆ, ಅವನ ಪುತ್ರನನ್ನು ನಾನು ಈ ಹಿಂದೆ ಸಂಹರಿಸಿದ್ದೆ. ಆ ಪುತ್ರಶೋಕದಿಂದ ದುಃಖಿತನಾದ ವಿಶ್ವಕರ್ಮ ಈಗ ಶಿಲ್ಪವ್ಯಾಜದಿಂದ ನನ್ನನ್ನು ಹಿಂಸಿಸಲು ಯೋಜಿಸಿದ್ದಾನೆ’ ಎಂದು ಅಳಲುತೋಡಿಕೊಂಡ.

ಇಂದ್ರನ ಮಾತನ್ನು ಕೇಳಿ ಜನಾರ್ದನ ನಗುತ್ತಾ, ‘ಇಂದ್ರ, ನಿನ್ನ ಹಿಂದಿನ ಶತ್ರುಗಳಾದ ನಿವಾತಕವಚ ಎಂಬ ದೈತ್ಯರು ಸಹ ತಮ್ಮ ಮಾಯಾಬಲದಿಂದ ನಿನ್ನನ್ನು ಮೋಹಗೊಳಿಸಿದ್ದರು. ಪರ್ವತರಾಜನಾದ ಈ ಹಿಮವಂತನ ಮತ್ತು ಮಿಕ್ಕ ಎಲ್ಲಾ ಪರ್ವತಗಳ ರೆಕ್ಕೆಯನ್ನೂ ನೀನು ನನ್ನ ಮಾತಿನಂತೆ ಹಿಂದೆ ಕತ್ತರಿಸಿದ್ದೆ. ಆ ಗಿರಿಗಳೆಲ್ಲವೂ ಈಗ ಹಿಂದಿನ ನಿನ್ನ ಕೃತ್ಯವನ್ನು ನೆನೆದು ನಿನ್ನ ಮೇಲೆ ದಾಳಿ ಮಾಡಬಹುದೆಂದು ನೀನು ಹೆದರಬೇಕಾಗಿಲ್ಲ. ಭಕ್ತವತ್ಸಲನಾದ ಪರಮೇಶ್ವರ ನಮ್ಮ ಜೊತೆಗಿದ್ದಾನೆ, ನಿಶ್ಚಿಂತನಾಗಿರು’ ಎಂದು ಧೈರ್ಯ ತುಂಬಿದ.

ಹೀಗೆ ಹರಿ ಮತ್ತು ಇಂದ್ರ ಪರಸ್ಪರ ಮಾತನಾಡುತ್ತಿರುವುದನ್ನು ನೋಡಿದ ಶಿವನಿಗೆ ಏನೋ ತಪ್ಪಾಗಿದೆ ಅನ್ನೋ ಸಂದೇಹ ಉಂಟಾಗಿ, ‘ಎಲೈ ಹರಿ, ಎಲೈ ದೇವೇಂದ್ರ, ನೀವೀರ್ವರೂ ಪರಸ್ಪರ ಏನು ಮಾತಾಡಿಕೊಳ್ಳುತ್ತಿದ್ದೀರಿ? ಎಲೈ ನಾರದ ಹಿಮವಂತನ ಅರಮನೆಯಲ್ಲಿ ಏನು ನಡೆಯಿತು? ಯಾವುದನ್ನೂ ಮರೆಮಾಚಬೇಡ. ಗಿರಿರಾಜ ತನ್ನ ಮಗಳನ್ನು ಕೊಡಬೇಕೆಂದಿರುವನೋ, ಇಲ್ಲವೋ? ಅದನ್ನು ಬೇಗನೆ ಹೇಳು’ ಎಂದ. ಹೀಗೆ ಪರಮೇಶ್ವರ ಆತುರದಿಂದ ಕೇಳಿದಾಗ, ನಾರದ ಸಾವಧಾನದಿಂದ ಹಿಮವಂತನ ಅರಮನೆಯಲ್ಲಿ ತಾನು ನೋಡಿ ಅನುಭವಿಸಿದ ಎಲ್ಲಾ ಘಟನೆಗಳನ್ನು ವಿವರಿಸಿ, ‘ನಿನ್ನ ಮದುವೆಗೆ ಯಾವ ತೊಂದರೆಯೂ ಇಲ್ಲ. ವಿಶ್ವಕರ್ಮನು ದೇವತೆಗಳನ್ನು ಮೋಹಗೊಳಿಸಲು ಮಹಾಮಾಯೆಯನ್ನು ಕುತೂಹಲಕ್ಕಾಗಿ ರಚಿಸಿದ್ದಾನಷ್ಟೆ. ಅದನ್ನು ನೋಡಿ ನಾನೂ ಆ ಮಾಯೆಯಿಂದ ಮೋಹಿತನಾಗಿ ಆಶ್ಚರ್ಯಗೊಂಡೆ’ ಎಂದ.

ನಾರದನ ಮಾತು ಕೇಳಿ ಶಂಕರ ನಗುತ್ತಾ, ‘ಪರ್ವತರಾಜ ನನಗೆ ತನ್ನ ಪುತ್ರಿಯನ್ನು ಮದುವೆ ಮಾಡಿಕೊಡುವವನಾದರೆ ಮಾಯೆಯಿಂದ ನನಗೇನು ಆಗಬೇಕು? ವಿಷ್ಣು, ಬ್ರಹ್ಮ, ಇಂದ್ರ, ಮುನಿಗಳೇ ನಿಜಾಂಶವನ್ನು ಹೇಳಿರಿ. ನೀವೆಲ್ಲರೂ ನಮ್ಮ ಕಾರ್ಯವನ್ನು ಸಾಧಿಸಲು ಜಾಗ್ರತೆಯಾಗಿ ಮುಂದೆ ತೆರಳಿರಿ’ ಎಂದ.

ಶಂಕರನ ಅಪ್ಪಣೆಯಂತೆ ಹರಿ, ಬ್ರಹ್ಮ ಮೊದಲಾದ ದೇವತೆಗಳು, ಮಹಾತ್ಮರಾದ ಋಷಿಗಳೂ ಹಿಮವಂತನ ಸಂಬಂಧಿಕರಾದ ಪರ್ವತೋತ್ತಮರನ್ನು ಮುಂದುಮಾಡಿಕೊಂಡು ಮಹಾ ಅದ್ಭುತವಾದ ಹಿಮವಂತನ ಅರಮನೆಗೆ ಹೊರಟರು. ಶಿವ ತನ್ನ ಪರಿವಾರದವರೊಡನೆ ಹಿಮವಂತನ ರಾಜಧಾನಿಯ ಸಮೀಪಕ್ಕೆ ಬಂದ.

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯದಾದ ರುದ್ರಸಂಹಿತೆಯ ಮೂರನೇ ಖಂಡವಾದ ಪಾರ್ವತೀಖಂಡದಲ್ಲಿ ನಲವತ್ತೊಂದನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT