ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಹಿಮಾಲಯವಾಸ ಬಯಸಿದ ಸತಿ

ಭಾಗ 162
ಅಕ್ಷರ ಗಾತ್ರ

‘ಎಲೈ ದೇವಿ, ಹಿಮಾಲಯವು ನಿನಗಿಷ್ಟವಿಲ್ಲದಿದ್ದರೆ ಸುಂದರವಾದ ಮೇರುಪರ್ವತವಿರುವುದು. ಅಲ್ಲಿ ಸಕಲ ಇಷ್ಟಾರ್ಥಗಳನ್ನು ಕೊಡುವ ಕಲ್ಪವೃಕ್ಷಗಳಿವೆ. ಶೀತಲವಾದ ಹಸಿರು ಹಚ್ಚನೆಯದಾದ ಪ್ರದೇಶಗಳಿವೆ. ಮನೋಹರವಾದ ಪುಷ್ಪಗಳೂ ಸದಾ ಅರಳಿರುತ್ತವೆ. ಅಲ್ಲಿರುವ ದೇವಾಲಯ ಮತ್ತು ಆಶ್ರಮಗಳಲ್ಲಿ ಮುನಿಗಳು ವಾಸಮಾಡುತ್ತಿರುತ್ತಾರೆ. ಅಲ್ಲಿ ಹುಲಿ, ಸಿಂಹ, ಆನೆ ಮುಂತಾದ ಕ್ರೂರಪ್ರಾಣಿಗಳು ತಮ್ಮ ವೈರವನ್ನು ಬಿಟ್ಟು ಶಾಂತವಾಗಿರುತ್ತವೆ. ಸಾಧುವಾದ ಹರಿಣ ಮುಂತಾದ ಮೃಗಗಳು ಸ್ವಚ್ಛಂದವಾಗಿ ವಿಹರಿಸುತ್ತವೆ. ಸ್ಫಟಿಕಮಯವೂ ಸುವರ್ಣ-ರಜತಮಯವೂ ಆದ ತಪ್ಪಲು ಪ್ರದೇಶಗಳಿವೆ. ಮಾನಸಸರಸ್ಸಿನಂತೆ ಪವಿತ್ರವೂ ನಿರ್ಮಲವೂ ಆದ ಸರಸ್ಸುಗಳು ಅಲ್ಲಿ ಬಹಳ ಇವೆ.

ಶೃಂಗಾರಮಯವಾದಂತಹ ಚಕ್ರವಾಕ ದಂಪತಿಗಳು, ಸಾರಸಪಕ್ಷಿಗಳು ಅಲ್ಲಿ ಇಂಪಾಗಿ ಧ್ವನಿಮಾಡುತ್ತಾ ಮನಸ್ಸಿಗೆ ಸಂತೋಷವನ್ನುಂಟುಮಾಡುತ್ತವೆ. ಆ ಶೈಲವು ಶೃಂಗಾರಕ್ಕೆ ಅನುಕೂಲವಾಗಿದೆ. ಆ ಮೇರುಪರ್ವತ ಶಿಖರದಲ್ಲಿ ಅಷ್ಟದಿಕ್ಪಾಲಕರ ಭವನಗಳಿವೆ. ಮೇಲಿನ ಶಿಖರದಲ್ಲಿ ಸ್ವರ್ಗವು ಇರುವುದು. ಅಲ್ಲಿ ರಂಭೆ ಮೊದಲಾದ ಸುರಸುಂದರಿಯರು ಇರುವರು. ಇಂಥ ಮನೋಹರವಾದ ಮಹಾಮೇರುಪರ್ವತದಲ್ಲಿ ವಿಹರಿಸಲು ನಿನಗೆ ಅಪೇಕ್ಷೆಯುಂಟೇ? ಮೇರುಪರ್ವತದಲ್ಲಿ ಶಚೀದೇವಿಯು ಅಪ್ಸರೆಯರೊಡನೆ ಕೂಡಿ ನಿತ್ಯವೂ ನಿನ್ನ ವಿಹಾರಕ್ಕೆ ಸಹಾಯ ಮಾಡುವಳು. ಅಥವಾ ಸತ್ಪುರುಷರಿಗೆ ಆವಾಸವೂ ಪರ್ವತೋತ್ತಮವೂ ಆದ ನನ್ನ ವಾಸಸ್ಥಾನವಾದ ಕೈಲಾಸದಲ್ಲಿ ವಾಸಿಸಲು ಅಪೇಕ್ಷಿಸುವೆಯಾ? ಅಲ್ಲಿ ಕುಬೇರನ ರಾಜಧಾನಿಯಾದ ಅಲಕಾನಗರ ಇದೆ. ಪವಿತ್ರವಾದ ಗಂಗಾನದಿ ಹರಿಯುತ್ತದೆ.

ಪೂರ್ಣಚಂದ್ರನಂತೆ ಬೆಳ್ಳಗಿರುವ ಆ ರಜತಗಿರಿಯ ಗುಹೆ ಮತ್ತು ತಪ್ಪಲುಗಳಲ್ಲಿ ಅನೇಕ ಬ್ರಹ್ಮಕನ್ಯೆಯರು, ಅನೇಕ ಸಾಧುಮೃಗಗಳು, ಮನೋಹರವಾದ ಸರೋವರಗಳಿವೆ. ಹೀಗೆ ಎಲ್ಲಾ ಗುಣಗಳಿಂದಲೂ ಕೂಡಿರುವ ಕೈಲಾಸಪರ್ವತವು ಮೇರುಪರ್ವತವನ್ನು ಮೀರಿಸುತ್ತದೆ. ಹೇಳು ನಿನ್ನ ವಾಸಕ್ಕೆ ಯೋಗ್ಯವಾದ ಪರ್ವತ ಯಾವುದು ಬೇಕೆಂದು? ಅಲ್ಲಿ ಸುಂದರವಾದ ಗೃಹವನ್ನು ನಿರ್ಮಿಸುವೆ’ ಎಂದ ಶಿವ.

ಆಗ ಸತೀದೇವಿಯು ‘ಶಂಕರ, ಹಿಮಾಲಯದಲ್ಲಿಯೇ ನಿನ್ನೊಡನೆ ವಾಸಮಾಡುವೆ. ಆ ಮಹಾಗಿರಿಯಲ್ಲಿಯೇ ಯೋಗ್ಯವಾದ ವಾಸಸ್ಥಾನವನ್ನು ಕಲ್ಪಿಸು’ ಎಂದಳು.

ಶಂಕರನು ತುಂಬಾ ಸಂತೋಷಗೊಂಡು ಅವಳೊಡನೆ ಎತ್ತರವಾದ ಹಿಮಾಲಯ ಪರ್ವತದ ಶಿಖರಕ್ಕೆ ತೆರಳಿದ. ಅಲ್ಲಿ ಸಿದ್ಧ ಸುಂದರಿಯರು ವಿಹರಿಸುವರು. ಸುಂದರವಾದ ಪಕ್ಷಿಗಳು ವಾಸಿಸುವುವು. ಪದ್ಮ ಮತ್ತು ಕನ್ನೈದಿಲೆಗಳಿಂದ ಸರೋವರಗಳು ಕಂಗೊಳಿಸುವುವು. ರತ್ನಮಯವಾಗಿರುವ ಅದರ ಶಿಖರಗಳು ಹಲವೆಡೆ ವಿಚಿತ್ರವಾಗಿಯೂ, ಕೆಲವೆಡೆ ಬಾಲಸೂರ್ಯನಂತೆ ರಕ್ತವರ್ಣವುಳ್ಳದ್ದಾಗಿಯೂ ಶೋಭಿಸುವುವು. ಇಂತಹ ಹಿಮಾಲಯಪರ್ವತಕ್ಕೆ ಶಿವನು ಸತೀದೇವಿಯೊಡನೆ ಹೋದ.

ಆ ಶೈಲದಲ್ಲಿ ಸ್ಫಟಿಕದಂತೆ ಶುಭ್ರವಾದ ಮೇಘಗಳು ರಾರಾಜಿಸುತ್ತಿದ್ದವು. ಹಸುರಾದ ಹಚ್ಚನೆಯ ಹುಲ್ಲುಪ್ರದೇಶವೂ ನಿಬಿಡವಾದ ನೆರಳುಳ್ಳ ಮನೆಗಳೂ ಇದ್ದವು. ಕಮಲ ಮುಂತಾದ ಅನೇಕ ಪುಷ್ಪಗಳಿರುವ ಸರೋವರಗಳಲ್ಲಿದ್ದವು. ಅಲ್ಲಿನ ಮರಗಳಲ್ಲೆಲ್ಲಾ ಹೂವುಗಳು ಅರಳಿ, ಅದರ ಮಧುಪಾನಕ್ಕಾಗಿ ದುಂಬಿಗಳು ಮುತ್ತಿ ಝೇಂಕರಿಸುತ್ತಿದ್ದವು. ಆಗತಾನೇ ಅರಳಿದ ಸುಂದರವಾದ ಕಮಲ ಕನ್ನೈದಿಲೆಗಳು ಮೋಹಕಗೊಳಿಸುವಂತಿದ್ದವು. ಚಕ್ರವಾಕ, ಹಂಸ, ಸಾರಸ, ಬಕ, ನವಿಲು, ಕೋಗಿಲೆ ಮುಂತಾದ ಸುಂದರ ಪಕ್ಷಿಗಳು ಮನೋಹರವಾಗಿ ಧ್ವನಿಗೈಯ್ಯುತ್ತಿದ್ದವು.

ಪರ್ವತಗಣಗಳು, ತುರಂಗಮುಖರು, ಸಿದ್ಧರು, ವಿದ್ಯಾಧರಿಯರು, ಗುಹ್ಯಕರು, ಅಪ್ಸರೆಯರು, ದೇವಸ್ತ್ರೀಯರು, ಕಿನ್ನರಿಯರು ಮತ್ತು ಆ ಪರ್ವತದ ಸುಮಂಗಲೆಯರು, ಕನ್ಯೆಯರು, ಅಲ್ಲಿ ಸ್ವೇಚ್ಛೆಯಾಗಿ ವಿಹರಿಸುತ್ತಿದ್ದರು. ವೀಣೆ, ವಾದ್ಯ, ಮೃದಂಗ, ಪಟಹ ಮುಂತಾದ ವಾದ್ಯಗಳೊಡನೆ ಅಪ್ಸರೆಯರು ನರ್ತನಮಾಡುತ್ತಿದ್ದರು. ಅರಳಿದ ಹೂವುಗಳಿಂದ ಆವೃತವಾದ ಸುಂದರವಾದ ಅನೇಕ ಲತಾಗೃಹಗಳಿದ್ದವು. ನಿರ್ಮಲವಾದ ಸಣ್ಣ ಕೊಳಗಳೂ, ದೊಡ್ಡ ಸರೋವರಗಳೂ ಅಲ್ಲಿದ್ದವು. ಇಂತಹ ಹಿಮಾಲಯದಲ್ಲಿ ಶಂಕರನು ಹಿಮವಂತನ ರಾಜಧಾನಿಗೆ ಸಮೀಪದ ಒಂದು ಶಿಖರದಲ್ಲಿ ವಾಸಿಸುತ್ತಾ ಸತೀದೇವಿಯೊಡನೆ ಬಹುಕಾಲ ವಿಹರಿಸಿದ. ಹತ್ತು ಸಾವಿರ ವರ್ಷಗಳ ಪರ್ಯಂತ ಸತೀದೇವಿಯೊಡನೆ ಸುಖವಾಗಿ ವಾಸಮಾಡಿದ. ಕರ್ಮಾನುಷ್ಠಾನ, ತಪಸ್ಸು, ಆತ್ಮಸ್ವರೂಪಗಳಲ್ಲಿ ಆಸಕ್ತಿಯನ್ನು ಬಿಟ್ಟು, ರಾತ್ರಿ-ಹಗಲೂ ಸತೀದೇವಿಯಲ್ಲಿ ತುಂಬಾ ಅನುರಾಗವುಳ್ಳವನಾಗಿದ್ದ. ಸತೀದೇವಿ–ಪರಮೇಶ್ವರರಿಬ್ಬರೂ ಅನುರಾಗವೆಂಬ ವೃಕ್ಷಕ್ಕೆ, ನಿತ್ಯವೂ ಶೃಂಗಾರಭಾವಗಳೆಂಬ ಜಲವನ್ನೆರೆದು ಬೆಳೆಸಿದರು.

ಇಲ್ಲಿಗೆ ಸತೀಖಂಡದ ಇಪ್ಪತ್ತೆರಡನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT