ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ‘ಉಮಾ’ ಎಂದು ಹೆಸರಿಟ್ಟ ದಕ್ಷ

ಅಕ್ಷರ ಗಾತ್ರ

ಜಗನ್ಮಾತೆಯಾದ ದೇವಿಯು ತನ್ನ ಪತ್ನಿ ಅಸಿಕ್ನಿಯಲ್ಲಿ ಜನಿಸಿದುದನ್ನು ನೋಡಿ ದಕ್ಷಪ್ರಜಾಪತಿ ಹರ್ಷದಿಂದ ಸಂಭ್ರಮಿಸುತ್ತಾನೆ. ಮಗಳಾಗಿ ಜಗನ್ಮಾತೆ ಜನ್ಮ ತಾಳಿದ್ದಾಳೆಂದು ಭಕ್ತಿಯಿಂದ ಸ್ತೋತ್ರ ಮಾಡುತ್ತಾನೆ. ‘ಆದಿ ಅಂತ್ಯವಿಲ್ಲದ ಓ ಪರಮೇಶ್ವರಿ, ನಿನಗೆ ನಮಸ್ಕಾರ. ಸತ್ಯಸ್ವರೂಪಳಾದ ನಿನ್ನನ್ನು ವೇದವಿತ್ತುಗಳು ‘ಶಿವಾ ಶಾಂತಾ ಮಹಾಮಾಯೆ ಜಗದ್ರೂಪಳು’ಎಂದುಅನೇಕ ವಿಧವಾಗಿ ಹೇಳುವರು. ನಿನ್ನಿಂದ ಪ್ರೇರಿತನಾಗಿಯೇ ಬ್ರಹ್ಮ ಜಗತ್ತನ್ನು ಸೃಷ್ಟಿಸುವ. ವಿಷ್ಣು ಜಗತ್ತನ್ನು ಪಾಲಿಸುವ, ನಿನ್ನಿಂದ ನಿಯಮಿಸಲ್ಪಟ್ಟ ರುದ್ರ ಜಗತ್ತನ್ನು ಪ್ರಳಯಕಾಲದಲ್ಲಿ ಸಂಹರಿಸುವ. ಬ್ರಹ್ಮ ಸೃಷ್ಟಿಸಿದ, ವಿಷ್ಣು ಪಾಲಿಸುವ, ರುದ್ರ ಮುಕ್ತಿಕೊಡುವ ಜಗತ್ತನ್ನು ಧರಿಸಿರುವ ಪರಮಾತ್ಮ ಸ್ವರೂಪಳಾದ ಪರಮೇಶ್ವರಿಯೇ. ರಜೋಗುಣ ಸತ್ವಗುಣ ಮತ್ತು ತಮೋಗುಣಗಳ ಸ್ವರೂಪಳಾಗಿ, ಈ ಮೂರು ಗುಣಗಳಿಂದ ಸಕಲ ಕಾರ್ಯಗಳನ್ನು ನಿರ್ವಹಿಸುವ ತ್ರಿಮೂರ್ತಿಗಳಿಗೆ ಜನನಿಯಾದಂತಹ ನಿನಗೆ ನಮಸ್ಕಾರ.’

ಹೀಗೆ ಬುದ್ಧಿಶಾಲಿಯಾದ ದಕ್ಷನು ಸ್ತುತಿಸಿದನ್ನು ಕೇಳಿದ ಜಗನ್ಮಾತೆರೂಪದ ಮಗು, ತನ್ನ ತಾಯಿ ವೀರಿಣಿ ಮತ್ತಿತರರಿಗೆ ಕೇಳದಂತೆ ಅವರನ್ನೆಲ್ಲ ಸಂಮೋಹಗೊಳಿಸಿ, ದಕ್ಷನಿಗೆ ಮಾತ್ರ ಕೇಳುವಂತೆ ‘ಎಲೈ ದಕ್ಷನೇ, ನೀನು ಹಿಂದೆ ನನ್ನನ್ನು ಆರಾಧಿಸಿ ನಿನ್ನ ಪುತ್ರಿಯಾಗಿ ನಾನು ಜನಿಸುವಂತೆ ವರವನ್ನು ಪಡೆದಿದ್ದೆ. ಈಗ ನಿನ್ನ ಆ ವರವು ಸಿದ್ಧಿಸಿತೆಂದು ತಿಳಿ, ನಿನಗೆ ಒಳಿತಾಗಲಿ’ಎಂದುಹೇಳಿದ ನಂತರ, ತನ್ನ ಮಾಯಾಶಕ್ತಿಯಿಂದ ಮತ್ತೆ ಶಿಶುವಿನ ರೂಪ ತಾಳಿ ತಾಯಿ ಮಡಿಲಲ್ಲಿ ಮಲಗಿ ತುಂಬಾ ರೋದಿಸತೊಡಗಿದಳು. ಮಗು ಅಳುವುದನ್ನು ಕೇಳಿ ಎಚ್ಚೆತ್ತ ಪರಿಚಾರಿಕೆಯರು, ಶಿಶುವು ಜನಿಸಿತೆಂದು ತ್ವರೆಯಿಂದ ಬಂದರು. ವೀರಣಮುನಿಯ ಮಗಳಾಗಿದ್ದರಿಂದ ವೀರಿಣಿಎಂದುಕರೆಯಲ್ಪಡುತ್ತಿದ್ದ ಅಸಿಕ್ನಿಯು ಹಡೆದ ಆ ಬಾಲಿಕಿಯನ್ನು ನೋಡಿ ಸ್ತ್ರೀಯರೆಲ್ಲರೂ ಸಂತೋಷಗೊಂಡರು.

ಪಟ್ಟಣದ ಜನರೆಲ್ಲರೂ ಜಯಘೋಷ ಮಾಡಿ ಸಂಭ್ರಮಿಸಿದರು. ಮಗುವಿನ ಜನನದ ನಂತರ ದಕ್ಷನು ಶ್ರುತ್ಯುಕ್ತವಾದ ಜಾತಕರ್ಮಾದಿಗಳನ್ನು ವಿಧಿವತ್ತಾಗಿ ಮಾಡಿದ. ಬಡಪ್ರಜೆಗಳಿಗೆಲ್ಲ ಯಥೇಚ್ಛವಾಗಿ ಧನವನ್ನು ಕೊಟ್ಟ. ಈ ಸಂದರ್ಭದಲ್ಲಿ ಇಂದ್ರ ಮೊದಲಾದ ದೇವತೆಗಳು, ಮುನಿಗಳು ಪರಿವಾರ ಸಮೇತರಾಗಿ ದಕ್ಷನ ಮನೆಗೆ ಬಂದು ವಿಧಿವತ್ತಾಗಿ ಕನ್ಯಾಜನನದ ಉತ್ಸವದಲ್ಲಿ ಪಾಲ್ಗೊಂಡರು. ದಕ್ಷನ ಪುತ್ರಿಯಾಗಿ ಅವತರಿಸಿದ ಜಗನ್ಮಾತೆಯಾದ ಪರಮೇಶ್ವರಿಯನ್ನು ನೋಡಿ ದೇವತೆಗಳೆಲ್ಲರೂ ವಿನಯದಿಂದ ನಮಸ್ಕರಿಸಿ ಮಂಗಳಸ್ತೋತ್ರಗಳಿಂದ ಸ್ತುತಿಸಿದರು. ಸಕಲ ಗುಣಪರಿಪೂರ್ಣಳು, ಸುಂದರಿಯೂ ಆದ ಶಿಶುವಿಗೆ ದೇವತೆಗಳ ಸಲಹೆಯಂತೆ ದಕ್ಷಬ್ರಹ್ಮ ‘ಉಮಾ’ಎಂದುಹೆಸರನ್ನಿಟ್ಟ.

ಆಮೇಲೆ ಆ ದೇವಿಗೆ ಲೋಕದಲ್ಲಿ ಅನೇಕ ಹೆಸರುಗಳು ಬಂದವು. ದಕ್ಷಬ್ರಹ್ಮ ತನ್ನ ಮನೆಗೆ ಬಂದ ಹರಿ ಮತ್ತು ಬ್ರಹ್ಮನಿಗೆ ನಮಸ್ಕರಿಸಿ, ಭಕ್ತಿಯಿಂದ ಅರ್ಚಿಸಿದ. ಪ್ರಸನ್ನರಾದ ವಿಷ್ಣು ಮುಂತಾದ ದೇವತೆಗಳೆಲ್ಲರೂ ದಕ್ಷಬ್ರಹ್ಮನನ್ನು ಆದರದಿಂದ ಹಾರೈಸಿ ಅವನಿಂದ ಬೀಳ್ಕೊಂಡು ತೆರಳಿದರು. ತಾಯಿಯಾದ ವೀರಿಣಿಯು ತನ್ನ ಪುತ್ರಿಗೆ ಯೋಗ್ಯವಾದ ಲಾಲನೆ ಪಾಲನೆಗಳನ್ನು ಮಾಡಿ ಸ್ತನ್ಯಪಾನ ಕೊಡುತ್ತಿದ್ದಳು. ಹೀಗೆ ಉಮಾಕುಮಾರಿಯು ತನ್ನ ಹೆತ್ತವರಾದ ವೀರಿಣಿ ಮತ್ತು ಮಹಾತ್ಮನಾದ ದಕ್ಷಬ್ರಹ್ಮನಿಂದ ಸಲಹಲ್ಪಡುತ್ತಾ ಶುಕ್ಲಪಕ್ಷದ ಚಂದ್ರನಂತೆ ದಿನದಿನವೂ ಬೆಳೆಯುತ್ತಾ ಬಂದಳು. ಬಾಲ್ಯದಲ್ಲಿಯೇ ಸದ್ಗುಣಗಳೆಲ್ಲವೂ ಉಮೆಯಲ್ಲಿ ಸೇರಿದವು. ಉಮೆಯು ಗೆಳತಿಯರೊಡನೆ ಆಟವಾಡುತ್ತಿರುವಾಗ ದಿನವೂ ಪರಮೇಶ್ವರನ ಚಿತ್ರವನ್ನು ಬರೆದು ವಿಹರಿಸುತ್ತಲಿದ್ದಳು.

‘ಸ್ಥಾಣು’, ‘ಹರ’, ‘ರುದ್ರ’, ‘ಸ್ಮರಶಾಸನ’ ಮುಂತಾದ ಶಿವನಾಮಗಳನ್ನೆಲ್ಲ ಸೇರಿಸಿ ಇಂಪಾಗಿ ಹಾಡುತ್ತಿದ್ದಳು. ತಂದೆ–ತಾಯಿಗಳಲ್ಲಿ ತುಂಬಾ ನಯವಿನಯದಿಂದ ನಡೆಯುತ್ತಲಿದ್ದಳು. ದಕ್ಷದಂಪತಿಗಳ ಪ್ರೀತಿಗೆ ಪಾತ್ರಳಾಗಿ ದಿನದಿನವೂ ಅಭಿವೃದ್ಧಿ ಹೊಂದಿದಳು. ಉತ್ತಮ ಗುಣಗಳಿಂದ ಉಮೆ ತನ್ನ ಓರಗೆಯ ಮಕ್ಕಳಿಗೆಲ್ಲ ಮಾದರಿಯಾಗಿದ್ದಳು. ಮಕ್ಕಳೊಂದಿಗೆ ಆಡುವಾಗ ಆ ಜಗಜ್ಜನನಿ ಮಗುವೇ ಆಗಿಬಿಡುತ್ತಿದ್ದಳು. ತನ್ನ ಆಟಗಳಿಂದ ತನ್ನ ತಂದೆ–ತಾಯಿಗಳನ್ನು ನಿತ್ಯವೂ ಸಂತೋಷಗೊಳಿಸುತ್ತಿದ್ದಳು ಎಂಬಲ್ಲಿಗೆ ಸತೀಖಂಡದ ಹದಿನಾಲ್ಕನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT