ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ: ಬೇರೆ ಮದುವೆಯಾದ ಯಜ್ಞದತ್ತ

ಅಕ್ಷರ ಗಾತ್ರ

ಕುಲಘಾತುಕ ಮಗನ ಕುಕೃತ್ಯಗಳನ್ನು ಜೂಜುಕೋರ ಹೇಳುತ್ತಿದ್ದರೆ, ಯಜ್ಞದತ್ತನಿಗೆ ಜಂಘಾಬಲವೇ ಉಡುಗಿ ಹೋದಂತಾಗುತ್ತಿತ್ತು. ಮಗನ ಅವಗುಣಗಾನ ಮುಂದುವರೆಸಿದ ಜೂಜುಕೋರ ‘ನನಗೊಬ್ಬನಿಗೆ ಈ ಉಂಗುರವೊಂದನ್ನು ಕೊಟ್ಟಿದ್ದಾನೆ ಎಂದು ತಿಳಿಯಬೇಡ. ಇನ್ನೂ ಅನೇಕ ಜೂಜುಗಾರರಿಗೆ ಜೂಜಾಟದಲ್ಲಿ ಸೋತು ಅವರಿಗೆ ಬಹಳ ಹಣವನ್ನು ಕೊಟ್ಟಿದ್ದಾನೆ. ರತ್ನದ ಆಭರಣಗಳು, ಪಾತ್ರೆ-ಪದಾರ್ಥಗಳು, ಬೆಲೆಬಾಳುವ ರೇಷ್ಮೆಯ ಬಟ್ಟೆಗಳು, ಗಿಂಡಿ ಮೊದಲಾದ ಕಂಚು ತಾಮ್ರದ ಪಾತ್ರೆಗಳೆಲ್ಲವನ್ನೂ ಅವನು ನಮಗಿತ್ತಿದ್ದಾನೆ.

‘ಜೂಜುಕೋರರು ಪ್ರತಿ ದಿನವೂ ಜೂಜಿನಲ್ಲಿ ಸೋತ ಗುಣನಿಧಿ ಉಟ್ಟಬಟ್ಟೆಯನ್ನೂ ಬಿಡದೆ ಕಿತ್ತುಕೊಂಡು, ಬೆತ್ತಲೆ ಕಟ್ಟಿಹಾಕುತ್ತಾರೆ. ಅವನಂತಹ ಜೂಜುಗಾರನು ಈ ಭೂಮಂಡಲದಲ್ಲೇ ಬೇರೊಬ್ಬನಿಲ್ಲ’ ಎಂದು ಹೇಳಿದಾಗ ಯಜ್ಞದತ್ತನಿಗೆ ತಲೆ ಗಿರ್ರನೆ ತಿರುಗಿದಂತಾಯಿತು.
ಜೂಜುಕೋರನೊಬ್ಬನಿಂದ ತನ್ನ ಮಗನ ದುರ್ವರ್ತನೆಯನ್ನು ಕೇಳಿ, ಯಜ್ಞದತ್ತ ನಾಚಿಕೆಯಿಂದ ತಗ್ಗಿಸಿದ ತಲೆಯನ್ನು ಮೇಲಕ್ಕೆತ್ತದೆ, ತಲೆಗೆ ಮುಸುಗನ್ನು ಎಳೆದುಕೊಂಡು ಬಿರುಸು ನಡೆಯೊಂದಿಗೆ, ರವರವಗುಟ್ಟುವ ಆಕ್ರೋಶದ ಮುಖದೊಂದಿಗೆ ಮನೆಗೆ ಹೊರಟ. ಲೌಕಿಕ ವ್ಯವಹಾರವನ್ನೇ ಅರಿಯದ, ಕೇವಲ ಶ್ರುತಿವಿಹಿತಕರ್ಮಗಳಲ್ಲೇ ಆಸಕ್ತನಾದ ಯಜ್ಞದತ್ತದೀಕ್ಷಿತ ಮನೆಗೆ ಬಂದವನೆ ಕೋಪದಿಂದ ತನ್ನ ಹೆಂಡತಿಗೆ ‘ಎಲೈ ಪರಮ ವಂಚಕಿ! ನಿನ್ನ ಮಗನಾದ ಗುಣನಿಧಿ ಎಲ್ಲಿದ್ದಾನೆ? ಹೇಳು. ನಾನು ಸ್ನಾನಮಾಡಿ ಮೈಯುಜ್ಜಿಕೊಳ್ಳುವಾಗ ನನ್ನ ಬೆರಳಿನಿಂದ ತೆಗೆದುಕೊಂಡೆಯಲ್ಲ ಆ ನನ್ನ ಉಂಗುರವೆಲ್ಲಿದೆ ಹೇಳು? ಬೇಗನೆ ಆ ರತ್ನದ ಉಂಗುರವನ್ನು ನನಗೆ ತಂದುಕೊಡು’ – ಎಂದ ಆವೇಶದಿಂದ.

‘ಈ ಮಾತನ್ನು ಕೇಳಿದೊಡನೆಯೇ, ಮಡಿಯುಟ್ಟು ಮಧ್ಯಾಹ್ನದ ಕೆಲಸದಲ್ಲಿ ತೊಡಗಿದ್ದ, ದೀಕ್ಷಿತಾಯನಿ ನಡುಗುತ್ತಾ ಹೇಳಿದಳು, ‘ನಾನು ಈಗ ದೇವರ ಪೂಜೆಗೆ ಸಿದ್ಧಮಾಡುವುದರಲ್ಲಿ ತೊಡಗಿದ್ದೇನೆ. ಅತಿಥಿಗಳಿಗೆ ಹೊತ್ತಾದೀತು. ಈಗತಾನೇ ಪಕ್ವಾನ್ನಗಳನ್ನು ಮಾಡುವ ಆತುರದಲ್ಲಿ ಉಂಗುರವನ್ನು ಯಾವ ಪಾತ್ರೆಯಲ್ಲಿಟ್ಟೆನೋ ಮರೆತೆ’ ಎಂದಾಗ ಯಜ್ಞದತ್ತ ಮತ್ತಷ್ಟು ಕುಪಿತನಾಗಿ ‘ಮಗುವನ್ನು ಹೆತ್ತವಳೇ, ನಿತ್ಯವೂ ಸುಳ್ಳನ್ನೇ ಹೇಳುವವಳೇ. ಮಗ ಎಲ್ಲಿ ಹೋದನೆಂದು ಕೇಳಿದಾಗಲೆಲ್ಲ, ಓದುವುದನ್ನೆಲ್ಲಾ ಓದಿ ಈಗತಾನೆ ಸ್ನೇಹಿತರೊಂದಿಗೆ ಹೋದನೆಂದು ಸುಳ್ಳು ಹೇಳುತ್ತಿದ್ದೆಯಲ್ಲವೇ?’ ಎಂದು ಗದರುತ್ತಾನೆ.

‘ನಾನು ನಿನಗೆ ತಂದುಕೊಟ್ಟಿದ್ದ ಮಂಜಿಷ್ಠಾರಾಗರಂಜಿತವಾದ (ಹಳದಿ ಬಣ್ಣ) ಮನೆಯಲ್ಲಿ ಯಾವಾಗಲೂ (ದಂಡದ ಮೇಲೆ) ತೂಗಾಡುತ್ತಿದ್ದ ಆ ಸೀರೆಯೆಲ್ಲಿ? ನಿಜವನ್ನು ಹೇಳು. ರತ್ನಖಚಿತವಾದ ಆ ಗಿಂಡಿಯು ಈಗೇಕೆ ಎಲ್ಲಿಯೂ ಕಾಣಿಸುತ್ತಿಲ್ಲ. ನಾನು ನಿನಗೆ ತಂದುಕೊಟ್ಟಿದ್ದ ರೇಶಿಮೆ ನೂಲಿನಿಂದ ಮಾಡಿದ ಆ ತ್ರಿಪಟೆ (ಶಾಲುವಿನ ಮಾದರಿಯ ಹೊದೆಯವ ಬಟ್ಟೆ) ಎಲ್ಲಿ? ದಕ್ಷಿಣ ದೇಶದಿಂದ ತಂದಿದ್ದ ಆ ಕಂಚೂ, ಗೌಡದೇಶದಿಂದ ತಂದಿದ್ದ ತಾಮ್ರದ ಬಿಂದಿಗೆ ಎಲ್ಲಿದೆ? ಹೇಳು. ವಿಲಾಸಾರ್ಥವಾಗಿ ಉಪಯೋಗಿಸುತ್ತಿದ್ದ ಸುಖಕರವಾದ ಆನೆಯ ದಂತದಲ್ಲಿ ಮಾಡಿದ್ದ ಮಂಚಿಕೆ (ಕೆನ್ನೆಯಲ್ಲಿ ಧರಿಸುವ ಕರ್ಣಪತ್ರದಂತಹ ಆಭರಣ) ಎಲ್ಲಿ? ಚಂದ್ರಕಾಂತಿಯಂತೆ ಬೆಳಗುತ್ತಿದ್ದ ಮಲೆನಾಡಿನಿಂದ ತಂದಿದ್ದ, ದೀಪವನ್ನು ಕೈಯಲ್ಲಿ ಹೊತ್ತು ನಿಂತಿದ್ದ, ಪುತ್ಥಳಿ ಎಲ್ಲಿ? ಇನ್ನು ಹೆಚ್ಚು ಹೇಳಿಯೇನು ಪ್ರಯೋಜನ? ನಾನು ಬೇರೆ ಮದುವೆ ಮಾಡಿಕೊಂಡ ಮೇಲೆಯೇ ಪುನಃ ಊಟ ಮಾಡುತ್ತೇನೆ. ಅಲ್ಲಿವರೆಗೂ ನೀ ಮಾಡಿದ ಅಡುಗೆ ಊಟ ಮಾಡುವುದಿಲ್ಲ. ದುಷ್ಟನೂ ಕುಲಪಾಂಸನನೂ ಆದ, ಆ ಮಗನಿಂದ ನಾನು ಮಕ್ಕಳಿಲ್ಲದವನಂತೆಯೇ ಆಗಿದ್ದೇನೆ. ಏಳು, ನೀರು ತೆಗೆದುಕೊಂಡು ಬಾ! ಅವನಿಗೆ ಎಳ್ಳುನೀರು ಬಿಡುವೆಯಂತೆ. ವಂಶಕ್ಕೆ ಕಳಂಕವನ್ನು ಹಚ್ಚುವ ಕೆಟ್ಟ ಮಗನನ್ನು ಹೆರುವುದಕ್ಕಿಂತಲೂ, ಮಕ್ಕಳಿಲ್ಲದಿರುವುದೇ ಲೇಸು. ಕುಲಕ್ಕೋಸ್ಕರ ಒಬ್ಬನನ್ನು ಪರಿತ್ಯಾಗ ಮಾಡಲೂಬಹುದು ಎಂಬುದೇ ಸನಾತನ ನೀತಿ’ ಎಂದು ಹೇಳುತ್ತಾನೆ.

ಹೀಗೆ ಹೇಳಿ ಯಜ್ಞದತ್ತ ತನ್ನ ಸ್ನಾನಾನ್ಹಿಕಗಳನ್ನು ಮುಗಿಸಿಕೊಂಡ. ಅದೇ ದಿನವೇ ಶ್ರೋತ್ರಿಯನೊಬ್ಬನ ಮಗಳನ್ನು ನೋಡಿ ಆಕೆಯನ್ನು ಮದುವೆಯಾದ ಅಂತ ಬ್ರಹ್ಮ ನಾರದನಿಗೆ ಗುಣನಿಧಿಯ ಕತೆಯನ್ನು ಹೇಳುವಲ್ಲಿಗೆ ಗುಣನಿಧಿಚರಿತ್ರವರ್ಣನ ಎಂಬ ಹದಿನೇಳನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT