ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬ್ರಹ್ಮನಿಗೆ ದಕ್ಷಿಣೆ ಕೊಟ್ಟ ಶಿವ

ಭಾಗ 159
ಅಕ್ಷರ ಗಾತ್ರ

ಸತೀದೇವಿಯೊಂದಿಗೆ ವಿವಾಹವಾದ ಬಳಿಕ ಲೌಕಿಕ ಮತ್ತು ವೈದಿಕಕರ್ಮಗಳಿಗೆ ಫಲದಾತೃವಾದ ಶಿವ ಪ್ರಸನ್ನನಾಗಿ ರಾರಾಜಿಸಿದ. ಅಳುತ್ತಾ ನಿಂತ ಬ್ರಹ್ಮನನ್ನು ನೋಡಿ ‘ಎಲೈ ಬ್ರಹ್ಮನೇ, ನೀನು ವಿವಾಹಕರ್ಮವನ್ನು ಚೆನ್ನಾಗಿ ಮಾಡಿಸಿರುವೆ. ಇದರಿಂದ ನಾನು ತುಂಬಾ ಪ್ರಸನ್ನವಾಗಿರುವೆ. ಪುರೋಹಿತನಾದ ನಿನಗೆ ಏನು ದಕ್ಷಿಣೆಯನ್ನು ಕೊಡಲಿ ಹೇಳು’ ಎಂದ.

‘ಓ ದೇವದೇವ, ನೀನು ನನ್ನಲ್ಲಿ ಪ್ರಸನ್ನನಾಗಿದ್ದರೆ ಮತ್ತು ನಾನು ವರಕ್ಕೆ ಯೋಗ್ಯನಾಗಿದ್ದರೆ, ನೀನು ಈ ರೂಪದಿಂದಲೇ ಈ ವೇದಿಕೆಯಲ್ಲಿ ಸ್ಥಿರವಾಗಿ ನೆಲಸಿ, ಭಕ್ತರನ್ನನುಗ್ರಹಿಸಿ ಪಾಪಪರಿಶುದ್ಧರನ್ನಾಗಿ ಮಾಡಬೇಕು. ನಾನು ಇಲ್ಲೇ ಆಶ್ರಮವನ್ನು ಕಟ್ಟಿಕೊಂಡು, ನನ್ನ ಪಾಪನಾಶಕ್ಕಾಗಿ ತಪಸ್ಸನ್ನಾಚರಿಸುವೆ. ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶೀಯಂದು ಬರುವ ಭಾನುವಾರ ಪೂರ್ವಫಲ್ಗುಣಿ ನಕ್ಷತ್ರದಲ್ಲಿ, ಇಲ್ಲಿ ನೆಲೆಸಿರುವ ನಿನ್ನನ್ನು ಯಾರು ನೋಡುವರೋ, ಅವರ ಪಾಪಗಳು ನಷ್ಟವಾಗಿ, ಅವರಿಗೆ ಪುಣ್ಯ ಲಭಿಸಿ, ರೋಗಗಳೆಲ್ಲವೂ ನಾಶವಾಗಬೇಕು’ ಎಂದು ಪ್ರಾರ್ಥಿಸಿದ.

ಬ್ರಹ್ಮನ ಕೋರಿಕೆಯನ್ನು ಅಂಗೀಕರಿಸಿದ ಮಹಾಶಿವ ‘ಎಲೈ ವಿಧಿ, ನಿನ್ನ ಮಾತಿನಂತೆ ಈ ವೇದಿಕೆಯಲ್ಲಿ ಸಕಲ ಜನರಿಗೆ ಹಿತವನ್ನು ಮಾಡಲು ನನ್ನ ಪತ್ನಿಯಾದ ಈ ಸತಿಯೊಡನೆ ನೆಲಸಿರುವೆ’ ಎಂದು ಹೇಳಿ, ವೇದಿಮಧ್ಯದಲ್ಲಿ ಪತ್ನಿಯೊಡನೆ ನಿಂತು ತಮ್ಮೀರ್ವರ ಸ್ವರೂಪವಾದ ಮೂರ್ತಿಯನ್ನು ಕಲ್ಪಿಸಿದ. ಬಳಿಕ ದಕ್ಷಬ್ರಹ್ಮನ ಅನುಮತಿಯನ್ನು ಪಡೆದು ಪತ್ನಿಯೊಡನೆ ಶಿವ ತನ್ನ ಸ್ಥಾನಕ್ಕೆ ತೆರಳಲುದ್ಯುಕ್ತನಾದ. ದೇವತೆಗಳು, ಮುನಿಗಳು, ಗಣಗಳೆಲ್ಲರೂ ಪರಮೇಶ್ವರನನ್ನು ನಮಸ್ಕರಿಸಿ ಭಕ್ತಿಯಿಂದ ಸ್ತೋತ್ರಮಾಡಿ ಜಯಘೋಷ ಮಾಡಿದರು.

ಇದಾದ ನಂತರ ದಕ್ಷನ ಅನುಮತಿಯನ್ನು ಪಡೆದು ಶಿವ ತನ್ನ ಪತ್ನಿ ಸತೀದೇವಿಯನ್ನು ನಂದಿಯ ಮೇಲೆ ಕೂರಿಸಿ, ತಾನೂ ಕುಳಿತು ಹಿಮಾಲಯದ ತಪ್ಪಲಲ್ಲಿರುವ ತನ್ನ ವಾಸಸ್ಥಾನಕ್ಕೆ ತೆರಳಿದ. ನಂದಿಯ ಮೇಲೆ ಶಂಕರನ ಪಕ್ಕದಲ್ಲಿ ಕುಳಿತು ಮಂದಹಾಸವನ್ನು ಬೀರುತ್ತಿದ್ದ ಸತೀದೇವಿಯು ಶೋಭಿಸುತ್ತಿದ್ದಳು.

ವಿಷ್ಣು ಮೊದಲಾದ ದೇವತೆಗಳು, ಮರೀಚಿ ಮೊದಲಾದ ಮುನಿಗಳು, ದಕ್ಷ ಮೊದಲಾದ ಗೃಹಸ್ಥರು ಮತ್ತು ಇತರರೆಲ್ಲರೂ ತುಂಬಾ ಸಂತೋಷಗೊಂಡರು. ಕೆಲವರು ವಾದ್ಯಗಳನ್ನು ಬಾರಿಸುತ್ತಲೂ, ಇನ್ನೂ ಕೆಲವರು ಶಿವನ ನಿರ್ಮಲವಾದ ಯಶಸ್ಸನ್ನು ಗಾನ ಮಾಡುತ್ತಲೂ, ಆ ಶಿವನನ್ನು ಹಿಂಬಾಲಿಸಿ ನಡೆದರು. ವಧು ಸತೀದೇವಿಯ ತಂದೆಯಾದ ದಕ್ಷಪ್ರಜಾಪತಿ ಅರ್ಧ ದಾರಿಯವರೆಗೆ ಶಿವನನ್ನು ಹಿಂಬಾಲಿಸಿ ಹೋದ. ಮಾರ್ಗ ಮಧ್ಯೆ ಶಿವನಿಂದ ಪ್ರೀತಿಪೂರ್ವಕವಾಗಿ ಬೀಳ್ಕೊಂಡು ತನ್ನ ಪರಿವಾರದೊಡನೆ ಮನೆಗೆ ಹಿಂದಿರುಗಿದ.

ಎಲ್ಲಾ ದೇವತೆಗಳೊಡನೆ ತನ್ನ ಪತ್ನಿಯಾದ ಸತೀದೇವಿಯೊಡನೆ ಹಿಮಾಲಯ ತಪ್ಪಲಲ್ಲಿರುವ ತನ್ನ ವಾಸಸ್ಥಾನಕ್ಕೆ ಬಂದ ಶಿವ, ಸಂತೋಷದಿಂದ ಎಲ್ಲಾ ದೇವತೆಗಳಿಗೂ ಮುನಿಗಳಿಗೂ ತುಂಬಾ ಗೌರವದಿಂದ ಸನ್ಮಾನಿಸಿದ. ನಂತರ ಅಪರೂಪದ ಕಾಣಿಕೆಗಳನ್ನು ಕೊಟ್ಟು, ಆದರದಿಂದ ಅವರನ್ನು ಬೀಳ್ಕೊಟ್ಟ. ವಿಷ್ಣು ಮೊದಲಾದ ದೇವತೆಗಳು ಶಂಕರನ ಅಪ್ಪಣೆಯನ್ನು ಪಡೆದು ತೆರಳಿದರು.

ಹಿಮಾಲಯದ ತಪ್ಪಲುಗಳಲ್ಲಿ ಶಿವನು ಸತಿಯೊಡನೆ ದಾಂಪತ್ಯಜೀವನವನ್ನು ಸುಖವಾಗಿ ಅನುಭವಿಸುತ್ತಾ ಸಂತೋಷದಿಂದ ವಿಹರಿಸಿದ ಎಂದು ಶಿವ-ಸತೀದೇವಿಯರ ವಿವಾಹಕಥೆಯನ್ನ ಹೇಳಿದ ಬ್ರಹ್ಮ ‘ಎಲೈ ನಾರದ, ಶಿವನು ಸತೀದೇವಿ ಮತ್ತು ಗಣಗಳೊಡನೆ ತನ್ನ ಪೂರ್ವಸ್ಥಾನವಾದ ಕೈಲಾಸಪರ್ವತಕ್ಕ್ಕೆ ತೆರಳಿ ಸುಖಿ ದಾಂಪತ್ಯಜೀವನ ನಡೆಸುತ್ತಿದ್ದ. ಸ್ವಾಯಂಭುವ ಮನ್ವಂತರದಲ್ಲಿ ನಡೆದ ಶಿವಸತೀದೇವಿಯರ ವಿವಾಹವೃತ್ತಾಂತವನ್ನು ಸಂಪೂರ್ಣವಾಗಿ ನಿನಗೆ ಹೇಳಿರುವೆ. ಈ ಕಥೆಯನ್ನು ಮದುವೆಯಂಥ ಶುಭ ಸಂದರ್ಭದಲ್ಲಿ ಮತ್ತು ಯಜ್ಞದ ಸಮಯದಲ್ಲಿ ಶಿವನನ್ನು ಪೂಜಿಸಿ ಶ್ರದ್ಧೆಯಿಂದ ಕೇಳಿದರೆ, ಆ ಮದುವೆ ಮತ್ತು ಯಜ್ಞವೂ ನಿರ್ವಿಘ್ನವಾಗಿ ನೆರವೇರಿ ಮಂಗಳವುಂಟಾಗುವುದು. ಕನ್ಯೆಯರು ಈ ಕಥೆಯನ್ನು ಕೇಳಿದರೆ ಸುಖ, ಸೌಭಾಗ್ಯಶೀಲತೆಗಳನ್ನು ಪಡೆದು ಉತ್ತಮ ಆಚಾರ ಮತ್ತು ಒಳ್ಳೆಯ ಗುಣಗಳುಳ್ಳವಳಾಗುವರು; ಸತ್ಪುತ್ರರನ್ನು ಪಡೆಯುವರು’ ಎಂದು ಬ್ರಹ್ಮ ಹೇಳುವಲ್ಲಿಗೆ ಶಿವಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಇಪ್ಪತ್ತನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT