ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಜ್ಞಾನ-ವಿಜ್ಞಾನಕ್ಕೆ ಭಕ್ತಿಯೇ ಮೂಲ

ಭಾಗ 99
ಅಕ್ಷರ ಗಾತ್ರ

ಸಗುಣಸ್ವರೂಪದ ಆರಾಧನೆಯಿಂದ ನಿರ್ಗುಣನಾದ ಪರಬ್ರಹ್ಮನನ್ನು ಸಾಕ್ಷಾತ್ಕರಿಸಬಹುದೆಂಬುದು ನಿರ್ವಿವಾದ. ಹೀಗಾಗಿ, ಎಲ್ಲ ದೇವತೆಗಳಿಗೂ ಪ್ರತಿಮೆಗಳು ನಿರ್ಮಾಣವಾದವು. ಶಿವನಿಗೆ ಲಿಂಗಾಕಾರದಲ್ಲಿ ಪೂಜೆ ಸಲ್ಲುವುದು. ಪ್ರತಿಮೆಯೇ ಇಲ್ಲದಿದ್ದರೆ ಗಂಧ, ಚಂದನ, ಹೂವು ಮೊದಲಾದ ಸಾಮಗ್ರಿಗಳೆಲ್ಲಾ ವ್ಯರ್ಥವೆನಿಸುವುದು. ಎಲ್ಲವೂ ಶಿವಮಯವೆಂಬ ಶುದ್ಧವಾದ ಜ್ಞಾನವು ಹುಟ್ಟುವವರೆಗೂ ದೇವತಾಮೂರ್ತಿಗಳನ್ನು ಪೂಜಿಸುತ್ತಿರಬೇಕು. ಅಂತಹ ಮಹಾಜ್ಞಾನವಿಲ್ಲದೆ, ವಿಗ್ರಹಾರಾಧನೆಯನ್ನೂ ಮಾಡದಿದ್ದರೆ, ಅಂಥವನು ನರಕದಲ್ಲಿ ಬೀಳುವುದು ಖಂಡಿತ – ಎನ್ನುತ್ತಾನೆ ಬ್ರಹ್ಮ.

ತನ್ನ ಜಾತಿಗೆ ವಿಹಿತವಾದ ಯಾವ ಕರ್ಮವುಂಟೋ, ಅದೆಲ್ಲವನ್ನೂ ತಪ್ಪದೆ ನಡೆಸಿಕೊಂಡು ಬರಬೇಕು. ಯಾವುದರಲ್ಲಿ ಭಕ್ತಿಯು ಯಾವ ರೀತಿ ಇರುವುದೋ, ಆ ರೀತಿ ಅವುಗಳಿಗೆ ಪೂಜಾದಿಗಳನ್ನು ಮಾಡಬೇಕು. ದೇವರ ಪೂಜೆ ಮತ್ತು ದಾನಧರ್ಮಗಳು ಇಲ್ಲದಿದ್ದರೆ ಪಾಪವು ದೂರವಾಗುವುದಿಲ್ಲ – ಎಂದೂ ನಾರದನಿಗೆ ತಿಳಿಸುತ್ತಾನೆ.

ಎಲ್ಲಿಯವರೆಗೆ ಈ ದೇಹದಲ್ಲಿ ಪಾಪಸಂಬಂಧವಿರುವುದೋ, ಅಲ್ಲಿಯವರೆಗೆ ಆತನಿಗೆ ಸಿದ್ಧಿಯು ಲಭಿಸಲಾರದು. ಪಾಪಸಂಬಂಧವು ಬಿಟ್ಟುಹೋದಾಗ, ಅವನು ಮಾಡಿದ ಕರ್ಮವೆಲ್ಲವೂ ಸಫಲವಾಗುವುದು. ಕೊಳಕು ಬಟ್ಟೆಯ ಮೇಲೆ ಯಾವ ಬಣ್ಣವೂ ಕಾಣಿಸಲಾರದು, ಬಟ್ಟೆಯನ್ನು ಒಗೆದಾಗ ಕೊಳೆಯೆಲ್ಲವೂ ಕಳೆದುಹೋದ ಮೇಲೆ, ಅದರ ಅಸಲಿ ಬಣ್ಣ ಚೆನ್ನಾಗಿ ಕಾಣುವುದು. ಹಾಗೆಯೇ, ದೇವತಾರಾಧನೆಯಿಂದ ಶರೀರವೆಲ್ಲವೂ ಪಾಪರಹಿತವಾಗಿ ಶುದ್ಧವಾದಾಗ, ಜ್ಞಾನವೆಂಬ ಬಣ್ಣವು ಕಾಣಲು ಅನುವಾಗುವುದು. ಆಗಲೇ ವಿಜ್ಞಾನವು ಹುಟ್ಟುವುದು.

ವಿಜ್ಞಾನಕ್ಕೆ ಮೂಲಕಾರಣ ಅನನ್ಯವಾದ ಭಕ್ತಿ. ಜ್ಞಾನಕ್ಕೂ ಮುಖ್ಯಕಾರಣ ಭಕ್ತಿಯೇ. ಭಕ್ತಿಯು ಹುಟ್ಟಬೇಕಾದರೆ, ತನಗೆ ಇಷ್ಟವಾದ ದೇವತೆಗಳ ಪೂಜೆ ಮುಂತಾದ ಸತ್ಕರ್ಮಗಳನ್ನು ಮಾಡುವುದು ಅವಶ್ಯಕ. ಆ ಸತ್ಕರ್ಮಗಳಿಗೆ ಗುರುವು ಕಾರಣ. ಗುರುವು ದೊರೆಯಲು ಸಜ್ಜನರ ಸಹವಾಸವು ಕಾರಣ. ಗುರುವಿನಿಂದ ಮಂತ್ರಗಳು ದೊರೆತು, ದೇವನನ್ನು ಪೂಜಿಸಲು ಅನುಕೂಲವಾಗುವುದು. ಆ ಪೂಜೆಯಿಂದ ಭಕ್ತಿಯುಂಟಾಗುವುದು. ಭಕ್ತಿಯಿಂದ ಜ್ಞಾನವು ಲಭಿಸುವುದು.‌

ಪರಬ್ರಹ್ಮನನ್ನು ಸಾಕ್ಷಾತ್ಕರಿಸಲು ಬೇಕಾದ ಆ ವಿಜ್ಞಾನವು ಜ್ಞಾನದಿಂದ ಹುಟ್ಟುವುದು. ವಿಜ್ಞಾನವು ಹುಟ್ಟಿದ ಮೇಲೆ ಭೇದವೆಲ್ಲಾ ಹೋಗಿ ಅಭೇದ ಜ್ಞಾನವುಂಟಾಗುವುದು. ಆಗ ಶೀತೋಷ್ಣಾದಿ ದುಃಖಗಳು ಇರುವುದಿಲ್ಲ. ಯಾವಾಗ ದ್ವಂದ್ವಗಳ ಬಾಧೆಯಿಲ್ಲವೋ ಆಗ ಸಾಕ್ಷಾತ್ ಶಿವನೇ ಇವನಾಗುವನು. ವಿಜ್ಞಾನಿಗೆ ಸುಖ-ದುಃಖಗಳೂ ಇರುವುದಿಲ್ಲ; ವಿಹಿತವೂ ಅವಿಹಿತವೂ ಇರುವುದಿಲ್ಲ.

ಈ ರೀತಿ ಮನೆ, ಆಶ್ರಮ ಯಾವೊಂದೂ ಇಲ್ಲದೆ ಇರುವವನು ಈ ಪ್ರಪಂಚದಲ್ಲಿ ಬಹು ಅಪರೂಪ. ಅಂಥವನನ್ನು ನೋಡಿದ ಮಾತ್ರದಿಂದಲೇ ಪಾಪಗಳೆಲ್ಲವೂ ಪರಿಹಾರವಾಗುವುದು. ಅವನನ್ನು ಪರಬ್ರಹ್ಮಸ್ವರೂಪನಾದ ಶಿವನೇ ಎಂದು ತೀರ್ಥಗಳೂ ದೇವತೆಗಳೂ ಋಷಿಗಳೂ ಹೊಗಳುವರು. ತೀರ್ಥಗಳೂ ಮತ್ತು ಮಣ್ಣಿನಲ್ಲಿ ಮಾಡಿದ, ಕಲ್ಲಿನಲ್ಲಿ ಕಡೆದ ದೇವರುಗಳೂ ಆ ವಿಜ್ಞಾನಿಯನ್ನು ಹೋಲಲಾರವು. ತೀರ್ಥಾದಿಗಳು ಬಹಳ ದಿವಸಗಳ ಮೇಲೆ ಮನುಷ್ಯನನ್ನು ಪಾವನನ್ನಾಗಿ ಮಾಡುತ್ತವೆ. ವಿಜ್ಞಾನಿಯಾದರೋ ದರ್ಶನ ಮಾತ್ರದಿಂದಲೇ ಪಾವನಗೊಳಿಸುವನು.

ಎಲ್ಲಿಯರೆಗೆ, ಮನೆ, ಆಶ್ರಮ ಮುಂತಾದವುಗಳ ಸಂಬಂಧವಿರುವುದೋ, ಅಲ್ಲಿಯವರೆಗೆ ಐದು ಮಂದಿ ಪ್ರಸಿದ್ಧವಾದ ದೇವತೆಗಳಲ್ಲಿ ಶ್ರೇಷ್ಠನಾದವನ ವಿಗ್ರಹವನ್ನು ಪ್ರೀತಿಯಿಂದ ಮಾಡಿ ಪೂಜಿಸಬೇಕು. ಇಲ್ಲದಿದ್ದರೆ ಶಿವನೊಬ್ಬನನ್ನೇ ಪೂಜಿಸಬಹುದು. ಕೊಂಬೆಗಳಿಗಿಂತಲೂ ಬುಡಕ್ಕೆ ಹೆಚ್ಚು ಬೆಲೆಯಂತೆ, ಬುಡಕ್ಕೆ ನೀರೆರೆದರೆ ಕೊಂಬೆಗಳೂ ತಣಿಯುತ್ತವೆ. ಹಾಗೆಯೇ, ದೇವತೆಗಳೆಲ್ಲರ ಮೂಲಸ್ವರೂಪಿಯಾದ ಶಿವನನ್ನು ಪೂಜಿಸಿದರೆ ದೇವತೆಗಳೆಲ್ಲರೂ ತಣಿಯುವರು. ಕೊಂಬೆಗಳು ಚೆನ್ನಾಗಿ ತಣಿದ ಮಾತ್ರಕ್ಕೆ ಬುಡವು ಎಂದಿಗೂ ತಣಿದಂತೆ ಆಗುವುದಿಲ್ಲ. ಎಲ್ಲ ದೇವತೆಗಳು ಸಂಪ್ರೀತರಾದರೂ ಶಿವನು ತೃಪ್ತನಾಗಲಿಲ್ಲವೆಂದು ಸೂಕ್ಷ್ಮಬುದ್ಧಿಗಳಾದವರು ಅರಿಯಬೇಕು.

ಆದುದರಿಂದ, ತನ್ನ ಮನೋರಥಗಳೆಲ್ಲವನ್ನೂ ಪಡೆಯಬೇಕು ಎನ್ನುವವರು ಮತ್ತು ಸರ್ವ ಪ್ರಾಣಿಗಳಿಗೂ ಹಿತವನ್ನುಂಟು ಮಾಡಲು ಆಸೆಯುಳ್ಳವರು, ಪ್ರಪಂಚಕ್ಕೇ ಕಲ್ಯಾಣದಾಯಕನಾದ ಶಂಕರನನ್ನು ಪೂಜಿಸಬೇಕು – ಎಂದು ಬ್ರಹ್ಮ ತನಗೆ ವಿಷ್ಣು ಹೇಳಿದ ಶಿವಪೂಜಾವಿಧಿಯನ್ನು ದೇವತೆಗಳಿಗೆ ತಿಳಿಸಿದ್ದಾಗಿ ನಾರದನಿಗೆ ವಿವರಿಸುತ್ತಾನೆ. ಇಲ್ಲಿಗೆ ಶ್ರೀ ಶಿವಮಹಾಪುರಾಣದ ಸೃಷ್ಟಿ ಉಪಾಖ್ಯಾನದಲ್ಲಿ ಪೂಜಾವಿಧಿವರ್ಣನದಲ್ಲಿಯ ‘ಸಾರಾಸಾರವಿಚಾರವರ್ಣನ’ ಎಂಬ ಹನ್ನೆರಡನೆಯ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT