ಸೋಮವಾರ, ಸೆಪ್ಟೆಂಬರ್ 20, 2021
22 °C

ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನಿಲ್ಲಿಸಿ:ಪಾಕ್‌ಗೆ ಯೂರೋಪ್‌ ಒಕ್ಕೂಟ ಎಚ್ಚರಿಕೆ

ಏಜನ್ಸಿಸ್ Updated:

ಅಕ್ಷರ ಗಾತ್ರ : | |

ಬ್ರುಸೆಲ್ಲಾ(ಬೆಲ್ಜಿಯಂ): ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಕಿರುಕುಳದ ಬಗ್ಗೆ ಯುರೋಪಿಯನ್‌ ಒಕ್ಕೂಟ ಅತೀವ ಕಾಳಜಿ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತರೆಡೆಗಿನ ತಾರತಮ್ಯವನ್ನು ನಿವಾರಿಸದೇ ಹೋದರೆ, ಪಾಕಿಸ್ತಾನಕ್ಕೆ ಸದ್ಯ ನೀಡಲಾಗುತ್ತಿರುವ ಎಲ್ಲ ಬಗೆ ಸಬ್ಸಿಡಿ ಮತ್ತು ವ್ಯಾಪಾರ ಆದ್ಯತೆಗಳನ್ನುಗಳನ್ನು ಅಮಾನತಿನಲ್ಲಿಡುವುದಾಗಿ ‌ಎಚ್ಚರಿಕೆ ನೀಡಿದೆ. 

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಅವರಿಗೆ ಯೂರೋಪ್‌ ಸಂಸತ್‌ನ 51 ಸದಸ್ಯರು ಮಂಗಳವಾರ ಪತ್ರ ಬರೆದಿದ್ದಾರೆ. ‘ ಧಾರ್ಮಿಕ ಉಗ್ರ ಮೂಲಭೂತವಾದಿ ಸಂಘಟನೆಗಳು ಪಾಕಿಸ್ತಾನದ ನೆರವಿನೊಂದಿಗೇ ಪರಿಣಾಮಕಾರಿಯಾಗಿ ಬೆಳೆದಿದ್ದು, ಧಾರ್ಮಿಕ ಅಲ್ಪಸಂಖ್ಯಾತರ ಕಡೆಗೆ ಜನರಲ್ಲಿ ಪೂರ್ವಾಗ್ರಹಗಳನ್ನು ತುಂಬುತ್ತಿವೆ. ಅಲ್ಲದೆ, ನಿರಂತರವಾಗಿ ಅಲ್ಪಸಂಖ್ಯಾತರ ಮೇಲೆ ಮತ್ತು ಅವರ ಧಾರ್ಮಿಕ ಆಚರಣೆಯ ನೆಲಗಳ ಮೇಲೆ ದಾಳಿ ನಡೆಸಿವೆ.  ಇಂಥ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ,’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಇಸ್ಲಾಮಿಕ್‌ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯು ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆ ರೂಪಿಸಿರುವ  ಮಾನವ ಹಕ್ಕುಗಳ ಉಲ್ಲಂಘನೆ ಎಂದು ನಿಮಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಪಾಕಿಸ್ತಾನದ ನೆಲದಲ್ಲಿ ನಡೆಯುತ್ತಿರುವ ಈ ದೌರ್ಜನ್ಯ ನಿಲ್ಲದೇ ಹೋದಲ್ಲಿ, ಯುರೋಪ್‌ ಒಕ್ಕೂಟದಿಂದ ಪಾಕಿಸ್ತಾನಕ್ಕೆ ಸದ್ಯ ಒದಗಿಸಲಾಗುತ್ತಿರುವ ಎಲ್ಲ ಬಗೆಯ ಸಬ್ಸಿಡಿಗಳನ್ನು, ವ್ಯಾಪಾರ ವಾಣಿಜ್ಯ ಆದ್ಯತೆಗಳನ್ನು ರದ್ದು ಮಾಡಬೇಕಾಗುತ್ತದೆ,’ ಎಂದು ಎಚ್ಚರಿಕೆ ನೀಡಲಾಗಿದೆ. 

ಕ್ರೈಸ್ತ ಮತ್ತು ಹಿಂದೂ ಧರ್ಮದ ಸಾವಿರಕ್ಕೂ ಹೆಚ್ಚು ಅಪ್ರಾಪ‍್ತ ಹೆಣ್ಣು ಮಕ್ಕಳನ್ನು ಅಪಹರಣ ಮಾಡಿ ಮುಸ್ಲಿಂ ಧರ್ಮದ ಪುರಷರಿಗೆ ವಿವಾಹ ಮಾಡಿಸುತ್ತಿರುವ ಪ್ರಕರಣಗಳು ಪ್ರತಿವರ್ಷ ನಡೆಯುತ್ತವೆ ಎಂಬ ಎನ್‌ಜಿಒವೊಂದರ ವರದಿಯನ್ನೂ ಬ್ರಿಟನ್‌ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. 

ಧರ್ನನಿಂದೆಯ ಸುಳ್ಳು ಆರೋಪದ ಮೇಲೆ ಅಸಿಯಾ ಬೀಬಿ ಎಂಬ ಕ್ರೈಸ್ತ ಮಹಿಳೆಗೆ ಶಿಕ್ಷೆ ವಿಧಿಸಿದ ಪ್ರಕರಣದ ಬಗ್ಗೆಯೂ ಯೂರೋಪ್‌ ಸಂಸದರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು