ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದ ವ್ಯಾಸರ ಶಿವಪುರಾಣಸಾರ: ಮೂರ್ಛೆಹೋದ ಮೇನಾದೇವಿ

ಅಕ್ಷರ ಗಾತ್ರ

ಇಂದ್ರನಿಗಿಂತಲೂ ತೇಜಸ್ವಿಯಾದ ಚಂದ್ರ ಬರುತ್ತಾನೆ. ಅವನನ್ನು ನೋಡಿ ಮೇನಾದೇವಿ ‘ಇವನು ರುದ್ರನೇ’ ಎಂದು ಕೇಳುತ್ತಾಳೆ. ಇವನೂ ರುದ್ರನಲ್ಲವೆನ್ನುತ್ತಾನೆ ನಾರದ. ಚಂದ್ರನಿಗಿಂತ ತೇಜಸ್ವಿಯಾದ ಸೂರ್ಯ ಬರುತ್ತಾನೆ. ಇವನು ರುದ್ರನೆಂದು ಭಾವಿಸುತ್ತಾಳೆ. ನಾರದ ಅಲ್ಲವೆನ್ನುತ್ತಾನೆ.

ದೇವತೆಗಳ ನಂತರ ಭೃಗು ಮೊದಲಾದ ಮುನಿಗಳು ಶಿಷ್ಯರೊಡನೆ ಬರುತ್ತಾರೆ. ಮುನಿಗಳ ಮಧ್ಯದಲ್ಲಿ ದೇವಗುರುವಾದ ಬೃಹಸ್ಪತಿ ತೇಜಸ್ಸಿನಿಂದ ಬೆಳಗುತ್ತಿದ್ದ. ಅವನನ್ನು ನೋಡಿ ‘ಇವನು ರುದ್ರನೇ’ ಎಂದು ಕೇಳುತ್ತಾಳೆ. ಮತ್ತೆ ನಾರದ ಅಲ್ಲವೆಂದು ತಲೆಯಾಡಿಸುತ್ತಾನೆ. ಅಷ್ಟರಲ್ಲಿ ಬ್ರಹ್ಮ ಬರುತ್ತಾನೆ. ಇವನೂ ರುದ್ರ ಅಲ್ಲ ಎನ್ನುತ್ತಾನೆ, ನಾರದ. ವಿಷ್ಣು ಬರುತ್ತಾನೆ. ಹರಿಯನ್ನು ನೋಡಿದ ಮೇನಾದೇವಿಗೆ ಇವನೇ ರುದ್ರನೆಂದು ಭಾವಿಸುತ್ತಾಳೆ. ಆಗ ನಾರದ ಅವನು ವಿಷ್ಣು, ಶಂಕರನ ಎಲ್ಲಾ ಕಾರ್ಯಗಳಿಗೂ ಅಧಿಕಾರಿ. ಶಿವನು ಈ ಹರಿಗಿಂತಲೂ ಶ್ರೇಷ್ಠ. ಆ ಶಿವನ ಮಹಿಮೆಯನ್ನು ವರ್ಣಿಸಲು ನನ್ನಿಂದ ಸಾಧ್ಯವಿಲ್ಲ. ಅವನೇ ಎಲ್ಲಾ ಜಗತ್ತಿಗೂ ಒಡೆಯ’ ಎನ್ನುತ್ತಾನೆ.

ನಾರದನ ಮಾತನ್ನು ಕೇಳಿ ಮೇನಾದೇವಿ ಸಂತೋಷಪಡುತ್ತಾಳೆ. ಇಂತಹ ಅಳಿಯ ತನಗೆ ಸಿಕ್ಕಿದನಲ್ಲಾ, ಪಾರ್ವತಿಯನ್ನು ಹಡೆದು ತಾನು ಧನ್ಯಳಾದೆ ಅಂದುಕೊಂಡಳು. ಆಗ ರುದ್ರ ತನ್ನ ಅಪಾರ ಗಣಸೇನೆಯೊಡನೆ ಅಲ್ಲಿಗೆ ಬರುತ್ತಾನೆ. ಶಿವಗಣಗಳು ಮೇನಾದೇವಿಯ ಗರ್ವವನ್ನು ಮುರಿಯಲು ಮಾಯೆಗೆ ಅಧೀನವಲ್ಲದ ನಿರ್ವಿಕಾರವಾಗಿರುವ ತಮ್ಮ ಆತ್ಮವನ್ನು ಅವಳಿಗೆ ತೋರಿಸಲು ನಿರ್ಧರಿಸುತ್ತವೆ. ಶಿವನ ಹಿಂದೆ ಭೂತಪ್ರೇತಗಳು ಕಾಣಿಸುತ್ತವೆ. ಕೆಲವು ಗಣಗಳ ಮುಖ ಡೊಂಕಾಗಿದ್ದರೆ, ಇನ್ನು ಕೆಲವು ವಿಕಾರರೂಪ ಹೊಂದಿದ್ದವು. ಕೆಲವು ಗಣಗಳಿಗೆ ಮುಖವೇ ಇರಲಿಲ್ಲ. ಕೆಲವಕ್ಕೆ ಅನೇಕ ಮುಖಗಳಿದ್ದವು.ಕೆಲವು ತಲೆಯೇ ಇಲ್ಲದವು, ಕಿವಿಗಳಿಲ್ಲದವು ಮತ್ತು ಅನೇಕ ಕಿವಿಗಳುಳ್ಳ ಗಣಗಳೂ ಇದ್ದವು. ಈ ರೀತಿಯಾದ ವಿಕಾರವೂ ಭಯಂಕರವೂ ಆದ ರೂಪವುಳ್ಳ ಗಣಗಳು ಎಣಿಸಲಾರದಷ್ಟು ಇದ್ದುವು. ನಾರದ ಆ ಗಣಗಳನ್ನು ಮೇನಾದೇವಿಗೆ ತೋರಿಸಿ, ಇವರು ಶಂಕರನ ಸೇವಕರು. ಇವರ ಮಧ್ಯದಲ್ಲಿ ಶಂಕರನು ಬರುತ್ತಿರುವನು ನೋಡು ಎಂದು ಹೇಳುತ್ತಾನೆ.

ಭೂತಪ್ರೇತ ಗಣಗಳನ್ನು ನೋಡಿ ಮೇನಾದೇವಿಗೆ ತುಂಬಾ ಭಯವಾಗುತ್ತದೆ. ಗಣಗಳ ಮಧ್ಯದಲ್ಲಿ ಶಂಕರನು ನಂದಿಯ ಮೇಲೆ ಕುಳಿತು ಬರುತ್ತಿದ್ದ. ಅವನಿಗೆ ಐದು ಮುಖಗಳೂ ಮೂರು ಕಣ್ಣುಗಳು ಇದ್ದವು. ಶರೀರಕ್ಕೆ ಭಸ್ಮವನ್ನು ಲೇಪನಮಾಡಿಕೊಂಡಿದ್ದ. ರುಂಡಮಾಲೆಯನ್ನು ಧರಿಸಿದ್ದ. ಅವನ ತಲೆಯಲ್ಲಿ ಚಂದ್ರನಿದ್ದ. ಅವನಿಗೆ ಹತ್ತು ಕೈಗಳಿದ್ದವು. ಬ್ರಹ್ಮಕಪಾಲವನ್ನ ಕೈಯಲ್ಲಿ ಹಿಡಿದಿದ್ದ. ಹುಲಿಯ ಚರ್ಮವನ್ನು ಹೊದೆದಿದ್ದ. ಪಿನಾಕವೆಂಬ ಧನುಸ್ಸನ್ನೂ ಶೂಲವನ್ನೂ ಹಿಡಿದಿದ್ದ. ಅವನ ನೇತ್ರಗಳು ವಿಕಾರವಾಗಿದ್ದವು.

ಇಂಥ ವಿಕಾರವಾದ ರೂಪವುಳ್ಳ ಶಿವನನ್ನು ನೋಡಿ ಮೇನಾದೇವಿ ತುಂಬಾ ಹೆದರಿದಳು. ಇಂಥವನು ಪಾರ್ವತಿ ಗಂಡನಾ – ಅಂತ ಆಕೆ ಮನಸ್ಸು ಕದಡಿ ಶರೀರವು ಕಂಪಿಸಿತು. ಆಗ ಅವಳು ಗಾಳಿಯಿಂದ ಹೊಡೆಯಲ್ಪಟ್ಟ ಬಳ್ಳಿಯಂತೆ ದೊಪ್ಪನೆ ಬಿದ್ದು, ಮೂರ್ಛೆ ಹೋದಳು. ಸಖಿಯರು ಉಪಚರಿಸಿದ ಬಳಿಕ ಮೆಲ್ಲಮೆಲ್ಲಗೆ ಎಚ್ಚರಗೊಂಡಳು.

ಇಲ್ಲಿಗೆ ಪಾರ್ವತೀಖಂಡದ ನಲವತ್ತಮೂರನೆಯ ಅಧ್ಯಾಯ ಮುಗಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT