ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ತವರಿನಲ್ಲಿ ಗಿರಿಜೆಗೆ ಭವ್ಯಸ್ವಾಗತ

ಭಾಗ 242
ಅಕ್ಷರ ಗಾತ್ರ

ಶಿವನ ಒಲಿಸಿಕೊಂಡ ತನ್ನ ಜನ್ಮ ಸಾರ್ಥಕವಾಯಿತೆಂದು ಪಾರ್ವತಿ ಸಂತೋಷದಿಂದ ಸಖಿಯರೊಡನೆ ತಂದೆಯ ಮನೆಗೆ ತೆರಳುತ್ತಾಳೆ. ಮೇನಾದೇವಿ ಮತ್ತು ಹಿಮವಂತ ದಂಪತಿ ಮಗಳನ್ನು ಎದುರ್ಗೊಳ್ಳಲು ದಿವ್ಯರಥವನ್ನೇರಿ ಬರುತ್ತಾರೆ. ಪುರೋಹಿತರು, ಪಟ್ಟಣಿಗರು, ದಾಸದಾಸಿಯರು ಮತ್ತು ಸಂಬಂಧಿಗಳೆಲ್ಲರೂ ಪಾರ್ವತಿಯನ್ನು ಬರಮಾಡಿಕೊಳ್ಳಲು ಸಾಲಾಗಿ ನಿಂತರೆ, ಪಾರ್ವತಿಯ ಸಹೋದರರೂ ಹರ್ಷದಿಂದ ಜಯಧ್ವನಿಯನ್ನು ಮಾಡುತ್ತಾ, ತಮ್ಮ ಅಕ್ಕರೆಯ ಅಕ್ಕನನ್ನು ಅರಮನೆಗೆ ಕರೆತರಲು ಕಾತರರಾಗಿ ಕಾದಿರುತ್ತಾರೆ.

ಪಾರ್ವತಿ ಬರುವ ರಾಜಮಾರ್ಗವನ್ನು ತಳಿರುತೋರಣಗಳಿಂದ ಅಲಂಕರಿಸಲಾಗಿತ್ತು. ಸುತ್ತಲ ಪರಿಸರವನ್ನು ಚಂದನಧೂಪ ಕಸ್ತೂರೀ ಮುಂತಾದ ಸುಗಂಧದ್ರವ್ಯಗಳಿಂದ ಸುವಾಸಿತವಾಗಿಸಲಾಗಿತ್ತು. ಇಂತಹ ರಾಜಮಾರ್ಗದಲ್ಲಿ ಮಂಗಳವಾದ ಪೂರ್ಣಕಲಶವನ್ನು ಹಿಡಿದು ಸುಮಂಗಳೆಯರು ನಿಂತಿದ್ದರೆ, ಊರಿನ ಘನವಿದ್ವಾಂಸರು, ಪುರೋಹಿತರು, ಗಣ್ಯ ನಾಗರಿಕರು, ಬ್ರಹ್ಮವಿತ್ತುಗಳಾದ ಮುನಿಗಳೆಲ್ಲರೂ ಮಹಾತಪಸ್ವಿನಿ ಪಾರ್ವತಿಯನ್ನು ಸ್ವಾಗತಿಸಲು ಕಾಯುತ್ತಿದ್ದರು. ಅರಮನೆಯ ರಾಜನರ್ತಕಿಯರು, ಆಸ್ಥಾನ ಸಂಗೀತಗಾರರು, ಕಲಾವಿದರೆಲ್ಲರೂ ರಾಜಮಾರ್ಗದ ಉದ್ದಕ್ಕೂ ನಿಂತು ತಮ್ಮ ವೃತ್ತಿನೈಪುಣ್ಯವನ್ನು ತೋರಿಸುತ್ತಿದ್ದರು. ಎಲ್ಲಾ ವರ್ಗದ ಜನರು ಪಾರ್ವತಿಯ ಗುಣಗಾನ ಮಾಡುತ್ತಿದ್ದರು. ಅನೇಕ ಜನ ವಿಧವಿಧವಾದ ವಾದ್ಯಗಳಿಂದ ಮಂಗಳಧ್ವನಿಯನ್ನು ಮಾಡುತ್ತಿದ್ದರು. ಗಿರಿಜೆ ನಗರ ಸಮೀಪಿಸುತ್ತಿದ್ದಂತೆ ಶಂಖ-ಜಾಗಟೆಯ ಧ್ವನಿ ಕಿವಿಗಡಚಿಕ್ಕುವಂತೆ ಮೊಳಗಿದವು.

ಗಿರಿಜೆ ನಗರವನ್ನು ಪ್ರವೇಶಿಸುತ್ತಿದ್ದಂತೆ ಅವಳತ್ತ ಓಡಿ ಬಂದ ಮೇನಾದೇವಿ ಮತ್ತು ಹಿಮವಂತ ಮಗಳನ್ನು ಬಿಗಿದಪ್ಪಿಕೊಂಡು ಸಂತೋಷದಿಂದ ಬೀಗಿದರು. ತನ್ನ ಎದುರುಗೊಳ್ಳಲು ಕಾದಿದ್ದಲ್ಲದೆ, ಹರ್ಷದಿಂದ ಓಡೋಡಿ ಬಂದು ಆಲಂಗಿಸಿದ ತಂದೆತಾಯಿಗಳ ಔದಾರ್ಯ ನೋಡಿ ಗಿರಿಜೆ ಮನಸ್ಸು ಭಾವಪರವಶದಿಂದ ಉಬ್ಬಿ ಹೋಯಿತು. ಮೇನಾದೇವಿ-ಹಿಮವಂತ ಗಿರಿಜೆಯ ಶಿರವನ್ನು ನೇವರಿಸುತ್ತಾ ಆಶೀರ್ವಾದ ಮಾಡಿದರು.

ಗಿರಿಜೆಯ ಬಳಿ ಬಂದ ಸಹೋದರರು ಮತ್ತವರ ಪತ್ನಿ-ಮಕ್ಕಳು, ಇತರೆ ಬಂಧು-ಮಿತ್ರರು ಸಹ ಪ್ರೀತಿಯಿಂದ ಅವಳನ್ನು ಆಲಂಗಿಸಿಕೊಂಡು, ‘ಎಲೈ ಗಿರಿಜೆ, ನೀನು ಕುಲವನ್ನು ಉದ್ಧರಿಸುವಂತಹ ಮಹಾಕಾರ್ಯವನ್ನು ಸಾಧಿಸಿದೆ. ಈ ನಿನ್ನ ಸದಾಚಾರದಿಂದ ನಾವೆಲ್ಲರೂ ಪುನೀತರಾದೆವು’ ಎಂದು ಹೊಗಳಿ ನಮಸ್ಕರಿಸಿದರು. ಚಂದನ ಮತ್ತು ಸುಗಂಧಿತ ಹೂವುಗಳಿಂದ ಅವಳನ್ನು ಅಲಂಕರಿಸಿ ಪೂಜಿಸಿದರು. ಈ ಸಮಯದಲ್ಲಿ ದೇವತೆಗಳು ಆಕಾಶದಲ್ಲಿ ವಿಮಾನದಲ್ಲಿ ನಿಂತು, ಗಿರಿಜೆಯ ಮೇಲೆ ಹೂವಿನ ಮಳೆಯನ್ನು ಸುರಿಸಿ, ಸ್ತುತಿಸಿದರು.

ನಂತರ ಅವರೆಲ್ಲಾ ಗಿರಿಜೆಯನ್ನು ಸುಂದರವಾದ ರಥದಲ್ಲಿ ಕುಳ್ಳಿರಿಸಿಕೊಂಡು ನಗರವನ್ನು ಪ್ರವೇಶಿಸಿದರು. ಪುರದ ಪ್ರಮುಖರು, ಪುರೋಹಿತರು, ಸಖಿಯರು, ಮುತ್ತೈದೆಯರೆಲ್ಲರೂ ಸೇರಿ ಗಿರಿಜೆಯನ್ನು ಬಹುಮರ್ಯಾದೆಯಿಂದ ಬರಮಾಡಿಕೊಂಡು ಅವಳ ಮನೆಗೆ ಕರೆದೊಯ್ದರು. ಸ್ತ್ರೀಯರು ದೃಷ್ಟಿಯನ್ನು ತೆಗೆದು ಸಾಂಪ್ರದಾಯಿಕ ಆರತಿಯನ್ನು ಎತ್ತಿದರು. ಯಶಸ್ವಿ ತಪಸ್ವಿನಿಯಾಗಿ ಪಾರ್ವತಿ ಮನೆಗೆ ಬಂದಿದ್ದರಿಂದ ತನ್ನ ಗೃಹಸ್ಥಾಶ್ರಮ ಸಫಲವಾಯಿತೆಂದು ಹಿಮವಂತ ಹರ್ಷಿಸಿದ. ಮಗಳನ್ನು ತಪಸ್ಸು ಮಾಡಲು ಪ್ರೇರೇಪಿಸಿದ ನಾರದನ ಸಹಾಯವನ್ನು ಕೃತಜ್ಞತೆಯಿಂದ ಸ್ತುತಿಸಿದ.

ಪಾರ್ವತಿಯ ಸ್ವಾಗತಕಾರ್ಯಕ್ಕೆ ಬಂದಿದ್ದ ಗಣ್ಯರಿಗೆ, ಸ್ತುತಿಪಾಠಕರಿಗೆ ಹಿಮವಂತ ಧನವನ್ನು ಕೊಟ್ಟು ಸತ್ಕರಿಸಿದ. ವೇದಪಂಡಿತರಿಂದ ಮಂಗಳ ಘೋಷ ಮಾಡಿಸಿ, ಸ್ವಾಗತ ಮಹೋತ್ಸವ ಸಮಾಪ್ತಿಗೊಳಿಸಿದ. ಹೀಗೆ ಗಿರಿಜೆ ಆತ್ಮೀಯ ಸ್ವಾಗತದೊಂದಿಗೆ ಮನೆಯನ್ನು ಸೇರಿದಳು. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT