ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಶಿವನನ್ನು ಸ್ತುತಿಸಿದ ದೇವತೆಗಳು

ಅಕ್ಷರ ಗಾತ್ರ

ಸತೀದೇವಿಯ ವ್ರತ ನೋಡಲುದೇವತೆಗಳುಮತ್ತು ಮುನಿಗಳೆಲ್ಲರೂ ಬ್ರಹ್ಮ, ವಿಷ್ಣು ನೇತೃತ್ವದಲ್ಲಿ ಸತಿಯ ಬಳಿ ಬರುತ್ತಿದ್ದರು. ಶಿವಧ್ಯಾನದಲ್ಲಿ ತಲ್ಲೀನಳಾಗಿ ಸಿದ್ಧಾವಸ್ಥೆಯಲ್ಲಿದ್ದ ಸತೀದೇವಿಯು ಮೂರ್ತಿವತ್ತಾದ ಸಿದ್ಧಿಯಂತೆ ತೋರುತ್ತಿದ್ದಳು. ಇದನ್ನು ಕಂಡದೇವತೆಗಳು, ಮುನಿಗಳು ಸಂತೋಷಪಡುತ್ತಿದ್ದರು. ಸತೀದೇವಿಯಲ್ಲಿ ಸಾಕ್ಷಾತ್ ಜಗನ್ಮಾತೆಯನ್ನು ಕಂಡಂತೆ ಭಕ್ತಿಯಿಂದ ಅಂಜಲಿಯುಕ್ತ ನಮಸ್ಕಾರ ಮಾಡುತ್ತಿದ್ದರು.

ಸತೀದೇವಿಯಿಂದ ಬೀಳ್ಗೊಂಡ ಹೊರಟ ದೇವತೆಗಳೂ ಮುನಿಗಳೂ ನೇರವಾಗಿ ಕೈಲಾಸಪರ್ವತಕ್ಕೆ ಹೊರಟರು. ಸರಸ್ವತಿಯೊಡನೆ ಬ್ರಹ್ಮ ಹಾಗೂ ಲಕ್ಷ್ಮೀದೇವಿಯೊಡನೆ ಭಗವಾನ್ ವಿಷ್ಣು ಸಹ ಶಿವನ ಬಳಿಗೆ ತೆರಳಿದರು. ಅವರೆಲ್ಲ ಶಿವನ ಬಳಿಗೆ ಹೋಗಿ ಅನೇಕ ವಿಧವಾಗಿ ಸ್ತೋತ್ರ ಮಾಡಿ, ಲೋಕಕಲ್ಯಾಣಕ್ಕೆ ಅನುಗ್ರಹ ಬೇಡಿದರು. ಓ ದೇವ, ಸಕಲ ಜಗತ್ತನ್ನೂ ಸೃಷ್ಟಿಸುವ ಆದಿಕಾರಣನು, ಜ್ಞಾನಸ್ವರೂಪನು, ಸರ್ವೋತ್ಕೃಷ್ಟನು ನೀನು. ಪ್ರಕೃತಿಗೆ ಆಶ್ರಯನೂ ಪುರುಷಸ್ವರೂಪನೂ ಆಗಿ ಜಗತ್ತನ್ನು ಸೃಷ್ಟಿಸಿ ಅದರ ಒಳಗೂ ಹೊರಗೂ ಪ್ರಕಾಶಿಸುವ ಆಧಾರಭೂತ. ನಿನಗಿಂತ ನಿರ್ವಿಕಾರನಾದ ದೇವರು ಮತ್ತೊಬ್ಬನಿಲ್ಲ. ಈ ಜಗತ್ತನ್ನು ತನ್ನಲ್ಲಿಯೇ ನೋಡುವಂತಹ ನಿನಗೆ ನಮಸ್ಕಾರ.


ನೀನು ದಿವ್ಯದೃಷ್ಟಿಯುಳ್ಳವನು. ಸಾಕ್ಷಿಭೂತನು. ಎಲ್ಲ ಜೀವರ ಆತ್ಮಸ್ವರೂಪನು. ಸರ್ವಾಂತರ್ಯಾಮಿ. ಪರಮೇಶ್ವರ. ನಿನ್ನ ಸ್ವರೂಪನನ್ನುದೇವತೆಗಳು, ಸಿದ್ಧರು, ಋಷಿಗಳೂ ತಿಳಿಯಲಾರರು. ದುಃಖಮಯವಾದ ಜನ್ಮವಿಕಾರಗಳು ನಿನಗೆ ವಸ್ತುತಃ ಇಲ್ಲ. ಆದರೆ ಮಾಯೆಯಿಂದ ಆ ವಿಚಾರಗಳನ್ನು ಧರಿಸಿ ಭಕ್ತರ ಅನುಗ್ರಹಕ್ಕಾಗಿ ನೀನು ಆಗಾಗ ಅವತರಿಸುವೆ. ರೂಪವಿಲ್ಲದಿದ್ದರೂ ಮಾಯಾಮಯವಾದ ಸಗುಣೇಶ್ವರ ರೂಪವುಳ್ಳವನು, ಅಪರಿಮಿತವಾದ ಶಕ್ತಿಯುಳ್ಳವನು, ಮೂರು ಲೋಕಗಳಿಗೆ ಒಡೆಯ, ಸಾಕ್ಷಿರೂಪ, ವ್ಯಾಪಕ. ಜ್ಞಾನಜ್ಯೋತಿ ಪ್ರಕಾಶಸ್ವರೂಪನು, ಆನಂದಸ್ವರೂಪನು, ಜ್ಞಾನಸ್ವರೂಪನು, ಎಲ್ಲವನ್ನು ವ್ಯಾಪಿಸಿರುವನೂ, ಆದ ಈಶ್ವರನೇ! ಮಹದಾದಿ ತತ್ವಗಳು, ಮೂಲಪ್ರಕೃತಿಯು ನಿನ್ನ ಸ್ವರೂಪವೇ ಹೊರತು ಬೇರೆಯಲ್ಲ. ಎಲ್ಲಾ ವೇದಶಾಸ್ತ್ರ–ಆಗಮಗಳಿಗೆ ಆಧಾರನೂ ಸರ್ವೋತ್ತಮನೂ ಭಕ್ತರನ್ನು ಸಲಹುವವನೂ ಅನಂತಕಲ್ಯಾಣಗುಣಗಳುಳ್ಳವನೂ ಆದ ನಿನಗೆ ನಮಸ್ಕಾರ. ಓ ಮಹೇಶ್ವರ, ನಿನ್ನ ಸ್ವರೂಪಪ್ರಕಾಶವು ಮಾಯೆಯ ಗುಣಗಳಿಂದ ಮುಚ್ಚಲ್ಪಟ್ಟಿದ್ದು ಅಜ್ಞಾನಿಗಳಿಗೆ ಕಾಣಿಸುವುದಿಲ್ಲ. ನೀನು ಜ್ಞಾನಿಗಳ ಹೃದಯದಲ್ಲಿ ವಾಸಿಸುವ ನಿನ್ನನ್ನು ಜ್ಞಾನಿಗಳು ಮಾತ್ರ ನೋಡಬಲ್ಲರು.

ಅಗ್ನಿಯಿಂದ ಯಾವಾಗಲೂ ಉಷ್ಣವು ಹೇಗೆ ಹೊರಬರುವುದೋ, ಸೂರ್ಯನಿಂದ ತೇಜೋಮಯವಾದ ಕಿರಣಗಳು ಎಡಬಿಡದೆ ಹೇಗೆ ಹೊರಡುವವೋ ಹಾಗೆ, ಪರಬ್ರಹ್ಮಸ್ವರೂಪನಾದ ನಿನ್ನಿಂದ ಜಗತ್ಸೃಷ್ಟಿ ಸ್ಥಿತಿ ನಾಶಗಳೆಂಬ ಪ್ರವಾಹವು ಯಾವಾಗಲೂ ಎಡಬಿಡದೆ ಹೊರಡುತ್ತಿರುವುದು. ನೀನು ದೇವನಲ್ಲ. ಅಸುರನಲ್ಲ, ಮನುಷ್ಯನಲ್ಲ, ಪಶುಪ್ರಾಣಿಯಲ್ಲ, ತ್ರೈವರ್ಣಿಕನಲ್ಲ, ಸ್ತ್ರೀಯಲ್ಲ, ಪುರುಷನೂ ಅಲ್ಲ. ದೇವತ್ವ, ಅಸುರತ್ವ, ಮನುಷ್ಯತ್ವ ಮುಂತಾದವು ನಿನ್ನಲ್ಲಿಲ್ಲ. ಅವೆಲ್ಲವೂ ಮಾಯಾಕಲ್ಪಿತವು. ಆ ಮಾಯೆಯಿಂದಲೇ ಈ ಜಗತ್ತು ನಿನ್ನಲ್ಲಿ ಸುಳ್ಳಾಗಿ ತೋರುವುದು.

ಈ ಜಗತ್ತನ್ನು ನೀನು ಸೃಷ್ಟಿಸಿಲ್ಲ. ಜಗತ್ತು ಎಂಬುದು ಇಲ್ಲವೇ ಇಲ್ಲ. ಜಗತ್ತೆಲ್ಲವೂ ನಿನ್ನ ರೂಪವಾದುದು. ನಿನ್ನ ಹೊರತು ಈ ಜಗತ್ತಾವುದೂ ಇಲ್ಲ. ಆದರೆ ಮಾಯಮಯವಾಗಿ ಈ ಜಗತ್ತನ್ನು ಸೃಷ್ಟಿಸುವೆ, ಪಾಲಿಸುವೆ, ಕೊನೆಗೆ ಸಂಹರಿಸುವೆ. ಹೀಗಾಗಿ ನೀನು ಜಗದ್ರೂಪನು. ಯೋಗಿಗಳು ಯೋಗಾನುಷ್ಠಾನವನ್ನು ಮಾಡಿ, ಪರಿಶುದ್ಧವಾದ ತಮ್ಮ ಮನಸ್ಸಿನಲ್ಲಿ ಮಾತ್ರ ನಿನ್ನನ್ನು ನೋಡುವರು. ಇಂತಹ ಯೋಗೇಶ್ವರನಾದ ನಿನಗೆ ನಮಸ್ಕಾರವು. ತಡೆಯಿಲ್ಲದ ವೇಗವುಳ್ಳವನೂ ವ್ಯಾಪಕನೂ,ಇಚ್ಛಾಶಕ್ತಿ ಜ್ಞಾನಶಕ್ತಿ, ಕ್ರಿಯಾಶಕ್ತಿಗಳುಳ್ಳವನು, ವೇದಸ್ವರೂಪನು, ಪ್ರಸನ್ನನಾಗಿ ಭಕ್ತರನ್ನು ಅನುಗ್ರಹಿಸುವವನೂ, ಅನಂತಶಕ್ತಿವಂತನೂ ಆದ ಓ ಶಿವನೇ, ನಿನಗೆ ನಮಸ್ಕಾರ. ಓ ದೇವ, ನಿನ್ನ ಮಾಯಾಶಕ್ತಿಯಿಂದ ಆವೃತರಾಗಿ ನಾವೆಲ್ಲರೂ ನಿನ್ನ ಸ್ವರೂಪವನ್ನು ತಿಳಿಯಲಾರದವರಾಗಿರುವೆವು. ಮಹಾಮಹಿಮನೂ ಮಹಾಪ್ರಭುವೂ ಆದ ನಿನ್ನನ್ನು ಮತ್ತೆ ಮತ್ತೆ ನಮ್ಮಸ್ಕರಿಸುವೆವು ಎಂದು ಬ್ರಹ್ಮ, ವಿಷ್ಣು ಮೊದಲಾದದೇವತೆಗಳುಮತ್ತು ಸಿದ್ಧರು, ಋಷಿಗಳು ಮಹಾದೇವನನ್ನು ಸ್ತುತಿಸಿದರು. ಇಲ್ಲಿಗೆ ಶಿವಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದಲ್ಲಿ ಹದಿನೈದನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT