ಗುರುವಾರ , ಫೆಬ್ರವರಿ 25, 2021
20 °C

ವಾರ ಭವಿಷ್ಯ: 27-12-2020ರಿಂದ 02-01-2021ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

***

ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ 1) 
ವ್ಯವಹಾರದಲ್ಲಿ ಉನ್ನತಿಯೊಂದಿಗೆ ಹೆಚ್ಚಿನ ಗಳಿಕೆಯೂ ಸಹ ಒದಗುವುದು. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ಉದ್ಯೋಗಸ್ಥರಿಗೆ ನಿಧಾನವಾಗಿ ಸವಲತ್ತುಗಳು ಹೆಚ್ಚಾಗುತ್ತವೆ. ಕೈಗಾರಿಕಾ ಒಪ್ಪಂದ ಮಾಡಿಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಿ. ವೈಯಕ್ತಿಕ ಸಮಸ್ಯೆಯೊಂದು ಬಗೆಹರಿದು ಗೊಂದಲದಲ್ಲಿದ್ದ ಮನಸ್ಸಿಗೆ ನಿರಾಳವೆನಿಸಲಿದೆ. ಕೆಲವು ಕವಿಗಳಿಗೆ ಪುಸ್ತಕ ಅಥವಾ ಗ್ರಂಥ ಬಿಡುಗಡೆ ಮಾಡುವ ಯೋಗವಿದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಹಣದ ಒಳಹರಿವು ಸಾಮಾನ್ಯ. ಖರ್ಚಿಗೆ ಕಡಿವಾಣ ಹಾಕಿ.

***
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ರಾಸಾಯನಿಕ ವಸ್ತುಗಳ ಸಂಶೋಧನೆ ಮಾಡುತ್ತಿರುವವರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಸರಾಗವಾಗಿ ಸಿಗುತ್ತವೆ. ವೆಚ್ಚಕ್ಕಾಗಿ ಸಂಶೋಧನಾ ಭತ್ಯೆ ಸಹ ದೊರೆಯುತ್ತದೆ. ವೈಯಕ್ತಿಕ ಆದಾಯದಲ್ಲಿ ಹಿನ್ನಡೆ. ಖರ್ಚು ಕಡಿಮೆ ಮಾಡಿ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಜವಾಬ್ದಾರಿಗಳು ಒದಗಿ ಬರುತ್ತವೆ. ಬಂಧುಗಳ ಸಹಕಾರ ಕಡಿಮೆ ಆಗಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ತಂದೆಯಿಂದ ಕೃಷಿಭೂಮಿ ಬಳುವಳಿಯಾಗಿ ಬರಬಹುದು. ಸಂಗಾತಿಯ ಆಲಂಕಾರಿಕ ವಸ್ತುಗಳಿಗಾಗಿ ಹಣ ಖರ್ಚುಮಾಡುವಿರಿ.

***

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕಾರ್ಯಕ್ಷೇತ್ರದಲ್ಲಿ ಸಂಪರ್ಕ ಮತ್ತು ಉತ್ತಮ ಸ್ನೇಹಗಳು ಬೆಳೆದು ಹೊಸ ಆವಿಷ್ಕಾರಗಳ ಕ್ರಾಂತಿಗೆ ನಾಂದಿಯಾಗುವುದು. ನಿರೀಕ್ಷಿತ ಮೂಲದಿಂದ ಹಣ ಬರದಿದ್ದರೂ ಅನಿರೀಕ್ಷಿತ ಮೂಲದಿಂದ ಹಣ ಬರುವುದು. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಬಿಡುವಿಲ್ಲದ ಕೆಲಸಗಳಿಂದ ದೇಹಕ್ಕೆ ಶ್ರಮ ಹೆಚ್ಚಾಗಬಹುದು. ವಿವಾಹಿತರಿಗೆ ಪ್ರಾಪಂಚಿಕ ವಿಷಯಗಳನ್ನು ಅನುಭವಿಸುವ ಯೋಗವಿದೆ. ಸರ್ಕಾರಿ ಕೆಲಸಗಳು ಸರಾಗವಾಗಿ ಆಗುತ್ತವೆ. ಗುತ್ತಿಗೆ ಕಾರ್ಮಿಕರನ್ನು ಒದಗಿಸುವ ಸಂಸ್ಥೆಗಳಿಗೆ ನಿಧಾನವಾಗಿ ಬೇಡಿಕೆ ಹೆಚ್ಚಾಗುವುದು. ವೃತ್ತಿಯಲ್ಲಿ ಅನಿರೀಕ್ಷಿತ ತಿರುವು ನಡೆದು ಆದಾಯ ಹೆಚ್ಚಾಗುವುದು.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ರಾಸಾಯನಿಕ ದ್ರವ್ಯಗಳನ್ನು ತಯಾರಿಸಿ ಮಾರುವವರಿಗೆ ಬೇಡಿಕೆ ಇರುತ್ತದೆ. ಸರ್ಕಾರಿ ಸಾಲ ಪಡೆದು ಬಡ್ಡಿ ಸಾಲಗಳನ್ನು ಹಂತ ಹಂತವಾಗಿ ತೀರಿಸಿಕೊಳ್ಳಬಹುದು. ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು. ಅವಿವಾಹಿತರಿಗೆ ವಿವಾಹ ಸಂಬಂಧಗಳು ಕೂಡಿಬರಬಹುದು. ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವೃದ್ಧಿಸಿ, ಆದಾಯ ಹೆಚ್ಚುವುದು. ಹಿರಿಯ ಅಧಿಕಾರಿಗಳ ನೆರವಿನಿಂದ ಉದ್ಯೋಗದಲ್ಲಿ ಅಭಿವೃದ್ಧಿ ಕಾಣಬಹುದು. ಕಟ್ಟಡ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಾಗಿ ಕೈತುಂಬ ಕೆಲಸ ಇರುತ್ತದೆ. ಕೃಷಿ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಪ್ರೋತ್ಸಾಹಧನ ದೊರೆಯುತ್ತದೆ.

***

ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಆದಾಯ ಮತ್ತು ಖರ್ಚುಗಳಲ್ಲಿ ಸಮತೋಲನ ಸಾಧಿಸುವುದು ಅತಿ ಅವಶ್ಯ. ಆಹಾರದಲ್ಲಿ ಎಚ್ಚರಿಕೆ ವಹಿಸದಿದ್ದಲ್ಲಿ ಆರೋಗ್ಯ ವ್ಯತ್ಯಾಸ ಆಗಬಹುದು. ವೃತ್ತಿಯಲ್ಲಿ ಅಧಿಕಾರಿಗಳ ಕೋಪಕ್ಕೆ ತುತ್ತಾಗುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ಅವರ ಸಾಧನೆಗೆ ತಕ್ಕ ಅವಕಾಶಗಳು ದೊರೆಯುತ್ತವೆ. ವಿದೇಶದಲ್ಲಿರುವ ಪ್ರೇಮಿಗಳ ಪ್ರೇಮವು ಸಾಫಲ್ಯ ಕಾಣುವ ಅವಕಾಶವಿದೆ. ಸ್ತ್ರೀಯರ ಆಸೆ-ಆಕಾಂಕ್ಷೆಗಳು ಈಡೇರುವ ಸಂದರ್ಭವಿದೆ. ಕೈತಪ್ಪಿದ್ದ ಹಿರಿಯರ ಆಸ್ತಿಗಳನ್ನು ಪುನಃ ಪಡೆಯಬಹುದು.

***

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವ್ಯವಹಾರದಲ್ಲಿ ಸ್ವಲ್ಪ ಸಫಲತೆ ಕಾಣಬಹುದು. ರಕ್ಷಣಾ ತಂತ್ರಜ್ಞಾನಿಗಳ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ದೊರೆಯಲಿದೆ. ಸಂಗೀತ ಕಲಾವಿದರಿಗೆ ವಿಶೇಷ ಗೌರವ, ಮನ್ನಣೆಯೂ ದೊರೆಯುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ಮೂಳೆಯ ಹಳೆ ನೋವು ಕಾಡಬಹುದು. ಆದಾಯವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮುನಿಸಿಕೊಂಡಿದ್ದ ತಂದೆ ಮಕ್ಕಳು ಹತ್ತಿರವಾಗುವರು. ಮಕ್ಕಳಿಂದ ಧನ ಸಹಾಯ ನಿರೀಕ್ಷಿಸಬಹುದು. ವಿದೇಶಿ ವ್ಯವಹಾರ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

***

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಬಂಧುಗಳ ನಡುವಿನ ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸಿಕೊಡುವಿರಿ. ಪ್ರತಿಭಾವಂತರ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ದೊರೆಯುತ್ತದೆ. ಹಣದ ಒಳಹರಿವು ನಿಧಾನವಾಗಿ ಏರ ತೊಡಗುತ್ತದೆ. ವಾಹನ ಖರೀದಿಸುವವರು ಸೂಕ್ತಎಚ್ಚರಿಕೆ ವಹಿಸುವುದು ಒಳ್ಳೆಯದು. ನಿಮ್ಮ ಆಸೆ-ಆಕಾಂಕ್ಷೆಗಳ ಈಡೇರಿಕೆಗಾಗಿ ನೀವು ಹೂಡಿದ ತಂತ್ರ ಫಲಿಸುತ್ತದೆ. ವೃತ್ತಿಯಲ್ಲಿ ವರ್ಗಾವಣೆ ಬಯಸುತ್ತಿದ್ದವರಿಗೆ ಈಗ ದೊರಕುವ ಕಾಲ. ದಿನಸಿ ಸಗಟು ವ್ಯಾಪಾರಿಗಳಿಗೆ ಲಾಭಾಂಶ ಹೆಚ್ಚುತ್ತದೆ. ಸಂಗಾತಿಯ ಸಲಹೆಯಿಂದ ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯಬಹುದು.

***

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ನಿಂತಿದ್ದ ಬಾಕಿ ಹಣ ಈಗ ಬರಲಿದೆ. ವಕೀಲರಿಗೆ ಹೆಚ್ಚಿನ ಮೊಕದ್ದಮೆಗಳು ದೊರೆತು ಬಿಡುವಿಲ್ಲದ ಕೆಲಸಗಳು ಇರುತ್ತವೆ. ಹಿರಿಯರು ನಿಮ್ಮ ಏಳಿಗೆಗಾಗಿ ಸೂಕ್ತ ಸಹಕಾರ ನೀಡುವರು. ಹರಿತ ಆಯುಧ ಉಪಯೋಗಿಸುವಾಗ ಎಚ್ಚರ ಇರಲಿ. ಸಂಗಾತಿಯ ಮುನಿಸನ್ನು ಅರ್ಥಮಾಡಿಕೊಂಡು ಅವರನ್ನು ಸಮಾಧಾನಪಡಿಸುವುದು ಅಗತ್ಯ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಸುವವರಿಗೆ ಬಾಕಿ ಇದ್ದ ಹಣ ಈಗ ಬರುತ್ತದೆ. ಅರಣ್ಯ ಇಲಾಖೆಯಲ್ಲಿರುವವರಿಗೆ ವೃತ್ತಿಯಲ್ಲಿ ಬಡ್ತಿ ಸಾಧ್ಯತೆಗಳಿವೆ.

***

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಉದ್ಯೋಗದಲ್ಲಿ ಬದಲಾವಣೆ ಕಾಣಬಹುದು. ಆಡಳಿತಾತ್ಮಕ ಹುದ್ದೆಯಲ್ಲಿರುವವರಿಗೆ ಸೂಕ್ತ ಜವಾಬ್ದಾರಿಗಳು ದೊರೆತು ಸಂತಸವಾಗುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಅತ್ಯಂತ ಚುರುಕಾದ ನಡವಳಿಕೆಯನ್ನು ಈ ವಾರ ಕಾಣಬಹುದು. ಕ್ರೀಡಾಪಟುಗಳಿಗೆ ಅವರ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಎಲ್ಲ ಸೌಲಭ್ಯಗಳು ದೊರೆಯುತ್ತವೆ. ಸಹೋದ್ಯೋಗಿಗಳಿಂದ ಸೂಕ್ತ ನೈತಿಕಬಲ ದೊರೆತು ಕೆಲಸಕಾರ್ಯಗಳಲ್ಲಿ ವೇಗವರ್ಧನೆಯಾಗುತ್ತದೆ. ಕಾನೂನು ಹೋರಾಟ ಮಾಡುತ್ತಿರುವವರಿಗೆ ಸಾಕಷ್ಟು ಬೆಂಬಲ ಸಿಗುವ ಜೊತೆಗೆ ದೇಣಿಗೆಯೂ ಸಿಗುತ್ತದೆ.

***

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ವ್ಯಾಪಾರ- ವ್ಯವಹಾರಗಳಲ್ಲಿ ಪ್ರಗತಿ ಕಾಣಬಹುದು, ತನ್ಮೂಲಕ ಲಾಭದತ್ತ ಹೆಜ್ಜೆ ಹಾಕಬಹುದು. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೂ ಬೇರೊಂದು ಮೂಲದಿಂದ ಹಣದ ಹರಿವು ಇರುತ್ತದೆ. ವಿದೇಶದಲ್ಲಿ ಇರುವ ಮಕ್ಕಳಿಂದ ಸಾಕಷ್ಟು ಸಹಾಯ ನಿರೀಕ್ಷೆ ಮಾಡಬಹುದು. ನಡೆದುಹೋದ ಕಾರ್ಯಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಆಗಬೇಕಾದ ಕಾರ್ಯಗಳ ಬಗ್ಗೆ ಗಮನ ಹರಿಸಿ. ಸಹಕಾರ ಸಂಘಗಳಲ್ಲಿ ಉತ್ತಮ ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ಬೆಳ್ಳಿ ಆಭರಣ ತಯಾರಕರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ.

***

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಸರ್ಕಾರಿ ಮಟ್ಟದ ವ್ಯವಹಾರಗಳಲ್ಲಿ ಏಳಿಗೆ ಇರುತ್ತದೆ. ಸರ್ಕಾರಿ ಕೆಲಸಗಳ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಯಶಸ್ಸು ದೊರೆಯುತ್ತದೆ. ರಾಜಕೀಯ ಭವಿಷ್ಯಕ್ಕಾಗಿ ಪ್ರಭಾವಿ ರಾಜಕಾರಣಿಗಳೊಂದಿಗೆ ಮಾಡಿದ ಚರ್ಚೆ ಫಲಪ್ರದವಾಗುತ್ತದೆ. ಕುಟುಂಬದವರಿಗಾಗಿ ವಸ್ತ್ರಾಭರಣ ಖರೀದಿಸುವಿರಿ. ದೈವ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿ ಹೊಂದುವಿರಿ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ತಂದೆಯೊಂದಿಗಿನ ಸಂಬಂಧಗಳು ಸ್ವಲ್ಪ ಇಳಿಮುಖವಾಗುತ್ತದೆ. ಸಾಂಪ್ರದಾಯಕ ರೀತಿಯಲ್ಲಿ ಕೃಷಿ ಮಾಡುವವರಿಗೆ ಯಶಸ್ಸು ಇದೆ.

***

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ರಾಜಕಾರಣಿಗಳ ಮಾತಿಗೆ ಮರುಳಾಗಿ ದೇಣಿಗೆ ಕೊಡಬೇಡಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅತಿ ಅಗತ್ಯ. ವಾಣಿಜ್ಯ ವ್ಯವಹಾರಗಳಲ್ಲಿ ನಿಧಾನವಾಗಿ ಹಿಡಿತ ಪಡೆದುಕೊಳ್ಳುವಿರಿ. ನಿಂತಿದ್ದ ಶಿಕ್ಷಣ ಈಗ ಪುನಃ ಮುಂದುವರೆಸಬಹುದು. ವಿದೇಶದಲ್ಲಿ ಓದುತ್ತಿರುವವರಿಗೆ ಕಲಿಕೆಯ ಅವಧಿಯ ನಂತರ ಕೆಲಸ ಮಾಡಿ ಹಣಗಳಿಸುವ ಯೋಗವಿದೆ. ಹೆಚ್ಚಿನ ಬಡ್ಡಿಯ ಆಸೆಗಾಗಿ ಸಿಕ್ಕಸಿಕ್ಕಲ್ಲಿ ಹಣ ಹೂಡಬೇಡಿ. ಸ್ವಂತ ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಿ. ಹಣಕಾಸು ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಅನುಕೂಲ ಇದೆ. ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.