ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಸತಿಯನ್ನು ವರಿಸಲು ಒಪ್ಪಿದ ರುದ್ರ

ಅಕ್ಷರ ಗಾತ್ರ

ಲೋಕಕಲ್ಯಾಣಕ್ಕಾಗಿ ವಿರಾಗದಿಂದ ಅನುರಾಗದತ್ತ ಸಾಗಲು ವಿವಾಹ ಮಾಡಿಕೊಳ್ಳುವಂತೆ ಬ್ರಹ್ಮ ಆಡಿದ ಮಾತುಗಳನ್ನು ಕೇಳಿದ ರುದ್ರ, ಮಂದಹಾಸವನ್ನು ಬೀರುತ್ತಾ ನುಡಿದ ‘ಎಲೈ ಬ್ರಹ್ಮ, ವಿಷ್ಣು ಮತ್ತು ಮುನಿವರ್ಯರೇ, ಸಂಸಾರವಿರಕ್ತನೂ ತಪೋನಿಷ್ಠನೂ ಜ್ಞಾನಯೋಗಿಯೂ ಆದ ನಾನು ಮದುವೆಯನ್ನು ಮಾಡಿಕೊಳ್ಳುವುದು ನ್ಯಾಯವಲ್ಲ. ವೈರಾಗ್ಯಮಾರ್ಗದಲ್ಲಿ ಸಾಗುತ್ತಾ, ಸ್ವಸ್ವರೂಪದಲ್ಲಿ ವಿಹರಿಸುವವನೂ ಆದ ಜ್ಞಾನಿಯೋಗಿಗೆ ಕಾಮಿನಿಯಿಂದ ಯಾವ ಪ್ರಯೋಜನವಿಲ್ಲ. ಕೇವಲ ಜ್ಞಾನಯೋಗಿಯಾಗಿ ಆತ್ಮಸ್ವರೂಪದಲ್ಲಿ ವಿಹರಿಸುತ್ತಲಿರುವ ನನಗೆ ಸ್ವರೂಪಾನಂದವು ಸದಾ ಇದ್ದೇ ಇರುವುದು. ಸ್ವರೂಪಜ್ಞಾನವಿಲ್ಲದ ಪುರುಷನು ಮಾತ್ರ ಸಂಸಾರಸುಖದಲ್ಲಿ ಅಭಿಮಾನವುಳ್ಳವನಾಗುತ್ತಾನೆ. ಮದುವೆ ಮಾಡಿಕೊಳ್ಳುವುದು ದೊಡ್ಡ ಬಂಧನ. ಆದುದರಿಂದ ಮದುವೆಯಲ್ಲಿ ನನಗೆ ಇಷ್ಟವಿಲ್ಲ. ನನ್ನ ಸ್ವರೂಪವನ್ನೇ ನಾನು ತಿಳಿದಿರುವುದರಿಂದ ಸ್ವಾರ್ಥಕ್ಕಾಗಿ ನಾನು ಪ್ರವರ್ತಿಸುವುದಿಲ್ಲ. ಆದರೆ ಜಗತ್ತಿನ ಕ್ಷೇಮಕ್ಕಾಗಿ ಕಾರ್ಯವನ್ನು ಮಾಡುವೆ. ಆದಕಾರಣ ಹಿಂದೆ ಹೇಳಿದ ಮಾತಿನಂತೆ ಮದುವೆಯನ್ನು ಮಾಡಿಕೊಳ್ಳುವೆ. ಆದರೆ ನಾನು ಎಂತಹ ಕಾಮಿನಿಯನ್ನು ಮದುವೆಯಾಗುವೆನು ಎಂದು ಹೇಳುವೆನು ಕೇಳಿರಿ’ ಎಂದು ರುದ್ರದೇವ ತನಗೆ ಅನುರೂಪಳಾದ ಪತ್ನಿ ಹೇಗಿರಬೇಕೆಂಬ ವರ್ಣನೆ ಮಾಡಿದ.

‘ನಾನು ಪತ್ನಿಯಾಗಿ ಪರಿಗ್ರಹಿಸಬೇಕೆಂದಿರುವವಳು ಯೋಗಿನಿಯೂ ಸುಂದರಿಯೂ ಆಗಿರಬೇಕು. ನನ್ನ ವೀರ್ಯವನ್ನು ಭಾಗಶಃ ಧರಿಸಲು ಸಮರ್ಥಳಾಗಿರಬೇಕು. ಅಂತಹ ಕಾಮಿನಿಯನ್ನೇ ನಾನು ಮದುವೆಯಾಗುವುದು. ನಾನು ಯೋಗನಿಷ್ಠನಾದರೆ ಅವಳೂ ಯೋಗನಿಷ್ಠಳಾಗಬೇಕು. ಯಾವ ಪರಮಾತ್ಮ ನನ್ನು ವೇದಗಳು ನಾಶವಿಲ್ಲದ ಅಕ್ಷಯ ಸ್ವರೂಪನೆಂದು ವರ್ಣಿಸುವುವೋ ಅಂತಹ ಅನಾದಿಯಾದ ಜ್ಞಾನಜ್ಯೋತಿಸ್ವರೂಪನಾದ ಪರಶಿವನನ್ನು ನಾನು ಸದಾ ಚಿಂತಿಸುತ್ತಿರುತ್ತೇನೆ. ಆ ಪರಮಾತ್ಮನನ್ನು ನಾನು ಚಿಂತಿಸುತ್ತಿರುವಾಗ ನನ್ನ ಚಿಂತನೆಗೆ ಅಡ್ಡಿಯಾಗದಿರುವ ಕಾಮಿನಿಯನ್ನೇ ನಾನು ಮದುವೆಯಾಗುವೆ. ನಾನು ಪರಿಗ್ರಹಿಸಬೇಕೆಂದಿರುವವಳು ನನ್ನಲ್ಲಿ ಯಾವಾಗ ವಿಶ್ವಾಸವಿಲ್ಲದವಳಾಗುವಳೋ ಆಗ ಅವಳನ್ನು ತ್ಯಜಿಸಿಬಿಡುವೆ. ಅಂತಹವಳು ಎಲ್ಲಿರುವಳು ಎಂಬುದನ್ನು ತೋರಿಸಿ. ನಾನು ಮದುವೆಯಾಗಲು ಸಿದ್ಧ’ ಎಂದ ರುದ್ರ.

ರುದ್ರದೇವ ಮದುವೆಯಾಗಲು ಒಪ್ಪಿದ್ದನ್ನು ಕೇಳಿ ಸಂತುಷ್ಟನಾದ ಬ್ರಹ್ಮ ‘ಓ ಮಹೇಶ್ವರನೇ, ನೀನು ಹೇಳುವಂತಹ ಕನ್ಯೆಯೇ ಇರುವಳು. ಜಗನ್ಮಾತೆಯಾದ ಉಮಾದೇವಿಯು ಹಿಂದೆ ಸೃಷ್ಟಿ–ಸ್ಥಿತಿಗಳ ಸಾಧನೆಗಾಗಿ ಸರಸ್ವತೀ ಮತ್ತು ಲಕ್ಷ್ಮೀ ಎಂಬ ಎರಡು ರೂಪಳಾಗಿ ಜನಿಸಿದಳು. ಲಕ್ಷ್ಮೀಯು ಹರಿಯ ಕಾಂತೆಯಾದರೆ, ಸರಸ್ವತಿಯು ನನ್ನ ಪ್ರಿಯಭಾರ್ಯೆಯಾದಳು. ಉಮಾದೇವಿಯು ಮತ್ತೆ ಲೋಕಕ್ಷೇಮಕ್ಕಾಗಿ ದಕ್ಷನ ಪುತ್ರಿಯಾಗಿ ಸತೀದೇವಿ ಎಂಬ ಹೆಸರಿನಿಂದ ಜನಿಸಿರುವಳು. ಆ ಸತೀದೇವಿಯು ನಿನಗೆ ಪತ್ನಿಯಾಗಲು ಅರ್ಹಳಾಗಿದ್ದಾಳೆ. ತೇಜಸ್ವಿನಿಯಾದ ಅವಳು ನಿನ್ನನ್ನೇ ಪತಿಯಾಗಿ ಪಡೆಯಬೇಕೆಂದು ತಪಸ್ಸನ್ನಾಚರಿಸುತ್ತಲಿದ್ದಾಳೆ.

‘ಓ ಪರಮೇಶ್ವರ! ಆ ಸತೀದೇವಿಗೆ ವರವನ್ನು ಅನುಗ್ರಹಿಸಲು ಅವಳ ಬಳಿಗೆ ತೆರಳಿ, ಅವಳನ್ನು ನೀನು ವರಿಸು. ನನಗೂ ಹರಿಗೂ ದೇವತೆಗಳಿಗೂ ಇದೇ ಅಭಿಲಾಷೆ ಇದೆ. ಆದಕಾರಣ ಅನುಗ್ರಹವಿಟ್ಟು ನಮ್ಮಾಸೆಯನ್ನು ಪೂರೈಸು. ನಿನ್ನ ವಿವಾಹದ ಉತ್ಸವವನ್ನು ನಾವೆಲ್ಲಾ ನೋಡಬೇಕೆಂದಿರುವೆವು. ಇದರಿಂದ ಮೂರು ಲೋಕಗಳಲ್ಲಿಯೂ ಮಂಗಳವಾಗುವುದು. ಎಲ್ಲರ ದುಃಖವೂ ನಾಶವಾಗುವುದು’ ಎಂದ ಬ್ರಹ್ಮ.

ಬ್ರಹ್ಮನ ಮಾತನ್ನು ಅನುಮೋದಿಸಿದ ವಿಷ್ಣು ‘ಕರುಣಾಮಯನೂ ಸುಖಪ್ರದನೂ, ದೇವದೇವನೂ ಆದ ಓ ಮಹಾದೇವನೆ, ಈಗ ಬ್ರಹ್ಮನು ಹೇಳಿದುದೆಲ್ಲವೂ ನಿಜವಾದುದು. ನನ್ನ ಅಭಿಪ್ರಾಯವೂ ಹಾಗೆಯೇ ಇರುವುದು. ಇದರಲ್ಲಿ ಸಂಶಯವಿಲ್ಲ. ಆದುದರಿಂದ ಓ ಮಹೇಶ್ವರನೇ! ನನ್ನಲ್ಲಿ ಅನುಗ್ರಹ ವನ್ನಿಟ್ಟು ಬ್ರಹ್ಮನು ಹೇಳಿದಂತೆ ಸತೀದೇವಿಯನ್ನು ಮದುವೆಯಾಗಿ ಮೂರು ಲೋಕಗಳಿಗೂ ಸುಖವನ್ನುಂಟು ಮಾಡು’ ಎಂದ.

ವಿಷ್ಣುವಿನ ಮಾತನ್ನು ಕೇಳಿ ನಸುನಕ್ಕ ಭಕ್ತವತ್ಸಲನಾದ ರುದ್ರದೇವ. ಹಾಗೆಯೇ ಆಗಲೆಂದು ದೇವತೆಗಳ ಪ್ರಾರ್ಥನೆಯನ್ನು ಅಂಗೀಕರಿಸಿದ. ಸಂತೋಷಿತರಾದ ಬ್ರಹ್ಮ, ವಿಷ್ಣು, ಮತ್ತಿತರ ದೇವತೆಗಳು ಮತ್ತು ಮುನಿಗಳು ರುದ್ರದೇವನಿಗೆ ನಮಸ್ಕರಿಸಿ, ಅವನ ಅಪ್ಪಣೆಯನ್ನು ಪಡೆದು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು ಎಂಬಲ್ಲಿಗೆ ಶಿವಮಹಾಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಹದಿನಾರನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT