ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ವಿಶ್ವಕರ್ಮನಿಂದ ಲಿಂಗನಿರ್ಮಾಣ

ಭಾಗ 97
ಅಕ್ಷರ ಗಾತ್ರ

ಶಿವಮಹಾಪುರಾಣದಲ್ಲಿ ಎರಡನೆ ಸಂಹಿತೆಯಾದ ರುದ್ರಸಂಹಿತೆಯಲ್ಲಿ ಮೊದಲ ಖಂಡವಾದ ಸೃಷ್ಟಿಖಂಡದಲ್ಲಿ ಪೂಜಾವಿಧಿವರ್ಣನದಲ್ಲಿಯ ಸಾರಾಸಾರ ವಿಚಾರವರ್ಣನ ಎಂಬ ಹನ್ನೆರಡನೆ ಅಧ್ಯಾಯವಿದೆ. ಇದರಲ್ಲಿ ನಾರದ-ಬ್ರಹ್ಮರ ಸಂವಾದದಲ್ಲಿ ನಾರದ ತನ್ನ ತಂದೆಯಾದ ಬ್ರಹ್ಮನಲ್ಲಿ ಶಿವನನ್ನು ಕುರಿತು ವಿಸ್ತಾರವಾಗಿ ತಿಳಿಸುವಂತೆ ಕೋರುತ್ತಾನೆ.

ಆಗ ಬ್ರಹ್ಮ ‘ವತ್ಸ ನಾರದ, ಹಿಂದೊಮ್ಮೆ ನಾನು ಎಲ್ಲ ದೇವತೆಗಳನ್ನೂ ಋಷಿಗಳನ್ನೂ ಕರೆದು, ಯಾರು ನಿತ್ಯಸುಖವನ್ನು ಮತ್ತು ಸಿದ್ಧಿಯನ್ನು ಪಡೆಯಲು ಇಚ್ಚಿಸುವಿರೋ, ಅವರೆಲ್ಲರೂ ನನ್ನೊಡನೆ ಕ್ಷೀರಸಮುದ್ರದ ತೀರಕ್ಕೆ ಬನ್ನಿ ಎಂದೆ.

‘ತನ್ನ ಮುಂದೆ ನಿಂತ ಬ್ರಹ್ಮಾದಿದೇವತೆಗಳನ್ನು ಕಂಡು, ಶಿವನ ಪಾದಕಮಲ ಗಳನ್ನು ನೆನೆಯುತ್ತಾ ವಿಷ್ಣುವು ‘ಎಲೈ ಬ್ರಹ್ಮಾದಿ ದೇವತೆ ಗಳಿರಾ, ನೀವಿಲ್ಲಿಗೆ ಬಂದ ಕಾರಣವೇನು? ಈಗ ಯಾವ ಕೆಲಸ ನನ್ನಿಂದಾಗಬೇಕಾಗಿದೆ?’ ಎಂದು ಕೇಳಿದ. ಇದಕ್ಕೆ ಬ್ರಹ್ಮ ‘ನಮ್ಮೆಲ್ಲರ ದುಃಖಗಳನ್ನು
ಪರಿಹರಿಸಿಕೊಳ್ಳಲು ಯಾರನ್ನು ಸೇವಿಸಬೇಕು? ಅದನ್ನು ತಿಳಿಸಬೇಕು’ ಎಂದೆ.

ಭಕ್ತವತ್ಸಲನಾದ ಆ ವಿಷ್ಣು ಭಗವಂತನು ‘ಎಲೈ ಬ್ರಹ್ಮನೇ, ನಾನಾ ವಿಧವಾದ ಕೆಲಸಗಳಲ್ಲಿ ತೊಡಗಿರುವ ಈ ದೇವತೆಗಳೆಲ್ಲರ ದುಃಖಗಳನ್ನು ನಾಶಮಾಡುವ ಶಂಕರನನ್ನು ಸದಾ ಸೇವಿಸಬೇಕು. ಸುಖವಾಗಿರಬೇಕೆನ್ನುವ ವರು ಶಿವನ ಪೂಜೆಯನ್ನು ಬಿಡಬಾರದು. ದೇವದೇವನೂ, ಲಿಂಗವೇ ಶರೀರವಾಗಿ ಉಳ್ಳವನೂ ಆದ ಆ ಶಿವನನ್ನು ಮರೆತ ತಾರನ ಮಕ್ಕಳೆಲ್ಲರೂ ತಮ್ಮ ಬಂಧುಗ ಳೊಡನೆ ನಾಶವಾದರು. ಮಾಯೆಯಿಂದ ಮೋಹಿತರಾಗಿ ಅವರು ಯಾವಾಗ ಶಿವನನ್ನು ಮರೆತು ಬಿಟ್ಟರೋ, ಆಗ ಅವರೆಲ್ಲರೂ ನನ್ನಿಂದ ಮೋಹಿತರಾಗಿ ಧ್ವಂಸರಾಗಿಹೋದರು. ಆದುದರಿಂದ ಆ ಲಿಂಗಾಕೃತಿಯನ್ನು ತಳೆದ ದೇವ ಶ್ರೇಷ್ಠವಾದ ಆ ಶಿವನನ್ನು ಶ್ರದ್ಧೆಯಿಂದ ಯಾವಾಗಲೂ ಸೇವಿಸುತ್ತಿರಬೇಕು.

‘ಎಲೈ ಬ್ರಹ್ಮನೇ, ಶಿವನ ಲಿಂಗವನ್ನು ಪೂಜಿಸುವುದರಿಂದಲೇ ಅಲ್ಲವೇ ದೇವತೆಗಳೂ ದೈತ್ಯರೂ ನಾನೂ ನೀನೂ, ಎಲ್ಲರೂ ಸಾಧುವರೇಣ್ಯರೆನಿಸಿಕೊಂಡಿರುವುದು? ಎಲ್ಲ ಕೋರಿಕೆಗಳನ್ನೂ ಪಡೆಯಬೇಕೆನ್ನುವ ಪ್ರತಿಯೊಬ್ಬ ದೇವತೆಯೂ, ಒಂದಲ್ಲ ಒಂದು ಕಾರಣದಿಂದ ಪ್ರತಿನಿತ್ಯವೂ ಶಿವಲಿಂಗವನ್ನು ಪೂಜಿಸಲೇಬೇಕು. ಮುಹೂರ್ತ ಮಾತ್ರವಾಗಲಿ, ಕ್ಷಣಕಾಲ ವಾಗಲಿ ಶಿವನನ್ನು ಪೂಜಿಸದಿದ್ದರೆ ಅದಕ್ಕಿಂತಲೂ ಬೇರೆ ಹಾನಿಯಿಲ್ಲ. ಅದೇ ಮಹಾಛಿದ್ರವು. ಅದೇ ಅವಿವೇಕವು. ಅದೇ ಬುದ್ಧಿಮಾಂದ್ಯವೆಂದು ತಿಳಿ. ಐಹಿಕ ಭೋಗಭಾಗ್ಯಗಳನ್ನು, ಮುಕ್ತಿಯನ್ನ ಬಯಸುವವರು, ನಿತ್ಯವೂ ಭಕ್ತಿಯೊಡಗೂಡಿ ಶಿವಲಿಂಗ ವನ್ನು ಪೂಜಿಸಬೇಕು. ಅವರಿಗೆ ಎಲ್ಲ ಸಿದ್ಧಿಗಳೂ ಕೈಗೂಡುವವು. ಅವರಿಗೆ ಪಾಪಗಳ ಸಂಪರ್ಕವೇ ಇರುವುದಿಲ್ಲ’ ಎಂದು ವಿವರಿಸುತ್ತಾನೆ ವಿಷ್ಣು.

ಹರಿಯ ಮಾತನ್ನು ಕೇಳಿದ ದೇವತೆಗಳೆಲ್ಲರೂ ಆತನಿಗೆ ನಮಸ್ಕರಿಸಿ,ಮನುಷ್ಯರಾದಿಯಾಗಿ ನಾವೆಲ್ಲಾ ಬಯಸಿದುದೆಲ್ಲವನ್ನೂ ಪಡೆಯಲು ಅನುಕೂಲ ವಾಗುವಂತೆ ಲಿಂಗಗಳನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸಿ ದರು. ಆಗ ವಿಷ್ಣುವೂ ವಿಶ್ವಕರ್ಮನನ್ನು ಕರೆದು, ‘ಶಂಭುವಿನ ಶುಭಕರವಾದ ಲಿಂಗಗಳನ್ನು ನಿರ್ಮಿಸಿ ಕೊಡು’ ಎಂದ. ವಿಶ್ವಕರ್ಮನು ವಿಷ್ಣುವಿನ ಅಪ್ಪಣೆಯಂತೆ ಅವರವರ ಅಂತಸ್ತಿಗೆ ತಕ್ಕಂತೆ ಲಿಂಗಗಳನ್ನು ಮಾಡಿ ಕೊಟ್ಟ. ಇಂದ್ರನು ಕೆಂಪಿನಿಂದ ಮಾಡಿದ ಲಿಂಗವನ್ನು ಪಡೆದರೆ, ಕುಬೇರನು ಚಿನ್ನದ ಲಿಂಗವನ್ನೂ, ಯಮಧರ್ಮನು ಹಳದಿ ಕಲ್ಲಿನ ಲಿಂಗವನ್ನೂ (ಗೋಮೇಧಿಕ), ವರುಣನು ನೀಲಮಣಿಯ ಲಿಂಗವನ್ನೂ, ವಿಷ್ಣುವು ಇಂದ್ರನೀಲಮಣಿ ಲಿಂಗವನ್ನೂ, ಬ್ರಹ್ಮನು ಚಿನ್ನದ ಲಿಂಗವನ್ನೂ ಪಡೆದರು. ವಿಶ್ವದೇವತೆಗಳು ಬೆಳ್ಳಿಯ ಲಿಂಗವನ್ನೂ, ವಸುಗಳೆಂಬುವರು ಹಿತ್ತಾಳೆಯ ಲಿಂಗವನ್ನೂ, ಅಶ್ವಿನೀ ದೇವತೆಗಳು ಮಣ್ಣಿನ ಲಿಂಗವನ್ನು ಪಡೆದರು. ಲಕ್ಷ್ಮಿಯು ಸ್ಫಟಿಕದ ಲಿಂಗವನ್ನೂ, ದ್ವಾದಶಾದಿತ್ಯರು ತಾಮ್ರದ ಲಿಂಗವನ್ನೂ, ಚಂದ್ರನು ಮುತ್ತಿನ ಲಿಂಗವನ್ನೂ, ಅಗ್ನಿಯು ವಜ್ರದ ಲಿಂಗವನ್ನೂ ಪಡೆದರು. ಸಜ್ಜನರು ಮತ್ತವರ ಪತ್ನಿಯರು ಮಣ್ಣಿನ ಲಿಂಗವನ್ನೂ, ಮಯನು ಶ್ರೀಗಂಧದ ಲಿಂಗವನ್ನೂ, ನಾಗರಾಜನು ಹವಳದ ಲಿಂಗವನ್ನೂ ಸ್ವೀಕರಿಸಿದ.

ಪಾರ್ವತಿಯು ಬೆಣ್ಣೆಯ ಲಿಂಗವನ್ನೂ, ಯೋಗಿಯು ಭಸ್ಮದಿಂದ ಮಾಡಿದ ಲಿಂಗವನ್ನೂ, ಯಕ್ಷರು ಮೊಸರಿನ ಲಿಂಗವನ್ನೂ, ಛಾಯೆಯು ಹಿಟ್ಟಿನ ಲಿಂಗವನ್ನೂ, ವಾಗ್ದೇವಿಯು ರತ್ನಮಯವಾದ ಲಿಂಗವನ್ನೂ, ಬಾಣಾಸುರನು ಪಾದರಸದ ಲಿಂಗವನ್ನೂ, ಇತರರು ಮಣ್ಣಿನ ಲಿಂಗವನ್ನೂ ಪಡೆದರು ಎಂದು ಬ್ರಹ್ಮ ತಿಳಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT