ಕಾಂಗ್ರೆಸ್‌ ಸುಡುವ ಮನೆ; ಬಿಜೆಪಿ ಟೀಕೆ

ಶುಕ್ರವಾರ, ಏಪ್ರಿಲ್ 19, 2019
22 °C

ಕಾಂಗ್ರೆಸ್‌ ಸುಡುವ ಮನೆ; ಬಿಜೆಪಿ ಟೀಕೆ

Published:
Updated:

ವಿಜಯಪುರ: ‘ಕಾಂಗ್ರೆಸ್‌ ಸುಡುವ ಮನೆ ಎಂದು ಈ ಹಿಂದೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಹೇಳಿದ್ದರು’ ಎಂದು ಬಿಜೆಪಿ ಮುಖಂಡ ಅಭಿಷೇಕ್ ಚಕ್ರವರ್ತಿ ತಿಳಿಸಿದರು.

‘ದಲಿತರೇ ಈ ದೇಶ ಆಳಬೇಕು ಎಂಬ ಕನಸು ಕಂಡಿದ್ದ ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್ಸಿಗರು. ಅವರು ಸತ್ತ ಬಳಿಕವೂ ಗೌರವ ನೀಡಲಿಲ್ಲ. ಮೋದಿ ಮಹಾನ್‌ ನಾಯಕನಿಗೆ ವಿಶ್ವ ಮನ್ನಣೆ ದೊರಕಿಸಿಕೊಟ್ಟರು’ ಎಂದು ಮಂಗಳವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಂಬೇಡ್ಕರ್‌ ಅವರ ರಾಜಕೀಯ ಸಿದ್ಧಾಂತ ಅರಿಯದವರು ಇಂದಿಗೂ ಕಾಂಗ್ರೆಸ್‌ನಲ್ಲಿದ್ದಾರೆ. ಈ ಬಾರಿ ದಲಿತರು ಜಿಗಜಿಣಗಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

‘ಮೈತ್ರಿ ಅಭ್ಯರ್ಥಿ ಸಮರ್ಥರಲ್ಲ. ಅಭ್ಯರ್ಥಿ ಪತಿ ದೇವಾನಂದ ದಲಿತರನ್ನು ದೂರವಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಜಿಗಜಿಣಗಿ ವಿರುದ್ಧ ಎಲ್ಲರೂ ಒಂದಾಗಿ ನಡೆಸುತ್ತಿರುವ ಕುತಂತ್ರ ಫಲಿಸಲ್ಲ’ ಎಂದು ಬಿಜೆಪಿ ಎಸ್‌.ಸಿ. ಮೋರ್ಚಾದ ಪದಾಧಿಕಾರಿ ಎಂ.ಎನ್.ಕಿರಣ್‌ರಾಜ್‌ ಹೇಳಿದರು.

‘ಗಂಗಾ ಕಲ್ಯಾಣ ಯೋಜನೆ ಆರಂಭಿಸಿದ ಕೀರ್ತಿ ಜಿಗಜಿಣಗಿ ಅವರದ್ದು. ಮೊರಾರ್ಜಿ ಶಾಲೆಗಳನ್ನು ತೆರೆದವರು ಅವರೇ. ರಮೇಶ ಜಿಗಜಿಣಗಿ–ಗೋವಿಂದ ಕಾರಜೋಳ ತಮ್ಮ ಅಧಿಕಾರದ ಅವಧಿಯಲ್ಲಿ ಶೋಷಿತ ಸಮುದಾಯಕ್ಕಾಗಿ ಕೊಡುಗೆಗಳ ಮಹಾಪೂರವನ್ನೇ ಹರಿಸಿದೆ’ ಎಂದು ರಾಜ್ಯ ಬಿಜೆಪಿ ಎಸ್‌.ಸಿ.ಮೋರ್ಚಾದ ಉಪಾಧ್ಯಕ್ಷ ಚಿದಾನಂದ ಚಲವಾದಿ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್.ಎಂಟಮಾನ, ಎಸ್‌.ಸಿ.ಮೋರ್ಚಾ ಪದಾಧಿಕಾರಿಗಳಾದ ಶಿವಾನಂದ ಮಖಣಾಪುರ, ಶಿವಪುತ್ರ ತಳಭಂಡಾರಿ, ರಾಮು ಹೊಸಪೇಟ, ಚಂದ್ರಶೇಖರ ಮ್ಯಾಗೇರಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !