ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ದಕ್ಷನಿಗೆ ಜೀವ ಕರುಣಿಸಿದ ಶಿವ

ಅಕ್ಷರ ಗಾತ್ರ

ಕ್ಷಮೆ ಬೇಡಿದ ವಿಷ್ಣು, ಬ್ರಹ್ಮ, ಇಂದ್ರಾದಿ ದೇವತೆಗಳಿಗೆ ಕರುಣಾಮಯನಾದ ಶಿವನು ಮಂದಹಾಸವನ್ನು ಸೂಸುತ್ತಾ ಹೀಗೆ ಅನುಗ್ರಹಿಸಿದ: ‘ಎಲೈ ಬ್ರಹ್ಮವಿಷ್ಣುಗಳೇ, ಸಾವಧಾನ ಮನಸ್ಸಿನಿಂದ ನನ್ನ ಮಾತನ್ನು ಕೇಳಿ. ನಿಜವಾದ ವಿಚಾರವನ್ನು ಹೇಳುವೆನು. ಬಾಲಕರಾದ ನೀವೆಲ್ಲರೂ ನನ್ನ ಮಾಯೆಗೆ ಒಳಪಟ್ಟವರಾಗಿ ಅನಿಷ್ಟವನ್ನಾಚರಿಸಿರುವಿರಿ. ಅದರಿಂದ ನನಗೇನೂ ವ್ಯಥೆಯಿಲ್ಲ.

ಆದರೆ ನಿಮಗೆ ಬುದ್ಧಿ ಬರಲೆಂದು ಆ ರೀತಿ ಶಿಕ್ಷಿಸಿರುವೆ. ದಕ್ಷನ ಯಜ್ಞನಾಶವನ್ನು ನಾನು ಬೇಕೆಂದು ಮಾಡಲಿಲ್ಲ. ಆದರೆ ಇನ್ನೊಬ್ಬರಿಗೆ ಕೇಡನ್ನು ಬಯಸಿದರೆ, ಅದು ತನಗೇ ಬಂದೊದಗುವುದು ಎಂದು ತೋರಿಸಲು ಹಾಗೆ ಯಜ್ಞವನ್ನು ಧ್ವಂಸಗೊಳಿಸಿದೆ. ಪರರಿಗೆ ತೊಂದರೆಯಾಗುವಂತಹ ಕಾರ್ಯವನ್ನು ಯಾರೂ ಮಾಡಬಾರದು. ಹಾಗೆ ಮಾಡಿದರೆ, ಅದು ತನಗೇ ಕೇಡಾಗುವುದು. ಇದಕ್ಕೆ ದಕ್ಷನೇ ದೃಷ್ಟಾಂತವು. ಶಿರಸ್ಸನ್ನು ಕಳೆದುಕೊಂಡ ದಕ್ಷನು ಮುಖವುಳ್ಳವನಾಗಲಿ, ಮಿತ್ರನೆಂಬ ಆದಿತ್ಯನ ಕಣ್ಣಿನಿಂದ ಭಗದೇವತೆಯು ಯಜ್ಞಭಾಗವನ್ನು ನೋಡುವವನಾಗಲಿ, ಹಲ್ಲುಗಳನ್ನು ಕಳೆದುಕೊಂಡ ಸೂರ್ಯನು ಕರ್ಮಗಳಲ್ಲಿ ಮೊಸರು, ಹಿಟ್ಟು (ಸಕ್ತು) ಮುಂತಾದ ಹವಿಸ್ಸನ್ನು ಪಡೆಯಲಿ.

ನನ್ನನ್ನು ತೀವ್ರವಾಗಿ ವಿರೋಧಿಸಿದ ಭೃಗುಮುನಿಯು ಆಡಿನಂತೆ ಗಡ್ಡವುಳ್ಳವನಾಗಲಿ. ಮಿಕ್ಕ ದೇವತೆಗಳೆಲ್ಲರೂ ಆರೋಗ್ಯವನ್ನು ಹೊಂದಲಿ. ಸೂರ್ಯ ಮತ್ತು ಅಶ್ವಿನಿ ದೇವತೆಗಳು ವಾಹನಗಳನ್ನು ಮಾಡಿಕೊಂಡು ಬಾಹು ಮತ್ತು ಕೈಗಳಿಂದ ಸಂಚರಿಸುವವರಾಗಲಿ. ಮಿಕ್ಕ ಅಧ್ವರ್ಯುಗಳೆಲ್ಲರೂ ನೀವು ಹೇಳಿದಂತೆ ಆರೋಗ್ಯವನ್ನು ಹೊಂದಲಿ’ ಎಂದು ಹೇಳಿ ಪರಮೇಶ್ವರನು ಸುಮ್ಮನಾದನು.

ಶಂಕರನ ಮಾತನ್ನು ಕೇಳಿ ವಿಷ್ಣು ಮೊದಲಾದವರೆಲ್ಲರೂ ಸಂತೋಷಪಟ್ಟರು. ಅವರೆಲ್ಲ ತಿರುಗಿ ದಕ್ಷಯಜ್ಞ ಶಾಲೆಗೆ ಹಿಂದಿರುಗಲು ನಿರ್ಧರಿಸಿದರು. ಶಿವನು ಸಹ ತಮ್ಮೊಡನೆ ಕನಖಲ ಕ್ಷೇತ್ರದಲ್ಲಿರುವ ದಕ್ಷಯಜ್ಞಶಾಲೆಗೆ ಬರಬೇಕೆಂದು ಕೋರಿದರು. ಅದರಂತೆ ಶಿವನು ವಿಷ್ಣು, ಬ್ರಹ್ಮ, ಇಂದ್ರಾದಿ ದೇವತೆಗಳೊಂದಿಗೆ ದಕ್ಷಯಜ್ಞಶಾಲೆಗೆ ಬಂದ. ಅಲ್ಲಿ ಸ್ವಾಹಾದೇವಿ, ಸ್ವಧಾದೇವಿ, ಪೂಷಾ, ಧೃತಿ, ತುಷ್ಟಿದೇವಿ, ಸರಸ್ವತೀ, ಋಷಿಗಳು, ಪಿತೃಗಳು, ಅಗ್ನಿಪುರುಷರು, ಯಕ್ಷರು, ಗಂಧರ್ವರು, ರಾಕ್ಷಸರು ಇದ್ದರು. ಇವರಲ್ಲಿ ಕೆಲವರನ್ನು ವೀರಭದ್ರನು ಹೊಡೆದು ಗಾಯಗೊಳಿಸಿದ್ದರೆ, ಇನ್ನೂ ಕೆಲವರು ಮೃತರಾಗಿದ್ದರು.

ಧ್ವಂಸವಾದ ಯಜ್ಞವನ್ನು ನೋಡಿ ಶಂಕರನು ನಗುತ್ತಾ, ಮಹಾವೀರನಾದ ವೀರಭದ್ರನನ್ನು ಕರೆದು, ‘ಎಲೈ ವೀರಭದ್ರನೆ, ಇದೆಂತಹ ಕಾರ್ಯವನ್ನು ಮಾಡಿರುವೆ? ದೇವತೆಗಳಿಗೂ ಮುನಿಗಳಿಗೂ ಮಹಾಶಿಕ್ಷೆಯನ್ನೇ ವಿಧಿಸಿರುವೆ. ದಕ್ಷನು ವಿಲಕ್ಷಣವಾದ ಯಾಗವನ್ನು ಮಾಡಿದ. ಅದಕ್ಕೆ ತಕ್ಕ ಫಲವು ಅವನಿಗೆ ಲಭಿಸಿತು. ಆ ದಕ್ಷನನ್ನು ಇಲ್ಲಿಗೆ ಕರೆದುಕೊಂಡು ಬಾ’ ಎಂದ.

ವೀರಭದ್ರನು ದಕ್ಷನ ತಲೆಯಿಲ್ಲದ ಮುಂಡವನ್ನು ತಂದು ಎದುರಿಗಿರಿಸಿದ. ಶಿವನು ‘ದಕ್ಷನ ಶಿರಸ್ಸೆಲ್ಲಿ’ ಎಂದು ಪ್ರಶ್ನಿಸಿದ. ವೀರಭದ್ರನು ‘ಅಗ್ನಿಯಲ್ಲಿ ದಕ್ಷನ ಶಿರವನ್ನು ಹೋಮ ಮಾಡಿದೆ’ ಎಂದ. ಕೈಲಾಸದಲ್ಲಿ ದೇವತೆಗಳಿಗೆ ಮಾತು ಕೊಟ್ಟಂತೆ ದಕ್ಷನನ್ನು ಬದುಕಿಸಿ, ಯಜ್ಞವನ್ನು ಯಶಸ್ವಿಗೊಳಿಸುವ ಭರವಸೆ ಈಡೇರಿಸಬೇಕಿತ್ತು. ದೇವತೆಗಳು ಸವನೀಯ ಯಾಗಕ್ಕಾಗಿ ಸಿದ್ಧಪಡಿಸಿದ್ದ ಪಶುವಿನ ಶಿರವನ್ನು ಕತ್ತರಿಸಿ ದಕ್ಷನ ಮುಂಡಕ್ಕೆ ಸೇರಿಸುವಂತೆಶಿವಸೂಚಿಸಿದ.

ಅದರಂತೆ ದೇವತೆಗಳು ಯಜ್ಞಪಶುವಾದ ಆಡಿನ ಶಿರಸ್ಸನ್ನು ದಕ್ಷನ ಮುಂಡಕ್ಕೆ ಸೇರಿಸಿದರು. ಶಂಕರನು ಶುಭದೃಷ್ಟಿಯಿಂದ ದಕ್ಷನ ಶರೀರವನ್ನು ನೋಡಿದಾಗ ಆ ದೇಹದಲ್ಲಿ ಪ್ರಾಣ ಮೂಡಿತು. ಮಲಗಿ ಎದ್ದವನಂತೆ ದಕ್ಷಬ್ರಹ್ಮ ಎದ್ದು ಕುಳಿತ. ತನ್ನ ಎದುರಿನಲ್ಲಿ ನಿಂತಿರುವ ಶಂಕರನನ್ನು ನೋಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT