ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಶಿವನ ಕ್ಷಮೆ ಕೋರಿದ ದೇವತೆಗಳು

ಅಕ್ಷರ ಗಾತ್ರ

ದೇವತೆಗಳುಶಿವನಲ್ಲಿಕ್ಷಮೆಯಾಚಿಸಲು ಕೈಲಾಸಕ್ಕೆ ಬಂದು ಪ್ರಾರ್ಥಿಸುತ್ತಾರೆ: ‘ಓ ಮಹಾದೇವನೆ, ಲೋಕಾಚಾರದಂತೆ ಓರ್ವ ಸಾಮಾನ್ಯದೇವನಂತೆ ನೀನು ಕಂಡರೂ, ವಾಸ್ತವದಲ್ಲಿ ನೀನು ಬ್ರಹ್ಮವಸ್ತು, ಅಖಂಡ ಜಗತ್ತಿನ ಒಡೆಯ. ನೀನೇ ಪರಮೇಶ್ವರನೆಂದು ನಮಗೂ ತಿಳಿದಿದೆ. ಹೀಗಿದ್ದರೂ, ನಿನ್ನ ಮಹಾಮಾಯೆಯಿಂದ ನಮ್ಮನ್ನು ಸುಮ್ಮನೆ ಏಕೆ ಮೋಹಗೊಳಿಸಿ, ನಿನ್ನ ದ್ವೇಷಿಸುವಂತೆ ಮಾಡುವೆ.

ವೃಥಾ ಪರೀಕ್ಷೆಗಳನ್ನೊಡ್ಡಿ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬೇಡ. ಜಗತ್ತಿಗೆ ಆದಿ ಮತ್ತು ಅಂತ್ಯ ಎಲ್ಲವೂ ನೀನೆ. ಪ್ರಕೃತಿ ಮತ್ತು ಪುರುಷರುಗಳ ಕರ್ತ. ನಿನ್ನ ಸ್ವರೂಪವು ಮನಸ್ಸು ಮತ್ತು ವಾಕ್ಕುಗಳಿಗೆ ನಿಲುಕದಂತಹುದು. ರೇಶಿಮೆಹುಳುವು ದಾರವನ್ನು ನೇಯ್ದು, ಅದರೊಳಗೆ ತಾನೇ ಸೇರಿ, ಕೊನೆಗೆ ತೂರಿ ಬರುವಂತೆ ನಿನ್ನ ಇಚ್ಛೆಯಿಂದಲೇ ಜಗತ್ತನ್ನು ಸೃಜಿಸುವೆ, ಪಾಲಿಸುವೆ, ಮತ್ತೆ ನೀನೆ ಸಂಹರಿಸುವೆ.

‘ಓ ಪ್ರಭು, ದೇವತೆಗಳಿಗಾಗಿ ಯಜ್ಞಾದಿಕರ್ಮಗಳನ್ನು ನೀನೇ ದಯೆಯಿಂದ ಸೃಜಿಸಿರುವೆ. ಲೋಕಾಚಾರಗಳು ನಿನ್ನಿಂದಲೇ ನಿಂತಿವೆ. ಅವುಗಳನ್ನು ವೇದವಿತ್ತುಗಳಾದ ನಾವು ಶ್ರದ್ಧೆಯಿಂದ ಆಚರಿಸುವೆವು. ಯಾಗದಲ್ಲಿ ಮಂಗಳವನ್ನೋ ಅಮಂಗಳವನ್ನೋ ಅಥವಾ ಮಿಶ್ರಫಲವನ್ನೋ, ಅವರವರ ಕರ್ಮಕ್ಕೆ ತಕ್ಕಂತೆ ಕೊಡುವವನು ನೀನೇ ಆಗಿರುವೆ. ನಿನ್ನನ್ನು ವೇದವೂ ಹೊಗಳುವುದು.

ಆದರೆ ಕೆಲವರು ಮೂಢರು ಅಸೂಯೆಯಿಂದ ಮಹಾತ್ಮರನ್ನು ನಿಂದಿಸುವರು. ಅಂಥವರನ್ನ ನೀನೇ ಶಿಕ್ಷಿಸುವೆ. ಓ ಪರಮೇಶ್ವರ, ನಮ್ಮಲ್ಲಿ ಅನುಗ್ರಹವನ್ನು ಮಾಡು. ನೀನು ಜಗತ್ತನ್ನು ಸೃಜಿಸುವ ಪ್ರಜಾಪತಿಗಳನ್ನೇ ಸೃಷ್ಟಿಸುವವನು. ಮಾಯಿಕವಾದ ತ್ರಿಗುಣಸ್ವರೂಪನಾದ ಪರಮೇಶ್ವರನಾದ ನಿನಗೆ, ನಿಜವಾಗಿ ಗುಣಗಳ ಸಂಬಂಧವಿಲ್ಲ. ಪ್ರಕೃತಿಪುರುಷರಿಗಿಂತಲೂ ಉತ್ಕೃಷ್ಟನಾದವನು. ಸಂಸಾರರೂಪನೂ ಭೂರೂಪನೂ ಜಲರೂಪನೂ ಸುಖರೂಪನೂ ಗಂಧಸ್ವರೂಪನೂ ಅಗ್ನಿರೂಪನೂ ವಾಯುರೂಪನೂ ಸ್ಪರ್ಶರೂಪನೂ ಚಂದ್ರರೂಪನೂ ಕರ್ಮರೂಪನೂ ಯಜಮಾನಸ್ವರೂಪನೂ ಆಕಾಶಸ್ವರೂಪನೂ ಶಬ್ದಸ್ವರೂಪನೂ ಪಾಪಿಗಳಿಗೆ ಭಯಂಕರನೂ ಪುಣ್ಯವಂತರಿಗೆ ಸೌಮ್ಯರೂಪನು. ನಿನಗೆ ಜನ್ಮವಿಲ್ಲ, ಜಗತ್ತಿಗೆ ನೀನೇ ಆದಿಕಾರಣನು. ನೀನು ಒಬ್ಬನೇ; ಜಗತ್ತಿನಲ್ಲಿ ಅನೇಕ ಜೀವರೂಪಗಳಿಂದ ಜನಿಸಿರುವೆ.

‘ಓ ದೇವ, ಈ ಜಗತ್ತನ್ನು ಎಂಟು ಮೂರ್ತಿಗಳಾಗಿ ನೀನು ಧರಿಸಿರುವೆ. ಆದಕಾರಣ ನಿನಗೆ ಅಷ್ಟಮೂರ್ತಿ ಎಂದು ಹೆಸರು. ನೀನು ಆದಿಪುರುಷನು, ದಯಾಮಯನು, ನಿನ್ನ ಭಯದಿಂದ ಗಾಳಿಯು ಬೀಸುವನು, ನಿನ್ನ ಭಯದಿಂದಲೇ ಅಗ್ನಿಯೂ ಉರಿಯುವನು. ನಿನ್ನ ಭಯದಿಂದಲೇ ಸೂರ್ಯನು ಬೆಳಗುವನು. ಮೃತ್ಯುವು ನಿನ್ನ ಹೆದರಿಕೆಯಿಂದ ದೂರ ಓಡುವನು. ದಯಾಮಯ, ಪ್ರಸನ್ನನಾಗು.

ದುಃಖಿತರೂ ಮೂಢರೂ ಆದ ನಮ್ಮನ್ನು ಸಲಹುವವನಾಗು. ಅನೇಕ ಆಪತ್ತುಗಳಲ್ಲಿ ಹಿಂದೆ ನೀನೇ ನಮ್ಮನ್ನು ಸಲಹಿರುವೆ. ಈಗಲೂ ನಮ್ಮನ್ನು ಸಲಹಬೇಕು. ದಕ್ಷಯಜ್ಞವನ್ನು ಉದ್ಧರಿಸಿ ಸಮಾಪ್ತಗೊಳಿಸು. ಭಗನು ತನ್ನ ಕಣ್ಣುಗಳನ್ನು ತಿರುಗಿ ಪಡೆಯಲಿ, ದಕ್ಷನು ಬದುಕುವಂತೆ ಮಾಡು. ಪೂಷನ ಹಲ್ಲುಗಳು ತಿರುಗಿ ಬೆಳೆಯಲಿ. ಭೃಗುಮುನಿಯ ಕೂದಲುಗಳು ಮೊದಲಿನಂತೆ ಬೆಳೆಯಲಿ. ನಿನ್ನ ಅನುಗ್ರಹದಿಂದದೇವತೆಗಳುಮುಂತಾದವರು ಆರೋಗ್ಯವನ್ನು ಹೊಂದಲಿ.

ಅವರಿಗೆ ವೀರಭದ್ರನ ಆಯುಧಪ್ರಹಾರಗಳ ನೋವುಗಳು ಶಮನವಾಗಲಿ. ಮುಂದೆ ಎಲ್ಲಾ ಯಜ್ಞದಲ್ಲೂ ನಿನಗೆ ಅಗ್ರವಾದ, ಪೂರ್ಣಭಾಗವನ್ನು ಕಲ್ಪಿಸುವೆವು. ಹಿಂದೆ ಮಾಡಿರುವ ತಪ್ಪನ್ನು ಮುಂದೆಂದೂ ಮಾಡುವುದಿಲ್ಲ’ ಎಂದು ಬ್ರಹ್ಮ, ವಿಷ್ಣು ಮತ್ತು ಇಂದ್ರಾದಿದೇವತೆಗಳುಅಂಜಲಿಬದ್ಧರಾಗಿ ಪ್ರಾರ್ಥಿಸುತ್ತಾ, ತಮ್ಮನ್ನು ಕ್ಷಮಿಸುವಂತೆ ಶಿವನನ್ನು ಬೇಡಿಕೊಂಡರು ಎಂಬಲ್ಲಿಗೆ ಸತೀಖಂಡದ ನಲವತ್ತೊಂದನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT