ಕತ್ತಲೆಯಾಗುತ್ತಲೇ ಕರಗಿದ ಕನಸು...

ಮಂಗಳವಾರ, ಜೂನ್ 25, 2019
25 °C
13 ಸಾವಿರ ಮತಗಳ ಅಂತರದ ಮುನ್ನಡೆಯಿಂದ 1,817 ಮತಗಳ ಹಿನ್ನಡೆಗೆ ಕುಸಿದ ಕಾಂಗ್ರೆಸ್‌

ಕತ್ತಲೆಯಾಗುತ್ತಲೇ ಕರಗಿದ ಕನಸು...

Published:
Updated:
Prajavani

ಚಾಮರಾಜನಗರ: ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ, ಮುಖಂಡರು ಹಾಗೂ ಕಾರ್ಯಕರ್ತರು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಲ್ಲೇ ಇದ್ದರು.

ಟಿವಿ ಮಾಧ್ಯಮಗಳಲ್ಲಿ ಧ್ರುವನಾರಾಯಣ ಅವರು 5,000 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂಬ ಸುದ್ದಿ ಬರತೊಡಗಿದಂತೆಯೇ ಮುಖಂಡರು ಹಾಗೂ ಕಾರ್ಯಕರ್ತರು ಕುಣಿದು ಕುಪ್ಪಳಿಸಲು ಆರಂಭಿಸಿದ್ದರು. ಧ್ರುವನಾರಾಯಣ ಅವರ ಫೇಸ್‌ಬುಕ್‌ ಪುಟದಲ್ಲೂ ಮತದಾರರಿಗೆ, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದ ಪೋಸ್ಟ್‌ ಕೂಡ ಕಂಡು ಬಂತು.

ಗುರುವಾರ ಮಧ್ಯಾಹ್ನ 3.45ರವರೆಗೆ ಎಲ್ಲವೂ ಕಾಂಗ್ರೆಸ್‌ನ ಪರವಾಗಿತ್ತು. ಆದರೆ, ಸೂರ್ಯ ಪಶ್ಚಿಮದತ್ತ ಸಾಗುತ್ತಿದ್ದಂತೆಯೇ ಸನ್ನಿವೇಶವೇ ಬದಲಾಗಿ ಹೋಯಿತು. ಗೆಲುವಿನ ಖುಷಿಯಲ್ಲಿದ್ದ ಕಾಂಗ್ರೆಸ್‌ ಮುಖಂಡರ ಮುಖದಲ್ಲಿ ಸೋಲಿನ ಛಾಯೆ ಮೂಡಲು ಆರಂಭಿಸಿತ್ತು. ಬೆಳಿಗ್ಗೆಯಿಂದಲೇ ಕೊಂಚ ಒತ್ತಡದಲ್ಲೇ ಇದ್ದಂತೆ ಕಂಡು ಬಂದಂತಹ ಆರ್.ಧ್ರುವನಾರಾಯಣ ಕೂಡ ನಿಸ್ತೇಜರಾದರು. 

ಮುನ್ನಡೆಯಿಂದ ಅನಿರೀಕ್ಷಿತ ಹಿನ್ನೆಡೆ: ಎಂಟು ಗಂಟೆಗೆ ಆರಂಭವಾದ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಸ್ವಲ್ಪ ಸಮಯ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ಅವರು ಮುನ್ನಡೆ ಸಾಧಿಸಿದ್ದರು. ಆದರೆ, ಮೊದಲ ಸುತ್ತಿನ ಮತಎಣಿಕೆ ಮುಕ್ತಾಯವಾಗುವ ಹೊತ್ತಿಗೆ ಧ್ರುವನಾರಾಯಣ ಅವರು 3,499 ಮತಗಳಿಂದ ಮುಂದಿದ್ದರು. ಈ ಮುನ್ನಡೆ 18ನೇ ಸುತ್ತಿನವರೆಗೂ ಮುಂದುವರಿದಿತ್ತು. 5ನೇ ಸುತ್ತಿನ ಮುಕ್ತಾಯಕ್ಕೆ ಮುನ್ನಡೆಯ ಅಂತರ 12,926ಕ್ಕೆ ಏರಿತ್ತು. ನಂತರ ಸ್ವಲ್ಪ ಹೆಚ್ಚು ಕಡಿಮೆಯಾಗುತ್ತಾ 5,000–5,500 ಅಂತರದಲ್ಲಿ ಸಾಗಿತ್ತು. 17ನೇ ಸುತ್ತಿನ ಹೊತ್ತಿಗೆ ಇದು 1,800ಕ್ಕೆ ಕುಸಿಯಿತು. 18ನೇ ಸುತ್ತಿಗೆ 1,634ಕ್ಕೆ ಇಳಿಕೆಯಾಯಿತು. 

19ನೇ ಸುತ್ತಿನಲ್ಲಿ ಶ್ರೀನಿವಾಸ್‌ ಪ್ರಸಾದ್‌ ಅವರ ಅದೃಷ್ಟ ಮೇಲಾಯಿತು. 1,190 ಮತಗಳಷ್ಟು ಅಂತರದಿಂದ ಅವರು ಮುನ್ನಡೆ ಸಾಧಿಸಿದರು. 20ನೇ ಸುತ್ತಿಗೆ ಅವರು 1,890 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದರು. 21ನೇ ಸುತ್ತಿನ ಹೊತ್ತಿಗೆ ಶ್ರೀನಿವಾಸ ಪ್ರಸಾದ್‌ ಅವರ ಮುನ್ನಡೆ ಅಂತರ 1,526 ಮತಗಳಿಗೆ ಕುಸಿದಿತ್ತು. ಕೊನೆಯ ಸುತ್ತಿಗೆ ಆಗುವಾಗ ಪ್ರಸಾದ್‌ ಅವರು 1,256 ಮತಗಳಿಂದ ಮುನ್ನಡೆ ಸಾಧಿಸಿದ್ದರು. 

ಅಂಚೆ ಮತಗಳಲ್ಲೂ ಹಿನ್ನಡೆ: 3,010 ಅಂಚೆ ಮತಪತ್ರಗಳಲ್ಲಿ 2,933 ಮತಗಳು ಸಿಂಧುವಾಗಿದ್ದವು. ಧ್ರುವನಾರಾಯಣ ಅವರು ಅಂಚೆ ಮತಗಳಲ್ಲೂ ಹಿನ್ನಡೆ ಅನುಭವಿಸಿದರು. 966 ಮತಗಳು ಧ್ರುವನಾರಾಯಣ ಅವರಿಗೆ ಬಿದ್ದರೆ, ಶ್ರೀನಿವಾಸ ಪ್ರಸಾದ್‌ ಅವರಿಗೆ 1,527 ಮತಗಳು ಬಿದ್ದವು. ಅಂತಿಮವಾಗಿ 1,817 ಮತಗಳಿಂದ ಪ್ರಸಾದ್‌ ಅವರೇ ಮುಂದಿದ್ದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !