ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ರುದ್ರನ ಮನವೊಲಿಸಿದ ದೇವತೆಗಳು

ಅಕ್ಷರ ಗಾತ್ರ

ಪತ್ನಿಯರೊಡನೆ ಬಂದ ಬ್ರಹ್ಮ, ವಿಷ್ಣುವಿನ ಯೋಗಕ್ಷೇಮ ವಿಚಾರಿಸಿದ ರುದ್ರದೇವ, ತನ್ನ ಬಳಿ ಬಂದ ಕಾರಣವೇನೆಂದು ಕೇಳುತ್ತಾನೆ. ಆಗ ಬ್ರಹ್ಮ ‘ದೇವದೇವನೂ ಕರುಣಾಸಮುದ್ರನೂ ಜಗದೊಡೆಯನೂ ಆದ ಓ ಮಹಾದೇವನೆ, ನಾವು ಈ ದೇವಮುನಿಗಳೊಡನೆ ಏಕೆ ಇಲ್ಲಿಗೆ ಬಂದಿರುವೆವೆಂಬುದನ್ನು ಹೇಳುವೆನು ಕೇಳು’ ಎಂದು ವಿವರವಾಗಿ ಹೇಳತೊಡಗುತ್ತಾನೆ.

‘ಎಲೈ ಶಂಕರ! ನಿನ್ನ ನಿಮಿತ್ತವಾಗಿಯೇ ನಾವು ಇಲ್ಲಿಗೆ ಬಂದಿರುವೆವು. ನಿನ್ನ ಸಹಾಯವಿಲ್ಲದಿದ್ದರೆ ಈ ಜಗತ್ತು ನಡೆಯಲಾರದು. ಮುಂದೆ ಲೋಕಕಂಟಕರಾದ ರಾಕ್ಷಸರು ಜನಿಸುವರು. ಅವರಲ್ಲಿ ಕೆಲವರನ್ನು ನಾನು ಕೊಲ್ಲಬೇಕಾಗುವುದು. ಇನ್ನು ಕೆಲವರು ಹರಿಯಿಂದಲೇ ಕೊಲ್ಲಲ್ಪಡುವರು, ಮತ್ತೆ ಕೆಲವರನ್ನು ನೀನೇ ಸಂಹರಿಸಬೇಕಾಗುವುದು. ಇನ್ನು ಕೆಲವರು ನಿನ್ನ ಕುಮಾರನಿಂದ ಸಂಹರಿಸಲ್ಪಡುವರು. ಮತ್ತೆ ಕೆಲವರನ್ನು ಚಂಡಿಕಾದೇವಿಯು ಕೊಲ್ಲಬೇಕಾಗುವುದು.

‘ಓ ಶಂಕರ, ನಿನ್ನ ಅನುಗ್ರಹದಿಂದ ದೇವತೆಗಳಿಗೆ ಉತ್ತಮ ಸುಖ ಲಭಿಸಬೇಕಾಗಿದೆ. ಘೋರವಾದ ರಾಕ್ಷಸರನ್ನು ಸಂಹರಿಸಿ ಜಗತ್ತಿಗೆ ಅಭಯವನ್ನೂ ಸ್ವಸ್ಥತೆಯನ್ನು ನೀನೇ ಕಲ್ಪಿಸಬೇಕಾಗಿದೆ. ಹೀಗಿರುವಾಗ ನೀನು ಕರುಣಾಮಯನಾಗಿ ಯೋಗಮಾರ್ಗನಿರತನೂ, ರಾಗ–ದ್ವೇಷಗಳಿಲ್ಲದವನೂ ಆಗಿಬಿಟ್ಟರೆ ಲೋಕಕಂಟಕರಾದ ಆಸುರರನ್ನು ಸಂಹರಿಸುವುದು ಹೇಗೆ? ಅಸುರರು ನಾಶವಾಗದಿದ್ದರೆ ಜಗತ್ತಿನ ಸೃಷ್ಟಿ-ಸ್ಥಿತಿಯೂ ಸರಿಯಾಗಿ ನಡೆಯುವುದಾದರೂ ಸಾಧ್ಯವೆ? ಸೃಷ್ಟಿ, ಸ್ಥಿತಿ ಮತ್ತು ಪ್ರಳಯಗಳು ನಡೆಯದಿದ್ದರೆ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂರು ರೂಪಭೇದಗಳೂ, ಮಾಯೆಯ ಅವತಾರವೂ ಬೇಕಾಗಿಯೇ ಇಲ್ಲ. ಓ ಶಂಕರ, ನಾವು ಮೂವರು ಒಂದೇ ಬ್ರಹ್ಮಸ್ವರೂಪರು. ಸೃಷ್ಟಿ, ಸ್ಥಿತಿ ಮತ್ತು ಲಯರೂಪವಾದ ಕಾರ್ಯಭೇದ ನಿಮಿತ್ತವಾಗಿ ನಮಗೆ ಬ್ರಹ್ಮ, ವಿಷ್ಣು, ರುದ್ರರೂಪಗಳು ಮಾಯವಾಗಿ ಬಂದಿವೆ. ಆ ಸೃಷ್ಟಿ, ಸ್ಥಿತಿ, ಲಯಗಳು ನಡೆಯದಿದ್ದಲ್ಲಿ ನಮ್ಮ ಈ ರೂಪಭೇದವು ವ್ಯರ್ಥವೆನಿಸುತ್ತೆ.

‘ಪರಮಾತ್ಮನೂ, ಪರಮೇಶ್ವರನು ಆದ ಒಬ್ಬನೇ ತನ್ನ ಮಾಯೆಯಿಂದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ಮೂರು ರೂಪಗಳನ್ನು ಧರಿಸಿರುವನು. ಪರಮೇಶ್ವರನ ಶರೀರದ ಎಡಭಾಗದಿಂದ ಹರಿಯು ಜನಿಸಿರುವನು. ಬಲಭಾಗದಿಂದ ಬ್ರಹ್ಮನಾದ ನಾನು ಜನಿಸಿರುವೆ. ಅವನ ಹೃದಯದಿಂದ ಶಿವನ ಪೂರ್ಣಾಂಶ ರುದ್ರನಾದ ನೀನು ಜನಿಸಿರುವೆ. ಓ ಪ್ರಭು! ಹೀಗೆ ನಾವು ಮೂವರೂ ಮಾಯಾಧೀನರಾಗಿ ಪರಶಿವ ಮತ್ತು ಶಕ್ತಿದೇವಿಯ ಪುತ್ರರಾಗಿ ಮೂರು ರೂಪದಿಂದ ಜನಿಸಿದ್ದೇವೆ. ನಿನ್ನ ಅಪ್ಪಣೆಯಂತೆ ನಾನು ಮತ್ತು ವಿಷ್ಣು ಇಬ್ಬರೂ ಸೃಷ್ಟಿ ಮತ್ತು ಸ್ಥಿತಿಗಾಗಿ ಪತ್ನಿಯರನ್ನು ಪರಿಗ್ರಹಿಸಿ ಲೋಕಕಾರ್ಯವನ್ನು ಮಾಡುತ್ತಲಿದ್ದೇವೆ.

‘ಅದರಂತೆ ಓ ಶಿವನೇ, ಜಗತ್ತಿನ ಕ್ಷೇಮಕ್ಕಾಗಿ ಮತ್ತು ದೇವತೆಗಳ ಸುಭಿಕ್ಷಕ್ಕಾಗಿ ಸುಂದರಿಯಾದ ಓರ್ವ ರಮಣಿಯನ್ನು ಮದುವೆಯಾಗು. ಪರಶಿವರೂಪದಿಂದ ನೀನೇ ಹಿಂದೆ ನನ್ನನ್ನೂ ಮತ್ತು ವಿಷ್ಣುವನ್ನೂ ಕುರಿತು ಹೀಗೆ ಹೇಳಿದ್ದೆಯಲ್ಲಾ, ಅದನ್ನು ನಿನ್ನ ಮಾತಿನಲ್ಲೇ ಹೇಳುತ್ತೇನೆ ಕೇಳು’ ಎಂದು ಬ್ರಹ್ಮ ಹಿಂದೆ ಮಹಾಶಿವ ಹೇಳಿದ ಮಾತಿನಂತೆ ಉಚ್ಚರಿಸಿದ: ‘ಎಲೈ ಬ್ರಹ್ಮನೇ, ಇಂತಹ ಸ್ವರೂಪವುಳ್ಳ ನಾನು ಮುಂದೆ ನಿನ್ನ ಲಲಾಟದಿಂದ ರುದ್ರನೆಂಬ ಹೆಸರಿನಿಂದ ಜನಿಸುವೆನು. ಎಲೈ ವಿಧಿ, ಈಗ ನೀನು ಸೃಷ್ಟಿಯನ್ನು ಮಾಡು, ಹರಿಯು ಪಾಲನೆಯನ್ನು ಮಾಡಲಿ, ರುದ್ರಸ್ವರೂಪನಾದ ನಾನು ಸಂಹಾರವನ್ನು ಮಾಡುವೆ. ರಮಣಿಯನ್ನು ಮದುವೆಯಾಗಿ ಲೋಕಕ್ಕೆ ಅನುಕೂಲವಾಗುವಂತೆ ಕಾರ್ಯವನ್ನು ಮಾಡುವೆನು – ಎಂದಿದ್ದೆ. ಓ ಶಿವನೇ, ಆ ನಿನ್ನ ಮಾತನ್ನು ಈಗ ನೆರವೇರಿಸು. ನಿನ್ನ ಅಪ್ಪಣೆಯಂತೆ ನಾನು ಸೃಷ್ಟಿಯನ್ನೂ, ಹರಿಯು ಪಾಲನೆಯನ್ನೂ ಮಾಡುತ್ತಲಿರುವೆವು. ಶಿವಸ್ವರೂಪನಾದ ನೀನು ಜಗತ್ತಿನ ಪ್ರಳಯವನ್ನು ಮಾಡುವವನಾಗು. ನಿನ್ನ ಕಾರ್ಯವಿಲ್ಲದೆ, ನಾವು ನಮ್ಮ ಕಾರ್ಯಗಳನ್ನು ಮಾಡಲಾರೆವು. ಆದುದರಿಂದ ಲೋಕಕಾರ್ಯಕ್ಕೆ ಅನುಕೂಲವಾಗುವಂತಹ ಕಾಮಿನಿಯನ್ನು ಮದುವೆಯಾಗು. ಲಕ್ಷ್ಮಿಯು ವಿಷ್ಣುವಿಗೆ ಹೇಗೋ, ನನಗೆ ಸರಸ್ವತಿಯು ಹೇಗೋ ಹಾಗೇ, ನೀನೂ ನಿನ್ನ ಕಾರ್ಯಗಳಿಗೆ ಅನುಕೂಲಳಾದಂತಹ ಓರ್ವಕಾಂತೆಯನ್ನು ಮದುವೆಯಾಗು’ ಎಂದು ಬ್ರಹ್ಮ ಪ್ರಾರ್ಥಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT