ಕಾಂಗ್ರೆಸ್‌ಗೆ ಶಸ್ತ್ರಚಿಕಿತ್ಸೆ ಅಗತ್ಯ: ಮೊಯಿಲಿ

ಶನಿವಾರ, ಜೂಲೈ 20, 2019
25 °C

ಕಾಂಗ್ರೆಸ್‌ಗೆ ಶಸ್ತ್ರಚಿಕಿತ್ಸೆ ಅಗತ್ಯ: ಮೊಯಿಲಿ

Published:
Updated:
Prajavani

ನವದೆಹಲಿ: ‘ಕಾಂಗ್ರೆಸ್‌ ಪಕ್ಷಕ್ಕೆ ಬಹುದೊಡ್ಡ ‘ಶಸ್ತ್ರ ಚಿಕಿತ್ಸೆ’ ಬೇಕಾಗಿದ್ದು, ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರಾಹುಲ್‌ ಗಾಂಧಿ ಅವರೇ ಈ ಕೆಲಸವನ್ನು ಮಾಡಬೇಕು’ ಎಂದು ಪಕ್ಷದ ಹಿರಿಯ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದರು.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್‌ನ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಪಕ್ಷದೊಳಗೆ ಪ್ರತಿ ಹಂತದಲ್ಲೂ ಆಂತರಿಕ ಚುನಾವಣೆಗಳನ್ನು ನಡೆಸುವ ಮೂಲಕ ಹೊಸಬರ ಪ್ರವೇಶಕ್ಕೆ ಅವಕಾಶ ಕೊಡಬೇಕು. ಆಂತರಿಕ ಕಲಹಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೋಲಿಗೆ ಚುನಾವಣೆಯ ಉಸ್ತುವಾರಿ ವಹಿಸಿದ್ದವರು ಮತ್ತು ಆಯಾ ರಾಜ್ಯ ಘಟಕಗಳ ಮುಖ್ಯಸ್ಥರನ್ನು ಹೊಣೆಯಾಗಿಸಬೇಕೇ ವಿನಾ ಪಕ್ಷದ ಅಧ್ಯಕ್ಷರನ್ನಲ್ಲ ಎಂದರು.

‘ಸೋಲಿನ ಹೊಣೆಹೊತ್ತು ಅವರು (ರಾಹುಲ್‌)ರಾಜೀನಾಮೆ ನೀಡಿದ್ದಾರೆ. ಆದರೆ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಒಕ್ಕೊರಲಿನಿಂದ ಹೇಳಿದೆ. ರಾಹುಲ್‌ ಅಧ್ಯಕ್ಷರಾಗಿ ಒಂದೂವರೆ ವರ್ಷ ಮಾತ್ರ ಆಗಿದೆ. ಅವರಿಗೆ ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಮೊಯಿಲಿ ವಾದಿಸಿದರು.

‘2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿತ್ತು. ಆ ನಂತರ ಹತ್ತು ವರ್ಷಗಳ ಕಾಲ ಅದು ಅಧಿಕಾರದಿಂದ ದೂರ ಇರಬೇಕಾಯಿತು. ಆದರೆ ಅವರು ಹೋರಾಟ ಮುಂದುವರಿಸಿ 2014ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಹತ್ತು ವರ್ಷ ದೀರ್ಘ ಕಾಲವೇನೂ ಅಲ್ಲ ಎಂದರು.

‘ಜಾರ್ಖಂಡ್‌, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಸದಸ್ಯದಲ್ಲೇ ವಿಧಾನಸಭಾ ಚುನಾವಣೆಗಳು ಬರಲಿವೆ. ಯಾರು ಪಕ್ಷದ ಅಧ್ಯಕ್ಷರಾಗಬೇಕು ಎಂದು ಚರ್ಚಿಸುವ ಸಮಯ ಇದಲ್ಲ. ಈ ಕೂಡಲೇ ಆ ರಾಜ್ಯಗಳ ಚುನಾವಣಾ ಉಸ್ತುವಾರಿಗೆ ಯೋಗ್ಯ ವ್ಯಕ್ತಿಗಳನ್ನು ನೇಮಿಸಬೇಕು. ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇವೆಲ್ಲದರ ನಿಯಂತ್ರಣ ಒಬ್ಬ ವ್ಯಕ್ತಿಯ ಕೈಯಲ್ಲಿರಬೇಕು. ಆ ವ್ಯಕ್ತಿ ರಾಹುಲ್‌ ಗಾಂಧಿಯೇ ಆಗಿರಬೇಕು. ಇತ್ತೀಚೆಗಷ್ಟೇ ಸಕ್ರಿಯ ರಾಜಕಾರಣಕ್ಕೆ ಬಂದಿರುವ ಪ್ರಿಯಾಂಕಾ ಅವರಿಗೆ ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಗಟ್ಟಿಗೊಳಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಮೊಯಿಲಿ ವಾದಿಸಿದರು.

ಸ್ವರಾಜ್‌ ಇಂಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್‌ ಅವರ, ‘ಕಾಂಗ್ರೆಸ್‌ ಸಾಯಬೇಕು’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮೊಯಿಲಿ, ‘ಇತಿಹಾಸವನ್ನು ಮರೆತವರು ಮಾತ್ರ ಇಂಥ ಮಾತುಗಳನ್ನು ಆಡುತ್ತಾರೆ. ಕಾಂಗ್ರೆಸ್‌ಅನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾವು ಮತ್ತೆ ಮೇಲೆದ್ದು ಬರುತ್ತೇವೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !