ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಕಣ್ಣೀರಿಟ್ಟ ದಕ್ಷ

ಅಕ್ಷರ ಗಾತ್ರ

ಹಿಂದೆ ಶಿವದ್ವೇಷದಿಂದ ಪಾಪಿಯಾಗಿದ್ದ ದಕ್ಷನ ಮೇಲೆ ಶಿವನ ಪ್ರಸನ್ನದೃಷ್ಟಿ ಬಿದ್ದಾಗ ಶರತ್ಕಾಲದ ಚಂದ್ರನಂತೆ ನಿರ್ಮಲನಾದ. ಆಗ ಅವನು ಮೃತಳಾದ ತನ್ನ ಮಗಳು ಸತಿಯನ್ನು ನೆನಪಿಸಿಕೊಂಡು ದುಃಖಿಸಿದ. ಮನೆಯ ನಂದಾದೀಪದಂತಿದ್ದ ಮಗಳನ್ನು ತನ್ನ ಅಜ್ಞಾನ, ದುರಹಂಕಾರದಿಂದ ಸಾವಿಗೀಡಾಗುವಂತೆ ಮಾಡಿದ ಮಹಾಪಾಪಿ ತಾನೆಂದು ರೋದಿಸಿದ.

ಮಗಳೆಂಬ ಕನಿಕರವೂ ಇಲ್ಲದೆ ನಿಕೃಷ್ಟನಾಗಿ ನಡೆದುಕೊಂಡೆ. ಅಳಿಯನೆಂಬ ಬಂಧುತ್ವವನ್ನೂ ಪರಿಗಣಿಸದೆ ನಿನ್ನನ್ನು ಅವಮಾನಿಸಿದೆ – ಎಂದು ಸಂಕಟಪಟ್ಟ. ಬಳಿಕ ಶಂಕರನಿಗೆ ನಮಸ್ಕರಿಸಿ, ‘ಓ ವಿಶ್ವೇಶ್ವರ, ನೀನು ಜಗದ್ರೂಪನು, ಪರಬ್ರಹ್ಮಸ್ವರೂಪನು, ಜೀವಾತ್ಮರೂಪನು, ಜಗತ್ತನ್ನು ಸಲಹುವ ಹರಿ ಮುಂತಾದವರನ್ನೂ ಸಲಹುವವನು, ಸರ್ವೋತ್ತಮನು. ದೇವದೇವನಾದ ಓ ಮಹಾದೇವ, ನನ್ನಲ್ಲಿ ಅನುಗ್ರಹವನ್ನು ಮಾಡಿ ನನ್ನ ಅಪರಾಧವನ್ನು ಕ್ಷಮಿಸು.

ಓ ಶಂಭೋ, ಶಿಕ್ಷಿಸುವ ನೆವದಿಂದ ನನ್ನಲ್ಲಿ ಅನುಗ್ರಹವನ್ನೇ ನೀನು ಮಾಡಿರುವೆ. ನಾನು ತಿಳಿವಳಿಕೆಯಿಲ್ಲದ ಮೂಢನಾಗಿದ್ದೆ. ಈಗ ನಿನ್ನ ಸ್ವರೂಪವು ತಿಳಿಯಿತು. ನೀನು ಎಲ್ಲರಿಗಿಂತಲೂ ಶ್ರೇಷ್ಠನು. ವಿಷ್ಣು, ಬ್ರಹ್ಮ ಮೊದಲಾದವರು ನಿನ್ನನ್ನು ಸೇವಿಸುವರು. ವೇದಗಳು ನಿನ್ನನ್ನು ಸ್ತುತಿಸುವುವು. ಪರಮೇಶ್ವರನೇ ನೀನು ಸತ್ಪುರುಷರಿಗೆ ನೀನು ಕಲ್ಪವೃಕ್ಷದಂತೆ ಬೇಕಾದುದನ್ನು ಕೊಡುವೆ. ನೀನು ವಿದ್ಯಾ, ತಪಸ್ಸು, ವ್ರತಗಳನ್ನು ಅನುಷ್ಠಾನಿಸುವ ಸಜ್ಜನರನ್ನು ಮೊದಲಿಗೆ ಮುಖದಿಂದ ಸೃಜಿಸಿರುವೆ.

ಆತ್ಮತತ್ವವನ್ನು ತಿಳಿಯಲು ಅವರನ್ನು ಈ ರೀತಿ ಸೃಷ್ಟಿಸಿದೆ. ಗೋಪಾಲನು ಪಶುಗಳನ್ನು ರಕ್ಷಿಸುವಂತೆ, ನೀನು ಪ್ರಾಣಿಗಳನ್ನು ಎಲ್ಲ ಅಪತ್ತುಗಳಿಂದಲೂ ರಕ್ಷಿಸುವೆ. ದುಷ್ಟರನ್ನು ಶಿಕ್ಷಿಸಿ, ಧರ್ಮವನ್ನು ರಕ್ಷಿಸುವೆ. ನಿನ್ನನ್ನು ಕೆಟ್ಟ ಮಾತುಗಳೆಂಬ ಬಾಣಗಳಿಂದ ಬಹಳವಾಗಿ ಪ್ರಹರಿಸಿದೆ. ದೇವತೆಗಳು ಮಹಾ ಅಪರಾಧವನ್ನು ಮಾಡಿದರು. ಆದರೂ ದಯಾಮಯನಾದ ನೀನು ನಮ್ಮೆಲ್ಲರನ್ನು ಕ್ಷಮಿಸಿ, ಅನುಗ್ರಹಿಸಿರುವೆ’ ಎಂದು ಬಹಳ ಸ್ತೋತ್ರ ಮಾಡಿದನು.

ನಂತರ ಹರಿಯು ಶಿವನಿಗೆ ನಮಸ್ಕರಿಸಿ,‘ಓ ಪರಮೇಶ್ವರನೆ, ನೀನು ದೇವದೇವನು, ಪರಬ್ರಹ್ಮನು, ಪರಮಾತ್ಮನು, ದಯಾಮಯನು, ಜಗತ್ತೆಲ್ಲವನ್ನೂ ವ್ಯಾಪಿಸಿರುವ ಸ್ವತಂತ್ರನು, ನಿನ್ನ ಯಶಸ್ಸನ್ನು ವೇದಗಳು ಗಾನಮಾಡುವುವು. ಇಂತಹ ನೀನು ಅಪರಾಧಿಗಳಾದ ನಮ್ಮಲ್ಲಿ ಅನುಗ್ರಹವನ್ನು ಮಾಡಿರುವೆ. ದಕ್ಷನ ಅಪರಾಧವನ್ನು ಮನ್ನಿಸಿದೆ. ನೀನು ಸ್ತುತಿನಿಂದೆಗಳಿಂದ ಮನೋವಿಕಾರವನ್ನು ಹೊಂದುವವನಲ್ಲ. ಮೂಢತನದಿಂದ ನಾನೂ ನಿನಗೆ ಅಪರಾಧವನ್ನು ಮಾಡಿರುವೆ. ನೀನು ಪರಬ್ರಹ್ಮಸ್ವರೂಪನು. ಸಮಸ್ತರಿಗೂ ನೀನು ಜನಕನಾಗಿರುವೆ. ಆದುದರಿಂದ ನನ್ನ ಅಪರಾಧಗಳನ್ನು ಕ್ಷಮಿಸು’
ಎಂದು ಸ್ತುತಿಸಿದ.

ನಂತರ ಬ್ರಹ್ಮ ಹೀಗೆ ಸ್ತುತಿಸಿದ: ‘ಓ ಮಹಾದೇವನೆ, ನೀನು ಸ್ವತಂತ್ರನು. ಪರಮಾತ್ಮನು, ಪರಮೇಶ್ವರನು. ನಿನಗಾದ ಅವಮಾನವನ್ನು ಗಣಿಸದೆ ನನ್ನ ಪುತ್ರನಾದ ದಕ್ಷನಲ್ಲಿ ಅನುಗ್ರಹವನ್ನು ಮಾಡಿರುವೆ. ಓ ದೇವೇಶ, ಈಗ ನೀನು ಪ್ರಸನ್ನನಾಗಿ ದಕ್ಷಯಜ್ಞವನ್ನು ಉದ್ಧರಿಸಿ ಸಮಾಪ್ತಿಗೊಳಿಸು. ಎಲ್ಲರ ಶಾಪವನ್ನು ಹೋಗಲಾಡಿಸು. ನಮ್ಮನ್ನು ಸತ್ಕರ್ಮದಲ್ಲಿ ಪ್ರೇರಿಸುವವನೂ ನೀನೆ, ದುಷ್ಕರ್ಮವನ್ನು ನಿರಾಕರಿಸುವವನೂ ನೀನೆ ಆಗಿರುವೆ’ ಎಂದು ಪರಮೇಶ್ವರನನ್ನು ಅಂಜಲಿಬದ್ಧನಾಗಿ, ಸ್ತೋತ್ರಮಾಡಿ ವಿನಯದಿಂದ ನಿಂತ.

ದಕ್ಷ, ವಿಷ್ಣು, ಬ್ರಹ್ಮರ ನಂತರ ಇಂದ್ರ ಮೊದಲಾದ ದೇವತೆಗಳು, ಲೋಕಪಾಲರು, ಪ್ರಸನ್ನನಾದ ಪರಮೇಶ್ವರನನ್ನು ಭಕ್ತಿಯಿಂದ ಅನೇಕ ವಿಧವಾಗಿ ಸ್ತುತಿಸಿದರು. ಸಿದ್ಧರು, ಗಂಧರ್ವರು, ದೇವಮುನಿಗಳು, ನಾಗದೇವತೆಗಳು ಎಲ್ಲರೂ ಭಕ್ತಿಯಿಂದ ಶಿವನನ್ನು ನಮಸ್ಕರಿಸಿ ಸ್ತುತಿಸಿದರು ಎಂಬಲ್ಲಿಗೆ ಸತೀಖಂಡದ ನಲವತ್ತೆರಡನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT