ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಭಾಗ–52: ಯೋಗಿಗಿಂತ ಸಮಾಧಿನಿಷ್ಠ ಶ್ರೇಷ್ಠ

Last Updated 22 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ಎಲೈ ಮುನಿಗಳೇ! ಜಿತೇಂದ್ರಿಯರಲ್ಲದ ಸಾಮಾನ್ಯರು ಮುಕ್ತಿ ಪಡೆ ಯಲು ಅನುಸರಿಸಬೇಕಾದ ಶ್ರದ್ದಾಕ್ರಮವನ್ನು ಹೇಳುವೆನು ಕೇಳಿರಿ!’ ಅಂತ ಸೂತಮುನಿ ಶಿವಪೂಜಾ ಮಹಾತ್ಮೆಯನ್ನ ಮುಂದುವರೆಸುತ್ತಾನೆ.

‘ನಮಃ’ ಪದವು ಕೊನೆಯಲ್ಲಿರುವ ಪಂಚಾಕ್ಷರೀಮಂತ್ರದ ಉಪದೇಶ ವನ್ನು ಜನಸಾಮಾನ್ಯರು ಗುರುವರ್ಯರಿಂದ ಪಡೆಯಬೇಕು. ನಂತರ ‘ಶಿವಾಯ ನಮಃ’ ಎಂದು ಐದು ಲಕ್ಷ ಬಾರಿ ಜಪವನ್ನು ಮಾಡಬೇಕು. ಅದ ರಿಂದ ಆಯುಸ್ಸು ಹೆಚ್ಚು ತ್ತದೆ. ಸ್ತ್ರೀಯರು ಐದು ಲಕ್ಷ ಪಂಚಾಕ್ಷರಜಪವನ್ನು ಮಾಡ ಬೇಕು. ಕ್ಷತ್ರಿಯನು ಐದು ಲಕ್ಷ ಜಪಗಳನ್ನು ಮಾಡಬೇಕು. ಅವನು ಮತ್ತೆ ಮತ್ತೆ ಜಪಿಸಿದರೆ ಮಂತ್ರಸಿದ್ಧಿ ಪಡೆದು ಜೀವನ್ಮುಕ್ತನಾಗುವನು. ವೈಶ್ಯನು ಐದು ಲಕ್ಷ ಜಪಗಳನ್ನು ಮಾಡಬೇಕು. ಶೂದ್ರನೂ ‘ನಮಃ’ ಪದಾಂತವಾದ ಪಂಚಾಕ್ಷರಮಂತ್ರವನ್ನು ಜಪಿಸಬೇಕು.

ಸ್ತ್ರೀಯಾಗಲೀ ಪುರುಷನಾಗಲೀ ಯಾವುದೇ ವರ್ಗದವರಾಗಲೀ ‘ನಮಃ’ ಪದವನ್ನು ಪೂರ್ವದಲ್ಲಿಯಾಗಲೀ ಕೊನೆಯಲ್ಲಾಗಲೀ ಉಚ್ಚರಿಸಿ ಸದಾ ಜಪಿಸಬೇಕು. ವಿವಾಹಿತಸ್ತ್ರೀಯರಿಗೂ ಅದರಂತೆಯೇ ಗುರುವಾದ ವನು ನಿರ್ದೇಶಿಸ ಬೇಕು. ಐದು ಲಕ್ಷ ಜಪದ ಕೊನೆಯಲ್ಲಿ ಸಾಧಕನು ಶಿವನ ಪ್ರೀತಿಗಾಗಿ ಮಹಾಭಿ ಷೇಕ ಮತ್ತು ನೈವೇದ್ಯಗಳನ್ನು ಮಾಡಿದ ಬಳಿಕ ಶಿವಭಕ್ತರನ್ನು ಪೂಜಿಸಬೇಕು. ಶಿವಭಕ್ತನನ್ನು ಪೂಜಿಸಿದರೆ, ಶಿವನು ಸುಪ್ರೀತನಾಗುವನು. ಶಿವನಭಕ್ತನಿಗೂ ಶಿವನಿಗೂ ಭೇದವಿಲ್ಲ. ಶಿವಭಕ್ತನು ಶಿವಸ್ವರೂಪನು.

ಶಿವನ ಸ್ವರೂಪವಾದ ಪಂಚಾಕ್ಷರೀಮಂತ್ರವನ್ನು ಶಿವಭಕ್ತನು ಹೃದಯದಲ್ಲಿ ಧರಿಸುವುದರಿಂದ ಅವನು ಶಿವನೇ ಆಗುವನು. ಏಕೆಂದರೆ ಮಂಗಳರೂಪ ನಾದ ಶಿವಭಕ್ತನ ಶರೀರದಲ್ಲಿ ಶಿವನು (ಅವನ ರಕ್ಷಣೆಗಾಗಿ) ನೆಲೆಸಿರುತ್ತಾನೆ. ಶಿವಭಕ್ತರು ಲೌಕಿಕ ಮತ್ತು ವೈದಿಕ ಕ್ರಿಯೆಗಳೆಲ್ಲವನ್ನೂ ಬಲ್ಲವರು. ಎಲ್ಲಿಯ ವರೆಗೆ ಶಿವಪಂಚಾಕ್ಷರೀಮಂತ್ರವನ್ನು ಜಪಿಸುವರೋ, ಅಲ್ಲಿಯವರೆಗೂ ಶಿವ ಭಕ್ತರ ಶರೀರದಲ್ಲಿ ಶಿವ ನೆಲೆಸಿರುತ್ತಾನೆ. ಶಿವಭಕ್ತಳಾದ ಸ್ತ್ರೀಯ ಸ್ವರೂಪವು ದೇವೀರೂಪವಾದುದು. ಶಿವಪಂಚಾಕ್ಷರೀಮಂತ್ರವನ್ನು ಜಪಿಸುವವರೆಗೆ ದೇವಿಯು ಶಿವಭಕ್ತಳ ಶರೀರದಲ್ಲಿ ನೆಲೆಸಿರುತ್ತಾಳೆ.

ಶಿವನ ಶಬ್ದ (ಶಿವೋಹಂ ಎಂಬ ಶಬ್ದ) ಮತ್ತು ರೂಪಗಳನ್ನು ಧರಿಸಿ ತಾನೂ ಶಿವನಾಗಿ (ಶಿವನೆಂದು ತಿಳಿದುಕೊಂಡು) ಪರಾಶಕ್ತಿಯನ್ನು ಪೂಜಿಸ ಬೇಕು. ಶಕ್ತಿ, ಮೂರ್ತಿ, ಲಿಂಗ, ಇವುಗಳನ್ನು ಬರೆದು ನಿಷ್ಕಪಟವಾಗಿ ಪೂಜಿಸಬೇಕು. ಶಿವಲಿಂಗವು ಶಿವಸ್ವರೂಪವೆಂದು, ತಾನು ಶಕ್ತಿರೂಪನೆಂದು ತಿಳಿಯಬೇಕು. ನಾದರೂಪದ ಶಿವಲಿಂಗವನ್ನೂ, ಬಿಂದುರೂಪದ ಶಕ್ತಿಲಿಂಗ ವನ್ನೂ ಪ್ರಧಾನ ಮತ್ತು ಅಪ್ರಧಾನ (ಶಿವಲಿಂಗವು ಪ್ರಧಾನವಾದರೆ, ಶಕ್ತಿ ಲಿಂಗವು ಅಪ್ರಧಾನ) ಎಂದು ಭಾವಿಸಿ, ಶಿವ ಮತ್ತು ಶಕ್ತಿಯನ್ನೂ ಪೂಜಿಸ ಬೇಕು. ಶಿವಮಂತ್ರಸ್ವರೂಪರೂ ಮತ್ತು ಶಿವಸ್ವರೂಪರೂ ಆದಂತಹ ಶಿವಭಕ್ತರನ್ನು ಷೋಡಶೋಪಚಾರಗಳಿಂದ ಪೂಜಿಸಬೇಕು. ಅದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ.

ನಾಭಿಯ ಕೆಳಗಿನ ಭಾಗವು ಬ್ರಹ್ಮಸ್ವರೂಪವಾದರೆ, ನಾಭಿಯಿಂದ ಕತ್ತಿನವರೆಗಿನ ಭಾಗವು ವಿಷ್ಣುಸ್ವರೂಪ. ಮುಖವು ಶಿವಸ್ವರೂಪವಾದರೆ, ಶಿವಭಕ್ತನ ಶರೀರವು ತ್ರಿಮೂರ್ತಿ ಸ್ವರೂಪ. ದಹನಸಂಸ್ಕಾರವನ್ನು ಪಡೆದ ಮತ್ತು ದಹನಾದಿಸಂಸ್ಕಾರ ಪಡೆಯದೆ ಮೃತರಾದಂತಹ ಮಾತಾ-ಪಿತೃಗಳ ಆತ್ಮಶಾಂತಿಗಾಗಿ ಜಗತ್ತಿಗೆ ಆದಿಪಿತೃವಾದ ಶಿವ ಮತ್ತು ಆದಿಮಾತೆಯಾದ ದೇವಿಯನ್ನು ಪೂಜಿಸಬೇಕು. ಶಿವ-ಪಾರ್ವತಿಯರ ಪೂಜೆ ನಂತರ ಶಿವಭಕ್ತ ರನ್ನೂ ಸಹ ಪೂಜಿಸಬೇಕು. ಇದರಿಂದ ಮೃತರು ಪಿತೃಲೋಕವನ್ನು ಸೇರಿ ಮುಕ್ತಿಯನ್ನು ಪಡೆಯುವರು. ಶಿವಭಕ್ತರಲ್ಲಿ ಕರ್ಮನಿಷ್ಠರಾದ ಹತ್ತು ಯೋಗಿಗಳಿ ಗಿಂತಲೂ ತಪೋನಿಷ್ಠನಾದ ಒಬ್ಬ ಯೋಗಿಯೇ ಶ್ರೇಷ್ಠ. ಶಿವಭಕ್ತರಲ್ಲಿ ತಪೋ ನಿಷ್ಠರಾದ ನೂರು ಯೋಗಿಗಳಿಗಿಂತಲೂ ಒಬ್ಬ ಜಪನಿಷ್ಠ ಶ್ರೇಷ್ಠ. ಸಾವಿರ ಜಪಯುಕ್ತರಿಗಿಂತಲೂ ಓರ್ವ ಶಿವಜ್ಞಾನಿ ಶ್ರೇಷ್ಠ. ಲಕ್ಷ ಶಿವಜ್ಞಾನಿ ಗಳಿಗಿಂತಲೂ ಓರ್ವ ಧ್ಯಾನನಿಷ್ಠನೇ ಶ್ರೇಷ್ಠ. ಧ್ಯಾನನಿಷ್ಠರಾದ ಕೋಟಿ ಯೋಗಿಗಳಿಗಿಂತಲೂ ಓರ್ವ ಸಮಾಧಿನಿಷ್ಠನೇ ಶ್ರೇಷ್ಠ.

ಶಿವ, ಶಕ್ತಿ ಮತ್ತು ಶಿವಭಕ್ತರ ಪೂಜೆಯನ್ನು ನಿತ್ಯವೂ ಯಾರು ಭಕ್ತಿಯಿಂದ ಮಾಡುವರೋ, ಅವರು ಶಿವಸ್ವರೂಪವನ್ನು ಪಡೆದು ಮಂಗಳವನ್ನು ಪಡೆಯು ವರು. ವೇದದಂತೆ ಪವಿತ್ರವಾದ ಈ ಅಧ್ಯಾಯ ವನ್ನು ಯಾವ ಪುರುಷನು ಅರ್ಥವತ್ತಾಗಿ ಪಠಿಸುವನೋ, ಅವನು ಶಿವಜ್ಞಾನಿಯಾಗಿ ಶಿವನೊಡನೆ ವಿಹರಿ ಸುವನು. ಈ ಅಧ್ಯಾಯವನ್ನು ಜನರಿಗೆ ತಿಳಿಸಿದವರಿಗೆ ಶಿವನ ಅನುಗ್ರಹ ದೊರೆವುದು ಅಂತ ಸೂತಮುನಿ ಹೇಳುವುದರೊಂದಿಗೆ ಶ್ರೀ ಶಿವಪುರಾಣದ ವಿದ್ಯೇಶ್ವರ ಸಂಹಿತೆಯ ಹದಿನೇಳನೇ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT