ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ ಭಾಗ–53: ಜೀವಬಂಧ ಮತ್ತು ಮೋಕ್ಷದ ಸ್ವರೂಪ

Last Updated 23 ಫೆಬ್ರುವರಿ 2022, 16:48 IST
ಅಕ್ಷರ ಗಾತ್ರ

ಈಗ ಸೂತಮುನಿಯು ಬಂಧ-ಮೋಕ್ಷಸ್ವರೂಪವನ್ನೂ, ಅದರ ನಿವಾರಣೋಪಾಯಗಳನ್ನೂ ಹೇಳುತ್ತಾನೆ. ಪ್ರಕೃತಿ ಮೊದಲಾದ ಎಂಟು ಬಂಧಗಳಿಂದ ಕೂಡಿದವನಿಗೆ ‘ಜೀವ’ನೆಂದು ಹೆಸರು. ಆ ಎಂಟು ಬಂಧಗಳಿಂದ ಬಿಡಲ್ಪಟ್ಟವನಿಗೆ ಮುಕ್ತನೆಂದು ಹೆಸರು. ‘ಪ್ರಕೃತಿ ಮೊದಲ ಬಂಧವಾದರೆ, ಬುದ್ಧಿ ಎರಡನೆಯ ಬಂಧ, ಮೂರನೆಯದು ತ್ರಿಗುಣಮಯವಾದ ಅಹಂಕಾರ. ಐದು ಸೂಕ್ಷ್ಮಭೂತಗಳು ಸೇರಿ ಎಂಟು ಬಂಧಗಳಾಗಿವೆ’ ಎಂದು ಸೂತಮುನಿ ವಿವರಿಸುತ್ತಾನೆ.

ಪ್ರಕೃತಿ ಮತ್ತಿತರ ಎಂಟು ಬಂಧಗಳಿಂದ ದೇಹವು ಜನಿಸುವುದು. ಆ ದೇಹದಿಂದ ಕರ್ಮ ನಡೆಯುವುದು. ಆ ಕರ್ಮದಿಂದ ಮತ್ತೆ ದೇಹವು ಜನಿಸುವುದು. ಅಂದರೆ, ಕರ್ಮಾಧೀನವಾಗಿ ಪುನರ್ಜನ್ಮ ಪಡೆಯುವುದು. ಹೀಗೆ ಶರೀರದ ಜನ್ಮ ಮತ್ತು ಕರ್ಮಗಳು ಪುನಃ ಪುನಃ ಆಗುತ್ತಿರುತ್ತದೆ. ಸ್ಥೂಲಶರೀರ, ಸೂಕ್ಷ್ಮಶರೀರ ಮತ್ತು ಕಾರಣಶರೀರಗಳೆಂಬ ಮೂರು ವಿಧದ ಶರೀರಗಳಲ್ಲಿ ಸ್ಥೂಲಶರೀರವು ಪ್ರತ್ಯಕ್ಷವಾದ ಲೌಕಿಕವ್ಯಾಪಾರ ಮಾಡುತ್ತದೆ. ಸೂಕ್ಷ್ಮಶರೀರವು ಇಂದ್ರಿಯಭೋಗವನ್ನು ಉಂಟುಮಾಡುತ್ತದೆ. ಕಾರಣಶರೀರವು ಜೀವನ ಕರ್ಮಕ್ಕನುಸಾರವಾಗಿ ಆತ್ಮನಿಗೆ ಭೋಗವನ್ನುಂಟುಮಾಡುತ್ತದೆ. ಇದರಿಂದ ಪುಣ್ಯ ಮತ್ತು ಪಾಪಕರ್ಮಗಳಿಂದ ಮಾಡಿದ ಸುಖ-ದುಃಖಗಳನ್ನು ಪ್ರತಿ ಜೀವಿಯೂ ಅನುಭವಿಸಬೇಕಾಗುತ್ತದೆ. ಜೀವವು ಕರ್ಮವೆಂಬ ಹಗ್ಗದಿಂದ ಪುನಃ ಪುನಃ ಬಂಧಿಸಲ್ಪಡುತ್ತದೆ. ಜೀವವು ಮೂರು ಶರೀರಗಳ ಕರ್ಮಗಳಿಂದ ಬಂಧಿಯಾಗಿ, ಸದಾ ಪ್ರಕೃತಿ ಮೊದಲಾದ ಸಂಸಾರಚಕ್ರದಲ್ಲಿ ಸುತ್ತುತ್ತಿರುತ್ತದೆ. ಚಕ್ರಭ್ರಮಣದಿಂದ ಮುಕ್ತಿ ಪಡೆಯಲು ಚಕ್ರಕರ್ತನನ್ನೇ ಸ್ತುತಿಸಬೇಕು.

ಪ್ರಕೃತಿ ಮತ್ತಿತರ ಚಕ್ರಕ್ಕೆ ಶಿವನೇ ಕರ್ತನು. ಲೋಕವ್ಯವಹಾರದಲ್ಲಿ ಚಕ್ರವನ್ನು ನಿರ್ಮಿಸಿ, ಚಕ್ರಕ್ಕಿಂತಲೂ ಬೇರೆಯಾಗಿರುತ್ತಾನಷ್ಟೆ. ಬಾಲಕ ನೀರನ್ನು ಕುಡಿದು, ತಿರುಗಿ ಉಗುಳುವಂತೆ ಶಿವನು ಜೀವರನ್ನೂ ಪ್ರಕೃತ್ಯಾದಿಗಳನ್ನೂ ಕುಡಿದು (ನಾಶಮಾಡುವನು) ಅದನ್ನು ತನ್ನಲ್ಲಿಯೇ ಅಡಗಿಸಿಕೊಂಡು ನಂತರ ಉಗುಳುವನು (ಸೃಷ್ಟಿಸುವನು). ಹೀಗೆ ಸಕಲವನ್ನು ತನ್ನ ವಶದಲ್ಲಿಟ್ಟುಕೊಂಡಿರುವುದರಿಂದಲೇ ಅವನಿಗೆ ಶಿವನೆಂದು ಹೆಸರು. ಆ ಶಿವನೇ ಸರ್ವಜ್ಞನು, ಪರಿಪೂರ್ಣನು, ನಿತ್ಯತೃಪ್ತನು. ನಿತ್ಯತೃಪ್ತನಾಗಿರುವುದರಿಂದ ಯಾವ ಆಸೆಯೂ ಇಲ್ಲದೆ, ಪೂರ್ಣಕಾಮನಾಗಿದ್ದಾನೆ. ಸರ್ವಜ್ಞತೆ, ತೃಪ್ತಿ, ಅನಾದಿಯಾದ ಸ್ವರೂಪಜ್ಞಾನ, ಸ್ವತಂತ್ರವಾದ ಅಪ್ರತಿಹತ ಶಕ್ತಿ ಮತ್ತು ಅಪರಿಮಿತವಾದ ಶಕ್ತಿಗಳು ಈಶ್ವರನ ಮಾನಸವಾದ ಐಶ್ವರ್ಯಗಳು ಎಂದು ವೇದದಲ್ಲಿ ಹೇಳಿದೆ. ಆದುದರಿಂದ ಶಿವನ ಅನುಗ್ರಹದಿಂದಲೇ ಪ್ರಕೃತ್ಯಾದಿ ಚಕ್ರವನ್ನು ವಶಮಾಡಿಕೊಳ್ಳಬಹುದು. ಶಿವನ ಅನುಗ್ರಹವು ಲಭಿಸಬೇಕಾದರೆ ಶಿವನನ್ನೇ ಪೂಜಿಸಬೇಕು. ಅದರಿಂದ ಶಿವನ ಪ್ರಸಾದವು ಲಭಿಸಿ, ಹೆಚ್ಚು ಅನುಗ್ರಹವನ್ನು ನೀಡುವನು. ಶಿವನ ಅನುಗ್ರಹದಿಂದ ಕರ್ಮ ಮೊದಲಾದ ಬಂಧವೆಲ್ಲವೂ ನಿವಾರಣೆಯಾಗಿ, ಎಲ್ಲಾ ವಸ್ತುಗಳು ಅವನ ಅಧೀನವಾಗಿ, ಆತ್ಮಸ್ವರೂಪದಲ್ಲಿ ವಿಹರಿಸುವ ಆತ್ಮಾರಾಮನಾಗುವನು.

ಪರಮೇಶ್ವರನ ಅನುಗ್ರಹದಿಂದ ಕರ್ಮಮಯವಾದ ದೇಹವು ಸ್ವಾಧೀನವಾದರೆ, ಆಗ ಶಿವಲೋಕದಲ್ಲಿ ವಾಸಿಸುವ ಭಾಗ್ಯ ಲಭಿಸುತ್ತದೆ. ಅದಕ್ಕೆ ಸಾಲೋಕ್ಯಮುಕ್ತಿಯೆಂದು ಹೆಸರು. ಸೂಕ್ಷ್ಮಭೂತಗಳು ಸ್ವಾಧೀನವಾದರೆ, ಶಿವನ ಸಮೀಪವು ಲಭಿಸುವುದು. ಇದಕ್ಕೆ ಸಾಮೀಪ್ಯ ಮುಕ್ತಿ ಎಂದು ಹೆಸರು. ಶಿವನಂತೆ ಆಯುಧ ಕ್ರಿಯೆವುಳ್ಳವನಾಗುವುದಕ್ಕೆ ಸಾಯುಜ್ಯ ಎಂದು ಹೆಸರು. ಮಹತ್ತಾದ ಶಿವನ ಪ್ರಸಾದವು ಲಭಿಸಿದರೆ ಬುದ್ಧಿಯೂ ಸ್ವಾಧೀನವಾಗುವುದು. ಬುದ್ಧಿಯು ಪ್ರಕೃತಿಯಿಂದ ಜನಿಸಿದುದು. ಈ ಬುದ್ಧಿಸ್ವಾಧೀನಕ್ಕೆ ‘ಸಾರ್ಷ್ಟಿ’ ಎಂದು ಹೆಸರು. ಇನ್ನು ಹೆಚ್ಚಾಗಿ ಶಿವನ ಅನುಗ್ರಹವನ್ನು ಸಂಪಾದಿಸಿದರೆ ಪ್ರಕೃತಿಯು ಸ್ವಾಧೀನವಾಗುವುದು. ಆಗ ಯತ್ನವಿಲ್ಲದೆಯೇ ಶಿವನ ಸರ್ವಜ್ಞತೆ ಮುಂತಾದ ಮಾನಸ ಐಶ್ವರ್ಯಗಳು ಲಭಿಸುವುದು. ಮಾನಸ ಐಶ್ವರ್ಯಗಳನ್ನು ಪಡೆದವರು ತನ್ನಲ್ಲೇ ವಿರಾಜಿಸುವನು. ಇದಕ್ಕೆ ಸಾಯುಜ್ಯಮುಕ್ತಿ ಎಂದು ವೇದ ಮತ್ತು ಆಗಮಗಳಲ್ಲಿ ಹೇಳಲಾಗಿದೆ. ಆದುದರಿಂದ ಶಿವನ ಅನುಗ್ರಹವನ್ನು ಪಡೆಯಲು ಶಿವನನ್ನು ಕ್ರಿಯಾದಿಗಳಿಂದ ಪೂಜಿಸಬೇಕು.

ಶಿವನನ್ನು ಉದ್ದೇಶಿಸಿ ಕ್ರಿಯೆ, ಪೂಜೆ, ತಪಸ್ಸು, ಶಿವಪಂಚಾಕ್ಷರೀಮಂತ್ರ, ಜಪ, ಶಿವಜ್ಞಾನ, ಶಿವನ ಧ್ಯಾನಗಳನ್ನು ಒಂದಾದ ಮೇಲೆ ಮತ್ತೊಂದನ್ನು ಹೆಚ್ಚಾಗಿ ಅಭ್ಯಸಿಸಬೇಕು. ಜೀವಿತಾವಧಿವರೆಗೆ ಶಿವನನ್ನು ಧ್ಯಾನಿಸುತ್ತ ಕಾಲ ಕಳೆಯಬೇಕು. ಸದ್ಯೋಜಾತ ಮುಂತಾದ ಶಿವಸ್ವರೂಪಗಳನ್ನು ಕುಸುಮಗಳಿಂದ ಅರ್ಚಿಸಬೇಕು. ಹಾಗೆ ಮಾಡಿದರೆ ಶಿವನನ್ನು ಸೇರಬಹುದು ಎಂದು ಸೂತಮುನಿ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT