ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಮಾಸದ ಪೂಜಾಫಲಗಳು

Last Updated 15 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

‘ಪೂಃ’ ಎಂದರೆ ಭೋಗ. ‘ಪೂಜಾ’ಶಬ್ದದ ಅರ್ಥವು ವೇದಗಳಲ್ಲಿ ನಿರೂಪಿಸಲಾಗಿದೆ. ಆದುದರಿಂದ ಇಷ್ಟದೇವತಾ ಪೂಜೆಯು ಭೋಗಪ್ರದವಾದುದು. ಸಕಲ ಇಷ್ಟಾರ್ಥಗಳನ್ನೂ ಜ್ಞಾನವನ್ನೂ ಭೋಗವನ್ನೂ ಕೊಡುವುದು ‘ಪೂಜೆ’ ಎಂಬ ಶಬ್ದಕ್ಕೆ ಅರ್ಥ.

ಕೃಷ್ಣಪಕ್ಷದ ಚತುರ್ಥಿಯಂದು ಮಹಾಗಣಪತಿಯನ್ನು ಪೂಜಿಸಿದರೆ ಆ ಪಕ್ಷದಲ್ಲಿ ಮಾಡಿದ ಪಾಪಗಳು ನಷ್ಟವಾಗುವುದು. ಶ್ರಾವಣಮಾಸದಲ್ಲಿ ಹಸ್ತಾನಕ್ಷತ್ರ, ಸಪ್ತಮೀ ತಿಥಿಗಳಿರುವ ಭಾನುವಾರ ಮತ್ತು ಮಾಘಮಾಸದ ಶುಕ್ಲ ಸಪ್ತಮಿಯಲ್ಲಿ ಬರುವ ಭಾನುವಾರದಂದು ಸೂರ್ಯನನ್ನು ಪೂಜಿಸಬೇಕು. ಜ್ಯೇಷ್ಠ ಮತ್ತು ಭಾದ್ರಪದಮಾಸಗಳಲ್ಲಿ ಶ್ರವಣನಕ್ಷತ್ರ ಮತ್ತು ದ್ವಾದಶೀತಿಥಿಗಳಿರುವ ಬುಧವಾರದಂದು ವಿಷ್ಣುವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸಿ ಸಂಪತ್ತು ಲಭಿಸುವುದು ಎಂದು ಸೂತಮುನಿಮಾಸದಪೂಜಾಫಲಗಳನ್ನು ತಿಳಿಸುತ್ತಾನೆ

ಹನ್ನೆರಡು ದಾನಗಳನ್ನು ಮಾಡಿದರೆ, ಯಾವ ಫಲವು ಲಭಿಸುವುದೋ ಆ ಫಲ ಶ್ರಾವಣಮಾಸದ ದ್ವಾದಶಿಯಲ್ಲಿ ವಿಷ್ಣುವನ್ನು ಪೂಜಿಸಿದರೆ ಲಭಿಸುವುದು. ದ್ವಾದಶಿಯಲ್ಲಿ ಹನ್ನೆರಡು ಜನರನ್ನು ವಿಷ್ಣುವಿನ ಹನ್ನೆರಡು ನಾಮಗಳಿಂದ ಷೋಡಶೋಪಚಾರವಾಗಿ ಪೂಜಿಸಿದರೆ, ವಿಷ್ಣು ಸಂತುಷ್ಟನಾಗುವನು.

ಕರ್ಕಾಟಮಾಸದ ನವಮಿಯಲ್ಲಿ ಮೃಗಶಿರಾನಕ್ಷತ್ರವಿರುವ ಸೋಮವಾರದಂದು ಜಗನ್ಮಾತೆ ಪಾರ್ವತಿಯನ್ನರ್ಚಿಸಿದರೆ ಐಶ್ವರ್ಯವು ಲಭಿಸುವುದು. ಆಶ್ವಯುಜಮಾಸದಲ್ಲಿ ಶುಕ್ಲಪಕ್ಷದ ನವಮಿಯಂದು ಮಾಡಿದ ಪೂಜೆಯಿಂದ ಸಕಲ ಇಷ್ಟಾರ್ಥಗಳು ನೆರವೇರುವುವು. ಮಾಘಮಾಸದ ಕೃಷ್ಣಚತುರ್ದಶಿಯಲ್ಲಿ ಆರ್ದ್ರಾನಕ್ಷತ್ರದಲ್ಲಿ ಶಿವನನ್ನು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ನೆರವೇರಿ, ಆಯುಷ್ಯ ವೃದ್ಧಿಯಾಗುವುದು.

ವಾರಾದಿದೇವತೆಗಳನ್ನು ಕಾರ್ತಿಕಮಾಸದಲ್ಲಿ ಪೂಜಿಸುವುದು ಪ್ರಶಸ್ತವಾದುದು. ಕಾರ್ತಿಕಮಾಸದಲ್ಲಿ ಎಲ್ಲಾ ದೇವತೆಗಳನ್ನೂ ದಾನ, ತಪಸ್ಸು, ಹೋಮ, ಜಪ, ವ್ರತ ಇವುಗಳಿಂದ ಅರ್ಚಿಸಬೇಕು. ಕಾರ್ತಿಕಮಾಸದಲ್ಲಿ ದೇವತೆಗಳನ್ನು ಪೂಜಿಸಿದರೆ ಸಕಲ ಭೋಗಗಳೂ ಲಭಿಸುವುದು; ಭಯ ನಾಶವಾಗುವುದು. ಕಾರ್ತಿಕಮಾಸದ ಆದಿತ್ಯವಾರಗಳಲ್ಲಿ ಆದಿತ್ಯನನ್ನು ಪೂಜಿಸುವುದರಿಂದ ಕುಷ್ಠ ಮುಂತಾದ ಮಹಾರೋಗಗಳು ನಾಶವಾಗುವುದು. ಕೃತ್ತಿಕಾ ನಕ್ಷತ್ರವಿರುವ ಸೋಮವಾರಗಳಲ್ಲಿ ಅಥವಾ ಕಾರ್ತಿಕ ಸೋಮವಾರಗಳಲ್ಲಿ ಶಿವನನ್ನು ಅರ್ಚಿಸಿದರೆ ಬಡತನವೆಲ್ಲವೂ ನಾಶವಾಗಿ, ಸಕಲ ಸಂಪತ್ತೂ ಲಭಿಸುವುದು. ನಾವು ವಾಸಿಸುವ ಮನೆ ಮತ್ತು ಕಾರ್ಯಕ್ಷೇತ್ರ, ಅಂದರೆ ಗದ್ದೆ-ಹೊಲ ಮತ್ತಿತರ ಕೆಲಸ ಮಾಡುವ ಸ್ಥಳಗಳು ಸಮೃದಿಯಾಗುವುದು.

ಕಾರ್ತಿಕಮಾಸದ ಮಂಗಳವಾರದಂದು ಷಣ್ಮುಖನನ್ನು ಪೂಜಿಸುವುದರಿಂದ ವಾಕ್ಸಿದ್ಧಿ ಲಭಿಸುವುದು. ಕಾರ್ತಿಕಮಾಸದ ಬುಧವಾರಗಳಲ್ಲಿ ವಿಷ್ಣುವನ್ನು ಪೂಜಿಸುವುದರಿಂದ ಒಳ್ಳೆಯ ಸಂತಾನ ಲಭಿಸುವುದು. ಕಾರ್ತಿಕಮಾಸದ ಗುರುವಾರಗಳಲ್ಲಿ ಬ್ರಹ್ಮನನ್ನು ಮತ್ತು ಶುಕ್ರವಾರಗಳಲ್ಲಿ ಗಣಪತಿಯನ್ನು ಪೂಜಿಸಿ ದಾನಮಾಡಿದರೆ, ಭೋಗವೃದ್ಧಿಯಾಗುವುದು. ಕಾರ್ತಿಕಮಾಸದ ಶನಿವಾರಗಳಲ್ಲಿ ರುದ್ರ, ವಿಷ್ಣು, ಬ್ರಹ್ಮರನ್ನು ಪೂಜಿಸಿದರೆ ಬ್ರಹ್ಮಜ್ಞಾನವು ಲಭಿಸುವುದು. ಅಲ್ಲದೆ ಧನ್ವಂತರೀ ಅಶ್ವಿನೀದೇವತೆಗಳನ್ನು ಪೂಜಿಸಿದರೆ ಆಯಾಯ ಕಾಲಗಳಲ್ಲಿ ಉದ್ಭವಿಸುವ ರೋಗಗಳು ಮತ್ತು ಅಪಮೃತ್ಯು ನಾಶವಾಗುವುದು.

ಶಾಲ್ಯನ್ನದ ನೈವೇದ್ಯವು ಪ್ರಶಸ್ತವಾದುದು. ಧನುರ್ಮಾಸದಲ್ಲಿ ಅನೇಕ ಬಗೆಯ ಅನ್ನಗಳನ್ನು ನಿವೇದಿಸಬೇಕು. ಮಾರ್ಗಶಿರಮಾಸದಲ್ಲಿ ಅನ್ನದಾನ ಮಾಡಿದರೆ ಪಾಪನಾಶವಾಗಿ ಇಷ್ಟಸಿದ್ಧಿ, ಆರೋಗ್ಯ, ಧರ್ಮ, ವೇದಾರ್ಥಜ್ಞಾನ, ಒಳ್ಳೆಯ ಆಚಾರ, ಶಾಶ್ವತವಾದ ಯೋಗ ಮತ್ತು ಬ್ರಹ್ಮಜ್ಞಾನ ಲಭಿಸುವುದು. ಧನುರ್ಮಾಸದಲ್ಲಿ ಪ್ರತಿದಿನವೂ ಉಪವಾಸವಿದ್ದು ಜಿತೇಂದ್ರಿಯನಾಗಿ ಮಧ್ಯಾಹ್ನದವರೆಗೆ ವೇದಮಾತೆಯಾದ ಗಾಯತ್ರೀಮಂತ್ರವನ್ನು ಜಪಿಸಬೇಕು. ಮಧ್ಯಾಹ್ನದ ನಂತರ ರಾತ್ರಿ ಮಲಗುವವರೆಗೆ ಪಂಚಾಕ್ಷರೀಮಂತ್ರ ಜಪಿಸಬೇಕು. ಅದರಿಂದ ಜ್ಞಾನವನ್ನು ಪಡೆದು ಮರಣದನಂತರ ಮುಕ್ತಿಯನ್ನು ಪಡೆಯುವರು.

ನೈವೇದ್ಯವೆಲ್ಲವೂ ಹನ್ನೆರಡು ವಿಧವಾಗಿರಬೇಕು. ಹನ್ನೆರಡು ಫಲಗಳು, ಹನ್ನೆರಡು ಅಡಕೆ, ಮೂವತ್ತಾರು ವಿಳ್ಳೆಯದೆಲೆ, ಪಚ್ಚಕರ್ಪೂರ ಮತ್ತಿತರ ಐದು ಸುಗಂಧದ್ಯವ್ಯಗಳಿಂದ ಕೂಡಿದ ತಾಂಬೂಲ ಮಹಾನೈವೇದ್ಯ ಎನಿಸುತ್ತದೆ. ಇಂತಹ ಮಹಾನೈವೇದ್ಯವನ್ನು ದೇವರಿಗೆ ನಿವೇದಿಸಬೇಕು. ದೇವರಿಗೆ ನಿವೇದಿಸಿದ ಮೇಲೆ ಆ ಮಹಾನೈವೇದ್ಯವನ್ನು ದೇವಭಕ್ತರಿಗೆ ದಾನಮಾಡಬೇಕು. ಕಾರ್ತಿಕಮಾಸದಲ್ಲಿ ಸಂಕ್ರಮಣ, ವ್ಯತೀಪಾತ, ಜನ್ಮನಕ್ಷತ್ರ ಮುಂತಾದುವುಗಳಿರುವ ಪುಣ್ಯದಿನಗಳಲ್ಲಿ ಮತ್ತು ಯುಗಾದಿ ಮತ್ತು ಹುಣ್ಣಿಮೆಯಲ್ಲಿ ಜನ್ಮನೈವೇದ್ಯವನ್ನು ಮಾಡಬೇಕು.

ಜನ್ಮನೈವೇದ್ಯವನ್ನು ಶಿವನಿಗೆ ಮಾತ್ರ ಅರ್ಪಿಸಬೇಕು. ಏಕೆಂದರೆ, ಲಿಂಗಸ್ವರೂಪದಿಂದಿರುವ ಶಿವನೇ ಜನ್ಮವನ್ನು ಉಂಟುಮಾಡುವವನು. ಆದುದರಿಂದ ಜನ್ಮನಿವೃತ್ತಿ ಆಗಬೇಕಾದರೆ ಶಿವನಿಗೆ ಮಾತ್ರ ಜನ್ಮನೈವೇದ್ಯವನ್ನು ಮಾಡಬೇಕು ಎಂದು ಸೂತಮುನಿಯು ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT