ಕಾಂಗ್ರೆಸ್ ಮುಖಂಡನ ಬಂಧನ, ಬಿಡುಗಡೆ

ಬುಧವಾರ, ಏಪ್ರಿಲ್ 24, 2019
23 °C
ಚುನಾವಣೆ ಅಕ್ರಮಕ್ಕೆ ಯತ್ನ ಆರೋಪ * 14 ಮಂದಿ ವಿರುದ್ಧ ಎಫ್ಐಆರ್‌

ಕಾಂಗ್ರೆಸ್ ಮುಖಂಡನ ಬಂಧನ, ಬಿಡುಗಡೆ

Published:
Updated:
Prajavani

ಬೆಂಗಳೂರು: ಚುನಾವಣೆಯಲ್ಲಿ ಅಕ್ರಮ ಎಸಗಲು ಯತ್ನಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡ ಇಬ್ರಾಹಿಂ ಖಲೀಲುಲ್ಲಾ ಸೇರಿದಂತೆ 14 ಮಂದಿಯನ್ನು ಬಂಧಿಸಿ, ಠಾಣಾ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.

ನಗರದ ಕೆ.ಜಿ.ರಸ್ತೆಯ ಪ್ರಭಾತ್ ಕಾಂಪ್ಲೆಕ್ಸ್‌ನಲ್ಲಿರುವ ಇಬ್ರಾಹಿಂ ಅವರಿಗೆ ಸೇರಿದ್ದ ಕಚೇರಿ ಮೇಲೆ ಸೋಮವಾರ ಸಂಜೆ ದಾಳಿ ಮಾಡಿದ್ದ ಚುನಾವಣಾಧಿಕಾರಿಗಳು ಹಾಗೂ ಉಪ್ಪಾರಪೇಟೆ ಪೊಲೀಸರು, ಮತದಾರರ ಮಾಹಿತಿ ತಿಳಿಯುವುದಕ್ಕಾಗಿ ಆರೋಪಿಗಳು ಉಪಯೋಗಿಸುತ್ತಿದ್ದ ಉಪಕರಣಗಳನ್ನು ಜಪ್ತಿ ಮಾಡಿದ್ದರು.

ದಾಳಿ ಸಂಬಂಧ ಚುನಾವಣಾಧಿಕಾರಿ ನೀಡಿದ್ದ ದೂರಿನಂತೆ ಆರೋಪಿಗಳ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

‘ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಅಕ್ರಮ ಎಸಗಲು ಯತ್ನಿಸಿದ ಹಾಗೂ ಜನಪ್ರತಿನಿಧಿ ಕಾಯ್ದೆ ನಿಯಮ ಉಲ್ಲಂಘಿಸಿದ ಆರೋಪದಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅವರ ಬಳಿ ಸಿಕ್ಕ ಉಪಕರಣಗಳನ್ನು ಎಲ್ಲಿಂದ ತಂದಿದ್ದರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

ಪರವಾನಗಿ ಪಡೆಯದೇ ಬಳಕೆ: ‘ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುವುದಕ್ಕಾಗಿ ಕಚೇರಿಯನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿತ್ತು. ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಕ ಮಾಡಿಕೊಂಡು ಮತದಾರರ ಪಟ್ಟಿಯನ್ನು ಕಂಪ್ಯೂಟರ್‌ನಲ್ಲಿ  ಅಪ್‌ಲೋಡ್‌ ಮಾಡಿ ಬಳಸಲಾಗುತ್ತಿತ್ತು’ ಎಂದು ಪೊಲೀಸರು ಹೇಳಿದರು.

‘ಪಿಎಚ್‌ಐ’ ಹೆಸರಿನ ಆ್ಯಪ್‌ ಮೂಲಕ ಕಾರ್ಯನಿರ್ವಹಿಸುವ ಉಪಕರಣಗಳನ್ನು ಖರೀದಿಸಿ ಬಳಸಲಾಗುತ್ತಿತ್ತು. ಆ ಬಗ್ಗೆ ಚುನಾವಣಾ ಆಯೋಗದಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ. ವೆಚ್ಚದ ಬಗ್ಗೆಯೂ ಮಾಹಿತಿ ನೀಡಿರಲಿಲ್ಲ. ಇದು ನಿಯಮಬಾಹಿರ. ಸದ್ಯಕ್ಕೆ 270 ಉಪಕರಣಗಳನ್ನು ಜಪ್ತಿ ಮಾಡಿದ್ದೇವೆ’ ಎಂದರು.

‘ನಕಲಿ ಚುನಾವಣಾ ಗುರುತಿನ ಚೀಟಿ ಸಿದ್ಧಪಡಿಸುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅಂಥ ಅಕ್ರಮದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ’ ಎಂದು ಹೇಳಿದರು.

ಅಭ್ಯರ್ಥಿ ವಿಚಾರಣೆ: ‘ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ಆರೋಪಿಗಳು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕ್ಷೇತ್ರದಲ್ಲಿ ಮತದಾರರ ಸಮೀಕ್ಷೆ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದ ಬಗ್ಗೆ ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಅಭ್ಯರ್ಥಿಯನ್ನು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಪೊಲೀಸರು ಹೇಳಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !