ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಮೂರು ವಿಧದ ಶಿವಯೋಗಿಗಳು

Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಈಗ ಸೂತಮಹಾಮುನಿ ಜಪಯೋಗದ ವಿವರ ಹೇಳುತ್ತಾನೆ. ಜಪದಿಂದ ಚಿತ್ತವು ಶುದ್ಧಿಯಾಗುವುದರಿಂದ ತಪಸ್ಸಾನ್ನಾಚರಿಸುವ ಶಿವಯೋಗಿಯೂ ಅವಶ್ಯವಾಗಿ ಜಪವನ್ನು ಮಾಡಬೇಕು ಎನ್ನುತ್ತಾನೆ.

ಶಿವಯೋಗಿಗಳಲ್ಲಿ ಕ್ರಿಯಾಯುಕ್ತರು, ತಪೋಯುಕ್ತರು ಮತ್ತುಜಪಯುಕ್ತರೆಂಬಮೂರುವಿಧದಶಿವಯೋಗಿಗಳಿದ್ದಾರೆ. ಧನ ಮುಂತಾದ ಐಶ್ವರ್ಯಗಳಿಂದ ಮತ್ತು ಸಾಷ್ಟಾಂಗ ನಮಸ್ಕಾರಗಳಿಂದ ಪೂಜಿಸುವವನು ಕ್ರಿಯಾಯೋಗಿ. ಮಿತವಾದ ಆಹಾರ ಸೇವಿಸುತ್ತಾ, ಜಿತೇಂದ್ರಿಯನಾಗಿ, ಪರರಿಗೆ ದ್ರೋಹವನ್ನೆಣಿಸದೆ ಪೂಜಾಯುಕ್ತನಾದವನು ತಪೋಯೋಗಿ. ಈ ಎರಡೂ ಗುಣಗಳುಳ್ಳವನಾಗಿ ಸದಾ ಶಿವಮಂತ್ರನಾಮಗಳನ್ನು ಜಪಿಸುವವನು ಜಪಯೋಗಿ.

ಆದಿಯಲ್ಲಿ ನಮಃ ಪದವುಳ್ಳ, ಐದು ತತ್ವ ಅಕ್ಷರಗಳಿರುವ ಶಿವನಾಮ ಓಂ ನಮಃ ಶಿವಾಯ ಮಂತ್ರವು ಸ್ಥೂಲಪ್ರಣವರೂಪವಾದ ಶಿವಪಂಚಾಕ್ಷರೀಮಂತ್ರ. ಈ ಮಂತ್ರವನ್ನ ಉಚ್ಚರಿಸುವಾಗ ಪ್ರಾರಂಭದಲ್ಲಿ ಓಂಕಾರವನ್ನು ಸೇರಿಸಿ ‘ಓಂ ನಮಃ ಶಿವಾಯ’ ಅಂತ ಜಪಿಸಬೇಕು. ಈ ಪಂಚಾಕ್ಷರಮಂತ್ರವನ್ನು ಜಪಿಸುವುದರಿಂದ ಸಕಲ ಇಷ್ಟಾರ್ಥಸಿದ್ಧಿಯನ್ನು ಪಡೆಯಬಹುದು. ಗುರುಮುಖದಿಂದ ಮಂತ್ರದ ಉಪದೇಶವನ್ನು ಪಡೆದು, ಯಾವ ತೊಂದರೆಯೂ ಇಲ್ಲದ ಪ್ರಶಸ್ತವಾದ ಪ್ರದೇಶದಲ್ಲಿ ಕುಳಿತು, ಶುಕ್ಲಪಕ್ಷದಲ್ಲಿ ಪ್ರಾರಂಭಿಸಿ ಕೃಷ್ಣಪಕ್ಷದವರೆಗೆ ಶಿವಪಂಚಾಕ್ಷರೀಜಪವನ್ನು ಮಾಡಬೇಕು. ಮಾಘಮಾಸ ಮತ್ತು ಭಾದ್ರಪದಮಾಸಗಳು ಶಿವಪಂಚಾಕ್ಷರೀಮಂತ್ರಜಪಕ್ಕೆ ಅತ್ಯುತ್ತಮವಾದ ಕಾಲ.

ಶಿವನನ್ನು ಸ್ಮರಿಸುವಾಗ ಅವನ ದಿವ್ಯಸ್ವರೂಪವನ್ನು ಮನದ ಪರದೆಯ ಮೇಲೆ ಬಿಡಿಸಬೇಕು. ಅದು ಹೇಗೆಂದರೆ, ಶಿವನು ಪದ್ಮಾಸನದಲ್ಲಿ ಕುಳಿತು, ತನ್ನ ಎಡತೊಡೆಯಲ್ಲಿ ಶಕ್ತಿ(ಪಾರ್ವತಿ)ಯನ್ನು ಕೂರಿಸಿಕೊಂಡಂತೆ. ಶಿರಸ್ಸಿನಲ್ಲಿ ಗಂಗೆ ಮತ್ತು ಚಂದ್ರ ಕಲೆಗಳನ್ನು ಧರಿಸಿರುವಂತೆ ಮನದಲ್ಲಿ ಚಿತ್ರಿಸಿಕೊಳ್ಳಬೇಕು. ಮಂಗಳವನ್ನುಂಟುಮಾಡುವ ಶಿವನನ್ನು ಪ್ರಮಥಗಣಗಳು ಸುತ್ತಲೂ ನೆರೆದಿರುವಂತೆ. ಮೃಗ(ಜಿಂಕೆ)ಶಿಶುವನ್ನು ಕೈಯಲ್ಲಿ ಹಿಡಿದಿರುವಂತೆ. ವರದಮುದ್ರೆ ಮತ್ತು ಅಭಯಮುದ್ರೆಗಳನ್ನು ಪ್ರದರ್ಶಿಸುತ್ತಾ, ಸದಾ ಭಕ್ತರಿಗೆ ಅನುಗ್ರಹವನ್ನುಂಟು ಮಾಡುವಂತೆ ಶಿವನನ್ನು ಸ್ಮರಿಸಬೇಕು.

ಶುದ್ಧವಾದ ಆಚಾರವುಳ್ಳ ಮನಸ್ಸಿನಿಂದ ಸೂರ್ಯಮಂಡಲದಲ್ಲಿ ಶಿವನನ್ನು ಪೂಜಿಸಿದ ನಂತರ, ಪೂರ್ವಾಭಿಮುಖವಾಗಿ ಕುಳಿತು ಪಂಚಾಕ್ಷರೀಮಂತ್ರವನ್ನು ಜಪಿಸಬೇಕು. ಕೃಷ್ಣಚತುರ್ಥಿಯ ಪ್ರಾತಃಕಾಲದಲ್ಲಿ ಶುದ್ಧವಾದ ಪ್ರದೇಶದಲ್ಲಿ ಕುಳಿತು, ಹನ್ನೆರಡು ಸಾವಿರ ಶಿವಪಂಚಾಕ್ಷರೀಮಂತ್ರ ಜಪಿಸಬೇಕು.

ನಂತರ ಪೂಜೆಗಾಗಿ ಶಿವಭಕ್ತರಾಗಿರುವ ದಂಪತಿಗಳನ್ನು ಆಹ್ವಾನಿಸಬೇಕು. ಸಾಂಬಶಿವಮೂರ್ತಿಸ್ವರೂಪನಾದ ಗುರುವನ್ನು, ಗುರುಪತ್ನಿಯೊಡನೆ ಆಹ್ವಾನಿಸಬೇಕು. ಹಾಗೇ, ತತ್ಪುರುಷ, ಅಘೋರ, ವಾಮದೇವ, ಸದ್ಯೋಜಾತ, ಈಶಾನ ಎಂಬ ಐದು ಶಿವಮೂರ್ತಿಗಳ ಪೂಜೆಗಾಗಿ ಐದು ಶಿವಭಕ್ತರನ್ನು ನಿಯಮಿಸಬೇಕು. ನಂತರ ಪೂಜಾಸಾಮಗ್ರಿಗಳಿಂದ ಶಿವಪೂಜೆ ಪ್ರಾರಂಭಿಸಬೇಕು. ಶಿವಪೂಜೆಯನ್ನು ವಿಧಿವತ್ತಾಗಿ ಮಾಡಿದಮೇಲೆ, ಹೋಮ ಮಾಡಬೇಕು. ಅಗ್ನಿಮುಖಪರ್ಯಂತವಾಗಿ ತನ್ನ ಸೂತ್ರದಂತೆಯೇ ಆಚರಿಸಿ ಹೋಮವನ್ನು ಮುಗಿಸಬೇಕು.

ಶಿವಭಕ್ತರಾದವರಿಂದ ನೂರೆಂಟು ಹೋಮಗಳನ್ನು ಮಾಡಿಸಬೇಕು. ಹೋಮ ಮಾಡಿದವರಿಗೆ ದಕ್ಷಿಣೆಯನ್ನು ಕೊಡಬೇಕು. ಗುರುವಿಗೆ ಎರಡು ಹಸುಗಳನ್ನು ದಾನಮಾಡಬೇಕು. ಗುರುವು ಈಶಾನಾದಿ ಪಂಚಬ್ರಹ್ಮಸ್ವರೂಪನೆಂದೂ, ಸಾಂಬಶಿವ ಸ್ವರೂಪನೆಂದು ತಿಳಿದು, ಅವನ ಪಾದ ತೊಳೆದ ಜಲದಲ್ಲಿ ಸ್ನಾನ ಮಾಡಬೇಕು. ಹಾಗೆ ಮಾಡಿದರೆ, ಮೂವತ್ತಾರು ಕೋಟಿ ತೀರ್ಥಗಳಲ್ಲಿ ಸ್ನಾನಮಾಡಿದ ಪುಣ್ಯ ಲಭಿಸುವುದು. ಗುರುಗಳಿಗೆ ಹತ್ತು ಅಂಗಗಳೊಡನೆ ಅನ್ನವನ್ನು ಭಕ್ತಿಯಿಂದ ದಾನಮಾಡಬೇಕು. ಪಾರ್ವತೀ ಎಂಬ ಬುದ್ಧಿಯಿಂದ ಗುರುಪತ್ನಿಯನ್ನು ಪೂಜಿಸಬೇಕು. ರುದ್ರಾಕ್ಷಿ ಮತ್ತು ವಸ್ತ್ರಗಳನ್ನೂ ಅರ್ಪಿಸಿ, ಗುರುಜನಗಳಿಗೆ ಮೃಷ್ಟಾನ್ನಭೋಜನ ಮತ್ತು ದಕ್ಷಿಣೆಯನ್ನು ಕೊಡಬೇಕು. ದೇವದೇವನಾದ ಶಿವನನ್ನು ಪ್ರಾರ್ಥಿಸಿ ಜಪವನ್ನು ಮುಗಿಸಬೇಕು. ಹೀಗೆ ಪರುಶ್ಚರಣ(ಜಪ)ವನ್ನು ಮಾಡಿದವನು ಮಂತ್ರಜ್ಞನಾಗುವನು.

ಪಂಚಲಕ್ಷ ಜಪದಿಂದ ಅತಲಲೋಕ ಅಂದರೆ, ಪಾತಾಳಲೋಕದಿಂದ ಸತ್ಯಲೋಕ ಪರ್ಯಂತವಾಗಿರುವ ಎಲ್ಲಾ ಲೋಕಗಳ ಐಶ್ವರ್ಯ(ಭೋಗ)ವನ್ನು ಪಡೆಯುವನು. ಜಪದ ಮಧ್ಯದಲ್ಲಿಯೇ ಮೃತನಾದರೆ ಆ ಜಪದ ಪುಣ್ಯವನ್ನು ಸ್ವರ್ಗಾದಿಗಳಲ್ಲಿ ಅನುಭವಿಸುವನು. ಇನ್ನೂ ಲಕ್ಷ ಬಾರಿ ಜಪಿಸಿದರೆ ಬ್ರಹ್ಮನ ಸಾಮೀಪ್ಯ ಲಭಿಸುವುದು. ಒಂದು ಕೋಟಿ ಜಪಿಸಿದರೆ, ಸಾಕ್ಷಾತ್ ಬ್ರಹ್ಮನ ಸಮಾನರಾಗುವರು. ಹೀಗೆ ಕಾರ್ಯಬ್ರಹ್ಮ, ಅಂದರೆ ಚತುರ್ಮುಖ ಬ್ರಹ್ಮನ ಸಾಯುಜ್ಯವನ್ನು ಪಡೆದು, ಮತ್ತೊಂದು ಕಲ್ಪ ಪ್ರಾರಂಭವಾದಾಗ ಬ್ರಹ್ಮಪುತ್ರನಾಗಿ ಜನಿಸಿ, ಶಾಶ್ವತ ಮುಕ್ತಿ ಪಡೆಯುವರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT