ಬುಧವಾರ, ಮೇ 12, 2021
26 °C

ವಾರ ಭವಿಷ್ಯ: 11-4-21 ರಿಂದ 17-4-21 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680
**
ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ 1)

ಸ್ನೇಹಿತರೊಡನೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ. ಹೆಚ್ಚು ಬಂಡವಾಳವನ್ನು ನಿರೀಕ್ಷಿಸುವ ಕೆಲಸಗಳನ್ನು ಸ್ವಲ್ಪ ಮುಂದೂಡುವುದು ಉತ್ತಮ. ಬಡವರಿಗೆ ದಾನ ಮಾಡಲು ಮನಸ್ಸು ಮಾಡುವಿರಿ. ಈ ಅವಕಾಶವನ್ನು ನಿಮ್ಮ ರಾಜಕೀಯ ಬೆಳವಣಿಗೆಗೂ ಸಹ ಬಳಸಿಕೊಳ್ಳಬಹುದು. ದವಸಧಾನ್ಯಗಳ ವ್ಯಾಪಾರಿಗಳಿಗೆ ಉತ್ತಮ ವ್ಯಾಪಾರ ನಡೆದು ಲಾಭ ಹೆಚ್ಚುತ್ತದೆ. ಸಾಲ ತೆಗೆದುಕೊಳ್ಳುವವರು ಸಾಲಕೊಡುವ ಅಧಿಕಾರಿಗಳಿಂದ ವಂಚನೆಗೆ ಒಳಗಾಗಬಹುದು ಎಚ್ಚರವಹಿಸಿರಿ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಪರಿಹಾರ ಕಂಡುಕೊಳ್ಳುವಿರಿ.

***

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಮನೆಗೆ ಆತ್ಮೀಯರ ಆಗಮನವಾಗಲಿದೆ. ಮಹಿಳೆಯರು ತಮ್ಮ ವ್ಯಾಪಾರಗಳಲ್ಲಿ ಹೆಚ್ಚು ಪ್ರಭಾವ ಬೀರಲಿದ್ದಾರೆ. ಹಣಕಾಸಿನ ಸ್ಥಿತಿಯಲ್ಲಿ ಹಿನ್ನಡೆಯನ್ನು ಕಾಣಬಹುದು. ಭೂ ಸಂಬಂಧಿ ವ್ಯವಹಾರಗಳಲ್ಲಿ ಕಿರಿಕಿರಿ ಉಂಟಾಗಬಹುದು. ದೊಡ್ಡ ವ್ಯಕ್ತಿಗಳ ಸಹವಾಸದಿಂದ ಸಮಾಜದಲ್ಲಿ ಗೌರವ ಪಡೆಯುವಿರಿ. ರಾಜಕೀಯ ಪ್ರೇರಿತ ಕೆಲಸಗಳಲ್ಲಿ ಮುನ್ನಡೆ ಸಾಧಿಸುವಿರಿ. ಆರ್ಥಿಕ ಸುಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಹೊಸದಾರಿಗಳನ್ನು ಹುಡುಕುವಿರಿ. ಕೆಲವು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಬೇರೆಯ ಇಲಾಖೆಗಳಿಗೆ ವರ್ಗಾವಣೆಯಾಗಬಹುದು. ಸರ್ಕಾರಿ ಸಾಲಗಳನ್ನು ಪಡೆಯಲು ಇದ್ದ ತೊಡಕುಗಳು ನಿವಾರಣೆಯಾಗುತ್ತವೆ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಆತಂಕದ ಛಾಯೆಯನ್ನು ಕಾಣಬಹುದು. ಕೆಲಸಕಾರ್ಯಗಳಲ್ಲಿ ದ್ವಂದ್ವ ನಿರ್ಧಾರಗಳಿಂದ ಹಿನ್ನಡೆಯಾಗಬಹುದು, ಧೃಡ ನಿರ್ಧಾರಗಳಿಂದ ಮುಂದುವರೆಯುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ತಗಾದೆಗಳು ಮಧ್ಯಸ್ಥರ ಮೂಲಕ ಸಂಧಾನಕ್ಕೆ ಬರಬಹುದು. ನಿಮ್ಮ ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳಿಂದ ಕಿರಿಕಿರಿಯಾಗಬಹುದು. ನಿರುದ್ಯೋಗಿಗಳು ಉದ್ಯೋಗ ಪಡೆಯಲು ಮಾಡುವ ಪ್ರಯತ್ನಗಳಿಗೆ ಫಲವಿದೆ. ಕೆಲಸಕಾರ್ಯಗಳಿಗೆ ಕುಟುಂಬದವರಿಂದ ಹೆಚ್ಚಿನ ಸಹಕಾರಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಅವರು ಬಯಸಿದ ಉನ್ನತ ಶಿಕ್ಷಣ ಓದುವ ಯೋಗವಿದೆ.

***

ಕಟಕ ರಾಶಿ(ಪುನರ್ವಸು 4 ಪುಷ್ಯ ಆಶ್ಲೇಷ)

ಉದ್ಯಮ ಒಂದರಲ್ಲಿ ಹಣ ತೊಡಗಿಸಲು ಚಿಂತನೆ ನಡೆಸುವಿರಿ. ಬರಬೇಕಿದ್ದ ಹಣ ಈಗ ಬಂದು ಕೈಸೇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಗಳ ಅವಕಾಶಗಳು ತೆರೆಯಲ್ಪಡುತ್ತವೆ. ಕೆಲವರಿಗೆ ರಾಜಕೀಯವಾಗಿ ಹೆಚ್ಚು ಪ್ರಬಲವಾಗುವ ಅವಕಾಶಗಳಿವೆ. ತಂದೆಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಶೀತ ಭಾದೆಯಲ್ಲಿ ಇರುವವರು ಹೆಚ್ಚಿನ ನಿಗಾವಹಿಸಿರಿ. ವೃತ್ತಿಯಲ್ಲಿ ಸ್ತ್ರೀ ಮೇಲಧಿಕಾರಿಯಿಂದ ಹೆಚ್ಚಿನ ಸಹಾಯ ದೊರೆಯುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಅಭಿವೃದ್ಧಿ ಇದೆ. ರಾಸಾಯನಿಕ ವಸ್ತುಗಳನ್ನು ತಯಾರಿಸುವವರಿಗೆ ಮತ್ತು ಮಾರುವವರಿಗೆ ವ್ಯವಹಾರದ ವಿಸ್ತರಣೆಯ ಅವಕಾಶವಿದೆ. ಕೃಷಿ ಯಂತ್ರೋಪಕರಣಗಳನ್ನು ಮಾರುವವರ ಲಾಭ ಹೆಚ್ಚುತ್ತದೆ.

***

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಆರ್ಥಿಕ ಸಂಪನ್ಮೂಲಗಳು ಅಭಿವೃದ್ಧಿಯಾಗುತ್ತವೆ. ಕೃಷಿ ಚಟುವಟಿಕೆಯಲ್ಲಿ ಇರುವವರಿಗೆ ಬೇಕಾದ ಸಾಲ ಸೌಲಭ್ಯಗಳು ಒದಗಿ ಬರುತ್ತವೆ. ನಿಮ್ಮ ಶತ್ರುಗಳನ್ನು ನಯವಾಗಿ ಮಣಿಸಬಹುದು. ವಿವಾಹ ಸಂಬಂಧಗಳು ಒದಗಿ ಬರುವ ಸಾಧ್ಯತೆಗಳಿವೆ. ವ್ಯವಹಾರದಲ್ಲಿ ಕೆಲವರೊಂದಿಗೆ ಸಂಬಂಧ ವೃದ್ಧಿಸುತ್ತದೆ. ಲೇವಾ ದೇವಿ ವ್ಯವಹಾರವನ್ನು ಬಂಧುಗಳೊಂದಿಗೆ ಮಾಡಿದಲ್ಲಿ ಸಂಬಂಧ ಹಳಸಬಹುದು. ಕೃಷಿಭೂಮಿಯನ್ನು ಖರೀದಿ ಮಾಡುವ ಸಾಧ್ಯತೆಗಳಿವೆ. ದೈನಂದಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಸಾಹ ಮೂಡುತ್ತದೆ. ಹಳೆಯ ಋಣ ಪರಿಹಾರಗಳಿಂದ ಮನಸ್ಸಿಗೆ ತೃಪ್ತಿ ಬಂದು ದೇವತಾದರ್ಶನ ಮಾಡುವಿರಿ. ರಾಜಕೀಯ ಮುತ್ಸದ್ದಿಗಳಿಗೆ ಹೊಸ ಹುದ್ದೆ ಅಲಂಕರಿಸುವ ಯೋಗವಿದೆ.

***

ಕನ್ಯಾ ರಾಶಿ(ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಪ್ರಮುಖ ಸಭೆಯಲ್ಲಿ ಭಾಗವಹಿಸಿ ಉನ್ನತ ವಿಷಯವೊಂದನ್ನು ಮಂಡಿಸುವಿರಿ ಹಾಗೂ ಅದಕ್ಕಾಗಿ ಎಲ್ಲರ ಮೆಚ್ಚುಗೆಯನ್ನು ಗಳಿಸುವಿರಿ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಅನಗತ್ಯ ಮಾತುಗಳಿಂದ ನೆರೆಹೊರೆಯವರೊಂದಿಗೆ ಸಂಬಂಧ ಹಾಳಾಗಬಹುದು. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವೃತ್ತಿಯಲ್ಲಿ ಸ್ತ್ರೀಯರಿಂದ ಕಿರಿಕಿರಿ ಉಂಟಾಗಬಹುದು. ಅನವಶ್ಯಕ ವ್ಯವಹಾರಗಳಿಂದ ದೂರವುಳಿಯುವುದು ಉತ್ತಮ. ಗುಂಪುಗಾರಿಕೆಯನ್ನು ಮಾಡುವವರಿಗೆ ಶಿಕ್ಷೆ ದೊರೆಯುವ ಸಾಧ್ಯತೆ ಇದೆ, ಎಚ್ಚರವಾಗಿರಿ. ಸಂಸಾರ ಸಮೇತ ವಿಹಾರಕ್ಕಾಗಿ ಹೋಗಿಬರಬಹುದು.

***

ತುಲಾ ರಾಶಿ(ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸೌಂದರ್ಯವರ್ಧಕಗಳನ್ನು ತಯಾರಿಸಿ ಮಾರುವವರಿಗೆ ಮಾರಾಟ ಹೆಚ್ಚಾಗುತ್ತದೆ. ಸಾರ್ವಜನಿಕ ಕೆಲಸ ಮಾಡುವವರು ತಮ್ಮ ಕೈಯನ್ನು ಶುದ್ಧವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನೀವು ಬೇರೆಯವರ ವಿರುದ್ಧ ಮಾಡಿದ ಪಿತೂರಿಯು ನಿಮ್ಮ ವಿರುದ್ಧವೇ ಕೇಳಿಬರತೊಡಗುತ್ತದೆ. ಜೀವನ ನಿರ್ವಹಣೆಗೆ ಸಹಾಯವಾಗುವ ಒಂದು ಆರ್ಥಿಕ ಸಂಪನ್ಮೂಲ ದೊರಕುತ್ತದೆ, ಆದರೂ ಧನದ ಒಳಹರಿವು ಸ್ವಲ್ಪ ಕಡಿಮೆ ಇರುತ್ತದೆ. ವ್ಯಾಪಾರ ವ್ಯವಹಾರಗಳ ಲಾಭದ ಬಗ್ಗೆ ಅತಿಯಾದ ಚಿಂತನೆ ಬೇಡ. ಸ್ವಂತ ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸಿರಿ. ಸಂಗಾತಿಯ ನಡವಳಿಕೆಯು ನಿಮಗೆ ಮುಜುಗರ ತಂದರೂ ಸಹ ನೀವು ಹೊಂದಿಕೊಳ್ಳುವಿರಿ.

***

ವೃಶ್ಚಿಕ ರಾಶಿ(ವಿಶಾಖಾ 4 ಅನುರಾಧ ಜೇಷ್ಠ)

ಗೃಹಿಣಿಯರು ಹರಿತವಾದ ಆಯುಧಗಳನ್ನು ಬಳಸುವಾಗ ಎಚ್ಚರಿಕೆವಹಿಸಿರಿ. ಎಂಜಿನಿಯರಿಂಗ್ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರ ಮೇಲೆ ಜವಾಬ್ದಾರಿ ಹೆಚ್ಚಾಗುತ್ತದೆ. ಹಣದ ಒಳಹರಿವು ಸಾಮಾನ್ಯ ವಾಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕೆಲವೊಂದು ರಾಜಕೀಯ ಪ್ರಕರಣಗಳು ತಲೆ ನೋವಾಗುತ್ತದೆ. ಸಾಹಿತ್ಯ ರಚನೆಯಲ್ಲಿ ತೊಡಗಿ ಕೊಂಡಿರುವವರಿಗೆ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಸ್ವಂತ ಉದ್ದಿಮೆಯನ್ನು ನಡೆಸುವವರಿಗೆ ಕಾರ್ಯನಿಮಿತ್ತ ಓಡಾಟಗಳು ಹೆಚ್ಚಾಗುತ್ತವೆ.

***

ಧನಸ್ಸು ರಾಶಿ(ಮೂಲ ಪೂರ್ವಾಷಾಢ ಉತ್ತರಾಷಾಢ 1)

ಕೃಷಿ ಸಂಬಂಧಿತ ಯಂತ್ರಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ನವೀನ ರೀತಿಯ ಕೃಷಿಯನ್ನು ಅಳವಡಿಸಿಕೊಳ್ಳುವ ಇಚ್ಛೆ ಬರುತ್ತದೆ, ಅದಕ್ಕೆ ಬೇಕಾದ ಮಾರ್ಗದರ್ಶನಗಳೂ ಸಹ ದೊರೆಯುತ್ತದೆ. ಸಾಲ ಕೊಟ್ಟವರು ಎಡಬಿಡದೆ ಮರುಪಾವತಿಗಾಗಿ ಬೇಡಿಕೆ ಇಡುವರು. ಸಮಾಧಾನದಿಂದ ಕೇಳಿಕೊಂಡಲ್ಲಿ ಹೆಚ್ಚಿನ ಕಾಲಾವಕಾಶ ನಿಮಗೆ ದೊರೆಯುವುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಿರಿಯರ ಸಹಕಾರ ಸಹಾಯ ಸೂಕ್ತ ಸಮಯದಲ್ಲಿ ಒದಗುತ್ತದೆ. ನಿಮ್ಮ ಬಳಿ ಇರುವ ಆಸ್ತಿಯ ಬೆಲೆ ದುಪ್ಪಟ್ಟಾಗುತ್ತದೆ. ನೃತ್ಯಪಟುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹಿತ ಶತ್ರುಗಳ ಬಗ್ಗೆ ಎಚ್ಚರವಾಗಿರಿ.

***

ಮಕರ ರಾಶಿ(ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಹಿತಮಿತವಾದ ಮಾತುಗಳಿಂದ ಕಾರ್ಯಸಿದ್ಧಿಯಾಗುತ್ತದೆ. ಭೂ ವ್ಯವಹಾರ ಮಾಡುವವರಿಗೆ ಲಾಭ ಹೆಚ್ಚುತ್ತದೆ. ವೈಯಕ್ತಿಕ ಜೀವನದಲ್ಲಿ ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು ಮನಸ್ಸಿಗೆ ನಿರಾಳವೆನಿಸುವುದು. ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರುತ್ತವೆ. ಹಿಡಿದ ಕೆಲಸವನ್ನು ಮಾಡಿಮುಗಿಸುವ ಛಲ ಮೈಗೂಡುತ್ತದೆ. ಮಹಿಳೆಯರಿಗೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಉದ್ಯೋಗ ಕ್ಷೇತ್ರದಲ್ಲಿ ಶುಭ ವಾರ್ತೆಯೊಂದನ್ನು ಕೇಳುವಿರಿ. ಉದ್ಯೋಗ ಕ್ಷೇತ್ರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದರಿಂದ ಹೆಚ್ಚಿನ ಸಾಧನೆ ಮಾಡಬಹುದು.

***

ಕುಂಭ ರಾಶಿ(ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ದೈನಂದಿನ ಕೆಲಸಗಳು ಯಶಸ್ವಿಯಾಗಿ ಸಾಗುತ್ತವೆ. ಹಿತಶತ್ರುಗಳ ವಿಚಾರದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಬಂಧುಗಳು ನಿಮ್ಮನ್ನು ಹೊಗಳಿದರೆ ಅವರು ಆರ್ಥಿಕ ಸಹಾಯಕ್ಕಾಗಿ ಬರುವರೆಂದು ತಿಳಿಯಿರಿ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮೇಲುಗೈ ಸಾಧಿಸಬಹುದು. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇದ್ದೇ ಇರುತ್ತದೆ. ಪಿತ್ರಾರ್ಜಿತ ಆಸ್ತಿಯ ವಿಚಾರವಾಗಿ ಬಂಧುಗಳ ಮಧ್ಯೆ ಗೊಂದಲ ಮೂಡಬಹುದು. ಪದೋನ್ನತಿಯ ಸಲುವಾಗಿ ನಡೆಸುವ ಯತ್ನಗಳಿಗೆ ಫಲಿತಾಂಶವಿರುತ್ತದೆ. ಕರಕುಶಲ ವಸ್ತುಗಳ ವ್ಯಾಪಾರ ಮಾಡುವವರಿಗೆ ಹೆಚ್ಚಿನ ವ್ಯಾಪಾರ ಆಗುತ್ತದೆ. ಸಂಬಂಧವಿಲ್ಲದ ವಿಷಯಗಳಲ್ಲಿ ಬಂಧುಗಳು ನಿಮ್ಮನ್ನು ಸಿಲುಕಿಸಲು ಯತ್ನಿಸುವರು, ಪರಿಸ್ಥಿತಿ ನೋಡಿ ಎಚ್ಚರವಾಗಿರಿ.

***

ಮೀನ ರಾಶಿ(ಪರ‍್ವಭಾದ್ರ 4 ಉತ್ತರಾಭಾದ್ರ ರೇವತಿ)

ಕಾರ್ಯನಿರತ ಅಧಿಕಾರಿಗಳು ಸತ್ಯವನ್ನು ಬಯಲು ಮಾಡಲು ಹೋಗಿ ಅವಘಡಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಚಿನ್ನದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗುವ ಲಕ್ಷಣಗಳಿವೆ. ಮಹಿಳೆಯರಿಗೆ ಆರ್ಥಿಕ ಸಬಲತೆಗೆ ಬೇಕಾದ ಅನುಕೂಲಗಳು ದೊರೆಯುತ್ತವೆ. ಸಿದ್ಧಪಡಿಸಿದ ಆಹಾರಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರಿಂದ ನಿಮ್ಮ ಕಾರ್ಯಗಳಿಗೆ ಹೆಚ್ಚಿನ ಸಹಕಾರ ದೊರೆಯುತ್ತದೆ. ಉಸಿರಾಟದ ತೊಂದರೆ ಇರುವವರಿಗೆ ಆರೋಗ್ಯ ಸುಧಾರಿಸುತ್ತದೆ. ಲೇವಾದೇವಿ ಮಾಡುವವರ ಹಣ ನಿಂತಲ್ಲೇ ನಿಲ್ಲಬಹುದು. ಗಣಿ ಉದ್ಯಮವನ್ನು ನಡೆಸುವವರಿಗೆ ಬಿಕ್ಕಟ್ಟಿನ ಪರಿಸ್ಥಿತಿ ಇರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.