ಬಿಜೆಪಿಗರ ರಕ್ಷಣೆಯಲ್ಲಿ ಕಂಪ್ಲಿ ಶಾಸಕ: ಎಂ.ಬಿ.ಪಾಟೀಲ

7
ಔರಾದ್‌ಕರ್‌ ಸಮಿತಿ ಶಿಫಾರಸು ಜಾರಿಗೆ ಬದ್ಧ; ಪೊಲೀಸರು ಆತಂಕ ಪಡಬೇಕಿಲ್ಲ–ಗೃಹ ಸಚಿವ

ಬಿಜೆಪಿಗರ ರಕ್ಷಣೆಯಲ್ಲಿ ಕಂಪ್ಲಿ ಶಾಸಕ: ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ರೆಸಾರ್ಟ್‌ನಲ್ಲಿ ನಡೆದ ಶಾಸಕರ ನಡುವಿನ ಹೊಡೆದಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ ಬಿಜೆಪಿಯವರ ರಕ್ಷಣೆಯಲ್ಲಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಗಣೇಶ ಅಂಡಮಾನ್‌–ನಿಕೋಬಾರ್‌ ದ್ವೀಪಗಳಲ್ಲಿದ್ದಾರೆ ಎನ್ನಲಾಗಿದೆ. ಬಂಧನಕ್ಕಾಗಿ ಜಾಲ ಬೀಸಲಾಗಿದೆ’ ಎಂದು ಭಾನುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಪಕ್ಷದಿಂದ ಕಂಪ್ಲಿ ಶಾಸಕರಿಗೆ ವಿಪ್‌ ಕೊಡಲಾಗಿದೆ. ಬಜೆಟ್‌ ಅಧಿವೇಶನಕ್ಕೆ ಹಾಜರಾಗದಿದ್ದರೆ ಅನರ್ಹರಾಗುತ್ತಾರೆ. ಈ ಭಯದಿಂದ ಅಧಿವೇಶಕ್ಕೆ ಹಾಜರಾದರೆ, ತಕ್ಷಣವೇ ವಿಧಾನಸಭಾ ಅಧ್ಯಕ್ಷರ ಅನುಮತಿ ಮೇರೆಗೆ ಪೊಲೀಸರು ಬಂಧಿಸಲಿದ್ದಾರೆ’ ಎಂದರು.

‘ನಾಗಠಾಣ ಶಾಸಕರಿಗೆ ಬಿಜೆಪಿ ಮುಖಂಡನೊಬ್ಬ ಧಮಕಿ ಹಾಕಿದ ಪ್ರಕರಣವನ್ನು ಸುಮೊಟೊ ದಾಖಲಿಸಿಕೊಳ್ಳಲಾಗುವುದು. ತನಿಖೆಯಲ್ಲಿ ಧಮಕಿ ಹಾಕಿದ್ದು ಸಾಬೀತಾದರೆ ಬಂಧಿಸಿ, ಜೈಲಿಗಟ್ಟಲಾಗುವುದು’ ಎಂದು ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪೊಲೀಸ್ ಇಲಾಖೆಯಲ್ಲಿ ಶೇ 30ರಷ್ಟು ಹುದ್ದೆಗಳು ಖಾಲಿಯಿವೆ. ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಔರಾದ್‌ಕರ್‌ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲಾಗುವುದು. ಪೊಲೀಸ್ ವ್ಯವಸ್ಥೆಯ ಸುಧಾರಣೆಗಾಗಿ ಡಿಜಿ ನೀಲಮಣಿ ರಾಜು ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಗೃಹ ಸಚಿವರು ಇದೇ ಸಂದರ್ಭ ತಿಳಿಸಿದರು.

‘ಉಳಿದ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸರ ಸ್ಥಾನಮಾನ ಕಡಿಮೆಯಿದೆ. ಹುದ್ದೆ ಉನ್ನತೀಕರಿಸುವ ಜತೆ ವೇತನ ಶ್ರೇಣಿ ಹೆಚ್ಚಳದ ಘೋಷಣೆಯನ್ನು ಮುಖ್ಯಮಂತ್ರಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭ ಪ್ರಕಟಿಸುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಯಾವೊಬ್ಬ ಪೊಲೀಸರು ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ನಿಮಗೆ ನ್ಯಾಯ ಕೊಡಿಸಲು ನಾನು ಬದ್ಧನಿರುವೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

‘ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಚಿಂತನೆ ನಡೆದಿದೆ. ಪ್ರತಿ ಠಾಣೆಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ತನಿಖೆಗೆಂದೇ ಇಬ್ಬರು ಪಿಎಸ್‌ಐ ನಿಯೋಜನೆ, ವರ್ಗಾವಣೆ ಮಿತಿಯನ್ನು ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸುವುದು. ಪ್ರಾಸಿಕ್ಯೂಷನ್ ಬಲಪಡಿಸುವಿಕೆ, ಎಕ್ಸ್‌ಕ್ಯೂಟಿವ್‌–ನಾನ್‌ ಎಕ್ಸ್‌ಕ್ಯೂಟಿವ್‌ ಹುದ್ದೆಗಳಲ್ಲಿ ಕಡ್ಡಾಯವಾಗಿ ಕೆಲಸ ನಿರ್ವಹಣೆ, ಪೊಲೀಸ್ ತರಬೇತಿ ಅಕಾಡೆಮಿಗಳ ಬಲವರ್ಧನೆ, ಮುಂಬಯಿ ಪೊಲೀಸರ ಕಮಾಂಡೋ, ತೆಲಂಗಾಣದ ಅಕ್ಟೋಪಸ್‌ ಮಾದರಿಯಲ್ಲಿ ನಮ್ಮ ಗರುಡ ಪಡೆಯ ಬಲವರ್ಧನೆಗೆ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ’ ಎಂದು ಗೃಹ ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !