ಸಚಿವ–ಶಾಸಕರಿದ್ದರೂ ಕಾಂಗ್ರೆಸ್‌ಗಿಲ್ಲ ‘ಶಕ್ತಿ’..!

7
ಪ್ರಭಾವಿಗಳು, ಆಕಾಂಕ್ಷಿಗಳ ವಿಧಾನಸಭಾ ಕ್ಷೇತ್ರದಲ್ಲೇ ನಡೆದಿಲ್ಲ ನಿಗದಿತ ಗುರಿಯ ನೋಂದಣಿ

ಸಚಿವ–ಶಾಸಕರಿದ್ದರೂ ಕಾಂಗ್ರೆಸ್‌ಗಿಲ್ಲ ‘ಶಕ್ತಿ’..!

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್‌ ಘಟಕದ ವ್ಯಾಪ್ತಿಯಲ್ಲಿ ಸಚಿವ ಸೇರಿದಂತೆ ಇಬ್ಬರು ಶಾಸಕರು, ಮೂವರು ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯ್ತಿ, ಹಲವು ತಾಲ್ಲೂಕು–ಪಟ್ಟಣ ಪಂಚಾಯ್ತಿ ಆಡಳಿತ ‘ಕೈ’ ವಶದಲ್ಲಿದ್ದರೂ, ‘ಶಕ್ತಿ’ಯೇ ಇಲ್ಲವಾಗಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ‘ಕೈ’ ಪಡೆಯ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಎರಡೂವರೆ ತಿಂಗಳ ಹಿಂದೆ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಆರಂಭಿಸಿದ ‘ಶಕ್ತಿ’ ಕಾರ್ಯಕರ್ತರ ನೋಂದಣಿ ಅಭಿಯಾನ ಜಿಲ್ಲೆಯ ವ್ಯಾಪ್ತಿಯಲ್ಲಿ ಆಮೆಗತಿಯಲ್ಲಿ ಸಾಗಿದೆ.

15 ದಿನಗಳ ಹಿಂದೆ ‘ಶಕ್ತಿ’ ಕಾರ್ಯಕರ್ತರ ನಿಗದಿತ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜಿಲ್ಲಾ ಘಟಕ ಸೇರಿದಂತೆ, ಜಿಲ್ಲೆಯ ಎಲ್ಲ 16 ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದರೂ; ನೋಂದಣಿ ಪ್ರಕ್ರಿಯೆ ನೀರಸವಾಗಿದೆ ಎಂಬುದನ್ನು ಕೆಪಿಸಿಸಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕನಿಷ್ಠ 6000 ಕಾರ್ಯಕರ್ತರ ನೋಂದಣಿಯನ್ನು ‘ಶಕ್ತಿ’ ಅಭಿಯಾನಕ್ಕೆ ಜೋಡಿಸಬೇಕಿದೆ. ಪ್ರತಿ ಸದಸ್ಯರ ಮೊಬೈಲ್‌ನಿಂದ ನಿಗದಿತ ನಂಬರ್‌ಗೆ ಮೊದಲು ಮಿಸ್ಡ್‌ ಕಾಲ್‌ ಕೊಡಬೇಕು. ನಂತರ ಆ ಸದಸ್ಯರ ಮತದಾರರ ಗುರುತಿನ ಚೀಟಿಯ ನಂಬರ್ ಮೆಸೇಜ್‌ ಮಾಡಿದಾಗ, ನೋಂದಣಿ ಅಧಿಕೃತವಾಗಲಿದೆ. ಇದಕ್ಕೆ ಧ್ವನಿ ಸಂದೇಶದ ಪ್ರತಿಕ್ರಿಯೆ ಸದಸ್ಯರ ಮೊಬೈಲ್‌ಗೆ ಬರಲಿದೆ.

ಪ್ರತಿ ಬೂತ್‌ನಿಂದ ಕನಿಷ್ಠ 13 ಸದಸ್ಯರ ನೋಂದಣಿ ಪ್ರಕ್ರಿಯೆ ನಡೆಸಬೇಕಿದೆ. ಅಭಿಯಾನ ಆರಂಭಗೊಂಡು ಎರಡೂವರೆ ತಿಂಗಳು ಗತಿಸಿದರೂ ಇಂದಿಗೂ ವಿಜಯಪುರ, ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಿಗದಿತ ಗುರಿ ಮೀರಿದ ಸಾಧನೆಯಾಗಿದೆ.

ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ತವರು ಕ್ಷೇತ್ರವಾದ ನಾಗಠಾಣ ವಿಧಾನಸಭಾ ಕ್ಷೇತ್ರದಲ್ಲಿ 3405 ಸದಸ್ಯರ ನೋಂದಣಿಯಾಗುವ ಮೂಲಕ ಶೇ 50ರಷ್ಟು ಗುರಿ ಸಾಧಿಸಲಾಗಿದೆ. ಉಳಿದ ಐದು ಕ್ಷೇತ್ರಗಳಲ್ಲಿ ಸಾಧನೆ ಅಷ್ಟಕ್ಕಷ್ಟೇ. ಇದರಲ್ಲಿ ಶಾಸಕರಾದ ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಪ್ರತಿನಿಧಿಸುವ ಬಬಲೇಶ್ವರ, ಇಂಡಿ ವಿಧಾನಸಭಾ ಕ್ಷೇತ್ರಗಳು ಸೇರಿವೆ.

ಇನ್ನೂ ಆರೋಗ್ಯ ಸಚಿವ ಶಿವಾನಂದ ಎಸ್.ಪಾಟೀಲ ಪ್ರತಿನಿಧಿಸುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ‘ಶಕ್ತಿ’ ಅಭಿಯಾನ ನಿಶ್ಯಕ್ತಿಗೊಂಡಿದೆ. ಇದಕ್ಕೆ ಜಿಲ್ಲಾ ಘಟಕ, ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ನಿಷ್ಕ್ರಿಯವೇ ಕಾರಣ. ಹೆಸರಿಗಷ್ಟೇ ಪದಾಧಿಕಾರಿ ಹುದ್ದೆ ಹೊಂದಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠರೇ ಹೆಚ್ಚಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಕೆಪಿಸಿಸಿ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಟಿಕೆಟ್‌ಗಾಗಿ ನಾನೂ ಆಕಾಂಕ್ಷಿ ಎಂದು ಹನುಮಂತನ ಬಾಲದಂತೆ ಪಟ್ಟಿ ಬೆಳೆದಿದ್ದ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲೂ, ನಿಗದಿತ ಸಂಖ್ಯೆಯ ನೋಂದಣಿ ನಡೆದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದಿನೊಂದಿಗೆ ಕ್ಷೇತ್ರ ಸುತ್ತಿದ್ದ ನಾಯಕರು, ಇದೀಗ ಅತ್ತ ತಮ್ಮ ಚಿತ್ತವನ್ನು ಹರಿಸಿಲ್ಲ.

ಪ್ರಭಾವಿ ಮುಖಂಡ, ಮಾಜಿ ಸಚಿವ ಸಿ.ಎಸ್.ನಾಡಗೌಡರ ಭದ್ರಕೋಟೆಯಾಗಿದ್ದ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ‘ಶಕ್ತಿ’ ಅಭಿಯಾನ ಇದೂವರೆಗೂ ಮೂರಂಕಿ ದಾಟದೆ ಕಳಪೆ ಸಾಧನೆಗೈಯಲಾಗಿದೆ ಎಂದು ಕೆಪಿಸಿಸಿಯ ಅಂಕಿ–ಅಂಶ ತಿಳಿಸಿವೆ.

ಸಾಧನೆಗೈದಿದ್ದ ಬಬಲೇಶ್ವರ..!
ವಿಧಾನಸಭಾ ಚುನಾವಣೆಗೂ ಪೂರ್ವದಲ್ಲಿ, ವರ್ಷದ ಹಿಂದೆ ನಡೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರ ನೋಂದಣಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರನ್ನು ನೋಂದಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಇತಿಹಾಸ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಪಾಲಾಗಿತ್ತು.

ಆದರೆ ಇದೀಗ ಲೋಕಸಭಾ ಚುನಾವಣೆಯ ತಾಲೀಮಿನ ನೋಂದಣಿಯಲ್ಲಿ ನಿಗದಿತ ಗುರಿ ಸಾಧನೆಯಾಗಿಲ್ಲ. ಕ್ಷೇತ್ರದ ಕಾರ್ಯಕರ್ತರನ್ನು ಈ ಬಗ್ಗೆ ಪ್ರಶ್ನಿಸಿದರೆ, ‘ನಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಿಲ್ಲ. ನಮಗೆ ಸಾಕಷ್ಟು ಬೇಸರವಾಗಿದೆ. ಐದು ವರ್ಷದ ನೀರಾವರಿ ಕ್ಷೇತ್ರದ ಸಾಧನೆ ಗುರುತಿಸದೆ ನಮ್ಮ ಭಗೀರಥನನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ನಾವ್ಯಾರು ಆಸಕ್ತಿಯಿಂದ ನೋಂದಣಿಗೆ ಮುಂದಾಗಿಲ್ಲ ಎನ್ನುತ್ತಿದ್ದಾರೆ’ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಲಜಾ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುದ್ದೇಬಿಹಾಳದಲ್ಲಿ ಸಿ.ಎಸ್‌.ನಾಡಗೌಡರ ಸೋಲಿನಿಂದ ಹೆಚ್ಚಿನ ನೋಂದಣಿ ನಡೆದಿಲ್ಲ’ ಎಂದು ಹೇಳಿದರು. ಶಕ್ತಿಯಿರುವ ಬಸವನಬಾಗೇವಾಡಿ, ಇಂಡಿಯಲ್ಲಿನ ಕಳಪೆ ಸಾಧನೆ ಕುರಿತಂತೆ ಯಾವ ಪ್ರತಿಕ್ರಿಯೆ ನೀಡಲಿಲ್ಲ.

ವಿಧಾನಸಭಾ ಕ್ಷೇತ್ರವಾರು ‘ಶಕ್ತಿ’ ನೋಂದಣಿ 6000 ಗುರಿಗೆ

ವಿಧಾನಸಭಾ ಕ್ಷೇತ್ರ ನೋಂದಣಿ
ವಿಜಯಪುರ – 19000
ಸಿಂದಗಿ  – 7000
ನಾಗಠಾಣ  – 3405
ಬ.ಬಾಗೇವಾಡಿ –  2670
ಬಬಲೇಶ್ವರ – 2506
ದೇವರಹಿಪ್ಪರಗಿ –  2418
ಇಂಡಿ – 1647
ಮುದ್ದೇಬಿಹಾಳ –694
ಆಧಾರ: ಕೆಪಿಸಿಸಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !