ಹೆಣ್ಣೆ, ನಿನ್ನ ಬಗ್ಗೆಯೂ ಇರಲಿ ಕಾಳಜಿ!

7

ಹೆಣ್ಣೆ, ನಿನ್ನ ಬಗ್ಗೆಯೂ ಇರಲಿ ಕಾಳಜಿ!

Published:
Updated:
Prajavani

ಮೊನ್ನೆ ಸ್ನೇಹಿತೆಯೊಬ್ಬಳ ಮನೆಗೆ ಹೋಗಿದ್ದೆ. ಬಹಳ ದಿನಗಳ ನಂತರ ನನ್ನನ್ನು ಕಂಡ ಸಂತೋಷ ಮುಖದಲ್ಲಿದ್ದರೂ, ಏನೋ ಸರಿ ಇಲ್ಲ ಎಂದೆನಿಸಿತು. ಮುಖವನ್ನು ಕಿವುಚುತ್ತಾ ಕೆಲಸ ಮಾಡುತ್ತಿದ್ದಳು. ದಣಿವು ಮುಖದಲ್ಲಿ ಎದ್ದುಕಾಣುತ್ತಿತ್ತು. ವಿಚಾರಿಸಿದಾಗ ತಿಳಿದದ್ದು, ಆಕೆಯ ನೋವಿಗೆ ಕಾರಣ ಬಹಳ ದಿನಗಳಿಂದ ಆಕೆಯನ್ನು ಕಾಡುತ್ತಿದ್ದ ಹೊಟ್ಟೆನೋವು. ಸಣ್ಣ ಪುಟ್ಟ ನೋವು, ಜ್ವರ ಗಂಡ-ಮಕ್ಕಳಿಗೆ ಬಂದರೂ, ಇರುವ ಕೆಲಸವನ್ನೆಲ್ಲಾ ಬದಿಗೊತ್ತಿ, ಡಾಕ್ಟರ್ ಬಳಿಗೆ ಅವರನ್ನು ಕರೆದೊಯ್ಯುವ ನನ್ನ ಸ್ನೇಹಿತೆ ತನ್ನ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಳು.

ವೈದ್ಯರ ಬಳಿಗೆ ಆಕೆ ಹೋಗೇ ಇರಲಿಲ್ಲ! ಕಾರಣ ಕೇಳಿದಾಗ, ‘ಅಯ್ಯೋ! ಟೈಮೇ ಇಲ್ವೇ, ಅದೂ ಅಲ್ಲದೇ ಮಾಮೂಲಿ ಹೊಟ್ಟೆನೋವು. ಆಗಾಗ ಬರತ್ತೆ, ಹೋಗತ್ತೆ, ಇದಕ್ಯಾಕೆ ಡಾಕ್ಟರ್?’ ಎಂದು ಉತ್ತರಿಸಿದಳು. ಆಕೆಯನ್ನು ಬೈದು ವೈದ್ಯರ ಬಳಿ ಕರೆದೊಯ್ದಾಗ, ಆಕೆಯ ಗರ್ಭಕೋಶದಲ್ಲಿ ಸಣ್ಣದಾಗಿ ಗಡ್ಡೆ ಬೆಳೆಯುತ್ತಿದ್ದದ್ದು ತಿಳಿದು ಬಂತು. . ಆದರೆ ಬಹುತೇಕ ಮಹಿಳೆಯರು ನನ್ನ ಸ್ನೇಹಿತೆಯ ರೀತಿ ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ.

ಪ್ರಪಂಚದಲ್ಲಿ ಅತ್ಯಂತ ಸುಂದರವಾದ ಸೃಷ್ಟಿಯೆಂದರೆ ‘ಹೆಣ್ಣು’. ಗೃಹಿಣಿಯಾದವಳು ಹಣ್ಣಿನ ತಿರುಳು, ಬೀಜ ಅಥವಾ ಮಧ್ಯಭಾಗ ಇದ್ದ ಹಾಗೆ. ಮನೆ ಬೆಳಗುವುದು, ಬೆಳೆಯುವುದು ಅವಳಿಂದಲೇ. ಮನೆಯಲ್ಲಿ ಹೆಂಡತಿಯಾಗಿ, ತಾಯಿಯಾಗಿ, ಸಹೋದರಿಯಾಗಿ, ಮಗಳಾಗಿ ಬಹಳಷ್ಟು ಪಾತ್ರಗಳನ್ನು ಮಹಿಳೆ ವಹಿಸಿರುತ್ತಾಳೆ. ಮನೆಯ ಸದಸ್ಯರ ಆಗುಹೋಗುಗಳನ್ನು, ಆರೋಗ್ಯವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಬಿಡುವಿಲ್ಲದೆ ಕಠಿಣ ಚಟುವಟಿಕೆಗಳಲ್ಲಿ ತೊಡಗುವ ಆಕೆ ತನ್ನನ್ನು ತಾನು ಗುರುತಿಸಿಕೊಳ್ಳುವುದು ಬಹಳ ಅಪರೂಪ. ದಿನದಪೂರ್ತಿ ಭಾಗ ಮನೆಯ ಇತರ ಸದಸ್ಯರನ್ನು ನೋಡಿಕೊಳ್ಳಲು ಆಕೆಯ ಸಮಯವನ್ನು ಮೀಸಲಿಡುತ್ತಾಳೆ. ಆದರೆ ತನ್ನ ವಿಷಯಕ್ಕೆ ಬಂದಾಗ, ತನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹಿಂದೇಟು ಹಾಕುತ್ತಾಳೆ ಅಥವಾ ಮುಂದೂಡುತ್ತಾಳೆ.

‘ತನಗಾಗಿ’ ಎಂದು ಅವಳ ದಿನಚರಿಯಲ್ಲಿ ವೇಳೆಯೇ ಇರುವುದಿಲ್ಲ. ಬಹಳಷ್ಟು ಮಹಿಳೆಯರ ದಿನನಿತ್ಯದ ವೇಳಾಪಟ್ಟಿ ಹೀಗೇ ಇರುತ್ತದೆ. ಇನ್ನು ಊಟ–ತಿಂಡಿಯ ವಿಷಯದಲ್ಲೂ ಅಷ್ಟೇ. ಗಂಡನಿಗೆ ಏನು ಇಷ್ಟ? ಮಕ್ಕಳಿಗೆ ಏನು ಇಷ್ಟ? – ಎಂದು ಹುಡುಕಿ ಹುಡುಕಿ ಅಡುಗೆ ಮಾಡುವ ಗೃಹಿಣಿಯರು, ತಮ್ಮಿಷ್ಟದ ತಿಂಡಿ ಅಥವಾ ಊಟವನ್ನು ತಯಾರಿಸುವುದೇ ಇಲ್ಲ. ಬಹುತೇಕ ಮನೆಗಳಲ್ಲಿ ಇದು ಯಾರ ಗಮನಕ್ಕೂ ಬರುವುದಿಲ್ಲ.

ಮನೆಯಲ್ಲಿ ಒಬ್ಬಳೇ ಇದ್ದ ದಿನ ಬರೀ ಅನ್ನವನ್ನು ಮಾಡಿಕೊಂಡು, ಅದರ ಜೊತೆ ಉಪ್ಪಿನಕಾಯಿ, ಚಟ್ನಿಪುಡಿ ತಿನ್ನುವ ಮಹಿಳೆಯರಿದ್ದಾರೆ! ಮನೆಯ ಇತರರನ್ನು ನೋಡಿಕೊಳ್ಳಲಾದರೂ ಮಹಿಳೆಯರು ಆರೋಗ್ಯವಾಗಿರಬೇಕಲ್ಲವೇ?

ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ

ಮಹಿಳೆಯರೇ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಅನಾರೋಗ್ಯವು ನಿಮ್ಮ ಸಂತೋಷವನ್ನು ಹಾಳು ಮಾಡುತ್ತದೆ ಹಾಗೂ ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಬೆಳಗಿನ ತಿಂಡಿಯನ್ನು ಎಂದೂ ತಪ್ಪಿಸಬೇಡಿ. ದಿನದ ಮುಖ್ಯವಾದ ಆಹಾರವೆಂದರೆ, ಬೆಳಗಿನ ತಿಂಡಿ. ಬಹಳಷ್ಟು ಮಹಿಳೆಯರು ಮಕ್ಕಳು ತಿಂದು ಉಳಿಸಿದ ಆಹಾರವನ್ನು ವೇಸ್ಟ್ ಮಾಡಬಾರದೆಂಬ ಉದ್ದೇಶದಿಂದ ತಿನ್ನುತ್ತಾರೆ! ಇದು ಖಂಡಿತ ಒಳ್ಳೆಯದಲ್ಲ. ಉಳಿದ ಆಹಾರವನ್ನು ಆಗಾಗ್ಗೆ ತಿನ್ನುವುದರಿಂದ ದೇಹದಲ್ಲಿ ಬೊಜ್ಜು ಬೆಳೆಯತೊಡಗುತ್ತದೆ. ಸರಿಯಾದ ಸಮಯಕ್ಕೆ ಒಂದೆಡೆ ಕುಳಿತು ನಿಧಾನವಾಗಿ, ಶಾಂತಿಯಿಂದ ಊಟ-ತಿಂಡಿಯನ್ನು ಮಾಡಿ. ಬೇರೆಯವರಿಗೆ ಮಾಡಿ ತಿನ್ನಿಸುವುದೇ ಮಹಿಳೆಯರ ಕೆಲಸವಲ್ಲ ಎಂಬುದನ್ನು ಗಮನದಲ್ಲಿಡಿ! ಕೆಲವು ಮಹಿಳೆಯರಿಗೆ ಬೆಳಗಿನ ತಿಂಡಿಯ ಬದಲು ಹಲವು ಬಾರಿ ಕಾಫಿ ಅಥವಾ ಚಹಾ ಕುಡಿಯುವ ಹವ್ಯಾಸ ಇರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ! ವರ್ಷಕ್ಕೆ ಒಂದು ಬಾರಿಯಾದರೂ ವೈದ್ಯರ ಬಳಿ ಹೋಗಿ ನಿಮ್ಮ ದೇಹದ ತಪಾಸಣೆಯನ್ನು ನಡೆಸಿ.

ನಡಿಗೆ–ವ್ಯಾಯಾಮ

ನಿಮ್ಮ ದಿನಚರಿಯಲ್ಲಿ ವ್ಯಾಯಾಮಕ್ಕಾಗಿ ಸ್ವಲ್ಪ ಸಮಯವನ್ನು ಮೀಸಲಿಡಿ. ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಲ್ಲಿ ನಡಿಗೆ ಅಥವಾ ವಾಕಿಂಗ್ ಬಹಳ ಸೂಕ್ತ ಹಾಗೂ ಅವಶ್ಯಕ. ದಿನದಲ್ಲಿ 30 ನಿಮಿಷಗಳ ಕಾಲ ನಡೆಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ದೇಹ ಫಿಟ್ ಆಗಿ ಚಟುವಟಿಕೆಯಿಂದ ಕೂಡಿರುತ್ತದೆ.

ವಿಶ್ರಾಂತಿ ಬಹಳ ಮುಖ್ಯ

ಅವಿರತ ಕೆಲಸದ ನಡುವೆ ವಿಶ್ರಾಂತಿ ಬೇಕೇ ಬೇಕು. ದಿನದ ವೇಳೆಯಲ್ಲಿ ಆಗಾಗ ದೇಹಕ್ಕೆ ಸ್ವಲ್ಪ ವಿರಾಮದ ಅಗತ್ಯವಿರುತ್ತದೆ. ನಿದ್ದೆ ಮಾಡಿದರೆ ಮಾತ್ರ ವಿಶ್ರಾಂತಿ ಎಂದಲ್ಲ. ಕೆಲಸ ಮಾಡದೆ ದೇಹಕ್ಕೆ ಮಧ್ಯೆ ಮಧ್ಯೆ ರೆಸ್ಟ್ ಕೊಟ್ಟರೆ, ದೇಹದ ಬ್ಯಾಟರಿ ತಾನಾಗೇ ರೀಚಾರ್ಜ್ ಆಗುತ್ತದೆ! ಇನ್ನು ದೇಹ ಹಾಗೂ ಮನಸ್ಸಿನ ಆರೋಗ್ಯಕ್ಕೆ ನಿದ್ದೆಯ ಅವಶ್ಯಕತೆಯಿದೆ. ಹಾಗಾಗಿ ಪ್ರತಿಯೊಬ್ಬರೂ ಎಂಟು ಗಂಟೆಗಳ ಕಾಲ ನಿದ್ದೆ ಮಾಡಲೇಬೇಕು. ಕೆಲವು ಮಹಿಳೆಯರು ಬೆಳಗ್ಗೆ ಬೇಗನೇ ಎದ್ದು ರಾತ್ರಿ ತಡವಾಗಿ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಈ ರೀತಿ ಮಾಡುವವರು ಮಧ್ಯಾಹ್ನದ ವೇಳೆ ಸ್ವಲ್ಪವಾದರೂ ‘ಪವರ್ ನ್ಯಾಪ್’(ಕಿರು ನಿದ್ದೆ) ಮಾಡುವುದು ಒಳ್ಳೆಯದು.

ವೇಳಾಪಟ್ಟಿಯನ್ನು ಮಾಡಿಕೊಳ್ಳಿ

ಪ್ರತಿಯೊಬ್ಬ ಮಹಿಳೆಯೂ ನಾಳೆ ಏನು ಮಾಡುವುದು? ಹೇಗೆ ಮಾಡುವುದು? ಎಂದು ಯೋಚಿಸಿ, ನಾಳೆ ಏನೇನು ಮಾಡಬೇಕು ಎಂಬ ವೇಳಾಪಟ್ಟಿಯನ್ನು ಹಾಕಿಕೊಂಡೇ ಪ್ರತಿ ರಾತ್ರಿ ನಿದ್ದೆಗೆ ಜಾರುತ್ತಾಳೆ. ಪ್ರತಿ ಕೆಲಸಕ್ಕೂ ವೇಳೆಯನ್ನು ಮೀಸಲಿಡುವ ಮಹಿಳೆಯರೇ, ನಿಮ್ಮ ದಿನಚರಿಯಲ್ಲಿ ‘ನಿಮಗಾಗಿ’ ಎಂದು ಕನಿಷ್ಠ ಅವಧಿಯನ್ನಾದರೂ ಮೀಸಲಿಡಿ. ಅದು ಪೂರ್ಣವಾಗಿ ನಿಮ್ಮ ಸಮಯವಾಗಿರಬೇಕು. ದಿನದ 24 ಗಂಟೆಗಳಲ್ಲಿ ಕೇವಲ 20-30 ನಿಮಿಷ ಅಥವಾ ಕನಿಷ್ಠ ಪಕ್ಷ 10 ನಿಮಿಷ, ನಿಮಗಾಗಿ ಎಂದು ಸಿಗುವುದಿಲ್ಲವೇ? ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ. ಪ್ರಯತ್ನಿಸಿ ನೋಡಿ!

ಮಹಿಳೆಯರೇ, ನಿಮ್ಮ ಬಗ್ಗೆ ನೀವು ಕಾಳಜಿ ವಹಿಸುವುದು ಖಂಡಿತ ಸ್ವಾರ್ಥವಲ್ಲ. ನಿಮ್ಮ ಗೆಳತಿಯರಿಗಾಗಿ ಹೇಗೆ ನೀವು ಏನನ್ನು ಮಾಡಲು ಬೇಕಾದರೂ ಸಿದ್ಧವಿರುತ್ತೀರೋ ಹಾಗೆಯೇ ನಿಮಗಾಗಿ ಕೂಡ ನೀವು ಸಿದ್ಧರಿರಬೇಕು. ಮನೆಯ ಇತರ ಸದಸ್ಯರನ್ನು ಹೇಗೆ ಪ್ರೀತಿಸುತ್ತೀರೋ ಹಾಗೇ ನಿಮ್ಮನ್ನು ನೀವು ಪ್ರೀತಿಸಿ. ಇತರರನ್ನು ಇತರ ವಿಷಯಗಳನ್ನು ದೂರುವುದನ್ನು ನಿಲ್ಲಿಸಿ. ಸದಾ ಕಾಲ ಇತರರನ್ನು ದೂರುವುದರಿಂದ ನಿಮ್ಮ ಸಂತೋಷ ಹಾಳಾಗುತ್ತದೆ. ಆಗಾಗ ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡಿ. ಪ್ರತಿಯೊಬ್ಬರಲ್ಲೂ ಒಂದು ಮಗುವಿನ ಮನಸ್ಸು ಇದ್ದೇ ಇರುತ್ತದೆ.

ಮನಸ್ಸಿನಲ್ಲಿರುವ ಆ ಮಗುವಿನೊಂದಿಗೆ ಹೊರಗೆ ಬಂದು ಸಂಭ್ರಮಿಸಿ. ಇತರ ಚಿಂತೆಗಳನ್ನು ಬಿಟ್ಟು ದಿನದ ಸ್ವಲ್ಪ ಸಮಯ ಮಗುವಿನಂತೆ ಕಳೆಯಿರಿ. ಜೀವನದಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿ, ವಸ್ತು, ವಿಷಯವನ್ನು, ಅದು ಬಂದಂತೆ ಸ್ವೀಕರಿಸಿ, ಒಪ್ಪಿಕೊಳ್ಳಿ. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಗೃಹಿಣಿಯಾದವಳು ಮನೆಯ ‘ಪವರ್ ಪಾಯಿಂಟ್’ ಇದ್ದಂತೆ. ಶಕ್ತಿಕೇಂದ್ರದಲ್ಲಿ ಶಕ್ತಿ ಇದ್ದರೆ ಮಾತ್ರ ಇತರ ಕೆಲಸಗಳು ನಡೆಯಲು ಸಾಧ್ಯ. ಆದ್ದರಿಂದ ಮಹಿಳೆಯರೇ ನಿಮ್ಮನ್ನು ನೀವು ನೋಡಿಕೊಳ್ಳುವುದು ಬಹಳ ಅವಶ್ಯಕ. ನೆನಪಿಡಿ, ನಿಮಗಿಂತ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಯಾವ ಬ್ಯಾಟರಿಯೂ ಚಾರ್ಜ್ ಮಾಡದೆ ಕೆಲಸ ಮಾಡುವುದಿಲ್ಲ. ಮಹಿಳೆಯರೇ, ಮನೆ ಮಂದಿಯ ಸದಸ್ಯರನ್ನೆಲ್ಲಾ ನೋಡಿಕೊಳ್ಳಲು ನಿಮ್ಮ ಬ್ಯಾಟರಿಯನ್ನು ಆಗಾಗ ರೀಚಾರ್ಜ್ ಮಾಡಿಕೊಳ್ಳಿ! 

ಸೌಂದರ್ಯದ ಕಡೆ ಗಮನ ಕೊಡಿ

ಮದುವೆಯಾಗಿ ಮಕ್ಕಳಾಯಿತೆಂದರೆ, ಬಹಳಷ್ಟು ಮಹಿಳೆಯರು ತಮ್ಮ ಜೀವನ ಮುಗಿದೇ ಹೋಯಿತೇನೋ ಎಂಬಂತೆ ಮಾತನಾಡುತ್ತಾರೆ. ‘ಮದುವೆ ಆಯ್ತು, ಮಕ್ಕಳಾಯ್ತು, ನಮ್ಮನ್ನು ಯಾರು ನೋಡಬೇಕು’ ಎನ್ನುವ ಧೋರಣೆಯನ್ನು ಬಹಳಷ್ಟು ಮಹಿಳೆಯರು ಬೆಳೆಸಿಕೊಂಡಿರುತ್ತಾರೆ. ಇದು ತಪ್ಪು. ಮಹಿಳೆಯರು ಮದುವೆ ಹಾಗೂ ಮಕ್ಕಳಾದ ನಂತರವೇ ಸೌಂದರ್ಯದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಬೇರೆಯವರಿಗಾಗಿ ಅಲ್ಲ, ನಿಮಗಾಗಿ! ಮುಖ ತೊಳೆದು, ಮುಖಾಲಂಕಾರ ಮಾಡಿಕೊಂಡು, ಬೇರೆಯ ಧಿರಿಸನ್ನು ಧರಿಸಿ ನೋಡಿ. ನಿಮಗೇ ಒಂದು ರೀತಿಯ ಸಂತೋಷ ಉಂಟಾಗುತ್ತದೆ. ಪ್ರಯತ್ನಿಸಿ ನೋಡಿ, ನಿಮಗೆ ಅಚ್ಚರಿಯಾಗುವಷ್ಟು ಬದಲಾವಣೆ ನಿಮ್ಮಲ್ಲಾಗುತ್ತದೆ.

ಒತ್ತಡದಿಂದ ಹೊರಬನ್ನಿ

ಒತ್ತಡರಹಿತ ಜೀವನಕ್ಕಾಗಿ ನಿಮಗಿಷ್ಟವಾಗುವ ಕೆಲವು ಕೆಲಸಗಳನ್ನು ದಿನದಲ್ಲಿ ಮಾಡಿ. ಅದು ಓದುವುದಾಗಿರಬಹುದು, ಪೇಂಟಿಂಗ್ ಆಗಿರಬಹುದು, ಸಂಗೀತ, ಅಡಿಗೆ, ನೃತ್ಯ – ಹೀಗೆ ಯಾವುದು ಆಗಿರಬಹುದು. ಯಾವುದನ್ನು ಮಾಡಲೂ ಕೆಲವು ವೇಳೆ ಮನಸ್ಸು ಇರುವುದಿಲ್ಲ. ಆಗ 10-20ರ ತನಕ ಎಣಿಸಿ, ಇದರಿಂದಲೂ ಒತ್ತಡ ಕಡಿಮೆಯಾಗುತ್ತದೆ. ಸ್ನೇಹಿತರೊಡನೆ ಸ್ವಲ್ಪ ಕಾಲವನ್ನು ಕಳೆಯಿರಿ. ಅದು ಭೇಟಿಯಾಗಬಹುದು ಅಥವಾ ಫೋನ್ ಮೂಲಕವಾದರೂ ಆಗಬಹುದು. ಕೆಲವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಇರುವುದರಿಂದ ಸಮಾಧಾನ ಸಿಗುತ್ತದೆ. ಅದರಲ್ಲಿ ಸಂಭಾಷಣೆ ಅಥವಾ ಚಾಟ್ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಹೊಸ ವಿಷಯಗಳನ್ನು ಕಲಿಯಬಹುದು. ಹೊಸ ವಿಷಯಗಳ ಪರಿಚಯದಿಂದ ಒತ್ತಡ ದೂರವಾಗುತ್ತದೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !