ಮೇಲ್ವಿಚಾರಕಿಯರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಉದ್ಯೋಗಾಕಾಂಕ್ಷಿಗಳ ಆಗ್ರಹ

7
ಪ್ರತಿಭಟನೆ

ಮೇಲ್ವಿಚಾರಕಿಯರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಉದ್ಯೋಗಾಕಾಂಕ್ಷಿಗಳ ಆಗ್ರಹ

Published:
Updated:
Prajavani

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೇಲ್ವಿಚಾರಕಿಯರ ಹುದ್ದೆಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವಂತೆ ಆಗ್ರಹಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಮುಂಭಾಗ ಉದ್ಯೋಗಾಕಾಂಕ್ಷಿಗಳು ಬುಧವಾರ ಪ್ರತಿಭಟನೆ ಮಾಡಿದರು.

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಆಕಾಂಕ್ಷಿಗಳು 643 ಮೇಲ್ವಿಚಾರಕಿಯರ ಹುದ್ದೆಯ ಪಟ್ಟಿಯನ್ನು ಪ್ರಕಟಿಸದೆ ಕೆಪಿಎಸ್‌ಸಿ ದ್ರೋಹ ಎಸಗುತ್ತಿದೆ’ ಎಂದು ದೂರಿದರು.

ಸಂಘದ ಅಧ್ಯಕ್ಷೆ ವರಲಕ್ಷ್ಮಿ, ‘ಇಲಾಖೆಯಲ್ಲಿ ಮೇಲ್ವಿಚಾರಕಿಯರ ಹುದ್ದೆ ನೇಮಕಾತಿ ಅಧಿಸೂಚನೆಯನ್ನು 2016ರಲ್ಲಿ ಹೊರಡಿಸಿ, ಲಿಖಿತ ಪರೀಕ್ಷೆ ನಡೆಸಿತ್ತು. 2018ರಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ, ಅಂತಿಮ ಪಟ್ಟಿ ಬಿಡುಗಡೆಗೊಳಿಸದೆ ಆಯೋಗವು ಆಕಾಂಕ್ಷಿಗಳ ಭವಿಷ್ಯದೊಂದಿಗೆ ಆಟ ಆಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಉದ್ಯೋಗಾಕಾಂಕ್ಷಿಗಳು ಅಧಿಕಾರಿಗಳನ್ನು ವಿಚಾರಿಸಿದರೆ ಕಾಯುವಂತೆ ಹೇಳುತ್ತಾರೆ. ಈ ರೀತಿ ಕಾದು ಮೂರು ವರ್ಷಗಳು ಮುಗಿದು ಹೋದವು. ಅಧಿಕಾರಿಗಳ ವಿಳಂಬ ಧೋರಣೆಯಿಂದ ತುಂಬಾ ತೊಂದರೆಯಾಗುತ್ತಿದೆ. ತಡವಾದರೆ ಆಯ್ಕೆಯಾದ ಅಭ್ಯರ್ಥಿಗಳ ವಯೋಮಿತಿ ಹೆಚ್ಚಾಗುವ ಸಂಭವವಿದೆ. ಇದರಿಂದ ಹಲವರು ಉದ್ಯೋಗದಿಂದ ವಂಚಿತರಾಗುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೆಪಿಎಸ್‌ಸಿ ನಿಯಮದ ಪ್ರಕಾರ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದ 7–9 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಮುಕ್ತಾಯವಾಗಬೇಕು. ಆದರೆ, ವರ್ಷಗಳೇ ಕಳೆದರೂ ನೇಮಕಾತಿ ಇನ್ನೂ ಬಾಕಿಯಿದೆ. ಈ ಕೂಡಲೇ  ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !