ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪೂಜೆಗೆ ಬಿಲ್ವಪತ್ರೆ ಉತ್ತಮ

ಭಾಗ 102
ಅಕ್ಷರ ಗಾತ್ರ

ಶಿವಮೂರ್ತಿಗೆ ವೇದಮಂತ್ರಗಳಿಂದಾಗಲಿ, ಶಿಕ್ಷಾದಿ ವೇದಾಂಗಗ ಳಿಂದಾಗಲಿ, ನಾಮಮಂತ್ರಗಳಿಂದಾಗಲಿ, ಹನ್ನೊಂದು ಸಲ ಜಲಧಾರೆಯಿಂದ ಅಭಿಷೇಕ ಮಾಡಿದ ಬಳಿಕ ಬಟ್ಟೆಯಿಂದ ಒರೆಸಬೇಕು. ಆಚಮನವನ್ನು ಇತ್ತು, ವಸ್ತ್ರವನ್ನು ಅರ್ಪಿಸಬೇಕು. ಅನಂತರ ಎಳ್ಳು, ಜವೆಗೋಧಿ, ಗೋಧಿ, ಹೆಸರು, ಉದ್ದು, ಇವುಗಳನ್ನು ನಾನಾ ವಿಧವಾದ ಮಂತ್ರಗಳೊಡನೆ ಶಿವನಿಗೆ ಅರ್ಪಿಸಬೇಕು. ಸದ್ಯೋಜಾತಾದಿ ಪಂಚಮುಖಗಳುಳ್ಳ ಆ ಮಹಾತ್ಮನ ಒಂದೊಂದು ಮುಖಕ್ಕೂ, ಧ್ಯಾನಕ್ಕೆ ಅನುಸಾರವಾಗಿ ಮತ್ತು ಆಯಾ ಅಭಿಲಾಷೆಗಳಿಗನುಗುಣವಾಗಿ ಹೂವುಗಳನ್ನು ಸಮರ್ಪಿಸಬೇಕು.

ನೂರು ದಳಗಳುಳ್ಳ ಕಮಲಗಳು, ಶಂಖಾಕೃತಿಯುಳ್ಳ ಹೂಗಳು; ಹಾಗೆಯೇ, ಕುಶಪುಷ್ಪ, ದತ್ತೂರಿಹೂವು, ಮಂದಾರಕುಸುಮ, ತುಲಸೀದಳಗಳು, ವಿಶೇಷವಾಗಿ ಬಿಲ್ವಪತ್ರೆಗಳಿಂದ ಶಿವನನ್ನು ಅರ್ಚಿಸಬೇಕು. ಹೂಗಳಿಂದ ಭಕ್ತವತ್ಸಲನಾದ ಶಂಕರನನ್ನು ಮಿಗಿಲಾದ ಭಕ್ತಿಯಿಂದ ಪೂಜಿಸಬೇಕು. ಯಾವುದೂ ಸಿಗದಿದ್ದ ಪಕ್ಷದಲ್ಲಿ ಬಿಲ್ವಪತ್ರವೊಂದರಿಂದಲೇ ಶಿವನನ್ನು ಪೂಜಿಸಬಹುದು. ಬಿಲ್ವಪತ್ರವೊಂದನ್ನು ಒಪ್ಪಿಸಿದರೆ, ಎಲ್ಲ ಪೂಜೆಯನ್ನೂ ಮಾಡಿದಂತಾಗುವುದು. ಸುಗಂದ ಚೂರ್ಣವನ್ನೂ, ಸುವಾಸನೆಯುಳ್ಳ ನಾನಾ ವಿಧವಾದ ತೈಲವನ್ನೂ, ಪರಮ ಸಂತೋಷ ದಿಂದ ಶಿವನಿಗೊಪ್ಪಿಸಬೇಕು.

ಗುಗ್ಗಳ, ಅಗುರುಚಕ್ಕೆಗಳಿಂದ ಧೂಪವನ್ನು ಹೊತ್ತಿಸಬೇಕು. ಶಂಕರ ನಿಗೆ ತುಪ್ಪದ ದೀಪವನ್ನು ಹಚ್ಚಬೇಕು. ಆಮೇಲೆ ‘ಓ ಶಂಕರ! ಅರ್ಘ್ಯವನ್ನು ಸ್ವೀಕರಿಸಿ, ರೂಪವನ್ನೂ ಕೀರ್ತಿಯನ್ನೂ ಕೊಡು. ಭೋಗವನ್ನು ನೀಡು. ಭುಕ್ತಿಯನ್ನೂ ಮುಕ್ತಿಯನ್ನೂ ಅನುಗ್ರಹಿಸು. ನಿನಗೆ ನಮಸ್ಕಾರ’ ಎಂಬ ಮಂತ್ರದಿಂದ ಭಕ್ತಿಯುಕ್ತನಾಗಿ ಆತನಿಗೆ ಅರ್ಘ್ಯವನ್ನೀಯಬೇಕು. ಭಕ್ತಿಭಾವದಿಂದ ವಸ್ತ್ರವನ್ನು ತೆಗೆದುಕೊಂಡು ಮುಖವನ್ನು ಒರೆಸಬೇಕು. ಬಳಿಕ ಆ ಶಿವನಿಗೆ ನಾನಾ ಬಗೆಯ ಶುಭಕರವಾದ ನೈವೇದ್ಯವನ್ನು ನಿವೇದಿಸಬೇಕು. ವಿಳಂಬಕ್ಕೆ ಸ್ವಲ್ಪವೂ ಅವಕಾಶಕೊಡದೆ, ಪ್ರೀತಿಯಿಂದ ಆಚಮನವನ್ನಿತ್ತು, ಅನಂತರ ಬೇಕಾದ ನಾನಾ ಬಗೆಯ ಪರಿಕರಗಳಿಂದ ಕೂಡಿದ ಹಿತವಾದ ತಾಂಬೂಲವನ್ನು ಒಪ್ಪಿಸಬೇಕು.

ಸಂಖ್ಯಾನುಗುಣವಾಗಿ ಐದು ಬತ್ತಿಗಳುಳ್ಳ ಆರತಿಯನ್ನು ಹಚ್ಚಿಕೊಂಡು, ಕಾಲ್ಗಳ ಬಳಿ ನಾಲ್ಕು ಸಲವೂ, ನಾಭಿಮಂಡಲದ ಬಳಿ ಎರಡು ಬಾರಿಯೂ, ಮುಖದ ಬಳಿ ಒಂದು ಸಾರಿಯೂ, ಸರ್ವಾಂಗಗಳಲ್ಲಿಯೂ ಏಳುಸಲವೂ ಆರತಿಯನ್ನು ಬೆಳಗಿ ಯಥೋಕ್ತವಾದ ಧ್ಯಾನವನ್ನು ಮಾಡಿದ ಬೇಕು. ವಿವೇಕಿಯಾದವನು ತಾನು ತಿಳಿದ ಮಟ್ಟಿಗೆ ನಿಯತವಾದ ಸಂಖ್ಯೆಗನುಗು ಣವಾಗಿ, ತನಗೆ ಗುರುವು ಉಪದೇಶವಿತ್ತಂತೆ ಆ ಮಂತ್ರಜಪವನ್ನು ಮಾಡ ಬೇಕು. ನಾನಾ ವಿಧವಾದ ಸ್ತೋತ್ರಗಳನ್ನು ಹೇಳುತ್ತಾ, ವೃಷಭಧ್ವಜನಾದ ಶಿವನನ್ನು ಸ್ತೋತ್ರ ಮಾಡಬೇಕು. ಆಮೇಲೆ ಮೆಲ್ಲಗೆ ನಿಧಾನವಾಗಿ ಶಿವನಿಗೆ ಪ್ರದಕ್ಷಿಣೆಯನ್ನು ಮಾಡಬೇಕು.

ವಿಧ್ಯುಕ್ತವಾಗಿ, ‘ಎದೆ, ತಲೆ, ದೃಷ್ಟಿ, ಮನಸ್ಸು, ಶ್ರದ್ಧೆ, ಕಾಲು, ಕೈ, ಕಿವಿ’ ಎಂಬ ಅಷ್ಟಾಂಗಗಳಿಂದ ಕೂಡಿದ ನಮಸ್ಕಾರಗಳನ್ನು ಮಾಡಿದಮೇಲೆ, ಭಕ್ತಿಯುಕ್ತನಾಗಿ, ಪುಷ್ಪಾಂಜಲಿಯನ್ನೀಯಬೇಕು. ‘ಓ ಶಂಕರ! ಜ್ಞಾನ ಪೂರ್ವಕವಾಗಿಯೋ ಜ್ಞಾನಪೂರ್ವಕವಲ್ಲದೆಯೋ, ನಾನು ಮಾಡಿದ ಪೂಜೆ ಮೊದಲಾದವುಗಳಲ್ಲಿ ಯಾವ ಯಾವ ಕ್ರಿಯಾಕಲಾಪವಿದೆಯೋ, ಅದೆಲ್ಲವೂ ಹೋಗಿ ನಿನ್ನ ದಯೆಯಿಂದ ಪೂಜೆಯು ಸಫಲವಾಗಲಿ.

ಎಲೈ ಕೃಪಾಳುವೇ, ನಾನು ಯಾವಾಗಲೂ ನಿನ್ನವನು. ನನ್ನ ಪ್ರಾಣಗಳೆ ಲ್ಲವೂ ನಿನ್ನಲ್ಲೇ ನೆಲಸಿವೆ. ಮನಸ್ಸೆಲ್ಲಾ ನಿನ್ನನ್ನೇ ನೆನಸುತ್ತಿದೆ. ಗೌರೀಪತೀ, ಭೂತನಾಥ! ನನ್ನಲ್ಲಿ ಪ್ರಸನ್ನನಾಗು. ನೆಲದ ಮೇಲೆ ನಡೆಯುತ್ತಾ ಜಾರಿ ಬಿದ್ದವನಿಗೆ ಹೇಗೆ ನೆಲವೇ ಅವಲಂಬನೆಯೋ, ಹಾಗೆ ನಿನ್ನಲ್ಲಿ ಅಪರಾಧ ವೆಸಗಿದ್ದರೂ ನಮಗೆ ನೀನೇ ಗತಿಯಲ್ಲದೆ ಮತ್ತಾರೂ ಇಲ್ಲ – ಎಂದು ಪ್ರಾರ್ಥಿಸಬೇಕು.

ಈ ಪ್ರಕಾರ ಬಿನ್ನಹಗಳನ್ನು ಮಾಡಿಕೊಂಡು ವಿಧಿಪೂರ್ವಕವಾಗಿ ಪುಷ್ಪಾಂಜಲಿಯನ್ನು ಸಮರ್ಪಿಸಿ ಪುನಃ ಪುನಃ ನಮಸ್ಕಾರವನ್ನು ಮಾಡ ಬೇಕು. ‘ಓ ಪ್ರಭೂ, ಓ ದೇವ ದೇವ, ನಿನ್ನ ಪರಿವಾರ ಸಮೇತವಾಗಿ ಈಗ ನಿನ್ನ ನಿವಾಸಕ್ಕೆ ತೆರಳುವವನಾಗು. ನಾಥ, ನಾನು ಪುನಃ ಪೂಜೆ ಮಾಡುವಾಗ ನನ್ನಲ್ಲಿ ಅಭಿಮಾನವಿಟ್ಟು, ನೀನು ಮರಳಿ ದಯೆಮಾಡಿ ಬರಬೇಕು’ ಎಂದು ಭಕ್ತವತ್ಸಲನಾದ ಶಂಕರನನ್ನು ಬಹುವಾಗಿ ಪ್ರಾರ್ಥಿಸಿ ಬೀಳ್ಕೊಡಬೇಕು. ಆಮೇಲೆ ಆ ತೀರ್ಥೋದಕವನ್ನು ತನ್ನ ಎದೆಯ ಮೇಲೂ, ತಲೆಯಮೇಲೂ ಪ್ರೋಕ್ಷಿಸಿಕೊಳ್ಳಬೇಕು.

ಹೀಗೆ ಶಿವಪೂಜಾಕ್ರಮವನ್ನು ಬ್ರಹ್ಮನು ವಿವರಿಸುವುದರೊಂದಿಗೆ ಸೃಷ್ಟಿಖಂಡದ ಶಿವಪೂಜಾವರ್ಣನ ಎಂಬ ಹದಿಮೂರನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT