ಆಡಳಿತಾರೂಢರ ಕ್ಷೇತ್ರಗಳಲ್ಲೇ ಭಾರಿ ಮುನ್ನಡೆ..! ಸಚಿವತ್ರಯರಿಗೆ ಮುಖಭಂಗ

ಗುರುವಾರ , ಜೂನ್ 27, 2019
29 °C
ಎಂಟು ಕ್ಷೇತ್ರಗಳಲ್ಲೂ ಜಿಗಜಿಣಗಿಯ ಜಿಗಿತ

ಆಡಳಿತಾರೂಢರ ಕ್ಷೇತ್ರಗಳಲ್ಲೇ ಭಾರಿ ಮುನ್ನಡೆ..! ಸಚಿವತ್ರಯರಿಗೆ ಮುಖಭಂಗ

Published:
Updated:

ವಿಜಯಪುರ: ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಬಿಜೆಪಿಯ ರಮೇಶ ಜಿಗಜಿಣಗಿ, ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಮುನ್ನಡೆ ಗಳಿಸಿರುವುದು ವಿಶೇಷ.

ಕಾಂಗ್ರೆಸ್‌–ಜೆಡಿಎಸ್‌ ಶಾಸಕರು, ಸಚಿವರು ಪ್ರತಿನಿಧಿಸುವ ಐದೂ ಕ್ಷೇತ್ರಗಳಲ್ಲಿ ಜಿಗಜಿಣಗಿ ಪ್ರತಿಸ್ಪರ್ಧಿಗಿಂತ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿಯ ಶಾಸಕರಿರುವ ಕ್ಷೇತ್ರಗಳಲ್ಲೂ ಮುನ್ನಡೆ ಗಳಿಸಿದ್ದು, ಅಂತರ ಕೊಂಚ ಕಡಿಮೆಯಿದೆಯಷ್ಟೇ.

ತಮ್ಮೂರಿನ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಅತ್ಯಂತ ಹೆಚ್ಚು ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರೆ, ಬಿಜೆಪಿ ಶಾಸಕರಿರುವ ವಿಜಯಪುರ ನಗರ ಕ್ಷೇತ್ರವೇ ಕಡಿಮೆ ಮುನ್ನಡೆ ಕೊಟ್ಟಿರುವ ಕ್ಷೇತ್ರವಾಗಿದೆ.

ಸಚಿವತ್ರಯರಿಗೆ ಭಾರಿ ಹಿನ್ನಡೆ:

ಆರೋಗ್ಯ ಸಚಿವ ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಹಾಗೂ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಗೃಹ ಸಚಿವ ಎಂ.ಬಿ.ಪಾಟೀಲರ ಕ್ಷೇತ್ರಗಳಲ್ಲೇ ಜಿಗಜಿಣಗಿ ಭಾರಿ ಅಂತರದ ಮುನ್ನಡೆಯಲ್ಲಿ ಮತ ಗಳಿಸಿದ್ದು, ಸಚಿವತ್ರಯರಿಗೆ ತಮ್ಮ ಸ್ವಕ್ಷೇತ್ರಗಳಲ್ಲೇ ಭಾರಿ ಹಿನ್ನಡೆಯಾದಂತಾಗಿದೆ.

ಚುನಾವಣೆಯಲ್ಲಿ ಸೋಲಿಸಿ, ಜಿಗಜಿಣಗಿಯನ್ನು ವಿಶ್ರಾಂತಿಗೆ ಕಳುಹಿಸಲೇಬೇಕು ಎಂದು ಪಣತೊಟ್ಟು ಪ್ರಚಾರ ನಡೆಸಿದ ಪಾಟೀಲದ್ವಯರಿಗೆ ಫಲಿತಾಂಶ ನುಂಗಲಾರದ ಬಿಸಿತುಪ್ಪವಾಗಿದೆ.

ಆರೋಗ್ಯ ಸಚಿವ ಶಿವಾನಂದ ಪಾಟೀಲ ಪ್ರತಿನಿಧಿಸುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಮೇಶ ಜಿಗಜಿಣಗಿ 79,400 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ, ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ 43,070 ಮತಗಳನ್ನಷ್ಟೇ ಪಡೆದಿದ್ದಾರೆ.

ಬಿಜೆಪಿ ಈ ಕ್ಷೇತ್ರದಲ್ಲಿ 36,330 ಮತಗಳ ಮುನ್ನಡೆ ಹೊಂದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಜೆಡಿಎಸ್‌ ಎರಡನೇ ಸ್ಥಾನ ಪಡೆದಿತ್ತು. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ತೋಟಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಪ್ರತಿನಿಧಿಸುವ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿ 79,848 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಡಾ.ಸುನೀತಾ ದೇವಾನಂದ ಚವ್ಹಾಣ 44,099 ಮತಗಳನ್ನಷ್ಟೇ ಪಡೆದಿದ್ದಾರೆ. 35,749 ಮತಗಳ ಮುನ್ನಡೆ ಜಿಗಜಿಣಗಿಗೆ ದೊರೆತಿದೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದ್ದರೆ, ಬಿಜೆಪಿ ಎರಡನೇ ಸ್ಥಾನ ಪಡೆದಿತ್ತು.

ಗೃಹ ಸಚಿವ ಎಂ.ಬಿ.ಪಾಟೀಲ ಅತ್ಯಧಿಕ ಮತ ಗಳಿಸಿ, ಭಾರಿ ಅಂತರದಿಂದ ಜಯಶಾಲಿಯಾಗಿದ್ದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲೂ ಜಿಗಜಿಣಗಿ 77,176 ಮತ ಪಡೆಯುವ ಮೂಲಕ, ತಮ್ಮ ಮುನ್ನಡೆಯ ನಾಗಾಲೋಟ ಮುಂದುವರೆಸಿದ್ದಾರೆ. ಸುನೀತಾ 47,487 ಮತ ಗಳಿಸಲಷ್ಟೇ ಶಕ್ತರಾಗಿದ್ದು, ಬಿಜೆಪಿಗೆ 29,689 ಮತಗಳ ಮುನ್ನಡೆ ದೊರೆತಿದೆ.

ಇಂಡಿಯಲ್ಲಿ ಹೆಚ್ಚು ಲೀಡ್‌

ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿನಿಧಿಸುವ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿ ಹೆಚ್ಚು ಮತಗಳ ಅಂತರ ಪಡೆದಿದ್ದಾರೆ. ಸುನೀತಾ ಚವ್ಹಾಣ 43,310 ಮತ ಗಳಿಸಿದರೆ, ಜಿಗಜಿಣಗಿ 89,394 ಮತ ಗಳಿಸಿದ್ದು, 46,084 ಮತಗಳ ಮುನ್ನಡೆ ಪಡೆದಿದ್ದಾರೆ.

ಹೆಚ್ಚು ಮತದಾರರಿರುವ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ ಜಿಗಜಿಣಗಿ 93,585 ಮತಗಳನ್ನು ಗಳಿಸಿದ್ದು, ಸುನೀತಾ 58,251 ಮತ ಗಳಿಸಿದ್ದಾರೆ. ಇದು ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪತಿ ದೇವಾನಂದ ಚವ್ಹಾಣ ಶಾಸಕರಿರುವ ಕ್ಷೇತ್ರ. ಈ ಕ್ಷೇತ್ರದಲ್ಲೂ ಜಿಗಜಿಣಗಿ 34,334 ಮತಗಳನ್ನು ಪಡೆಯುವ ಮೂಲಕ ಆಡಳಿತಾರೂಢರ ಕ್ಷೇತ್ರಗಳಲ್ಲೇ ಮೇಲುಗೈ ಸಾಧಿಸಿರುವುದು ವಿಶೇಷವಾಗಿದೆ.

ವಿಜಯಪುರ ನಗರದಲ್ಲಿ ಕಡಿಮೆ ಅಂತರ

ಬಿಜೆಪಿಯ ಪ್ರಬಲ ಶಾಸಕರಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಮೇಶ ಜಿಗಜಿಣಗಿಗೆ ಅತ್ಯಲ್ಪ ಮುನ್ನಡೆ ದೊರೆತಿದೆ, ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಪರಿಗಣಿಸಿದರೆ ವಿಜಯಪುರದಲ್ಲೇ ಕಡಿಮೆ ಮುನ್ನಡೆ ದೊರೆತಿದೆ ಎಂಬುದನ್ನು ಚುನಾವಣಾ ಆಯೋಗದ ಅಂಕಿ–ಅಂಶಗಳು ಸ್ಪಷ್ಟಪಡಿಸಲಿವೆ.

ಜಿಗಜಿಣಗಿಗೆ 75,083 ಮತ ಲಭಿಸಿದರೆ, ಸುನೀತಾಗೆ 58,530 ಮತ ಲಭಿಸಿವೆ. ಬಿಜೆಪಿಗೆ 16,553 ಮತಗಳ ಮುನ್ನಡೆ ದೊರೆತಿದ್ದು, ವಿಧಾನಸಭಾ ಚುನಾವಣೆಯಲ್ಲಿನ ಗೆಲುವಿನ ಅಂತರ, ಈ ಚುನಾವಣೆಯಲ್ಲಿ ದುಪ್ಪಟ್ಟುಗೊಂಡಿದೆ.

ಮುದ್ದೇಬಿಹಾಳದಲ್ಲಿ ರಮೇಶ ಜಿಗಜಿಣಗಿ 71,874 ಮತ ಪಡೆದರೆ, ಡಾ.ಸುನೀತಾ ಚವ್ಹಾಣ 40,446 ಮತ ಪಡೆದಿದ್ದಾರೆ. ಜಿಗಜಿಣಗಿ 31,428 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ ಜಿಗಜಿಣಗಿ 68,508 ಮತ ಪಡೆದರೆ, ಸುನೀತಾ 42149 ಮತ ಪಡೆದಿದ್ದು, ಬಿಜೆಪಿಗೆ 26,359 ಮತಗಳ ಅಂತರ ಲಭಿಸಿದೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಪ್ರತಿ ಸುತ್ತಿನಲ್ಲೂ ಮುನ್ನಡೆ..!

ವಿಜಯಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ 23 ಸುತ್ತುಗಳಲ್ಲಿ ನಡೆಯಿತು. ಆರಂಭದ ಸುತ್ತಿನಿಂದ ಹಿಡಿದು, ಅಂತ್ಯದ ಸುತ್ತಿನವರೆಗೂ ಬಿಜೆಪಿಯ ರಮೇಶ ಜಿಗಜಿಣಗಿ ಮುನ್ನಡೆ ಕಾಯ್ದುಕೊಳ್ಳುವ ಜತೆಗೆ, ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡಿದ್ದು ವಿಶೇಷವಾಗಿತ್ತು.

ಮೊದಲ ಸುತ್ತಿನಲ್ಲೇ 16,506 ಮತಗಳ ಮುನ್ನಡೆ ಸಾಧಿಸಿದ ಜಿಗಜಿಣಗಿ ಮತ್ತೆ ಹಿಂತಿರುಗಿ ನೋಡಲಿಲ್ಲ. ಗೆಲುವಿನ ನಾಗಾಲೋಟ, ಅಂತರ ಸುತ್ತಿನಿಂದ ಸುತ್ತಿಗೆ ಹೆಚ್ಚಿತು.

ಎರಡನೇ ಸುತ್ತಿನಲ್ಲಿ 15,791, 3ನೇ ಸುತ್ತಿನಲ್ಲಿ 8,816, 4ನೇ ಸುತ್ತಿನಲ್ಲಿ 17,498, 5ನೇ ಸುತ್ತಿನಲ್ಲಿ 16,967, 6ನೇ ಸುತ್ತಿನಲ್ಲಿ 16,197, 7ನೇ ಸುತ್ತಿನಲ್ಲಿ 13,558, 8ನೇ ಸುತ್ತಿನಲ್ಲಿ 11,134, 9ನೇ ಸುತ್ತಿನಲ್ಲಿ 12,637, 10ನೇ ಸುತ್ತಿನಲ್ಲಿ 14,113 ಮತಗಳ ಮುನ್ನಡೆ ಗಳಿಸಿದರು.

11ನೇ ಸುತ್ತಿನಲ್ಲಿ 12,114, 12ನೇ ಸುತ್ತಿನಲ್ಲಿ 18,586, 13ನೇ ಸುತ್ತಿನಲ್ಲಿ 8,786, 14ನೇ ಸುತ್ತಿನಲ್ಲಿ 5,510, 15ನೇ ಸುತ್ತಿನಲ್ಲಿ 6,735, 16ನೇ ಸುತ್ತಿನಲ್ಲಿ 16,881, 17ನೇ ಸುತ್ತಿನಲ್ಲಿ 17,717, 18ನೇ ಸುತ್ತಿನಲ್ಲಿ 13,199, 19ನೇ ಸುತ್ತಿನಲ್ಲಿ 6,468, 20ನೇ ಸುತ್ತಿನಲ್ಲಿ 3,316, 21ನೇ ಸುತ್ತಿನಲ್ಲಿ 1,685, 22ನೇ ಸುತ್ತಿನಲ್ಲಿ 2,185, 23ನೇ ಸುತ್ತಿನಲ್ಲಿ 262 ಮತಗಳ ಅಂತರವನ್ನು ಹೆಚ್ಚಿಸಿಕೊಂಡರು.

10,99,068 ಪುರಸ್ಕೃತ ಮತಗಳು

1139 ತಿರಸ್ಕೃತ

6,35,867 ರಮೇಶ ಜಿಗಜಿಣಗಿ ಪಡೆದ ಮತಗಳು

3,77,829 ಡಾ.ಸುನೀತಾ ಚವ್ಹಾಣ ಪಡೆದ ಮತಗಳು

2,58,038 ಜಿಗಜಿಣಗಿ ಗೆಲುವಿನ ಅಂತರ

12,286 ನೋಟಾ ಮತಗಳು

11,12,493 ಒಟ್ಟು ಮತಗಳು

4 ಟೆಂಡರ್ ಮತ

ಆಧಾರ: ಚುನಾವಣಾ ಆಯೋಗ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !