ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ದಕ್ಷನ ಮಗಳಾಗಿ ಸತೀದೇವಿ ಜನನ

ಅಕ್ಷರ ಗಾತ್ರ

ನಾರದನಿಗೆ ದಕ್ಷಬ್ರಹ್ಮ ಶಾಪಕೊಟ್ಟ ವಿಷಯ ತಿಳಿದ ಕೂಡಲೇ ಬ್ರಹ್ಮ ಅವರಿದ್ದ ಸ್ಥಳಕ್ಕೆ ಧಾವಿಸಿ ಬರುತ್ತಾನೆ. ತನ್ನ ಮಕ್ಕಳನ್ನು ಸನ್ಯಾಸಿಗಳನ್ನಾಗಿ ಮಾಡಿದ ನಾರದನ ಮೇಲೆ ಕುಪಿತಗೊಂಡಿದ್ದ ದಕ್ಷನನ್ನು ಪ್ರೀತಿಮಾತುಗಳಿಂದ ಶಾಂತಗೊಳಿಸಿದ ಬ್ರಹ್ಮ, ಇಬ್ಬರ ನಡುವೆ ಮತ್ತೆ ಪರಸ್ಪರ ಸ್ನೇಹದ ಬೆಸುಗೆ ಬೆಸೆಯುತ್ತಾನೆ.

ಬ್ರಹ್ಮನ ಮಾತಿನಿಂದ ಸಮಾಧಾನಗೊಂಡ ದಕ್ಷಪ್ರಜಾಪತಿ ಮತ್ತೆ ತನ್ನ ಪತ್ನಿ ವೀರಿಣಿಯಲ್ಲಿ ಸುಂದರಿಯರಾದ ಅರವತ್ತು ಹೆಣ್ಣುಮಕ್ಕಳನ್ನು ಪಡೆದ. ಆ ಅರವತ್ತು ಕನ್ಯೆಯರಲ್ಲಿ ಹತ್ತು ಕನ್ಯೆಯರನ್ನು ಧರ್ಮನಿಗೆ ವಿಧಿವತ್ತಾಗಿ ಮದುವೆ ಮಾಡಿಕೊಟ್ಟ. ಉಳಿದ ಹದಿಮೂರು ಕನ್ಯೆಯರನ್ನು ಕಶ್ಯಪಬ್ರಹ್ಮನಿಗೆ, ಇಪ್ಪತ್ತೇಳು ಕನ್ಯೆಯರನ್ನು ಚಂದ್ರನಿಗೆ, ತಲಾ ಇಬ್ಬರು ಕನ್ಯೆಯರನ್ನು ಭೂತಮುನಿ, ಅಂಗಿರಸ್ಸು ಮತ್ತು ಕೃಶಾಶ್ವ ಅವರಿಗೆ ಮದುವೆ ಮಾಡಿಕೊಟ್ಟ. ಗರುಡನಿಗೆ ಮಿಕ್ಕ ಏಳು ಕನ್ಯೆಯರನ್ನು ಮದುವೆ ಕೊಟ್ಟ. ವಿವಾಹದ ನಂತರ ಪ್ರಜಾಪತಿಯ ಎಲ್ಲಾ ಹೆಣ್ಣುಮಕ್ಕಳಿಗೂ ಅಪಾರ ಸಂತಾನವಾಗಿ ಮೂರು ಲೋಕದಲ್ಲೂ ಜನಸಂಖ್ಯೆ ಬೆಳೆಯಿತು.
ಪ್ರಜಾಪತಿಯ ಹೆಣ್ಣುಮಕ್ಕಳಿಗೆ ಹುಟ್ಟಿದ ಅಸಂಖ್ಯ ಮಕ್ಕಳ ವಿವರವಾಗಿ ಬಿಡಿಸಿ ಹೇಳಲು ಸಾಧ್ಯವಿಲ್ಲ ಎಂದು ಬ್ರಹ್ಮನು ನಾರದನಿಗೆ ತಿಳಿಸುತ್ತಾನೆ. ಹಾಗೇ, ಶಿವಶಕ್ತಿದೇವಿಯ ಅವತಾರಿಯಾದ ಸತೀದೇವಿಯನ್ನು ಕೆಲವರುದಕ್ಷನಹಿರಿಯ ಮಗಳೆಂದು ಹೇಳುವರು. ಕೆಲವರು ಮಧ್ಯದವಳೆನ್ನುವರು. ಇನ್ನು ಕೆಲವರು ಕೊನೆಯವಳೆನ್ನುವರು. ಆಯಾಯ ಕಲ್ಪಭೇದದಿಂದ ಈ ಮೂರು ಅಭಿಪ್ರಾಯವೂ ಸರಿಯಾದುದು ಎಂದು ನಾರದನಿಗೆ ಬ್ರಹ್ಮ ಹೇಳುತ್ತಾನೆ.

ಶಿವಶಕ್ತಿದೇವಿ ಪ್ರತ್ಯಕ್ಷಳಾಗಿ ತನಗೆ ನೀಡಿದ ಮಾರ್ಗದರ್ಶನದಂತೆ ದಕ್ಷಬ್ರಹ್ಮ ತನ್ನ ಪತ್ನಿಯಲ್ಲಿ ಪುತ್ರಿ ಜನಿಸಬೇಕೆಂದು ಜಗನ್ಮಾತೆಯಾದ ದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಿದ. ದೇವಿಯನ್ನು ಭಕ್ತಿಯಿಂದ ಅಂಜಲಿಬದ್ಧನಾಗಿ ವಿನಯದಿಂದ ಬಗ್ಗಿ ಗದ್ಗದಸ್ವರದಿಂದ ಸ್ತುತಿಸಿದ.ದಕ್ಷನಸ್ತುತಿಯಿಂದ ಸಂತುಷ್ಟಳಾದ ದೇವಿಯು ತನ್ನ ಪೂರ್ವಪ್ರತಿಜ್ಞೆಯಂತೆದಕ್ಷನಪತ್ನಿಯಾದ ವೀರಿಣಿಯಲ್ಲಿ ಅವತಾರವನ್ನು ಮಾಡುವೆನೆಂದು ಸಂಕಲ್ಪಿಸಿದಳು. ಇದಕ್ಕಾಗಿ ಜಗನ್ಮಾತೆಯು ದಕ್ಷಬ್ರಹ್ಮನ ಮನಸ್ಸಿನಲ್ಲಿ ನೆಲಸಿದಳು.ದಕ್ಷನಮನಸ್ಸನ್ನು ಜಗನ್ಮಾತೆ ಪ್ರವೇಶಿಸುತ್ತಿದ್ದಂತೆ ಆತ ತೇಜೋವಂತನಾಗಿ ಪ್ರಕಾಶಿಸಿದ. ನಂತರ ದಕ್ಷಪ್ರಜಾಪತಿ ಶುಭಮುಹೂರ್ತದಲ್ಲಿ ತನ್ನ ಪತ್ನಿಯಲ್ಲಿ ಗರ್ಭದಾನ ಮಾಡಿದ. ಆಗ ಜಗನ್ಮಾತೆಯಾದ ಶಿವಶಕ್ತಿ ದೇವಿಯುದಕ್ಷನಮನಸ್ಸಿನಿಂದ ಪತ್ನಿ ವೀರಿಣಿಯ ಮನಸ್ಸಿನಲ್ಲಿ ನೆಲಸಿದಳು.

ಕೆಲವು ದಿನಗಳಲ್ಲಿಯೇ ವೀರಿಣಿಯಲ್ಲಿ ಗರ್ಭಿಣಿ ಚಿಹ್ನೆಗಳು ಪ್ರಕಟವಾದವು. ದೇವಿಯು ಅವಳಲ್ಲಿ ನೆಲಸಿದ್ದರಿಂದ ಆ ವೀರಿಣಿಯು ಮಹಾಮಂಗಳರೂಪಳಾಗಿ ಮತ್ತು ಸದಾ ಸಂತುಷ್ಟಳಾಗಿರುವಂತೆ ಪ್ರಕಾಶಿಸಿದಳು. ಆಗ ದಕ್ಷಪ್ರಜಾಪತಿಯು ಕುಲಾಭಿವೃದ್ದಿ, ಐಶ್ವರ್ಯಾಭಿವೃದ್ದಿ, ವಿದ್ಯಾಭಿವೃದ್ದಿ ಮತ್ತು ಮನಸ್ಸು ಪರಿಪಾಕಹೊಂದುವುದಕ್ಕಾಗಿ ಪುಂಸವನ ಮತ್ತು ಇತರೆ ಶುಭಕರ್ಮಗಳನ್ನು ಶ್ರದ್ಧೆಯಿಂದ ಆಚರಿಸಿದ. ಆ ಕರ್ಮಾಚರಣೆಗಳು ದೊಡ್ಡ ಉತ್ಸವದಂತೆ ನಡೆಯಿತು.

ವೀರಿಣಿಯ ಗರ್ಭದಲ್ಲಿ ದೇವಿಯು ಬೆಳೆಯುತ್ತಿರುವುದನ್ನು ತಿಳಿದು ಇಂದ್ರ ಮೊದಲಾದ ದೇವತೆಗಳುದಕ್ಷನಮನೆಗೆ ಬಂದು ಲೋಕೋಪಕ್ಕಾರಕ್ಕಾಗಿ ಅವತರಿಸುವಂತಹ ಜಗನ್ಮಾತೆಯಾದ ದೇವಿಯ ಕುರಿತು ಸ್ತೋತ್ರ ಮಾಡಿದರು. ಹಾಗೆಯೇ, ದಕ್ಷಪ್ರಜಾಪತಿ ಮತ್ತವನ ಪತ್ನಿಯಾದ ವೀರಿಣಿಯನ್ನು ತುಂಬಾ ಪ್ರಶಂಶಿಸಿ ಅರಸಿದ ದೇವತೆಗಳು, ನಂತರ ತಮ್ಮ ಸ್ಥಾನಗಳಿಗೆ ತೆರಳಿದರು. ವೀರಿಣಿಗೆ ಒಂಬತ್ತು ತಿಂಗಳುಗಳು ತುಂಬಿದಾಗ ಲೌಕಿಕವಾಗಿ ಮಾಡಬೇಕಾದ ಎಲ್ಲಾ ಕರ್ಮಗಳು ಯಥೋಕ್ತವಾಗಿ ನೆರವೇರಿದವು. ಹತ್ತನೆಯ ತಿಂಗಳಲ್ಲಿ ಗ್ರಹಾನುಕೂಲ ಮತ್ತು ತಾರಾನುಕೂಲವಿರುವಂತಹ ಮತ್ತು ಚಂದ್ರನು ಪೂರ್ಣನಾಗಿರುವಂತಹ ಶುಭಮುಹೂರ್ತದಲ್ಲಿ ತಾಯಿಯಾದ ವೀರಿಣಿಯ ಎದುರಿಗೆ ದೇವಿಯು ಆವಿರ್ಭವಿಸಿದಳು. ಕುಮಾರಿಯು ಜನಿಸಿದೊಡೆನೆಯೇ ದಕ್ಷಬ್ರಹ್ಮ ತುಂಬಾ ಸಂತೋಷಪಟ್ಟ. ಮಹಾತೇಜಸ್ವಿಯಾಗಿ ಕಂಗೊಳಿಸುತ್ತಿದ್ದ ಮಗಳನ್ನು ನೋಡಿ ಇವಳು ದೇವಿಯ ಅವತಾರವೆಂಬುದನ್ನು ಮನದಟ್ಟು ಮಾಡಿಕೊಂಡ. ಆ ದೇವಿಕುಮಾರಿ ಜನಿಸಿದ ಕೂಡಲೇ ಆಕಾಶದಿಂದ ಪುಷ್ಪವೃಷ್ಠಿಯಾಯಿತು. ಮೇಘಗಳು ಮಳೆಯನ್ನು ಸುರಿಸಿದುವು. ದಿಕ್ಕುಗಳು ಮಲಿನವಾಗಿರದೇ ಪ್ರಸನ್ನವಾದುವು. ದೇವತೆಗಳು ಆಕಾಶದಲ್ಲಿ ನಿಂತು ದೇವದುಂದುಭಿ ಬಾರಿಸಿದರು. ಅಗ್ನಿಯು ಶಾಂತಿಯಿಂದ ಪ್ರದಕ್ಷಿಣಾಕಾರವಾಗಿ ಜ್ವಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT