ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ರುದ್ರನಿಗಾಗಿ ಉಮೆ ವ್ರತಾಚರಣೆ

ಅಕ್ಷರ ಗಾತ್ರ

ಮನೆಗೆ ಬಂದ ಬ್ರಹ್ಮ ಮತ್ತು ನಾರದನನ್ನು ದಕ್ಷಪ್ರಜಾಪತಿ ಸತ್ಕರಿಸಿ ನಮಸ್ಕರಿಸಿದಂತೆಯೇ, ಸತೀದೇವಿಯೂ ಲೋಕಾಚಾರದಂತೆ ಅವರಿಬ್ಬರಿಗೆ ನಮಸ್ಕರಿಸುತ್ತಾಳೆ. ತಂದೆ-ಮಗಳು ಕೊಟ್ಟ ಆತ್ಮೀಯ ಸ್ವಾಗತದ ನಂತರ ಬ್ರಹ್ಮ ಮತ್ತು ನಾರದ ತಮಗೆ ಕೊಟ್ಟ ಆಸನದಲ್ಲಿ ಕುಳಿತುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸತೀದೇವಿ ತಾನು ಲೋಕಮಾತೆ ಎಂಬುದನ್ನು ಮರೆತು, ಸಾಮಾನ್ಯ ಹೆಣ್ಣುಮಗಳಂತೆ ವಿನಯದಿಂದ ತಲೆಬಗ್ಗಿಸಿ ನಿಂತಿರುತ್ತಾಳೆ.

ಸತೀದೇವಿ ತೋರಿಸಿದ ನಯವಿನಯ ಮತ್ತು ಆದಾರಾತಿಥ್ಯವನ್ನು ಮೆಚ್ಚಿದ ಬ್ರಹ್ಮ ‘ಎಲೈ ಸತೀದೇವಿ, ನಿನ್ನನ್ನು ಯಾರು ಪ್ರೀತಿಸುವನೋ ಮತ್ತು ನೀನು ಯಾರನ್ನು ಪ್ರೀತಿಸುವೆಯೋ, ಅಂತಹ ಸರ್ವಜ್ಞನೂ ಜಗದೊಡೆಯನೂ ಆದ ದೇವದೇವನನ್ನು ಪತಿಯಾಗಿ ಪಡೆ. ಯಾರು ಇವತ್ತಿನವರೆಗೆ ನಿನ್ನ ಹೊರತು ಯಾವ ಸ್ತ್ರೀಯನ್ನೂ ಮದುವೆಯಾಗಿಲ್ಲವೋ, ಮುಂದೆಯೂ ನಿನ್ನ ಹೊರತು ಮತ್ತೊಬ್ಬರನ್ನು ಮದುವೆಯಾಗುವುದಿಲ್ಲವೋ, ಅಂತಹ ಅನುಪಮನಾದ ಪುರುಷನೇ ನಿನಗೆ ಪತಿಯಾಗಲಿ’ ಎಂದು ಆಶೀರ್ವದಿಸುತ್ತಾನೆ. ಬ್ರಹ್ಮ ಮತ್ತು ನಾರದ ಇಬ್ಬರೂ ಕೆಲವು ಕಾಲ ದಕ್ಷನ ಮನೆಯಲ್ಲಿಯೇ ಇದ್ದು ನಂತರ ದಕ್ಷನಿಂದ ಬೀಳ್ಕೊಂಡು ತೆರಳುತ್ತಾರೆ. ಬ್ರಹ್ಮ ಮತ್ತು ನಾರದರು ತನ್ನ ಮಗಳಿಗೆ ನೀಡಿದ ಆಶೀರ್ವಾದಗಳನ್ನು ಕೇಳಿ ದಕ್ಷನಿಗೆ ತುಂಬಾ ಸಂತೋಷವಾಗುತ್ತದೆ.

ಮನುಷ್ಯಳಾಗಿ ಅವತರಿಸಿದ ದೇವಿಯು ಬಾಲ್ಯದಲ್ಲಿ ಆಯಾಯ ವಿಹಾರಗಳನ್ನು ಪ್ರದರ್ಶಿಸಿ ಕೌಮಾರಾವಸ್ಥೆಯನ್ನು ತ್ಯಜಿಸಿ ಯೌವನವತಿಯಾದಳು. ಸರ್ವಾಂಗ ಸುಂದರಿಯಾಗಿ ಪ್ರಕಾಶಿಸುತ್ತಿದ್ದ ಸತೀದೇವಿಯನ್ನು ಶಂಕರನಿಗೆ ಹೇಗೆ ಮದುವೆ ಮಾಡಿಕೊಡಲಿ ಎಂಬ ಚಿಂತೆ ದಕ್ಷನಿಗೆ ಕಾಡತೊಡಗಿತು. ಆಗ ತಾಯಿಯಿಂದ ತಂದೆಯ ಮನೋಭಿಲಾಷೆ ತಿಳಿದ ಸತೀದೇವಿ ಸಹ ಶಂಕರನನ್ನು ಪತಿಯಾಗಿ ಪಡೆಯಬೇಕೆಂದು ಇಚ್ಛಿಸಿದಳು. ಶಂಕರನನ್ನು ಒಲಿಸಿಕೊಳ್ಳಲು ವ್ರತವನ್ನ ಆಚರಿಸಲು ಅನುಮತಿ ಕೊಡು ಎಂದು ತಾಯಿಯನ್ನು ಕೋರಿದಳು.

ತಾಯಿ ವೀರಿಣಿ ಅನುಮತಿಯನ್ನು ಕೊಟ್ಟ ನಂತರ ಸತೀದೇವಿಯು ಮನೆಯಲ್ಲಿಯೇ ದೃಢವಾದ ನಿಯಮಗಳಿಂದ ಶಿವನನ್ನು ಅರ್ಚಿಸಲು ಪ್ರಾರಂಭಿಸಿದಳು. ಮೊದಲಿಗೆ ಆಶ್ವೀಜಮಾಸದ ನಂದಕಾಷ್ಟಮಿಯಲ್ಲಿ ಲವಣಮಿಶ್ರವಾದ ಬೆಲ್ಲದನ್ನವನ್ನು ನಿವೇದಿಸಿ ಭಕ್ತಿಯಿಂದ ಶಿವನನ್ನರ್ಚಿಸಿ ನಮಸ್ಕರಿಸಿದಳು. ಕಾರ್ತಿಕಮಾಸದ ಚತುರ್ದಶಿಯಲ್ಲಿ ಕರಿಗಡುಬು ಮತ್ತು ಪಾಯಸಗಳನ್ನು ನೈವೇದ್ಯಮಾಡಿ ಶಂಕರನನ್ನು ಅರ್ಚಿಸಿ ಭಕ್ತಿಯಿಂದ ಧ್ಯಾನಿಸಿದಳು. ಮಾರ್ಗಶಿರ ಮಾಸದ ಕೃಷ್ಣಾಷ್ಟಮಿಯಲ್ಲಿ ತಿಲಮಿಶ್ರವಾದ ಯವಾನ್ನ(ಎಳ್ಳನ್ನ)ವನ್ನು ನಿವೇದಿಸಿ ಮತ್ತು ಕನ್ನೇದಿಲೆಯನ್ನರ್ಪಿಸಿ ಶಿವನನ್ನು ಅವಿಚ್ಛಿನ್ನವಾಗಿ ಅರ್ಚಿಸಿದಳು. ಪುಷ್ಯಮಾಸದ ಶುಕ್ಲಸಪ್ತಮಿಯ ರಾತ್ರಿ ಶಿವನನ್ನು ಸ್ಮರಿಸುತ್ತಾ ಜಾಗರಣೆ ಮಾಡಿ, ಮರುದಿನ ಬೆಳಿಗ್ಗೆ ಕೃಸರಾನ್ನ(ಎಳ್ಳನ್ನ)ವನ್ನು ನಿವೇದಿಸಿ ಶಿವನನ್ನರ್ಚಿಸಿದಳು.

ಮಾಘ ಶುಕ್ಲ ಹುಣ್ಣಿಮೆಯ ರಾತ್ರಿ ಜಾಗರಣೆಯಿಂದಿದ್ದು, ಬೆಳಿಗ್ಗೆ ನದಿತೀರದಲ್ಲಿ ಸ್ನಾನಮಾಡಿ ಶಿವನನ್ನು ಭಕ್ತಿಯಿಂದ ಪೂಜಿಸಿದಳು. ಫಾಲ್ಗುಣ ಕೃಷ್ಣಚತುರ್ದಶಿಯಲ್ಲಿ ರಾತ್ರಿ ಜಾಗರಣದಿಂದಿದ್ದು ಪ್ರತಿ ಯಾಮದಲ್ಲೂ ಬಿಲ್ವಪತ್ರಗಳಿಂದ ಶಿವನನ್ನು ಅರ್ಚಿಸಿದಳು. ಚೈತ್ರಶುಕ್ಲ ಚತುದರ್ಶಿಯಲ್ಲಿ ಹಗಲು ಮುತ್ತುಗದ ಹೂವು ಮತ್ತು ದವನಪತ್ರಗಳಿಂದ ಶಿವನನ್ನು ಅರ್ಚಿಸಿ, ರಾತ್ರಿಯಲ್ಲಿ ಶಿವನನ್ನು ಧ್ಯಾನಿಸಿದಳು. ವೈಶಾಖ ಶುದ್ಧ ತದಿಗೆಯಲ್ಲಿ ಎಳ್ಳನ್ನವನ್ನು ನೈವೇದ್ಯ ಮಾಡಿ ರುದ್ರನನ್ನು ಭಕ್ತಿಯಿಂದ ಅರ್ಚಿಸಿ, ಆ ತಿಂಗಳು ಕೇವಲ ಹಾಲು ಮೊಸರುಗಳನ್ನೇ ಸೇವಿಸಿದಳು. ಆಷಾಢ ಶುದ್ಧ ಚತುರ್ದಶಿಯಲ್ಲಿ ಕಪ್ಪುಬಟ್ಟೆಯನ್ನುಟ್ಟು ಬೃಹತೀಕುಸುಮಗಳಿಂದ ಶಿವನನ್ನು ಅರ್ಚಿಸಿದಳು. ಶ್ರಾವಣ ಮಾಸದ ಶುಕ್ಲ ಅಷ್ಟಮಿ ಮತ್ತು ಚತುರ್ದಶಿಯಂದು ಶಿವನಿಗೆ ಪವಿತ್ರವಾದ ಯಜ್ಞೋಪವೀತಗಳನ್ನು ಹಾಗು ವಸ್ತ್ರಗಳನ್ನು ಅರ್ಪಿಸಿ ಭಕ್ತಿಯಿಂದ ಪೂಜಿಸಿದಳು. ಭಾದ್ರಪದ ಕೃಷ್ಣಚರ್ತುರ್ದಶಿಯಲ್ಲಿ ಅನೇಕ ಬಗೆಯ ಹೂವು–ಹಣ್ಣುಗಳಿಂದ ಅರ್ಚಿಸಿ, ಆ ದಿನ ಕೇವಲ ಜಲವನ್ನೇ ಆಹಾರವಾಗಿ ಸೇವಿಸಿದಳು. ಭಾದ್ರಪದಮಾಸದ ಪೂರ್ತಿ ಮಿತವಾದ ಆಹಾರವನ್ನು ಸೇವಿಸುತ್ತಾ ಶಿವನನ್ನು ಭಕ್ತಿಯಿಂದ ಅರ್ಚಿಸಿದಳು. ತನ್ನಿಚ್ಛೆಯಿಂದಲೇ ಮನುಷ್ಯಳಾಗಿ ಅವತರಿಸಿದ ಸತೀದೇವಿಯು ವರ್ಷದ ಎಲ್ಲಾ ತಿಂಗಳುಗಳಲ್ಲೂ ಭಕ್ತಿಯಿಂದ ಶಿವನನ್ನು ಅರ್ಚಿಸುತ್ತಾ ದೃಢವಾದ ನಿಯಮಗಳನ್ನಾಚರಿಸುತ್ತಿದ್ದಳು. ಭಾದ್ರಪದ ಕೃಷ್ಣಪಕ್ಷದಲ್ಲಿ ನಂದಾವ್ರತವನ್ನು ಪೂರ್ಣಗೊಳಿಸಿದ ಸತೀದೇವಿಯು ನಿಶ್ಚಲವಾದ ಮನಸ್ಸಿನಿಂದ ಶಿವನನ್ನು ಪ್ರೇಮಪೂರ್ವಕವಾಗಿ ಧ್ಯಾನಿಸಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT