ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಭಾಗ್ಯ

7
ಅನುದಾನ ಬಿಡುಗಡೆಗೆ ಎಚ್‌ಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಕೆ

ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಭಾಗ್ಯ

Published:
Updated:
ಸಾಂದರ್ಭಿಕ ಚಿತ್ರ

ಕಲಬುರ್ಗಿ: ಜಿಲ್ಲೆಯಲ್ಲಿರುವ 293 ಸರ್ಕಾರಿ ಪ್ರೌಢಶಾಲೆಗಳ ಪೈಕಿ 98 ಸರ್ಕಾರಿ ಪ್ರೌಢಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಿಯಾಯೋಜನೆ ಸಿದ್ಧಪಡಿಸಿದೆ.

ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ 2018–19ನೇ ಸಾಲಿನಲ್ಲಿ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿರುವ ಇಲಾಖೆಯು, ಅನುದಾನ ಬಿಡುಗಡೆ ಮಾಡುವಂತೆ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಪ್ರಸ್ತಾವ ಸಲ್ಲಿಸಿದೆ.

ಅಫಜಲಪುರ, ಆಳಂದ, ಕಾಳಗಿ, ಚಿಂಚೋಳಿ, ಚಿತ್ತಾಪುರ, ಯಡ್ರಾಮಿ, ಜೇವರ್ಗಿ, ಕಲಬುರ್ಗಿ ಉತ್ತರ, ಕಲಬುರ್ಗಿ ದಕ್ಷಿಣ, ಕಮಲಾಪುರ ಮತ್ತು ಸೇಡಂ ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಒಟ್ಟು 98 ಸರ್ಕಾರಿ ಶಾಲೆಗಳನ್ನು ಗುರುತಿಸಲಾಗಿದೆ. ಇವುಗಳಿಗೆ ಒಟ್ಟಾರೆ 21,493 ಮೀಟರ್ ಕಾಂಪೌಂಡ್ ನಿರ್ಮಿಸುವ ಅಗತ್ಯವಿದ್ದು, ₹10.74 ಕೋಟಿ ಅನುದಾನ ಅಗತ್ಯವಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ. ಒಂದು ಮೀಟರ್‌ಗೆ ₹5ಸಾವಿರ ಅಂದಾಜು ವೆಚ್ಚ ತಗುಲಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಚಿತ್ತಾಪುರ ಮತ್ತು ಜೇವರ್ಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಾಲೆಗಳು ಅಂದರೆ ಕ್ರಮವಾಗಿ 20 ಮತ್ತು 19 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾಳಗಿ ಶೈಕ್ಷಣಿಕ ವಲಯದಲ್ಲಿ ಒಂದು ಶಾಲೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಶಾಲೆಗಳಿಗೂ ಸೌಲಭ್ಯ ಕಲ್ಪಿಸುವುದು ಶಿಕ್ಷಣ ಇಲಾಖೆಯ ಉದ್ದೇಶವಾಗಿದೆ.

‘ಸರ್ಕಾರಿ ಶಾಲೆಗಳ ದುರಸ್ತಿ, ಕಾಂಪೌಂಡ್ ನಿರ್ಮಾಣ, ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಹೆಚ್ಚುವರಿ ಅನುದಾನವನ್ನು ಎಚ್‌ಕೆಆರ್‌ಡಿಬಿಯಿಂದ ಪಡೆಯಲು ಅವಕಾಶವಿದೆ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ 1,789 ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು 293 ಸರ್ಕಾರಿ ಪ್ರೌಢಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಶಿಕ್ಷಣ ಇಲಾಖೆ ಮೂಲಗಳು ಹೇಳುತ್ತವೆ.

‘ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಚೆನ್ನಾಗಿದೆ. ಕಾಂಪೌಂಡ್ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಲ್ಲಿ ಅಸುರಕ್ಷಿತ ಭಾವನೆ ಮೂಡುತ್ತಿದೆ ಎಂದು ಕೆಲವು ಪೋಷಕರು ತಿಳಿಸಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಸರ್ಕಾರಿ ಶಾಲೆಗಳು ಸುರಕ್ಷಿತವಾಗಿವೆ, ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಭಾವನೆ ಪೋಷಕರಲ್ಲಿ ಬಂದರೆ ಅವರು ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲು ಹಿಂಜರಿಯುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ’ ಎಂಬುದು ಮೂಲಗಳ ವಿವರಣೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !