ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಬದುಕಿನ ಶಿಕ್ಷಣ ಕಲಿಯಬೇಕು

ಅಕ್ಷರ ಗಾತ್ರ

ಬದುಕುವುದು ಒಂದು ಕಲೆ ಅನ್ನೋದು ಅನುಭವಸ್ಥರ ಮಾತು. ಬಿಳಿಹಾಳೆ ಮೇಲೆ ಉತ್ತಮ ಚಿತ್ತಾರ ಬಿಡಿಸಲು ಒಬ್ಬ ಚಿತ್ರಕಾರನಿಗೆ ಬೇಕಾದ ಕೌಶಲದಂತೆಯೇ ನಮ್ಮ ವಿಸ್ತಾರವಾದ ಬದುಕಿನಲ್ಲಿ ಸುಂದರವಾದ ಚಿತ್ತಾರ ಮೂಡಿಸಲು ಕೌಶಲ ಬೇಕು. ಕೆಲ ಹೊತ್ತಿಗೆ ಸೀಮಿತವಾದ ಮಾತುಗಾರಿಕೆಗೂ ಒಂದು ಕಲೆ ಬೇಕು ಎಂದ ಮೇಲೆ, ಸುದೀರ್ಘವಾದ ಬದುಕಿಗೆ ಕಲೆಗಾರಿಕೆ ಇಲ್ಲದಿದ್ದರೆ ನಮ್ಮ ಹುಟ್ಟಿಗೆ ಅರ್ಥವಿರುವುದಿಲ್ಲ. ಚಿತ್ರ ಬಿಡಿಸುವಲ್ಲೂ ನಾನಾ ಆಯಾಮಗಳಿರುವಂತೆಯೇ, ನಮ್ಮ ಬದುಕನ್ನು ರೂಪಿಸಲೂ ನಾನಾ ನಮೂನೆಗಳಿವೆ. ಒಬ್ಬ ಚಿತ್ರಕಾರ ತನ್ನ ಮನದಲ್ಲಿ ಮೂಡಿದಂತೆ ನಿರ್ದಿಷ್ಟ ಚಿತ್ರ ಬರೆದರೆ, ಮತ್ತೊಬ್ಬ ಮನಸ್ಸಿಗೆ ತೋಚಿದಂತೆ ಗೀಚಿ ಚಿತ್ರ ಬರೆಯುತ್ತಾನೆ. ಆದರೆ ಇಬ್ಬರ ಅಂತಿಮ ಗುರಿ ಉತ್ತಮ ಚಿತ್ರ ಬಿಡಿಸುವುದೇ ಆಗಿರುತ್ತದೆ.

ಹಾಗೆಯೇ, ಬದುಕನ್ನು ರೂಪಿಸುವ ಕಲೆಯಲ್ಲೂ ಒಬ್ಬರದು ಯೋಜಿತ ಚೌಕಟ್ಟಿದ್ದರೆ, ಮತ್ತೊಬ್ಬರದು ಯಾವ ಅಂಕೆ ಇಲ್ಲದ ಲಾಗಾಲೋಟದಲ್ಲಿರುತ್ತೆ. ಆದರೆ ಇಬ್ಬರ ಗುರಿಯೂ ಬದುಕನ್ನು ಸುಂದರವಾಗಿಸುವುದೇ ಆಗಿರುತ್ತೆ; ಫಲಿತಾಂಶ ಮಾತ್ರ ಒಂದೇ ಆಗಿರುವುದಿಲ್ಲ. ಯೋಜಿತ ಚೌಕಟ್ಟಿನಲ್ಲಿ ಬದುಕನ್ನು ರೂಪಿಸುವುದು ಕಡಿಮೆ ಅಪಾಯಕಾರಿ, ಅದೇ ಲಂಗು-ಲಗಾಮಿಲ್ಲದ ಬದುಕು ಬಹಳ ಅಪಾಯಕಾರಿ. ಇದಕ್ಕಾಗಿಯೇ ಬದುಕನ್ನು ಸುಂದರವಾಗಿ ರೂಪಿಸಲು ಯೋಜಿತವಾದ ಚೌಕಟ್ಟಿರಬೇಕು ಎಂದು ಅನುಭಾವಿಗಳು ಹೇಳುವುದು. ಯಾವುದೇ ಒಬ್ಬ ಯಶಸ್ವಿ ಸಾಧಕನ ಬತ್ತಳಿಕೆಯಲ್ಲಿ ನಿರ್ದಿಷ್ಟ ಗುರಿ, ಯೋಜಿತ ಬಾಣಗಳಿರುತ್ತವೆ.

ಬದುಕಿನ ಶಿಕ್ಷಣವನ್ನ ಶಾಲಾ-ಕಾಲೇಜಿನಲ್ಲಿ ಕಲಿಸುವುದಿಲ್ಲ. ಇದರಿಂದಾಗಿ ಬಹುತೇಕ ಮಂದಿ ಶೈಕ್ಷಣಿಕವಾಗಿ ಗೆದ್ದರೂ, ವ್ಯಾವಹಾರಿಕವಾಗಿ ಸೋಲುತ್ತಾರೆ. ಹಲವರು ಶಾಲಾಶಿಕ್ಷಣದಲ್ಲಿ ನಪಾಸಾದರೂ, ಬದುಕೆಂಬ ಮಹಾಸಾಗರದಲ್ಲಿ ಈಜಿ, ಜೈಸಿಬಿಡುತ್ತಾರೆ. ಹೀಗೆ ಜೀವನದಲ್ಲಿ ಗೆದ್ದ ಅವಿದ್ಯಾವಂತರ ಬಳಿ ವಿದ್ಯಾವಂತರು ಕೆಲಸ ಮಾಡುವಂತಾಗುತ್ತೆ. ಇದನ್ನು ನಮ್ಮ ವ್ಯವಸ್ಥೆಯ ವೈಪರೀತ್ಯ ಅಂತ ಭಾವಿಸುವುದು ತಪ್ಪು. ಏಕೆಂದರೆ, ಶಾಲಾಶಿಕ್ಷಣಕ್ಕಿಂತ ಬದುಕಿನ ಶಿಕ್ಷಣ ಪರಿಣಾಮಕಾರಿಯಾದುದು.

ಶಾಲಾಶಿಕ್ಷಣ ಸೀಮಿತ ಚೌಕಟ್ಟಿನಲ್ಲಿ ಬದುಕಿನ ತಳಪಾಯ ನಿರ್ಮಿಸಿದರೆ, ಬದುಕಿನ ಶಿಕ್ಷಣದಲ್ಲಿ ವಿಸ್ತಾರ ಅಡಿಪಾಯವಿರುತ್ತೆ. ದೇಹದಾರ್ಢ್ಯಕ್ಕೆ ಔಷಧಕ್ಕಿಂತ ವ್ಯಾಯಾಮ ಹೇಗೆ ಮುಖ್ಯವೋ, ಹಾಗೆಯೇ ಔಷಧದಂತಿರುವ ಶಾಲಾಶಿಕ್ಷಣಕ್ಕಿಂತ ಪರಿಶ್ರಮದ ಬದುಕಿನ ಶಿಕ್ಷಣ ಹೆಚ್ಚು ಪ್ರಯೋಜನಕಾರಿ. ಹಾಗೆಂದು, ಶಾಲಾಶಿಕ್ಷಣ ಬದುಕು ಕಟ್ಟಿಕೊಡಲಾರದು ಎಂದರ್ಥವಲ್ಲ, ಯಾವುದೇ ಶಿಕ್ಷಣದಲ್ಲಿ ಬದುಕನ್ನು ಬಂಗಾರವಾಗಿಸಿಕೊಳ್ಳುವ ಕಲೆ ಇರಬೇಕು. ಒಂದು ಭಾಷೆ ಮಾತು ಕಲಿಸಿದರೆ, ಆ ಮಾತು ಜೀವನವನ್ನು ರೂಪಿಸುತ್ತದೆ. ಅಂತೆಯೇ, ಶಾಲಾಶಿಕ್ಷಣ ಜ್ಞಾನ ರೂಪಿಸಿದರೆ, ಆ ಜ್ಞಾನದ ತಳಹದಿಯಲ್ಲಿ ಸುಂದರ ಬದುಕು ನಿಲ್ಲುತ್ತೆ. ಇಂಥ ಬದುಕುವ ಕಲೆಗಾರಿಕೆ ಮೂಡುವುದು ವಾಸ್ತವದ ತಳಹದಿಯಲ್ಲಿ. ಅದು ಬದುಕಿನ ಶಿಕ್ಷಣದಲ್ಲಿದೆ.

ಯಾವುದೇ ಶಿಕ್ಷಣದ ಮೂಲ ಗುರಿ ಉತ್ತಮ ಗುಣ ರೂಪಿಸುವುದಾಗಿರುತ್ತೆ. ಆ ಗುಣವಿಶೇಷಗಳೇ ಬದುಕನ್ನು ಸುಂದರವಾಗಿಸುತ್ತೆ. ಇಲ್ಲಿ ಸುಂದರವಾದ ಬದುಕೆಂದರೆ ಅಷ್ಟೈಶ್ವರ್ಯಗಳಿರುವುದಲ್ಲ; ಬದುಕಿನಲ್ಲಿ ಶಾಂತಿ-ನೆಮ್ಮದಿ ತುಂಬಿರುವುದು. ಪರರ ಬಗ್ಗೆ ಈರ್ಷೆಗಳಿಲ್ಲದ, ಪರರಿಂದ ದೂಷಣೆಗಳಿಲ್ಲದ ನಿಷ್ಕಲ್ಮಶ ಬದುಕು ಅತ್ಯಂತ ಸುಂದರ. ಮಗ್ಗುಲಲ್ಲೆ ಸುಖವಿದ್ದರೂ, ಮಡಿಲಲ್ಲಿ ದುಃಖದಿ ಕೊರಗುವ ಬದುಕು ಕುರೂಪ. ಇದಕ್ಕಾಗಿಯೇ, ನಾವು ಹುಟ್ಟುವಾಗ ಶ್ರೀಮಂತರಾಗಿರದಿದ್ದರೂ, ನಾವು ಸಾಯುವಾಗ ಧೀಮಂತರಾಗಿರಬೇಕು ಅನ್ನುವುದು. ಇಂಥ ಧೀಮಂತಿಕೆಯನ್ನು ಕಲಿಸುವುದು ಬದುಕಿನ ಶಿಕ್ಷಣ. ‘ಶರಣರ ಗುಣವ ಮರಣದಲ್ಲಿ ಕಾಣು’ ಎಂಬಂತೆ ನಮ್ಮ ಬದುಕು ಗುಣದ ಹಣತೆಯಲ್ಲಿ ಬೆಳಗಬೇಕು. ಇದೇ ಸುಂದರವಾದ ‘ಸಚ್ಚಿದಾನಂದ’ ಬದುಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT