ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಕೈಲಾಸಕ್ಕೆ ಬಂದ ವಿಷ್ಣು

ಅಕ್ಷರ ಗಾತ್ರ

ನಾರದಮುನಿಯು ‘ಓ ವಿಧಿ, ದಕ್ಷಯಜ್ಞವನ್ನು ಧ್ವಂಸಮಾಡಿದ ವೀರಭದ್ರನುಕೈಲಾಸಕ್ಕೆತೆರಳಿದ ಮೇಲೆ ಮುಂದೇನಾಯಿತು ಎಂಬುದನ್ನು ಹೇಳು’ ಎಂದು ಬ್ರಹ್ಮನನ್ನು ಕೋರುತ್ತಾನೆ. ಬ್ರಹ್ಮ ಯಜ್ಞನಾಶದ ನಂತರದ ವೃತ್ತಾಂತವನ್ನು ಹೇಳುತ್ತಾನೆ.

‘ರುದ್ರಗಣಗಳಿಂದ ಪರಾಜಿತರಾದ ದೇವತೆಗಳು, ಮುನಿಗಳು ಎಲ್ಲರೂ ನನ್ನ ಲೋಕಕ್ಕೆ ಬಂದು, ರುದ್ರಗಣಗಳಿಂದ ತಮಗಾದ ಕ್ಲೇಶವನ್ನು ನಿವೇದಿಸಿಕೊಂಡರು. ದೇವತೆಗಳ ಮಾತುಗಳನ್ನು ಕೇಳಿ ನನಗೆ ದುಃಖವಾಯಿತು. ಪುತ್ರನಾದ ದಕ್ಷ ಹತನಾದ ಶೋಕದಿಂದ ಪರಿತಪಿಸಿದೆ. ದೇವತೆಗಳಿಗೆ ಅನುಕೂಲವಾಗುವಂತೆ ಯಾವ ಕಾರ್ಯ ಮಾಡಿದರೆ, ನನ್ನ ಪುತ್ರನಾದ ದಕ್ಷ ಬದುಕಬಹುದು? ಅವನ ಯಜ್ಞವು ಪೂರ್ತಿಯಾದೀತು? ಎಂದು ಬಹಳ ಚಿಂತಿಸಿದೆ. ಕೊನೆಗೆ ಹರಿಯೇ ಯಜ್ಞದ ರಕ್ಷಕನಾಗಿರುವುದರಿಂದ ಅವನ ಮೊರೆ ಹೋಗಲು ನಿರ್ಧರಿಸಿದೆ.

ಇದಕ್ಕಾಗಿ ನಾನು ದೇವತೆಗಳು ಮತ್ತು ಮುನಿಗಳೊಡನೆ ವಿಷ್ಣುಲೋಕಕ್ಕೆ ಹೋಗಿ, ಹರಿಗೆ ದೇವತೆಗಳಿಗೆ ಬಂದಿರುವ ಕಷ್ಟವನ್ನು ತಿಳಿಸಿದೆ. ದಕ್ಷಯಜ್ಞವು ಪೂರ್ತಿಯಾಗಿ, ದಕ್ಷ ಬದುಕಿ ಬರಬೇಕು. ಯಜ್ಞದಿಂದ ದೇವತೆಗಳಿಗೂ ಒಳಿತಾಗಬೇಕೆಂದು ಕೋರಿದೆ. ನನ್ನ ಮಾತುಗಳನ್ನು ಕೇಳಿ ಶಿವಭಕ್ತನಾದವಿಷ್ಣು, ‘ಎಲೈ ಬ್ರಹ್ಮನೆ, ತೇಜಸ್ವಿಗಳಾದ ಮಹಾತ್ಮರಿಗೆ ದ್ರೋಹ ಮಾಡಬಾರದು. ದ್ರೋಹ ಮಾಡಿದವರಿಗೆ ಕ್ಷೇಮವಾಗಲಾರದು. ಅವರು ಮಾಡಿದ ಪಾಪಕ್ಕೆ ತಕ್ಕ ಪ್ರಾಯಶ್ಚಿತ್ತ ಅನುಭವಿಸಲೇಬೇಕು. ನಾನಾಗಲೀ ನೀನಾಗಲೀ ದೇವತೆಗಳಾಗಲೀ ಪರಮೇಶ್ವರನ ಬಲವೀರ್ಯಗಳ ತತ್ವವನ್ನು, ಅವುಗಳ ಪ್ರಮಾಣವನ್ನು ತಿಳಿಯಲಾರೆವು.

ಹೀಗಿರುವಾಗ ನಿಮ್ಮನ್ನು ಹೇಗೆ ರಕ್ಷಿಸಲಿ? ನೀವೆಲ್ಲರೂ ಮಹಾತ್ಮನಾದ ಪರಮೇಶ್ವರನಿಗೆ ಯಜ್ಞಭಾಗವನ್ನು ಕೊಡದೆ ಅಪಮಾನಿಸಿ ಅಪರಾಧವನ್ನೆಸಗಿದ್ದೀರಿ. ಶಿವನಿಗೆ ಕೋಪಬರುವಂತೆ ವರ್ತಿಸಿದ್ದೀರ. ಶಿವ ಎಷ್ಟು ಕೋಪಿಷ್ಟನೋ, ಅಷ್ಟೇ ಕರುಣಾಮಯಿ. ದಯಾಮಯನಾದ ಶಿವನಿಗೆ ಬೇಡಿಬಂದವರ ಕ್ಷಮಿಸುವ ಒಳ್ಳೆಯ ಗುಣವಿದೆ. ಪ್ರಿಯಪತ್ನಿಯ ಅಗಲಿಕೆಯಿಂದ ದುಃಖಿತನಾಗಿರುವ ಪರಮೇಶ್ವರನನ್ನು ನೀವೆಲ್ಲಾ ಪ್ರಿಯವಾಕ್ಯಗಳಿಂದ ಸ್ತುತಿಸಿ ಕ್ಷಮೆಯನ್ನು ಬೇಡಿರಿ; ಕ್ಷಮಿಸಿ, ಹರಸುತ್ತಾನೆ. ಶಂಭುವನ್ನು ಸಂತೋಷಗೊಳಿಸಲು ಇದೇ ಸರಿಯಾದ ಉಪಾಯ. ನಡೆಯಿರಿ, ನಾನೂ ನಿಮ್ಮೊಡನೆ ಬರುವೆ. ನಾನು ಸಹ ಅವನ ಕ್ಷಮೆಯನ್ನು ಬೇಡುವೆ’ ಎಂದನು.

ಹೀಗೆವಿಷ್ಣುಹೇಳಿ, ಬ್ರಹ್ಮ-ಇಂದ್ರಾದಿ ದೇವತೆಗಳೊಡನೆಕೈಲಾಸಕ್ಕೆಬಂದ. ಕೈಲಾಸಗಿರಿಯು ಬೆಳ್ಳಿಯಂತೆ ಬಿಳಿಯವರ್ಣದಲ್ಲಿ ಹೊಳೆಯುತ್ತಿತ್ತು. ಅಲ್ಲಿ ಕಿನ್ನರರು, ಅಪ್ಸರೆಯರು, ಯೋಗಿಗಳು, ಸಿದ್ಧರು ಶಿವನನ್ನು ಆರಾಧಿಸುತ್ತಿದ್ದರು. ವಿವಿಧ ಫಲಪುಷ್ಪಗಳಿಂದ ಶೋಭಿಸುತ್ತಿದ್ದ ಗಿರಿಯ ಏಕಾಂತವಾದ ಗುಹೆಗಳಲ್ಲಿ ಸಿದ್ಧ ಸ್ತ್ರೀ-ಪುರುಷರು ವಿಹರಿಸುತ್ತಲಿದ್ದರು. ಪವಿತ್ರವಾದ ಗಂಗಾನದಿ ಸೇರಿದಂತೆ ಅನೇಕ ನದಿಗಳು ಮಂಜುಳ ನಿನಾದದೊಡನೆ ಹರಿಯುತ್ತಲಿದ್ದುವು.

ಕೈಲಾಸಗಿರಿಯ ಸಮೀಪದಲ್ಲಿಯೇ ಶಂಕರನ ಮಿತ್ರನಾದ ಕುಬೇರನ ರಾಜಧಾನಿ ಅಲಕಾಪುರಿ ಇತ್ತು. ಅಲಕಾಪುರಿ ಸಮೀಪದಲ್ಲೆ ಸೌಗಂಧಿಕವೆಂಬ ಸುಂದರವಾದ ಕ್ರೀಡಾವನವಿತ್ತು. ಅಲ್ಲೇ ನಂದಾ ಮತ್ತು ಅಲಕನಂದಾ ಪವಿತ್ರನದಿಗಳು ಹರಿಯುತ್ತಲಿದ್ದುವು. ಸ್ವಲ್ಪ ದೂರದಲ್ಲಿ ಶಂಕರನ ವಿಶ್ರಾಂತಿಸ್ಥಾನವಾದ ವಟವೃಕ್ಷವಿತ್ತು. ಯೋಗಸಮಾಧಿಗೆ ಯೋಗ್ಯವಾದ ವಟವೃಕ್ಷದ ನೆರಳಿನಲ್ಲಿ ಶಿವ ಕುಳಿತ್ತಿದ್ದ. ಮಹಾಸಿದ್ಧರಾದ ಸನಕಾದಿಮುನಿಗಳು, ಕುಬೇರ ಮತ್ತವನ ಗಣಗಳು ಹಾಗೂ ಬಂಧುಗಳು ಭಕ್ತಿಯಿಂದ ಶಿವನನ್ನು ಸೇವಿಸುತ್ತಲಿದ್ದರು. ಶಿವನಿಗೆ ಹರಿ, ಬ್ರಹ್ಮ ಮೊದಲಾದ ದೇವತೆಗಳು ನಮಸ್ಕರಿಸಿದರು. ರುದ್ರ ಪ್ರತ್ಯಭಿವಾದನವನ್ನು ಮಾಡಿದ. ದೇಪರಮೇಶ್ವರನಿಗೆ ವಿಷ್ಣುವು ಭಕ್ತಿ-ವಿನಯದಿಂದ ಬಿನ್ನವಿಸಿಕೊಳ್ಳಲು ಉದ್ಯುಕ್ತನಾದ ಎಂಬಲ್ಲಿಗೆ ಸತೀಖಂಡದ ನಲವತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT